Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ವೈರಸ್ ಚೀನಾದ ವುಹಾನ್​ನಿಂದ ಹೊರಬಿದ್ದಿದ್ದು ಅಂತ ಭಾರತೀಯನನ್ನೊಳಗೊಂಡ ಹವ್ಯಾಸಿ ಪತ್ತೇದಾರರು ಪತ್ತೆ ಮಾಡಿದ್ದು ಹೀಗೆ!

ಚೀನಾ ಮಾಡುತ್ತಿರುವ ವಾದಕ್ಕೆ ತದ್ವಿರುದ್ಧವಾಗಿ, ಡಬ್ಲ್ಯೂಐವಿಯಲ್ಲಿ ಕೊರೊನಾವೈರಸ್​ಗಳ ಬ್ಯಾಚ್​ ಮೇಲೆ ವಿಸ್ತೃತವಾಗಿ ನಡೆಯುತ್ತಿರುವ ಸಂಶೋಧನೆಯನ್ನು ದೃಢೀಕರಿಸುವ ಪೇಪರ್​ಗಳನ್ನು ಡ್ರಾಸ್ಟಿಕ್ ಟೀಮ್ ಪತ್ತೆ ಮಾಡಿದೆ.

ಕೊರೊನಾ ವೈರಸ್ ಚೀನಾದ ವುಹಾನ್​ನಿಂದ ಹೊರಬಿದ್ದಿದ್ದು ಅಂತ ಭಾರತೀಯನನ್ನೊಳಗೊಂಡ ಹವ್ಯಾಸಿ ಪತ್ತೇದಾರರು ಪತ್ತೆ ಮಾಡಿದ್ದು ಹೀಗೆ!
ವುಹಾನ್​ನಲ್ಲಿನ ವೈರಾಲಜಿ ಇನ್ಸ್​ಸ್ಟಿಟ್ತೂಟ್​
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Jun 05, 2021 | 10:52 AM

ನವದೆಹಲಿ: ಕೊರೊನಾ ವೈರಸ್​ ಮೂಲ ಚೀನಾದ ವುಹಾನ್ ನಗರದಲ್ಲಿರುವ ವುಹಾನ್ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿ (ಡಬ್ಲ್ಯೂಐವಿ) ಅಂತ ಬೇರೆ ಬೇರೆ ರಾಷ್ಟ್ರಗಳ ವಿಜ್ಞಾನಿಗಳು ಮತ್ತು ಸಂಶೋಧಕರು ಗಂಟಲು ಹರಿಯುವ ಹಾಗೆ ಹೇಳಿದರೂ ಅಮೇರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ ಅದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆದರೆ, ಈ ವಾದವನ್ನು ಸುಳ್ಳು ಎಂದು ಹೇಳಿದವರಿಗೆ ಇರಸು ಮುರುಸು ಉಂಟಾಗುವ ಸಂಶೋಧನೆಯನ್ನು ಹವ್ಯಾಸಿ ಪತ್ತೇದಾರರ ಗುಂಪೊಂದು ಮಾಡಿದೆ. ಆದರೆ, ವಿಷಯ ಅಷ್ಟು ಮಾತ್ರ ಅಲ್ಲ. ವಿಜ್ಞಾನಿಗಳಲ್ಲದ, ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಹೆಚ್ಚು ಜ್ಞಾನವೇ ಇಲ್ಲದ ಆದರೆ ಇಂಟರ್​ನೆಟ್​ನಲ್ಲಿ ಎಲ್ಲ ಬಗೆಯ ಮಾಹಿತಿಯನ್ನು ಹೆಕ್ಕಿ ತೆಗೆಯುವ ಜಾಣ್ಮೆ ಮತ್ತು ತಾಳ್ಮೆ ಇರುವ ಈ ಹವ್ಯಾಸಿ ಪತ್ತೇದಾರರಲ್ಲಿ ಒಬ್ಬ ಭಾರತೀಯ ಇದ್ದಾರೆ! ಈ ಪತ್ತೇದಾರರ ಸಂಶೋಧನೆ ಮತ್ತು ತನಿಖೆ ಕುರಿತು ವಿಸ್ತೃತ ವರದಿ ಮಾಡಿರುವ ಅಮೇರಿಕಾ ನ್ಯೂಸ್​ ವೀಕ್ ಪತ್ರಿಕೆಯು ಈ ಭಾರತೀಯನ ವಯಸ್ಸು 30 ರ ಆಸುಪಾಸು ಇದ್ದು ಅವರು ಭಾರತದ ಪೂರ್ವ ಭಾಗದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ.

