ದೊಡ್ಡ ಕಂಪನಿಗಳ ಮೇಲೆ ಹೆಚ್ಚು ತೆರಿಗೆ ವಿಧಿಸಬೇಕೆನ್ನುವ ಬಗ್ಗೆ ಜಿ7 ರಾಷ್ಟ್ರಗಳ ಸಭೆಯಲ್ಲಿ ಚರ್ಚೆ, ಇಷ್ಟರಲ್ಲೇ ಐತಿಹಾಸಿಕ ನಿರ್ಣಯಕ್ಕೆ ಸಹಿ!
ದೊಡ್ಡ ಕಾರ್ಪೋರೇಶನ್ಗಳು ತಮ್ಮ ಪಾಲಿನ ತೆರಿಗೆಗಳನ್ನು ಪಾವತಿಸದಿದ್ದರೆ ಎಲ್ಲ ದೇಶಗಳು ಆದಾಯ ನಷ್ಟವನ್ನು ಅನುಭವಿಸುತ್ತವೆ ಎಂದು ಸಾಲ ಮನ್ನಾವನ್ನು ಪ್ರಮೋಟ್ ಮಾಡುವ ಸಂಸ್ಥೆಗಳ ಪೈಕಿ ಸದಸ್ಯ ಸಂಸ್ಥೆಯಾಗಿರುವ ಜುಬಿಲಿ ಯುಎಸ್ಎಯ ಕಾರ್ಯ ನಿರ್ವಾಹಕ ನಿರ್ದೇಶಕ ಎರಿಕ್ ಲಿಕಾಂಪ್ಟೆ ಹೇಳಿದ್ದಾರೆ.
ಲಂಡನ್: ಏಳು ಶ್ರೀಮಂತ ರಾಷ್ಟ್ರಗಳ ಗುಂಪು (ಜಿ7) ತಮ್ಮ ನಡುವೆ ಬಹಳ ವರ್ಷಗಳಿಂದ ಭಿನ್ನಾಭಿಪ್ರಾಯಗಳನ್ನು ಇತ್ಯರ್ಥ ಮಾಡಿಕೊಳ್ಳುವ ಮತ್ತು ದೊಡ್ಡ ದೊಡ್ಡ ಕಂಪನಿಗಳು ಕಡಿಮೆ ತೆರಿಗೆ ಪಾವತಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಐತಿಹಾಸಿಕ ಒಪಂದಕ್ಕೆ ಸಹಿ ಹಾಕುವ ನಿರ್ಧಾರಕ್ಕೆ ಬಂದಿವೆ. ಪ್ರಸ್ತಾಪಿತ ಒಪ್ಪಂದವು ಜಾಗತಿಕ ಒಪ್ಪಂದವೊಂದಕ್ಕೆ ತಳಹದಿಯಾಗಲಿದ್ದು, ಹಲವಾರು ದಶಕಗಳಿಂದ ರಾಷ್ಟ್ರಗಳು ದೊಡ್ಡ ಕಂಪನಿಗಳಿಗೆ ಕಡಿಮೆ ತೆರಿಗೆ ವಿಧಿಸುವ ಮತ್ತು ಹಲವಾರು ವಿನಾಯಿತಿಗಳನ್ನು ನೀಡುವ ಆಮಿಷ ಒಡ್ಡಿ ತಮ್ಮಲ್ಲಿ ಉದ್ದಿಮೆ ಆರಂಭಿಸಲು ಮಾಡುತ್ತಿರುವ ಪ್ರಯತ್ನಗಳಿಗೆ ತೆರೆ ಎಳೆಯಲು ರೂಪಿಸ್ಪಡಲಿದೆ. ಅವರ ಈ ಔದಾರ್ಯದಿಂದ ಸಾರ್ವಜನಿಕ ಬೊಕ್ಕಸಗಳಿಗೆ ಕೋಟ್ಯಾಂತರ ಡಾಲರ್ಗಳಷ್ಟು ನಷ್ಟವಾಗುತ್ತಿದ್ದು, ಕೊರೋನಾ ವೈರಸ್ನಿಂದ ಅಧೋಗತಿ ತಲುಪಿರುವ ಎಕಾನಮಿಯನ್ನು ಪುನರಜ್ಜೀವಗೊಳಿಸಲು ಬೇರೆ ತೆರನಾಗಿ ಯೋಚಿಸುವ ಅಗತ್ಯ ತಲೆದೋರಿದೆ ಎಂದು ಈ ರಾಷ್ಟ್ರಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
