ತುಮಕೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಮಲತಾಯಿಗೆ ಜೀವಾವಧಿ ಶಿಕ್ಷೆ
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯದ ಪೋಕ್ಸೋ ನ್ಯಾಯಾಲಯವು ಮಲತಾಯಿ ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಗಳಿಗೆ ದಂಡವನ್ನೂ ವಿಧಿಸಲಾಗಿದೆ ಮತ್ತು ಬಾಲಕಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತುಮಕೂರು, ಮೇ 16: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲತಾಯಿ ಸೇರಿದಂತೆ ಮೂವರಿಗೆ ತುಮಕೂರು (Tumakur) ಜಿಲ್ಲಾ ಸತ್ರ ನ್ಯಾಯಾಲಯದ ಎಫ್ಟಿಎಸ್ಸಿ ಪೋಕ್ಸೋ ನ್ಯಾಯಾಲಯ (Pocso Court) ಜೀವಾವಧಿ ಶಿಕ್ಷೆ (Life imprisonment) ವಿಧಿಸಿದೆ. ಅಪರಾಧಿ ಅರುಣ್ ಕುಮಾರ್ಗೆ ಶಿಕ್ಷೆ ಜೊತೆಗೆ 1 ಲಕ್ಷ 50 ಸಾವಿರ ರೂ. ದಂಡ ವಿಧಿಸಿದೆ. ಹಾಗೇ, ಅಜ್ಜಿ ಗಂಗಮ್ಮ, ಹಾಗೂ ಮಲತಾಯಿ ರತ್ನಮ್ಮಗೂ ಕೂಡ ತಲಾ 1 ಲಕ್ಷ ರೂ. ದಂಡ ಸಹಿತ ಶಿಕ್ಷೆ ನೀಡಿದೆ. ಇನ್ನು ಅಪ್ರಾಪ್ತೆಗೆ ಕಾನೂನು ಸೇವಾ ಪ್ರಾಧಿಕಾರದ ಪರಿಹಾರ ಸೇರಿ 13 ಲಕ್ಷ 50 ಸಾವಿರ ರೂ. ಹಣ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಘಟನೆ ಹಿನ್ನೆಲೆ
ಮೊದಲ ಪತ್ನಿಗೆ ಐವರು ಹೆಣ್ಣು ಮಕ್ಕಳು ಅನ್ನೋ ಕಾರಣಕ್ಕೆ ಪತಿ ಮತ್ತೊಂದು ಮದುವೆಯಾಗಿದ್ದನು. ಆದರೆ, ಎರಡನೇ ಪತ್ನಿಗೆ ಮಕ್ಕಳಾಗಿರಲಿಲ್ಲ. ಈ ಹೊಟ್ಟೆ ಕಿಚ್ಚಿನಿಂದ ಮಲತಾಯಿ ರತ್ನಮ್ಮ ಹಾಗೂ ಅಜ್ಜಿ ಗಂಗಮ್ಮ ಸಂತ್ರಸ್ತೆಯನ್ನು ಕೂಲಿ ಕೆಲಸಕ್ಕೆ ಕರೆದೊಯ್ದಿದ್ದರು. ಬಳಿಕ, ಶೆಡ್ನಲ್ಲಿ ಕೂಡಿ ಹಾಕಿ ಅಪರಾಧಿ ಅರುಣ್ ಕುಮಾರ್ನಿಂದ ಮೂರು ನಾಲ್ಕು ತಿಂಗಳು ಕಾಲ ನಿರಂತರವಾಗಿ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಲೈಂಗಿಕ ದೌರ್ಜನ್ಯದ ವೇಳೆ ಮಲತಾಯಿ ಹಾಗೂ ಅಜ್ಜಿ ಶೆಡ್ ಹೊರಗೆ ಕಾವಲು ಇರುತಿದ್ದರು.
ಘಟನೆ ಸಂಬಂಧ ಸಂಸತ್ರಸ್ತೆ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನ್ನ ಚಿಕ್ಕಮ್ಮ ಹಾಗೂ ಆಕೆಯ ತಾಯಿ ನಡೆಸಿದ ಕೃತ್ಯದ ಬಗ್ಗೆ ಅಪ್ರಾಪ್ತೆ ತನ್ನ ತಾಯಿ ಬಳಿ ಹೇಳಿಕೊಂಡಿದ್ದರು. ಘಟನೆ ಸಂಬಂಧ ಪೋಕ್ಸೋ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.
ಇದನ್ನೂ ಓದಿ: ಮಗನಿಂದಲೇ ಹತ್ಯೆಯಾದ ಉದ್ಯಮಿ: ಅಪ್ಪನನ್ನೇ ಕೊಲೆ ಮಾಡುವಷ್ಟು ಪುತ್ರ ಕಟುಕನಾಗಿದ್ಯಾಕೆ?
ಪ್ರಕರಣ ಸಂಬಂಧ ವಿಚಾರಣೆ ನಡೆಸಿದಾಗ ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾಗಿದೆ. ಆರೋಪಿ ಅರುಣ್ ಕುಮಾರ್, ಮಲತಾಯಿ ರತ್ನಮ್ಮ, ಅಜ್ಜಿ ಗಂಗಮ್ಮಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿಯಾಗಿ ಕೆ.ಎಸ್.ಆಶಾ ಅವರು ವಾದ ಮಂಡಿಸಿದ್ದಾರೆ.







