ಉಕ್ರೇನ್​ ಮೇಲಿನ ರಷ್ಯಾ ದಾಳಿ ಪಕ್ಕಾ ಪ್ಲಾನ್​ನಂತೆ ನಡೀತಿದೆ: ಅಂದು ಸಿರಿಯಾದಲ್ಲಿಯೂ ಇದೆಲ್ಲಾ ಆಗಿತ್ತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 21, 2022 | 10:07 PM

ಉಕ್ರೇನ್​ನ ಬಂದರು ನಗರಿ ಮರಿಯುಪೋಲ್​ನ ಹೆರಿಗೆ ಆಸ್ಪತ್ರೆಯ ಮೇಲೆ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸಿದ್ದು ಸಿರಿಯಾದಲ್ಲಿ ರಷ್ಯಾ ನಡೆದುಕೊಂಡ ರೀತಿಗೆ ಅನುಗುಣವಾಗಿಯೇ ಇದೆ.

ಉಕ್ರೇನ್​ ಮೇಲಿನ ರಷ್ಯಾ ದಾಳಿ ಪಕ್ಕಾ ಪ್ಲಾನ್​ನಂತೆ ನಡೀತಿದೆ: ಅಂದು ಸಿರಿಯಾದಲ್ಲಿಯೂ ಇದೆಲ್ಲಾ ಆಗಿತ್ತು
ಕೀವ್​ನಲ್ಲಿ ರಷ್ಯಾ ದಾಳಿಯಿಂದ ಹೊತ್ತಿಕೊಂಡ ಬೆಂಕಿಯನ್ನು ನಂದಿಸುತ್ತಿರುವ ಅಗ್ನಿಶಾಮಕ ದಳ (ಎಪಿ ಫೋಟೋ)
Follow us on

ಸಿರಿಯಾದಲ್ಲಿ ಅಧ್ಯಕ್ಷ ಬಷಾರ್ ಅಲ್ ಅಸದ್ ಪರ ಇದ್ದ ಸರ್ಕಾರಿ ಪಡೆಗಳಿಗೆ ಬೆಂಬಲ ಸೂಚಿಸಿ ರಷ್ಯಾ ಸಶಸ್ತ್ರ ಪಡೆಗಳು ಅಲ್ಲಿನ ನಾಗರಿಕರ ಮೇಲೆ ನಡೆಸಿದ್ದ ಹಿಂಸಾಚಾರಕ್ಕೂ ಇದೀಗ ಉಕ್ರೇನ್​ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗೂ ಸಾಕಷ್ಟು ಸಾಮ್ಯತೆಗಳಿವೆ ಎಂದು ಸಿರಿಯಾದ ಅಂತರ್ಯುದ್ಧ ಸಂತ್ರಸ್ತರು ನೆನಪಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಸಿರಿಯಾದ ಇದ್ಲಿಬ್ ಪ್ರಾಂತ್ಯದಲ್ಲಿ ಬಂಡುಕೋರರ ಹಿಡಿತದಲ್ಲಿದ್ದ ಕಫಾರ್ ನಬೆಲ್ ಪಟ್ಟಣದ ಮೇಲೆ ರಷ್ಯಾ ವಾಯುದಾಳಿ ನಡೆಸಿದಾಗ ಅಲ್ಲಿನ ಆಸ್ಪತ್ರೆಗಳನ್ನೇ ಗುರಿಯಾಗಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಈ ದಾಳಿಯಲ್ಲಿ ಮೃತಪಟ್ಟಿದ್ದರು ಎಂದು ಸಿರಿಯಾ ಯುದ್ಧಸಂತ್ರಸ್ತ ರಮಿ ಅಲ್-ಫಾರೆಸ್ ನೆನಪಿಸಿಕೊಳ್ಳುತ್ತಾರೆ.

