ಉಕ್ರೇನ್ ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ರಾಕೆಟ್ ದಾಳಿ: ಕಗ್ಗತ್ತಲಲ್ಲಿ ಲಕ್ಷಾಂತರ ಮನೆಗಳು
ಮಿಲಿಟರಿಯನ್ನು ಮರು ಸಂಘಟಿಸುತ್ತಿರುವ ರಷ್ಯಾ ಕಾರ್ಯತಂತ್ರ ಬದಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಉಕ್ರೇನ್ ವಿರುದ್ಧ ದೊಡ್ಡಮಟ್ಟದಲ್ಲಿ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕೀವ್: ಚಳಿಗಾಲವು ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾ (Russia Ukraine War) ತೀವ್ರಗೊಳಿಸಿದೆ. ಕಳೆದ 24 ಗಂಟೆಗಳಲ್ಲಿ 36 ರಾಕೆಟ್ಗಳನ್ನು ಉಕ್ರೇನ್ನ ವಿದ್ಯುತ್ ಉತ್ಪಾದನಾ ಮತ್ತು ವಿತರಣಾ ಸ್ಥಾವರಗಳನ್ನು ಗುರಿಯಾಗಿಸಿ ರಷ್ಯಾ ಹಾರಿಬಿಟ್ಟಿದೆ. ರಾಕೆಟ್ ಬಾಂಬ್ ದಾಳಿಯಿಂದಾಗಿ ಉಕ್ರೇನ್ನಲ್ಲಿ ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ವ್ಯವಸ್ಥೆಯೂ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಪರೋಕ್ಷವಾಗಿ ಇದು ನೀರು ವಿತರಣೆ ಹಾಗೂ ವೈದ್ಯಕೀಯ ಸೇವೆಗಳ ಮೇಲೆಯೂ ಪರಿಣಾಮ ಬೀರಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ.
‘ದಾಳಿಕೋರರು ನಮ್ಮ ದೇಶದಲ್ಲಿ ಭಯ ಹುಟ್ಟುಹಾಕಲು ಪ್ರಯತ್ನಪಡುತ್ತಿದ್ದಾರೆ. ರಾತ್ರಿ ನಮ್ಮ ಶತ್ರುಗಳು 36 ರಾಕೆಟ್ಗಳನ್ನು ಹಾರಿಬಿಟ್ಟಿದ್ದರು. ಬಹುತೇಕ ರಾಕೆಟ್ಗಳನ್ನು ಆಗಸದಲ್ಲಿಯೇ ಹೊಡೆದುರುಳಿಸಿದೆವು. ದೇಶದ ಅತಿಮುಖ್ಯ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಈ ವಿದ್ಯಮಾನವು ಭಯೋತ್ಪಾದನಾ ತಂತ್ರವೇ ಹೌದು’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಯುದ್ಧವು ಸದ್ಯಕ್ಕೆ ಕೊನೆಗೊಳ್ಳುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ರಷ್ಯಾ ಪಡೆಗಳನ್ನು ಸಾವಿರಾರು ಕಿಲೋಮೀಟರ್ ದೂರದವರೆಗೆ ಉಕ್ರೇನ್ ಪಡೆಗಳು ಹಿಮ್ಮೆಟ್ಟಿಸಿವೆ. ಹಲವೆಡೆ ಯುದ್ಧಭೂಮಿಯು ರಷ್ಯಾದ ಗಡಿಯನ್ನು ತಲುಪಿವೆ. ಮಿಲಿಟರಿಯನ್ನು ಮರು ಸಂಘಟಿಸುತ್ತಿರುವ ರಷ್ಯಾ ಕಾರ್ಯತಂತ್ರ ಬದಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಉಕ್ರೇನ್ ವಿರುದ್ಧ ದೊಡ್ಡಮಟ್ಟದಲ್ಲಿ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ರಷ್ಯಾ ಸೇನೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಉಕ್ರೇನ್ ರಾಕೆಟ್ ಮತ್ತು ಕ್ಷಿಪಣಿಗಳನ್ನು ದೂರದಿಂದಲೇ ಹೊಡೆದುರುಳಿಸುವ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚು ಗಮನ ಕೊಡುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಝೆಲೆನ್ಸ್ಕಿ, ‘ರಷ್ಯಾದ ಕ್ಷಿಪಣಿ-ರಾಕೆಟ್ಗಳನ್ನು ಹೊಡೆದುರುಳಿಸುವಲ್ಲಿ ಈಗಾಗಲೇ ನಾವು ಗಮನಾರ್ಹ ಪ್ರಗತಿ ದಾಖಲಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಮಿತ್ರರಾಷ್ಟ್ರಗಳ ನೆರವಿನಿಂದ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
