ತುಮಕೂರು ಗೃಹರಕ್ಷಕ ದಳದ ಕಮಾಂಡೆಂಟ್ ರಾಜೇಂದ್ರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಡಿಸಿ, ಐಜಿಗೆ ಪತ್ರದ ಮೂಲಕ ದೂರು
ತುಮಕೂರು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ವಿರುದ್ಧ ಐದು ಮಹಿಳಾ ಸಿಬ್ಬಂದಿಗಳು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಕೊರಟಗೆರೆ ತರಬೇತಿ ಶಿಬಿರದಲ್ಲಿ ಘಟನೆ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಬಗ್ಗೆ ಮಹಿಳಾ ಆಯೋಗ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ತುಮಕೂರಿನ ಸೆನ್ ಡಿವೈಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ.

ತುಮಕೂರು, ಮೇ 16: ಜಿಲ್ಲಾ ಗೃಹ ರಕ್ಷಕದಳದ ಕಮಾಂಡೆಂಟ್ (Home Guard Commandant) ರಾಜೇಂದ್ರ ವಿರುದ್ಧ ಲೈಂಗಿಕ ಕಿರುಕುಳ (Sexual Harassment) ಆರೋಪ ಕೇಳಿಬಂದಿದೆ. ತರಬೇತಿ ಶಿಬಿರದಲ್ಲಿ ತಪ್ಪು ಹೇಳಿಕೊಡುವ ನೆಪದಲ್ಲಿ ಮೈಮುಟ್ಟಿ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ. ಈ ಬಗ್ಗೆ ಐವರು ಮಹಿಳಾ ಸಿಬ್ಬಂದಿಯಿಂದ ಡಿಸಿ, ಮಹಿಳಾ ಆಯೋಗ ಮತ್ತು ಅಗ್ನಿಶಾಮಕದಳ ಐಜಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ದೂರಿನ ಅರ್ಜಿ ಜೊತೆಗೆ ಪೆನ್ಡ್ರೈವ್ ದಾಖಲೆ ಕೂಡ ನೀಡಿದ್ದಾರೆ. ಇನ್ನು ತರಬೇತಿಯ ವೇಳೆ ಮಹಿಳಾ ಸಿಬ್ಬಂದಿ ಜತೆ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ.
ಕಮಾಂಡೆಂಟ್ ರಾಜೇಂದ್ರ ವಿರುದ್ಧ ಆರೋಪ ಹಿನ್ನೆಲೆ ತನಿಖೆ ನಡೆಸಿ ವರದಿ ನೀಡುವಂತೆ ತುಮಕೂರು ಎಸ್ಪಿ ಸೂಚಿಸಿದ್ದು, ತುಮಕೂರಿನ ಸೆನ್ ಡಿವೈಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ.
ತುಮಕೂರು ಎಸ್ಪಿ ಅಶೋಕ್ ವಿಕೆ ಹೇಳಿದ್ದಿಷ್ಟು
ಈ ಬಗ್ಗೆ ತುಮಕೂರು ಎಸ್ಪಿ ಅಶೋಕ್ ವಿಕೆ ಪ್ರತಿಕ್ರಿಯಿಸಿದ್ದು, ಸುಪ್ರೀಂ ಕೋರ್ಟ್ ಗೈಡ್ಲೈನ್ ಪ್ರಕಾರ ಪ್ರತಿಯೊಂದು ಇಲಾಖೆಗೂ ಇಂಟರ್ನಲ್ಲಿ ಕಮಿಟಿ ಇರುತ್ತದೆ. ಅದೇ ರೀತಿ ಇಂಟರ್ನಲ್ ಕಮಿಟಿಯಿಂದ ಕೆಲಸದ ಸಮಯದ ಕಿರುಕುಳ ಹಿನ್ನಲೆ ತನಿಖೆ ನಡೆಸಲಾಗುತ್ತಿದೆ. ಡಿವೈಎಸ್ಪಿ ಸೆನ್ ಮಹಿಳಾ ಅಧಿಕಾರಿಯಾಗಿರುವುದರಿಂದ ಅವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಘಟನೆ ಟ್ರೈನಿಂಗ್ನಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಯಾರಿದ್ದರು, ಏನಿದು ಪ್ರಕರಣ ಎಂದು ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.