ಉಕ್ರೇನ್​ನ ಬಂದರು ನಗರಿ ಮರಿಯುಪೋಲ್​ನ ಹೆರಿಗೆ ಆಸ್ಪತ್ರೆಯ ಮೇಲೆ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸಿದ್ದು ಸಿರಿಯಾದಲ್ಲಿ ರಷ್ಯಾ ನಡೆದುಕೊಂಡ ರೀತಿಗೆ ಅನುಗುಣವಾಗಿಯೇ ಇದೆ. ಯಾವುದೇ ನಗರದ ಮೇಲೆ ರಷ್ಯಾದ ದಾಳಿ ತೀವ್ರವಾದರೆ ಮೊದಲು ಅಲ್ಲಿನ ಆಸ್ಪತ್ರೆಗಳನ್ನು ಗುರಿಯಾಗಿಸಿಕೊಳ್ಳಲಾಗುತ್ತದೆ. ಸ್ಥಳೀಯರು ಸತತ ಭಯದಲ್ಲಿಯೇ ಬದುಕುವ ಸ್ಥಿತಿ ನಿರ್ಮಾಣವಾಗುತ್ತದೆ.

ರಷ್ಯಾ ಸರ್ಕಾರವೇ ಅಧಿಕೃತವಾಗಿ ಒಪ್ಪಿಕೊಂಡಿರುವಂತೆ ಮರಿಯುಪೋಲ್ ಆಸ್ಪತ್ರೆಯು ಈಗ ಕಾರ್ಯನಿರ್ವಹಿಸುತ್ತಿಲ್ಲ. ಮಾರ್ಚ್ 9ರ ನಂತರ ಆಸ್ಪತ್ರೆಯು ಕಾರ್ಯನಿರ್ವಹಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು. ಅದನ್ನು ಉಕ್ರೇನ್ ರಾಷ್ಟ್ರೀಯವಾದಿಗಳ ಪರವಾಗಿರುವ ಹೋರಾಟಗಾರರು ತಮ್ಮ ನೆಲೆಯಾಗಿಸಿಕೊಂಡಿದ್ದರು ಎನ್ನುವುದು ರಷ್ಯಾ ಸರ್ಕಾರದ ಆರೋಪವಾಗಿತ್ತು. ಈ ಆರೋಪವನ್ನೇ ದಾಳಿಗೆ ನೆಪವಾಗಿ ರಷ್ಯಾ ಬಳಸಿಕೊಂಡಿತ್ತು.

ಕಳೆದ ಫೆಬ್ರುವರಿ 24ರಂದು ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ನಂತರ ಈವರೆಗೆ 30 ಲಕ್ಷಕ್ಕೂ ಹೆಚ್ಚು ಜನರು ದೇಶ ತೊರೆದಿದ್ದಾರೆ. ಉಕ್ರೇನ್​ನಲ್ಲಿಯೂ ಅಧ್ಯಕ್ಷ ಬಷರ್ ಅಲ್-ಅಸದ್ ವಿರುದ್ಧದ ಹೋರಾಟ ಮತ್ತು ನಂತರದ ಅಂತರ್ಯುದ್ಧದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಜನರು ದೇಶ ತೊರೆದಿದ್ದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದೇ ತಂತ್ರವನ್ನು ಇದೀಗ ಉಕ್ರೇನ್​ ಮೇಲೆಯೂ ಪ್ರಯೋಗಿಸುತ್ತಿದ್ದಾರೆ ಎಂದು ಸಿರಿಯಾ ಜನರು ಅನುಮಾನಿಸುತ್ತಾರೆ.

‘ಅಂದು ಸಿರಿಯಾದಲ್ಲಿ ಏನೆಲ್ಲಾ ಆಯಿತೋ ಇಂದು ಉಕ್ರೇನ್​ನಲ್ಲಿ ಅದೇ ಆಗುತ್ತಿದೆ. ಪುಟಿನ್ ಯಾವುದೇ ದೇಶದ ವಿದ್ಯಮಾನಗಳಲ್ಲಿ ಹಸ್ತಕ್ಷೇಪ ಮಾಡಿದರೆ ಅಲ್ಲಿನ ಜನರ ಬದುಕನ್ನು ನರಕವಾಗಿಸುತ್ತಾರೆ’ ಎನ್ನುತ್ತಾರೆ ಸಿರಿಯನ್ ಸಿವಿನ್ ಡಿಫೆನ್ಸ್​ ಸಂಸ್ಥೆಯ ಸ್ವಯಂಸೇವಕ ಮೊಹಮದ್ ಅಲ್ ಶೆಬ್ಲಿ. ಜನರ ಬದುಕು ಮತ್ತು ನಿತ್ಯದ ವಿದ್ಯಮಾನಗಳನ್ನು ಪ್ರಭಾವಿಸುವ ಎಲ್ಲ ಸಂಗತಿಗಳನ್ನೂ ರಷ್ಯಾದ ದಾಳಿ ಹಾಳುಮಾಡುತ್ತದೆ ಎಂದು ಆರೋಪಿಸುತ್ತಾರೆ ಅವರು.

