ವಿಶ್ವದ ವಿವಿಧ ದೇಶಗಳಿಗೆ ಈವರೆಗೂ ಕೊವಿಡ್ ಲಸಿಕೆ ದೊರೆತಿಲ್ಲ. ಈ ಹೊತ್ತಲ್ಲೇ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಒಂದು ಘೋಷಣೆ ಮಾಡಿದ್ದಾರೆ. ವಿದೇಶಿಗರು ರಷ್ಯಾಕ್ಕೆ ಆಗಮಿಸಿ ಸ್ಪುಟ್ನಿಕ್ ಲಸಿಕೆಯನ್ನು ಪಡೆಯಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಿಳಿಸಿದ್ದಾರೆ. ಸೇಂಟ್ ಪೀಟರ್ಸ್ಬರ್ಗ್ ನಗರಕ್ಕೆ ಆಗಮಿಸಿ ವಿದೇಶಿ ನಾಗರಿಕರು ಕೊವಿಡ್ ಲಸಿಕೆ ಪಡೆಯಬಹುದು ಎಂದು ರಷ್ಯಾ ಸರ್ಕಾರ ತಿಳಿಸಿದೆ.
ತನ್ನ ನಾಗರಿಕರಿಗೂ ಕೊವಿಡ್ ಲಸಿಕೆ ವಿತರಿಸಲು ರಷ್ಯಾ ಅತ್ಯಂತ ಪ್ರಮುಖ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಷ್ಯಾದ ಪ್ರತಿಯೊಬ್ಬ ವಯಸ್ಕ ನಾಗರಿಕರು ಉಚಿತವಾಗಿ ಕೊವಿಡ್ ಲಸಿಕೆ ಪಡೆಯಬಹುದು. ನಾಗರಿಕರು ಈ ಸೌಲಭ್ಯವನ್ನು ತ್ವರಿತವಾಗಿ ಉಪಯೋಗಿಸಿಕೊಂಡು ಕೊವಿಡ್ ಸೋಂಕು ತಗ್ಗಿಸಲು ಸಹಕರಿಸಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಿಳಿಸಿದ್ದಾರೆ.
ಲಸಿಕೆ ಪ್ರವಾಸೋದ್ಯಮ
ವಿಶ್ವದ ಬಹುತೇಕ ದೇಶಗಳ ಬಳಿ ಸ್ವಂತ ಕೊವಿಡ್ ಲಸಿಕೆ ತಯಾರಿಸಲು ಸಾಧ್ಯವಾಗಿಲ್ಲ. ಕೇವಲ ಕೆಲವೇ ಕೆಲವು ದೇಶಗಳು ಲಸಿಕೆ ತಯಾರಿಸಿವೆ. ಯಾವ ದೇಶದಲ್ಲಿ ಲಸಿಕೆ ಲಭ್ಯವಿದೆಯೋ ಅಲ್ಲಿಗೆ ಹೋಗಿ ಲಸಿಕೆ ಪಡೆಯುವ ಕಲ್ಪನೆಯೇ ಲಸಿಕೆ ಪ್ರವಾಸೋದ್ಯಮ. ಹಾಗಾದರೆ, ಸದ್ಯದ ಮಟ್ಟಿಗೆ ಭಾರತದಲ್ಲಿ ಲಸಿಕೆ ಪ್ರವಾಸೋದ್ಯಮ ಅಳವಡಿಕೆ ಆಗಲು ಸಾಧ್ಯವೇ ಎಂದು ಕೇಳಿದರೆ ಒಂದೇ ಉತ್ತರ, ಇಲ್ಲ. ಸದ್ಯ ದೇಶದಲ್ಲಿ ಕೊವಿಡ್ ಸೋಂಕಿನ ಪ್ರಮಾಣ ವಿಪರೀತ ಹೆಚ್ಚಿರುವುದರಿಂದ ಭಾರತದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹಲವು ದೇಶಗಳು ನಿರ್ಬಂಧ ವಿಧಿಸಿವೆ. ಹೀಗಾಗಿ ಲಸಿಕೆ ಪ್ರವಾಸೋದ್ಯಮ ನಮ್ಮಲ್ಲಿ ಕಾರ್ಯಸಾಧುವಂತೂ ಅಲ್ಲ. ಭಾರತೀಯ ಪ್ರವಾಸೋದ್ಯಮ ನಿರ್ವಹಣಾ ಸಂಸ್ಥೆಯ ಹಿರಿಯ ಸದಸ್ಯ ಸುಭಾಶ್ ಗೋಯೆಲ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಭಾರತದ ಪ್ರಯಾಣಿಕರ ಮೇಲಿನ ನಿರ್ಬಂಧ ತೆರವುಗೊಳಿಸಿದ ನಂತರ ಭಾರತೀಯರು ವಿದೇಶಗಳಿಗೆ ತೆರಳಿ ಲಸಿಕೆ ಪಡೆಯಬಹುದು ಎನ್ನುತ್ತಾರೆ ಅವರು.
ಈಗಾಗಲೇ ಶುರುವಾಗಿದೆ ಲಸಿಕೆ ಪ್ರವಾಸೋದ್ಯಮ!
ಲಸಿಕೆ ಪ್ರವಾಸೋದ್ಯಮ ಎಂಬ ಕಲ್ಪನೆ ಹುಟ್ಟಿದ್ದೇ ತಡ, ಕೆಲವು ದೇಶಗಳು ಈ ಕಲ್ಪನೆಯ ಮೂಲಕ ತಮ್ಮ ದೇಶದ ಪ್ರವಾಸೋದ್ಯಮವನ್ನು ವಿಸ್ತರಿಸುತ್ತಿವೆ. ಯೂರೋಪಿಯನ್ ಯೂನಿಯನ್ನ ಸ್ಯಾನ್ ಮ್ಯಾರಿನೋ ತನ್ನ ದೇಶಕ್ಕೆ ಇತರ ದೇಶಗಳಿಂದ ಪ್ರವಾಸಿಗಳು ಆಗಮಿಸಿ ಕೊವಿಡ್ ಲಸಿಕೆ ಪಡೆಯಲು ಅನುವು ಮಾಡಿಕೊಟ್ಟಿದೆ. . ಕೆನಡಾ ಮತ್ತು ದಕ್ಷಿಣ ಅಮೆರಿಕಾದ ಕೆಲವು ದೇಶಗಳ ನಾಗರಿಕರು ಲಸಿಕೆ ಪಡೆಯಲೆಂದೇ ವಿಮಾನವೇರಿ ಅಮೆರಿಕಕ್ಕೆ ಪ್ರವಾಸ ಮಾಡುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ಕೊವಿಡ್ನಿಂದ ಮೃತಪಟ್ಟ ಸಿಂಹ; ಪ್ರಾಣಿಗಳನ್ನೂ ಬಾಧಿಸುತ್ತಿದೆ ಅಪಾಯ
ಕೊವಿಡ್ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯತ್ಗೂ 50 ಸಾವಿರ ಅನುದಾನ ಬಿಡುಗಡೆ: ಸಿಎಂ ಯಡಿಯೂರಪ್ಪ
(Russia President Vladimir Putin allows foreigners to entry the country to get Covid Vaccine)