ತಮ್ಮನ್ನು DRASTIC (ಡಿಸೆಂಟ್ರಲೈಸ್ಡ್ ಱಡಿಕಲ್ ಆಟೊನಾಮಸ್ ಸರ್ಚ್​ ಟೀಮ್ ಇನ್​ವೆಸ್ಟಿಗೇಟಿಂಗ್ ಕೊವಿಡ್-19) ಎಂದು ಕರೆದುಕೊಳ್ಳುವ ಈ ಗುಂಪು ಕೊರೊನಾ ವೈರಸ್​ನ ಮೂಲ ಡಬ್ಲ್ಯೂಐವಿ ಆಗಿದೆ ಎಂಬ ಅಂಶವನ್ನು ಸ್ಥಾಪಿಸಲು ಪಟ್ಟಿರುವ ಪಡಿಪಾಟಲು ಅಷ್ಟಿಷ್ಟಲ್ಲ. ಸಾರ್ವಜನಿಕವಾಗಿ ಲಭ್ಯವಿರುವ ಪ್ರತಿಯೊಂದು ಮಾಹಿತಿಯನ್ನು ಅವರು ಸಂಗ್ರಹಿಸಿ, ಒಂದಕ್ಕೊಂದು ತಾಳೆ ಹಾಕಿ, ಅವುಗಳಿಗೆ ಸಂಬಂಧಿಸಿದ ಪೂರಕ ಮಾಹಿತಿಯನ್ನು ಅಂತರ್ಜಾಲದಲ್ಲಿ ತಡಕಾಡಿ ಕೊರೊನಾ ವೈರಸ್ ಸೃಷ್ಟಿಸಿದ ಅವಾಂತರ ಲ್ಯಾಬ್ ಲೀಕ್​​ನ ಪರಿಣಾಮವೇ ಹೊರತು ಬೇರೇನೂ ಅಲ್ಲ ಅನ್ನುವುದನ್ನು ವೈಜ್ಞಾನಿಕವಾಗಿ ಸಾಬೀತು ಮಾಡುವ ಪ್ರಯತ್ನದಲ್ಲಿ ಯಶಕಂಡಿದ್ದಾರೆ ಎಂದು ನ್ಯೂಸ್​ ವೀಕ್ ವರದಿ ಹೇಳುತ್ತದೆ.

ವುಹಾನ್ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿಯಲ್ಲಿ ಹಲವಾರು ವರ್ಷಗಳಿಂದ ಬಾವಲಿಗಳ ಗುಹೆಗಳಿಂದ ಶೇಖರಿಸಿದ್ದ ಭಾರೀ ಪ್ರಮಾಣದ ಕೊರೊನಾ ವೈರಸ್​ಗಳ ಸಂಗ್ರಹವಿತ್ತು ಎನ್ನುವುದು ಡ್ರಾಸ್ಟಿಕ್ ನಡೆಸಿರುವ ಸಂಶೋಧನೆಯಿಂದ ಗೊತ್ತಾಗಿದೆ. ಅವುಗಳಲ್ಲಿ ಹೆಚ್ಚಿನವು ಕೋವಿಡ್-19 ಸೋಂಕನ್ನುಂಟು ಮಾಡುವ SARS-CoV-2 ವೈರಸ್​ನ ಹತ್ತಿರದ ಸಂಬಂಧಿಗಳಾಗಿದ್ದವು ಮತ್ತು 2012 ರಲ್ಲಿ ಸಾರ್ಸ್​ನಂಥ ಕಾಯಿಲೆಯಿಂದ ಮೂರು ಕಾರ್ಮಿಕರ ಸಾವಿಗೆ ಕಾರಣವಾದ ಗಣಿಪ್ರದೇಶದ ಭಾಗದಿಂದ ತಂದಿದ್ದ ವೈರಸ್​ಗಳಾಗಿದ್ದವು ಅನ್ನೋದು ಡ್ರಾಸ್ಟಿಕ್ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ, ಎಂದು ಪತ್ರಿಕೆಯ ವರದಿ ತಿಳಿಸುತ್ತದೆ.