ಈವರೆಗೆ ವಿಶ್ವಸಂಸ್ಥೆಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ 691 ಉಕ್ರೇನ್ ನಾಗರಿಕರು ಮೃತಪಟ್ಟಿದ್ದಾರೆ. ಇದರಲ್ಲಿ 48 ಮಕ್ಕಳು ಸೇರಿದ್ದಾರೆ. ವಾಸ್ತವದಲ್ಲಿ ಈ ಸಂಖ್ಯೆಗಳು ಇನ್ನಷ್ಟು ಹೆಚ್ಚಾಗಿದೆ ಎಂದು ಅಲ್​ಜಝೀರಾ ಜಾಲತಾಣ ವರದಿ ಮಾಡಿದೆ. ಉಕ್ರೇನ್​ ಆಡಳಿತದಲ್ಲಿ ರಷ್ಯಾದ ಹಸ್ತಕ್ಷೇಪ ಇದೇ ರೀತಿ ಮುಂದುವರಿದರೆ ದಾಳಿಗೆ ಹೆದರಿ ದೇಶಬಿಡುತ್ತಿರುವವರು ಮತ್ತೆ ಹಿಂದಿರುಗುವುದು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಉಕ್ರೇನಿಯನ್ನರು ಇಂದು ದೇಶ ಬಿಡುವುದನ್ನು ನೋಡಿದಾಗ ನನಗೆ 2017ರಲ್ಲಿ ಸಿರಿಯಾ ರಾಜಧಾನಿ ಡಮಾಸ್ಕಸ್​ನಲ್ಲಿ ಆದ ಘಟನೆಗಳೇ ನೆನಪಾಗುತ್ತದೆ ಎನ್ನುತ್ತಾರೆ ಸಿರಿಯಾದಿಂದ ಹೊರಬಂದಿರುವ ನಿರಾಶ್ರಿತರೊಬ್ಬರು.

ಸಿರಿಯಾದಲ್ಲಿ ರಷ್ಯಾ ಸೇನೆ ಮತ್ತು ಸಿರಿಯಾದ ಸರ್ಕಾರಿ ಪಡೆಗಳು ಸಾಕಷ್ಟು ದೌರ್ಜನ್ಯ ಎಸಗಿದ್ದವು. ಆದರೆ ಯುದ್ಧಾಪರಾಧಗಳಿಗೆ ಯಾರೊಬ್ಬರನ್ನೂ ಗುರಿಯಾಗಿಸಿ ವಿಚಾರಣೆ ನಡೆಸಲಿಲ್ಲ. ನಾಗರಿಕ ಬದುಕಿಗೆ, ಜನರ ಆತ್ಮಗೌರವಕ್ಕೆ ರಷ್ಯಾ ಪಡೆಗಳು ಸಿರಿಯಾದಲ್ಲಿಯೂ ಬೆಲೆ ಕೊಡಲಿಲ್ಲ. ಇಂದು ಉಕ್ರೇನ್​ನಲ್ಲಿಯೂ ರಷ್ಯಾ ಸೇನೆಯ ವರ್ತನೆ ಬದಲಾಗಿಲ್ಲ ಎನ್ನುತ್ತಾರೆ ಅವರು.

ಇದನ್ನೂ ಓದಿ: Russia Ukraine War: ಪುಟಿನ್ ಕೆಟ್ಟೋನು ಅಂತ್ಲೇ ಅಂದ್ಕೊಳಿ: ರಷ್ಯಾ ಉಕ್ರೇನ್ ಯುದ್ಧ ನೋಡುವ ಮೂರು ಕ್ರಮಗಳಿವು

ಇದನ್ನೂ ಓದಿ: ರಷ್ಯಾ ಉಕ್ರೇನ್ ಯುದ್ದ: ಕರ್ನಾಟಕದ ಸಮುದ್ರ ಗಡಿ ಜಿಲ್ಲೆಗಳಿಗೆ ಮಿಸೈಲ್ ಬಡಿದರೆ ಬೆಂಕಿ ನಂದಿಸಲು ಫೈರ್ ಸೇಫ್ಟಿ ವ್ಯವಸ್ಥೆ ಇಲ್ಲ!