ಬ್ರಿಟನ್ನಿನ ಹಣಕಾಸು ಇಲಾಖೆ ಶನಿವಾರ ಬೆಳಗ್ಗೆ ಹೇಳಿಕೆಯೊಂದನ್ನು ನೀಡಿ ಜಿ7 ರಾಷ್ಟ್ರಗಳ ಹಣಕಾಸು ಸಚಿವರ ಮಧ್ಯೆ ನಡೆದ ಮಾತುಕತೆಗಳು ಫಲಪ್ರದವಾಗಿವೆ ಎಂದಿದೆ. ಕೋವಿಡ್-19 ಪಿಡುಗು ಅಪ್ಪಳಿಸಿದ ನಂತರ ಸಚಿವರು ಮೊದಲ ಬಾರಿಗೆ ಮುಖಾಮುಖಿಯಾಗಿ ಭೇಟಿಯಾಗುತ್ತಿದ್ದಾರೆ. ಮಾತುಕತೆಗಳು ಉತ್ತಮ ರೀತಿಯಲ್ಲಿ ಸಾಗುತ್ತಿವೆ ಎಂದು ಸಭೆಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಕುರಿತು ಮಾಹಿತಿ ಇರುವ ಬ್ರಿಟನ್ ಮೂಲವೊಂದು ಹೇಳಿದೆ.
ಶುಕ್ರವಾರದಂದು ಮೊದಲ ಸುತ್ತಿನ ಮಾತುಕತೆ ಮುಗಿದ ನಂತರ ಫ್ರೆಂಚ್ ಮತ್ತು ಜರ್ಮನ್ ಹಣಕಾಸಿನ ಸಚಿವರು ಸಭೆಯಲ್ಲಿ ತೆಗೆದುಕೊಳ್ಳಬಹದಾದ ನಿರ್ಣಯಗಳ ಬಗ್ಗೆ ಭಾರೀ ನಿರೀಕ್ಷೆಗಳನ್ನು ಇಟ್ಟಕೊಂಡಿದ್ದಾರೆ.
‘ಒಂದು ಐತಿಹಾಸಿಕ ಒಪ್ಪಂದದಿಂದ ನಾವು ಕೇವಲ ಒಂದು ಮಿಲಿಮೀಟರ್ನಷ್ಟು ಮಾತ್ರ ದುರ ಇದ್ದೇವೆ,’ ಎಂದು ಫ್ರೆಂಚ್ ಹಣಖಾಸು ಸಚಿವ ಬ್ರುನೋ ಲೀ ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿರುವ ಬ್ರಿಟನ್ನಿನ ಹಣಕಾಸು ಸಚಿವ ರಿಶಿ ಸುನಕ್ ಅವರು, ದೊಡ್ಡ ಕಂಪನಿಗಳು ಸತತವಾಗಿ ತಮ್ಮಿಂದ ಪರಿಸರ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಪ್ರಕಟಣೆಗಳನ್ನು ನೀಡಬೇಕು ಎಂದರು,
ಗೂಗಲ್, ಅಮೇಜಾನ್ ಮತ್ತು ಫೇಸ್ಬುಕ್ನಂಥ ದೊಡ್ಡ ಕಂಪನಿಗಳಿಂದ ಶ್ರೀಮಂತ ರಾಷ್ಟ್ರಗಳು ಹೆಚ್ಚಿನ ಪ್ರಮಾಣದ ಆದಾಯ ಪಡೆಯಲು ಅನೇಕ ವರ್ಷಗಳಿಂದ ಹೆಣಗುತ್ತಿವೆ. ಈ ಕಂಪನಿಗಳು ಅತಿ ಕಡಿಮೆ ತೆರಿಗೆ ಅಥವಾ ತೆರಿಗೆಯನ್ನೇ ನೀಡದೆ ಅಗಾಧವಾಗಿ ಲಾಭ ಮಾಡಿಕೊಳ್ಳುತ್ತಿವೆ.