ಡ್ರಾಸ್ಟಿಕ್ ಗುಂಪಿನ ಸದಸ್ಯರ ಬಗ್ಗೆ ನ್ಯೂಸ್​ವೀಕ್ ವರದಿಯು, ‘ಅದೊಂದು ಹವ್ಯಾಸಿ ಪತ್ತೇದಾರರ ಗುಂಪಾಗಿದೆ. ವಿಷಯದ ಬಗ್ಗೆ ತೀವ್ರ ಸ್ವರೂಪದ ಕುತೂಹಲ ಮತ್ತು ಸುಳಿವುಗಳಿಗಾಗಿ ಗಂಟೆಗಟ್ಟಲೆ ಇಂಟರ್ನೆಟ್​ ತಡಕಾಡುವಷ್ಟು ವ್ಯವಧಾನ ಬಿಟ್ಟರೆ ಅವರಲ್ಲಿ ಇದ್ದಿದ್ದು ಸ್ವಲ್ಪ ಪ್ರಮಾಣದ ಮಾಹಿತಿ ಮಾತ್ರ. ಕೋವಿಡ್​-19 ಪೀಡೆ ಶುರುವಾದಾಗಿನಿಂದ ಸುಮಾರು 25-30 ರಷ್ಟು ಸಂಖ್ಯೆಯಲ್ಲಿರುವ ಇವರು (ಗುಂಪಿನ ಬಹಳಷ್ಟು ಜನ ಅನಾಮಧೇಯರು) ಬೇರೆ ಬೇರೆ ದೇಶಗಳಲ್ಲಿ ಒಂಟಿಯಾಗಿ ಕೆಲಸ ಮಾಡುತ್ತಾ ಬಹಳಷ್ಟು ದಾಖಲೆಗಳನ್ನು ಪತ್ತೆ ಮಾಡಿದ್ದಾರೆ, ಲಭ್ಯವಾಗಿರುವ ಮಾಹಿತಿಯನ್ನು ಒಂದುಗೂಡಿಸಿದ್ದಾರೆ ಮತ್ತು ಟ್ಚಿಟ್ಟರ್ ಥ್ರೆಡ್​ಗಳ ಮೂಲಕ ಅದನ್ನು ವಿವರಿಸಿದ್ದಾರೆ,’ ಎಂದು ಹೇಳುತ್ತದೆ.

ಬಾವಲಿಗಳ ಗುಹೆಗಳಿಂದ ಕಲೆಕ್ಟ್ ಮಾಡಿರುವ ವೈರಸ್​ಗಳ ಮೇಲೆ ಡಬ್ಲ್ಯೂಐವಿ ಅಗತ್ಯವಿರುವ ಸುರಕ್ಷಾ ಕ್ರಮಗಳನ್ನು ಅನುಸರಿಸದೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಸುರಕ್ಷಾ ವ್ಯವಸ್ಥೆಯನ್ನು ಅವರು ನಿರ್ಲಕ್ಷಿಸಿದ್ದರಿಂದಲೇ ಕೊವಿಡ್-19 ಸೋಂಕು ಸೃಷ್ಟಿಯಾಯಿತು. ಆದರೆ ಚೀನಾ, ಡಬ್ಲ್ಯೂಐವಿಯಲ್ಲಿ ನಡೆಯುತ್ತಿರುವ ಚಟುವಟಿಗಳನ್ನು ಗೌಪ್ಯವಾಗಿಟ್ಟಿದೆ. ಯುನನ್ ವೆಟ್ ಮಾರ್ಕೆಟ್​ನಲ್ಲಿ ಸೋಂಕು ಹರಡುವ ಕೆಲ ವಾರಗಳ ಮುಂಚೆಯೇ ಕೊವಿಡ್​-19 ಪ್ರಕರಣಗಳು ಪತ್ತೆಯಾಗಿದ್ದವು ಎಂದು ಡ್ರಾಸ್ಟಿಕ್ ಹೇಳಿದೆ ಡ್ರಾಸ್ಟಿಕ್ ವೆಬ್​ಸೈಟ್​ಗೆ ಹೋದರೆ, 24 ‘ಟ್ಚಿಟ್ಟರ್ ಪತ್ತೆದಾರರ’ ಪಟ್ಟಿ ಸಿಗುತ್ತದೆ. ಈ ಪಟ್ಟಿಯಲ್ಲಿ ಅನಾಮಧೇಯರಾಗಿ ಕೆಲಸ ಮಾಡುತ್ತಿರುವ ಚೀನಾದ ಇಬ್ಬರು ತಜ್ಞರು ಮತ್ತು ವಿಜ್ಞಾನಿಗಳೂ ಇದ್ದಾರೆ. ಭದ್ರತೆ ಮತ್ತು ಗೌಪ್ಯತೆಯ ಸಲುವಾಗಿ ಅವರು ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ.

ನ್ಯೂಸ್​ವೀಕ್ ವರದಿಯ ಪ್ರಕಾರ ಡ್ರಾಸ್ಟಿಕ್ ಗುಂಪಿನಲ್ಲಿರುವ ಯುವ ಭಾರತೀಯ ‘ದಿ ಸೀಕರ್’ ಎಂಬ ಪದನಾಮವನ್ನು ಬಳಸುತ್ತಾರೆ.

ಈ ಟೀಮು 2012ರಲ್ಲಿ ಯೂನನ್ ಪ್ರಾವಿನ್ಸ್​ನಲ್ಲಿರುವ ಮೊಜಿಯಾಂಗ್ ಹಳ್ಳಿಯಲ್ಲಿನ ಗಣಿಪ್ರದೇಶದಲ್ಲಿ ಸಂಶೋಧಕರು ಸಾರ್ಸ್ ವೈರಸ್​ನ ಪ್ರಬೇಧವನ್ನು ಪತ್ತೆ ಮಾಡಿರುವುದನ್ನು ತಿಳಿದುಕೊಳ್ಳಲು ಸಹಸ್ರಾರು ದಾಖಲೆಗಳನ್ನು ಮತ್ತು ಚೀನಾದ ವೈಜ್ಞಾನಿಕ ಪೇಪರ್​ಗಳನ್ನು ಅಧ್ಯಯನ ಮಾಡಿದೆ.