ದೂರಿನಲ್ಲೇನಿದೆ?
ಏಪ್ರಿಲ್ 24 ರಿಂದ ಮೇ 3ವರೆಗೆ ಕೊರಟಗೆರೆಯ ಸಿದ್ದರ ಬೆಟ್ಟದಲ್ಲಿ ತರಬೇತಿ ಶಿಬಿರ ಮಾಡಲಾಗಿತ್ತು. ಹೊಸದಾಗಿ ನೋಂದಣಿಯಾದ 235 ಜನ ಗೃಹರಕ್ಷಕರಿಗೆ ಹತ್ತು ದಿನಗಳ ಕಾಲ ತರಬೇತಿ ಶಿಬಿರ ನಡೆಸಲಾಗಿತ್ತು. ಈ ಮಧ್ಯೆ ಏಪ್ರಿಲ್ 26ರ ರಾತ್ರಿ 9:30 ಗಂಟೆಗೆ ಮಹಿಳಾ ಗೃಹರಕ್ಷಕಿಗೆ ಉಸಿರಾಟದ ತೊಂದರೆಯಿಂದ ಎದೆ ನೋವು ಕಾಣಿಸಿಕೊಂಡಿತ್ತು. ಕಮಾಂಡೆಂಟ್ ಆರ್. ರಾಜೇಂದ್ರನ್ ಅಲ್ಲಿಗೆ ಅನಾವಶ್ಯಕವಾಗಿ ಬಂದಿದ್ದರು. ಆ ಸಮಯದಲ್ಲಿ ಮದ್ಯಪಾನ ಮಾಡಿದ್ದರು. ಜೊತೆಗೆ ಪ್ರಥಮ ಚಿಕಿತ್ಸೆ ನೀಡುವ ನೆಪದಲ್ಲಿ ಗೃಹರಕ್ಷಕಿಯ ಖಾಸಗಿ ಅಂಗಗಳನ್ನು (ಎದೆಯ ಭಾಗ) ಲೈಂಗಿಕ ರೂಪದಲ್ಲಿ ಅತಿ ಕೆಟ್ಟದಾಗಿ ಅನಾವಶ್ಯಕವಾಗಿ ಸ್ಪರ್ಶಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಭಾರತ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಕಳ್ಸಿದ್ದು ಬಿಟ್ರೆ ಏನೂ ಮಾಡಿಲ್ಲ: ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್
ಬಳಿಕ ಅದೇ ದಿನ ರಾತ್ರಿ 10:50ರ ಸಮಯದಲ್ಲಿ ಮತ್ತೊರ್ವ ಗೃಹರಕ್ಷಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬೂಟಿನಿಂದ ಹೊಡೆಯುತ್ತೇನೆ ಲೋಫರ್ ಮು* ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ಮರುದಿನ ಏ. 27ರಂದು ಬೆಳಿಗ್ಗೆ ಟ್ರಕಿಂಗ್ ಇತ್ತು. ಬೆಳಿಗ್ಗೆ 6:45 ನಿಮಿಷದ ಸಮಯದಲ್ಲಿ ಕಾಲ್ನಡಿಗೆಯೊಂದಿಗೆ ಬೆಟ್ಟ ಹತ್ತುವ ಸಂದರ್ಭದಲ್ಲಿ ಗೃಹರಕ್ಷಕಿಯೋರ್ವರ ಮೈಕೈ ಮುಟ್ಟಿ ಅವರ ಬೆನ್ನಿನ ಭಾಗದಲ್ಲಿ ಹಾಗೂ ಖಾಸಗಿ ಅಂಗಾಂಗಗಳಿಗೆ ಕೆಟ್ಟದಾಗಿ ಸ್ಪರ್ಶಿಸಿದ್ದಾರೆ. ಜೊತೆಗೆ ಅವರ ಸೊಂಟದ ಭಾಗಕ್ಕೆ ಹಿಸುಕಿ ಬೆಟ್ಟ ಹತ್ತುವಂತೆ ಪುಸಲಾಯಿಸಿ ಬಹಳ ಕೆಟ್ಟದಾಗಿ ವರ್ತಿಸಿದ್ದಾರೆ. ಪ್ರತಿ ದಿನ ಬೆಳಗ್ಗೆ ದೈಹಿಕ ತರಬೇತಿ ನಡೆಯುವ ಸಮಯದಲ್ಲಿ ನಮ್ಮ ದೇಹದ ಖಾಸಗಿ ಅಂಗಾಂಗಗಳನ್ನು ಕಾಮುಕ ದೃಷ್ಟಿಯಲ್ಲಿ ನೋಡುತ್ತಾರೆ. ತಪ್ಪಾಗಿ ಮಾಡಿದ ಗೃಹರಕ್ಷಕಿಯರಿಗೆ ತಿದ್ದಿ ಹೇಳಿಕೊಡುವ ನೆಪದಲ್ಲಿ ನಮ್ಮ ದೇಹದ ಖಾಸಗಿ ಅಂಗಾಂಗಗಳನ್ನು ಮುಟ್ಟುತ್ತಾರೆ. ಇದರಿಂದ ನಮ್ಮ ಮಾನ, ಗೌರವಕ್ಕೆ ಧಕ್ಕೆ ಉಂಟಾಗಿರುತ್ತದೆ. ಇದರಿಂದ ಮಾನಸಿಕ ನೋವು ಉಂಟಾಗಿರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಶರಾವತಿ ನದಿ ತೀರದ ‘ರಾಣಿ ವೀಳ್ಯದೆಲೆ’ಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆ! ಆದರೂ ರಫ್ತು ನಿರಾಕರಿಸಿದ ರೈತರು
ಜಿಲ್ಲಾ ಗೃಹರಕ್ಷಕರದಳದ ಕಮಾಂಡೆಂಟ್ ಆರ್. ರಾಜೇಂದ್ರನ್ ಅವರಿಗೆ ಪ್ರತ್ಯೇಕ ಅತಿಥಿಗೃಹ ವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದನ್ನು ಬಳಸಿಕೊಳ್ಳದೇ ಬೇಡವೆಂದು ತಿರಸ್ಕರಿಸಿದ್ದು, ಮಹಿಳಾ ಗೃಹರಕ್ಷಕಿಯರ ವಾಸ್ತವ್ಯಕ್ಕೆ ನೀಡಿರುವ ಕೊಠಡಿಗಳ ಬಳಿ ಇರುವ ಒಂದು ಕೊಠಡಿಯಲ್ಲಿ ಒಬ್ಬರೇ ಉಳಿದುಕೊಂಡಿರುತ್ತಾರೆ. ದಿನ ರಾತ್ರಿ ಅವರ ಕೊಠಡಿಯಲ್ಲಿ ಕೆಲವು ಘಟಕಾಧಿಕಾರಿಗಳ ಜೊತೆ ಸೇರಿ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಾರೆ. ತರಬೇತಿ ಸಮಯದಲ್ಲಿ ನಮಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಬೇರೆ ಯಾವುದೇ ಹೆಣ್ಣು ಮಕ್ಕಳಿಗೆ ಈ ರೀತಿ ಆಗದಂತೆ ಆರ್ ರಾಜೇಂದ್ರನ್ ವಿರುದ್ಧ ಶಿಸ್ತು ಕ್ರಮ ಜರುಗಿಸಿ. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯಕೊಡಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