ಕಂಪನಿಗಳಿಗೆ ಶೇಕಡಾ 15ರಷ್ಟು ಕನಿಷ್ಟ ಕಾರ್ಪೋರೇಶನ್ ತೆರಿಗೆ ದರವನ್ನು ಪ್ರಸ್ತಾಪಿಸುವ ಮೂಲಕ ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಅವರು ನಿಂತು ಹೋಗಿದ್ದ ಮಾತುಕತೆಗಳಿಗೆ ಹೊಸ ಬಲವನ್ನು ನೀಡಿದ್ದಾರೆ.
ದೊಡ್ಡ ಕಾರ್ಪೋರೇಶನ್ಗಳು ತಮ್ಮ ಪಾಲಿನ ತೆರಿಗೆಗಳನ್ನು ಪಾವತಿಸದಿದ್ದರೆ ಎಲ್ಲ ದೇಶಗಳು ಆದಾಯ ನಷ್ಟವನ್ನು ಅನುಭವಿಸುತ್ತವೆ ಎಂದು ಸಾಲ ಮನ್ನಾವನ್ನು ಪ್ರಮೋಟ್ ಮಾಡುವ ಸಂಸ್ಥೆಗಳ ಪೈಕಿ ಸದಸ್ಯ ಸಂಸ್ಥೆಯಾಗಿರುವ ಜುಬಿಲಿ ಯುಎಸ್ಎಯ ಕಾರ್ಯ ನಿರ್ವಾಹಕ ನಿರ್ದೇಶಕ ಎರಿಕ್ ಲಿಕಾಂಪ್ಟೆ ಹೇಳಿದ್ದಾರೆ.
‘ಜಾಗತಿಕ ತೆರಿಗೆ ಸುಧಾರಣೆಯನ್ನು ಜಿ7 ಬೆಂಬಲಿಸುವ ಅಗತ್ಯವಿದೆ, ಹಾಗಾದಲ್ಲಿ ಮಾತ್ರ ನಾವು ಪ್ಯಾಂಡೆಮಿಕ್ ಹೊಡೆತದಿಂದ ತತ್ತರಿಸಿರುವ ಜನರನ್ನು ಮೇಲೆತ್ತಲು ಸಾಧ್ಯವಾಗುತ್ತದೆ,’ ಎಂದು ಎರಿಕ್ ಹೇಳಿದರು.
ಅಷ್ಟ್ಟಾಗಿಯೂ ಕಂಪನಿಗಳ ಮೇಲೆ ಯಾವ ದರದ ಕನಿಷ್ಟ ತೆರಿಗೆಯನ್ನು ವಿಧಿಸಬೇಕು ಎನ್ನುವ ಬಗ್ಗೆ ಜಿ7 ರಾಷ್ಟ್ರಗಳಲ್ಲಿ ಸಹಮತವಿಲ್ಲ. ಹಾಗೆಯೇ ಬೃಹತ್ ಕಂಪನಿಗಳಾಗಿದ್ದರೂ ಕಡಿಮೆ ಮಾರ್ಜಿನ್ ಲಾಭ ಮಾಡಿಕೊಳ್ಳುವ ಅಮೇಜಾನನಂಥ ಸಂಸ್ಥೆಗಳಿಗೆ ಹೇಗೆ ದೊಡ್ಡ ಪ್ರಮಾಣದ ತೆರಿಗೆ ನೀಡುವಂತೆ ಮಾಡಬೇಕು ಎನ್ನುವ ಬಗ್ಗೆಯೂ ಸ್ಪಷ್ಟತೆ ಇಲ್ಲ.