ಡ್ರಾಸ್ಟಿಕ್ ಟೀಮ್ ಕಂಡುಕೊಂಡಿರುವ ಅಂಶವೇನೆಂದರೆ 6 ಗಣಿ ಕಾರ್ಮಿಕರು ಸಾರ್ಸ್ ಪ್ರಭೇದಕ್ಕೆ ಸೇರಿರುವ ಆರ್​ಎಟಿಜಿ 13 ಹೆಸರಿನ ವೈರಸ್​ನಿಂದ ಸೋಂಕಿತರಾಗಿದ್ದರು. ಅವರಲ್ಲಿ ಮೂರು ಜನ ಸಾವನ್ನಪ್ಪಿದ್ದರು. ಟೀಮಿನ ಸದಸ್ಯರು ಪತ್ತೆ ಮಾಡಿರುವ ಅನೇಕ ಸಂಗತಿಗಳಲ್ಲಿ ಡಬ್ಲ್ಯೂಐವಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವ ಬಾವಲಿ ವೈರಾಲೊಜಿಸ್ಟ್ ಶೀ ಝೆಂಗಿ ಅವರ ವೈಜ್ಞಾನಿಕ ಲೇಖನಗಳೂ ಸೇರಿವೆ. ಶೀ ಅವರು ಪಬ್ಲಿಶ್ ಮಾಡಿರುವ ಮತ್ತು ಕೋವಿಡ್​ ಸೋಂಕಿಗೆ ಕಾರಣವಾಗಿರುವ SARS-CoV-2 ವೈರಸ್​ 2012ರಲ್ಲಿ ಗಣಿಯಲ್ಲಿ ಪತ್ತೆಯಾದ ವೈರಸ್​ನ ಪೂರ್ವ ರೂಪವೇ ಎನ್ನುವ ಬಗ್ಗೆ ಆಕೆ 2020 ರಲ್ಲಿ ಮಾಡಿರುವ ಕಾಮೆಂಟ್​ಗಳನ್ನು ಡ್ರಾಸ್ಟಿಕ್ ಟೀಮ್ ಹೆಕ್ಕಿ ತೆಗೆದು ಅಧ್ಯಯನ ಮಾಡಿದೆ.

ಗಣಿ ಕಾರ್ಮಿಕರ ಬಗ್ಗೆ ಮಾಹಿತಿ ಕಲೆ ಹಾಕುವುದು ಟೀಮ್​ಗೆ ಸಾಧ್ಯವಾಗಿಲ್ಲ. ಆದರೆ ನಮ್ಮ ‘ಸೀಕರ್’ ಅವಿರತ ಮತ್ತು ವಿಸ್ತೃತವಾಗಿ ಇಂಟರ್ನೆಟ್​ ಜಾಲಾಡಿ 2013 ರಲ್ಲಿ ಗಣಿ ಕಾರ್ಮಿಕರಿಗೆ ತಾಕಿದ ಸೋಂಕಿನ ಸ್ವರೂಪ ಮತ್ತು ಅವರಿಗೆ ನೀಡಿದ ಚಿಕಿತ್ಸೆಯನ್ನು ವಿವರಿಸುವ ಮಾಸ್ಟರ್ಸ್ ಥಿಸೀಸ್​ ಅನ್ನು ಪತ್ತೆ ಮಾಡಿದ್ದಾರೆ. ಆ ಸಂಶೋಧನೆ ಪ್ರಕಾರ ಕಾರ್ಮಿಕರ ಸಾವಿಗೆ ಕಾರಣವಾಗಿದ್ದು ಚೀನಾದ ಹಾರ್ಸ್​ಹೊ ಬಾವಲಿ ಮತ್ತು ಇತರ ಬಾವಲಿಗಳಲ್ಲಿ ಕಂಡುಬರುವ ಸಾರ್ಸ್​ನಂಥ (ಕೊರೋನಾವೈರಸ್) ವೈರಸ್.

ಚೀನಾ ಮಾಡುತ್ತಿರುವ ವಾದಕ್ಕೆ ತದ್ವಿರುದ್ಧವಾಗಿ, ಡಬ್ಲ್ಯೂಐವಿಯಲ್ಲಿ ಕೊರೊನಾವೈರಸ್​ಗಳ ಬ್ಯಾಚ್​ ಮೇಲೆ ವಿಸ್ತೃತವಾಗಿ ನಡೆಯುತ್ತಿರುವ ಸಂಶೋಧನೆಯನ್ನು ದೃಢೀಕರಿಸುವ ಪೇಪರ್​ಗಳನ್ನು ಡ್ರಾಸ್ಟಿಕ್ ಟೀಮ್ ಪತ್ತೆ ಮಾಡಿದೆ.