ಉಕ್ರೇನ್ ಜನರಿಗೆ ಧೈರ್ಯ ತುಂಬಲೆಂದು ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅವರು, ‘ನಿನ್ನೆ ರಾತ್ರಿ ರಷ್ಯಾ ಪಡೆಗಳು ದೊಡ್ಡ ಭೂಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿದವು. ಪಶ್ಚಿಮ, ಕೇಂದ್ರ ಮತ್ತು ದಕ್ಷಿಣ ಉಕ್ರೇನ್ನ ಹಲವೆಡೆ ದಾಳಿ ನಡೆದಿದೆ. ರಷ್ಯಾದಿಂದ ನಮ್ಮತ್ತ ಹಾರಿಬರುವ ಎಲ್ಲ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ನಮಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದನ್ನು ಗಳಿಸಿಕೊಳ್ಳುತ್ತೇವೆ. ಪ್ರಸ್ತುತ ರಷ್ಯಾದಿಂದ ಇತ್ತ ಬರುತ್ತಿರುವ ಬಹುತೇಕ ಕ್ರೂಸ್ ಕ್ಷಿಪಣಿ ಹಾಗೂ ಡ್ರೋಣ್ಗಳನ್ನು ಮಾರ್ಗಮಧ್ಯೆಯೇ ಹೊಡೆದುರುಳಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಮಾನವೀಯ ಬಿಕ್ಕಟ್ಟು
ರಷ್ಯಾ ದಾಳಿಯಿಂದ ಉಕ್ರೇನ್ನ ಲಕ್ಷಾಂತರ ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಕಷ್ಟವನ್ನು ಹಲವರು ಟ್ವೀಟ್ ಮೂಲಕ ಹೊರಹಾಕಿದ್ದಾರೆ.
This is the real energy crisis, the one unfolding in Ukraine as a result of Russian missile and drone attacks. Today, more than a million people were left without electricity as a result of morning strikes. This can’t be allowed to continue, we are facing a humanitarian disaster https://t.co/2qM1iD6qSQ
— Olga Tokariuk (@olgatokariuk) October 22, 2022
ಎಸ್-300 ನಿಯೋಜನೆ
ಉಕ್ರೇನ್ ವಿರುದ್ಧದ ದಾಳಿಗೆ ರಷ್ಯಾ ಸೇನೆಯು ಎಸ್-300 ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಿದೆ. ಬೆಲರೂಸ್ ಗಡಿಯತ್ತ ಕ್ಷಿಪಣಿಗಳನ್ನು ಹೊತ್ತ ವಾಹನಗಳು ತೆರಳುತ್ತಿರುವ ವಿಡಿಯೊ ಇದೀಗ ವೈರಲ್ ಆಗಿದೆ.
A Russian military convoy moving on a highway in Belarus. Five S-300 systems are visible in the video pic.twitter.com/UDtCQblXvK
— Giorgi Revishvili (@revishvilig) October 22, 2022
ಇದನ್ನೂ ಓದಿ: Ukraine War: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಇರಾನ್ ಹಸ್ತಕ್ಷೇಪ: ಕೀವ್ ಮೇಲೆ ರಷ್ಯಾದಿಂದ ಆತ್ಮಾಹುತಿ ಡ್ರೋಣ್ ದಾಳಿ
Published On - 9:10 am, Sun, 23 October 22