ಬೈಡೆನ್ ಪ್ರಸ್ತಾಪಿರುವ ಶೇಕಡಾ 15 ತೆರಿಗೆ ಅಂತಿಮವೇ ಅಥವಾ ಅದನ್ನು ಅಂತಿಮ ಡೀಲಿನ ನೆಲೆಯೆಂದು ಪರಿಗಣಿಸಬೇಕೆ ಎನ್ನುವ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಜುಲೈ ತಿಂಗಳು ವೆನಿಸ್ನಲ್ಲಿ ನಡೆಯುವ ಜಿ20 ಸಭೆಯಲ್ಲಿ ಸದರಿ ವಿಷಯದ ಬಗ್ಗೆ ಚರ್ಚೆ ಮುಂದುವರಿಯುವ ಸಾಧ್ಯತೆ ಇದೆ,
ಏತನ್ಮಧ್ಯೆ, ಬ್ರಿಟನ್, ಫ್ರಾನ್ಸ್, ಇಟಲಿ ಮೊದಲಾದ ದೇಶಗಳಲ್ಲಿ ಅಮೇರಿಕಾದ ಡಿಜಿಟಲ್ ಸೇವೆಗಳ ಮೇಲೆ ಅನಗತ್ಯವಾಗಿ ಜಾಸ್ತಿ ತೆರಿಗೆ ವಿಧಿಸಲಾಗುತ್ತಿದೆ ಎಂದು ಅಮೇರಿಕಾ ಅಪಸ್ವರವೆತ್ತಿದೆ.
ಸದರಿ ತೆರಿಗೆ ನೀತಿಯನ್ನು ಯುರೋಪಿಯನ್ ರಾಷ್ಟ್ರಗಳು ಸಡಿಲಿಸದ್ದರೆ, ಅಮೇರಿಕಾಗೆ ರಫ್ತಾಗುವ ಬ್ರಿಟಷ್, ಇಟಾಲಿಯನ್, ಸ್ಪಾನಿಶ್ಗಳ ಫ್ಯಾಶನ್, ಕಾಸ್ಮೆಟಿಕ್ಸ್, ಮತ್ತು ಐಶಾರಾಮಿ ವಸ್ತುಗಳ ಮೇಲೆ ಬೈಡನ್ ಸರ್ಕಾರ ಶೇಕಡಾ 25 ರಷ್ಟಯ ತೆರಿಗೆ ವಿಧಿಸುವ ಸಾಧ್ಯತೆಯಿದೆ. ಹೊಸ ಜಾಗತಿಕ ಕನಿಷ್ಟ ತೆರಿಗೆಯನ್ನು ವಿಶ್ವದ ಅತಿ ದೊಡ್ಡ ಮತ್ತು ಅತಿ ಹೆಚ್ಚು ಲಾಭ ಮಾಡಿಕೊಳ್ಳುವ 100 ಕಂಪನಿಗಳ ಉತ್ಪಾದನೆಗಳ ಮೇಲೆ ವಿಧಿಸುವ ಪ್ರಸ್ತಾಪವನ್ನು ಅಮೇರಿಕ ಮಾಡಿದೆ.
ಇದನ್ನೂ ಓದಿ: Donald Trump: ಡೊನಾಲ್ಡ್ ಟ್ರಂಪ್ ಫೇಸ್ಬುಕ್ ಖಾತೆ 2 ವರ್ಷಗಳ ಕಾಲ ಸಸ್ಪೆಂಡ್