ನ್ಯೂಸ್​ವೀಕ್ ವರದಿಯ ಪ್ರಕಾರ ಡ್ರಾಸ್ಟಿಕ್ ಟೀಮ್ ಪತ್ತೆ ಮಾಡಿರುವ ಎಲ್ಲ ಅಂಶಗಳು ಕೋವಿಡ್​-19 ವೈರಸ್ ಡಬ್ಲ್ಯೂಐವಿಂದ ಲೀಕ್ ಆಗಿದೆಯೆನ್ನುವುದನ್ನು ಖಚಿತವಾಗಿ ಸಾಬೀತು ಮಾಡುವುದಿಲ್ಲವಾದರೂ ವಿಷಯದ ಬಗ್ಗೆ ನಡೆದ ಚರ್ಚೆಯನ್ನು ಮತ್ತೊಮ್ಮೆ ಮುಖ್ಯವಾಹಿನಿಗೆ ಕೊಂಡೊಯ್ಯುತ್ತದೆ. ಇದರ ಬಗ್ಗೆ ಅಮೂಲಾಗ್ರ ತನಿಖೆ ನಡೆಯಬೇಕೆಂಬ ಅಂಶಕ್ಕೆ ಒತ್ತು ನೀಡುತ್ತದೆ.

ಕೊರನಾವೈರಸ್​ಗಳ ಬ್ಯಾಂಕ್ ಡಬ್ಲ್ಯೂಐವಿ !

ಡ್ರಾಸ್ಟಿಕ್ ಟೀಮ್ ನಡೆಸಿರುವ ತನಿಖೆ, ಡಬ್ಲ್ಯೂಐವಿ ಅಪಾಯಕಾರಿ ಕೊರೊನಾ ವೈರಸ್​ಗಳ ಬ್ಯಾಂಕ್​ ಆಗಿದೆ ಎನ್ನವುದನ್ನು ಪತ್ತೆ ಮಾಡಿದೆ. ಅವರ ಅಂತಿಮ ಗುರಿ ಲಸಿಕೆಯನ್ನು ತಯಾರಿಸುವುದಾಗಿರಬಹುದೆಂದು ಟೀಮ್ ಹೇಳುತ್ತದೆ. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ಅಂಶವನ್ನು ಅದು ಜಾಗತಿಕ ವೈಜ್ಞಾನಿಕ ಸಮುದಾಯದೊಂದಿಗೆ ಯಾವತ್ತೂ ಶೇರ್ ಮಾಡಿಲ್ಲ. ಡಬ್ಲ್ಯೂಐವಿ ಹಾಗೆ ಮಾಡಿದ್ದರೆ ಸೋಂಕು ತಲೆದೋರುವಿಕೆಯನ್ನು ಸಾಕಷ್ಟು ಮೊದಲೇ ಗುರುತಿಸಬಹುದಾಗಿತ್ತು.

ಡಬ್ಲ್ಯೂಐವಿ ಅಪಾಯಕಾರಿ ಕೊರೋನಾ ವೈರಸ್​ಗಳನ್ನು ಹಲವಾರು ವರ್ಷಗಳಿಂದ ಸಂಗ್ರಹಿಸುತ್ತಿದೆ. ಅವುಗಳಲ್ಲಿ ಕೆಲವು ಹೊರಜಗತ್ತಿಗೆ ಇನ್ನೂ ಗೊತ್ತಿಲ್ಲ. ವೈರಸ್​ಗಳಲ್ಲಿ ಮಾನವರಿಗೆ ಸೋಂಕು ತಾಕಿಸುವ ಸಾಮರ್ಥ್ಯವನ್ನು ಅದು ಪರೀಕ್ಷೆ ಮಾಡುತ್ತಿತ್ತು ಮತ್ತು ಅವುಗಳ ರೂಪಾಂತರದ ಬಗ್ಗೆ ಅಧ್ಯಯನ ನಡೆಸುತಿತ್ತು. ಪ್ರಾಯಶಃ ವೈರಸ್​ನ ರೂಪಾಂತರ ಅದರ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಅವರ ಅಂತಿಮ ಗುರಿ ಈ ವೈರಸ್​ನ ಎಲ್ಲ ಪ್ರಬೇಧಗಳಿಂದ ಜನರನ್ನು ರಕ್ಷಿಸುವ ಲಸಿಕೆ ಕಂಡುಹಿಡಿಯುವುದಾಗಿರಬಹುದು. ಆದರೆ ಅದನ್ನವರು ಮುಚ್ಚಿ ಹಾಕುತ್ತಿರು ಪ್ರಯತ್ನ ಮಾಡುತ್ತಿರವುದನ್ನು ನೋಡಿದರೆ ಎಲ್ಲೋ ಭಾರಿ ಪ್ರಮಾಣದ ಪ್ರಮಾದ ನಡೆದಿದೆ ಎನ್ನವುದನ್ನು ಸೂಚಿಸುತ್ತದೆ, ಎಂದು ನ್ಯೂಸ್​ವೀಕ್ ವರದಿ ಮಾಡಿದೆ

ಡಬ್ಲ್ಯೂಐವಿ, ಸೆಪ್ಟಂಬರ್ 2019ರಲ್ಲೇ ತನ್ನ ವೆಬ್​ಸೈಟ್​ನಿಂದ ವೈರಸ್​ಗಳ ಡಾಟಾಬೇಸ್​ನ ವೆಬ್​ ಪೇಜನ್ನು ತೆಗೆದುಹಾಕಿದೆ. ಹ್ಯೂನನ್ ವೆಟ್ ಮಾರ್ಕೆಟ್​ನಲ್ಲಿ ಸೋಂಕು ಹರಡಲು ಆರಂಭವಾಗಿದ್ದು ಅದೇ ವರ್ಷದ ಡಿಸೆಂಬರ್​ನಲ್ಲಿ.

ಅಮೇರಿಕಾದ ಬಯೋಲಾಜಿಸ್ಟ್ ಪೀಟರ್ ದಸ್ಜಕ್ ಹೇಗೆ ಕೋವಿಡ್​-19 ಸೋಂಕು ಮತ್ತು ಡಬ್ಲ್ಯೂಐವಿ ನಡುವೆ ಯಾವುದೇ ಸಂಬಂಧವಿಲ್ಲ ಅಂತ ಲಾಬಿ ಮಾಡಿದರು ಎನ್ನುವದನ್ನು ಸಹ ಡ್ರಾಸ್ಟಿಕ್ ಟೀಮ್ ವಿವರಿಸಿದೆ. ಕಳೆದ ಹಲವಾರು ವರ್ಷಗಳಿಂದ ಅಕೆ ಡಾ ಶೀ ಜೊತೆ ಕೆಲಸ ಮಾಡುತ್ತಿದ್ದು ಅಮೇರಿಕಾದಿಂದ ಕನಿಷ್ಟ ರೂ 4.5 ಕೋಟಿಗಳ ಅನುದಾನವನ್ನು ಪಡೆದಿರುವಳೆಂದು ಡ್ರಾಸ್ಟಿಕ್ ಟೀಮ್ ಹೇಳಿದೆ.

ಇದನ್ನೂ ಓದಿ: ಕೊರೊನಾ ವೈರಸ್ ಹುಟ್ಟಿನ ಬಗ್ಗೆ ಮತ್ತೊಮ್ಮೆ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂದ ಡಬ್ಲ್ಯೂಹೆಚ್​ಒ, ಹಾಲೆಂಡ್​ನಲ್ಲಿ ನಡೆಯಲಿದೆ ಟೆಸ್ಟಿಂಗ್

Published On - 12:32 am, Sat, 5 June 21

ಫ್ರೀಡ್​​ಮ್ಯಾನ್ ಪೋಡ್​ಕ್ಯಾಸ್ಟ್​​​: ಆಡಳಿತ ಸುಧಾರಣೆ ಬಗ್ಗೆ ಮೋದಿ ಮಾತು
ಫ್ರೀಡ್​​ಮ್ಯಾನ್ ಪೋಡ್​ಕ್ಯಾಸ್ಟ್​​​: ಆಡಳಿತ ಸುಧಾರಣೆ ಬಗ್ಗೆ ಮೋದಿ ಮಾತು
ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ
ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ
ಹಾಸನ: ಸತತ ನಾಲ್ಕು ಗಂಟೆಗಳ ಬಳಿಕ ಕಾಡಾನೆ ಸೆರೆ
ಹಾಸನ: ಸತತ ನಾಲ್ಕು ಗಂಟೆಗಳ ಬಳಿಕ ಕಾಡಾನೆ ಸೆರೆ
ಅಂಬಿ ಮೊಮ್ಮಗನ ನಾಮಕರಣ: ವಿಶೇಷ ಗಿಫ್ಟ್ ನೀಡಿದ ಕಿಚ್ಚ ಸುದೀಪ್
ಅಂಬಿ ಮೊಮ್ಮಗನ ನಾಮಕರಣ: ವಿಶೇಷ ಗಿಫ್ಟ್ ನೀಡಿದ ಕಿಚ್ಚ ಸುದೀಪ್
ಮಹಾರಾಷ್ಟ್ರ: ಚಾಲಕನಿಗೆ ಹೃದಯಾಘಾತ, 10 ವಾಹನಗಳಿಗೆ ಡಿಕ್ಕಿ ಹೊಡೆದ ಕಾರು
ಮಹಾರಾಷ್ಟ್ರ: ಚಾಲಕನಿಗೆ ಹೃದಯಾಘಾತ, 10 ವಾಹನಗಳಿಗೆ ಡಿಕ್ಕಿ ಹೊಡೆದ ಕಾರು
ಮಲ್ಲಿಕಾರ್ಜುನ ಖರ್ಗೆ ಜತೆ ಡಿಕೆ ಶಿವಕುಮಾರ್ ದಿಢೀರ್ ಪಯಣ!
ಮಲ್ಲಿಕಾರ್ಜುನ ಖರ್ಗೆ ಜತೆ ಡಿಕೆ ಶಿವಕುಮಾರ್ ದಿಢೀರ್ ಪಯಣ!
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಗಣೇಶ್ ಆಚಾರ್ಯ ಮಾತು
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಗಣೇಶ್ ಆಚಾರ್ಯ ಮಾತು
ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಅಗ್ನಿ ಅವಘಡ
ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಅಗ್ನಿ ಅವಘಡ
ಒಂದೇ ಓವರ್​ನಲ್ಲಿ 6 ಸಿಕ್ಸ್​: ಏಕದಿನ ಕ್ರಿಕೆಟ್​ನ ಮೊದಲ ವಿಶ್ವ ದಾಖಲೆ
ಒಂದೇ ಓವರ್​ನಲ್ಲಿ 6 ಸಿಕ್ಸ್​: ಏಕದಿನ ಕ್ರಿಕೆಟ್​ನ ಮೊದಲ ವಿಶ್ವ ದಾಖಲೆ
Video: ಮಹಾರಾಷ್ಟ್ರದ ಸೆಂಟ್ರಲ್​ ಬ್ಯಾಂಕ್​ನಲ್ಲಿ ಭಾರಿ ಅಗ್ನಿ ಅವಘಡ
Video: ಮಹಾರಾಷ್ಟ್ರದ ಸೆಂಟ್ರಲ್​ ಬ್ಯಾಂಕ್​ನಲ್ಲಿ ಭಾರಿ ಅಗ್ನಿ ಅವಘಡ