China Plane Crash: ವಿಮಾನ ವೇಗವಾಗಿ ಕೆಳಗೆ ಬಿದ್ದ ವಿಡಿಯೋ ವೈರಲ್; ಪ್ರಯಾಣಿಕರು ಬದುಕುಳಿದ ಯಾವುದೇ ಕುರುಹೂ ಇಲ್ಲ
ಈ ವಿಮಾನ ಪತನಗೊಳ್ಳುವ ವೇಳೆ ಮೊದಲು 29,100 ಅಡಿ ಎತ್ತರದಿಂದ 9075 ಅಡಿಗೆ ಕೇವಲ 2.15 ನಿಮಿಷಗಳಲ್ಲಿ ಕುಸಿಯಿತು. ಇನ್ನುಳಿದ 20 ಸೆಕೆಂಡ್ಗಳಲ್ಲಿ 3225 ಅಡಿಗೆ ಬಂದಿದೆ. ನಂತರ ಪರ್ವತಕ್ಕೆ ಅಪ್ಪಳಿಸಿ ಹಾರಿ ಬಿದ್ದಿದೆ.

ಇಂದು ಚೀನಾದಲ್ಲಿ ಭೀಕರ ವಿಮಾನ ಅಪಘಾತ (ChinaPlane Crash) ಆಗಿದೆ. ಒಟ್ಟು 133 ಪ್ರಯಾಣಿಕರಿದ್ದ, ಚೀನಾ ಈಸ್ಟರ್ನ್ ಏರ್ಲೈನ್ಸ್ಗೆ ಸೇರಿದ ಬೋಯಿಂಗ್ 737 ವಿಮಾನ ಪತನ ಆಗಿದೆ. ಕುನ್ಮಿಂಗ್ ನಗರದಿಂದ ಗುವಾಂಗ್ಝೌಗೆ ತೆರಳುತ್ತಿದ್ದ ವಿಮಾನ ಗುವಾಂಗ್ಸ್ಕಿ ಪ್ರದೇಶದ ವುಝೌ ಬಳಿ, ಪರ್ವತ ಪ್ರದೇಶದಲ್ಲಿ ವಾಯುಗಾಮಿ ಸಂಪರ್ಕ ಕಳೆದುಕೊಂಡಿದೆ. ಅದೇ ಜಾಗದಲ್ಲಿಯೇ ಅಪಘಾತಕ್ಕೀಡಾಗಿದೆ. ವಿಮಾನ ಪತನಗೊಂಡಿದ್ದರ ವಿಡಿಯೋಗಳು ವೈರಲ್ ಆಗಿದ್ದು, ಇದೀಗ ಹಲವು ಫೋಟೋಗಳೂ ವೈರಲ್ ಆಗುತ್ತಿವೆ. ವಿಮಾನ ಚೂರುಚೂರಾಗಿ ಬಿದ್ದಿದ್ದು, 133 ಜನರಲ್ಲಿ ಒಬ್ಬರೂ ಉಳಿದ ಯಾವುದೇ ಕುರುಹೂ ಇಲ್ಲ ಎಂದು ಚೀನಾದ ನಾಗರಿಕ ವಿಮಾನಯಾನ ಆಡಳಿತ ಮಾಹಿತಿ ನೀಡಿದೆ. ದುರ್ಘಟನೆ ಬೆನ್ನಲ್ಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅವರು ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದು Mu5735 ನಂಬರ್ನ ವಿಮಾನವಾಗಿದ್ದು, ಪರ್ವತಕ್ಕೆ ಅಪ್ಪಳಿಸುವ ಮೊದಲು ಅತಿಯಾದ ವೇಗ ಹೊಂದಿತ್ತು. ಈ ವಿಮಾನ ಪತನಗೊಳ್ಳುವ ವೇಳೆ ಮೊದಲು 29,100 ಅಡಿ ಎತ್ತರದಿಂದ 9075 ಅಡಿಗೆ ಕೇವಲ 2.15 ನಿಮಿಷಗಳಲ್ಲಿ ಕುಸಿಯಿತು. ಇನ್ನುಳಿದ 20 ಸೆಕೆಂಡ್ಗಳಲ್ಲಿ 3225 ಅಡಿಗೆ ಬಂದಿದೆ. ನಂತರ ಪರ್ವತಕ್ಕೆ ಅಪ್ಪಳಿಸಿ ಹಾರಿ ಬಿದ್ದಿದೆ. ವಿಮಾನದ ಭಾಗಗಳೆಲ್ಲ ಬಿಡಿಯಾಗಿ, ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಫ್ಲೈಟ್ರಾಡಾರ್ 24 ವೆಬ್ಸೈಟ್ ಹೇಳಿದೆ.
ಭೀಕರ ವಿಮಾನ ಅಪಘಾತದ ಬಗ್ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನೋವು ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಶಾಕಿಂಗ್ ಎಂದು ಹೇಳಿರುವ ಅವರು ತನಿಖೆಗೆ ಆದೇಶಿಸಿದ್ದಾರೆ. ಇನ್ನು ದುರಂತ ನಡೆದ ಬೆನ್ನಲ್ಲೇ ಚೀನಾ ಈಸ್ಟರ್ನ್ ಏರ್ಲೈನ್ಸ್ ಸಂಸ್ಥೆ ತನ್ನ ವೆಬ್ಸೈಟ್ನ್ನು ಕಪ್ಪು-ಬಿಳುಪಿನ ಬಣ್ಣಕ್ಕೆ ಬದಲಿಸಿ, ಶೋಕ ವ್ಯಕ್ತಪಡಿಸಿದೆ. ಚೀನಾ ಈಸ್ಟರ್ನ್ ಏರ್ಲೈನ್ಸ್ ಎಂಬುದು ಶಾಂಘೈ ಮೂಲದ ವಿಮಾನಯಾನ ಸಂಸ್ಥೆ. ಚೀನಾದ ಮೂರು ಪ್ರಮುಖ ವಿಮಾನ ಯಾನ ಸ್ಂಸ್ಥೆಗಳಲ್ಲಿ ಇದೂ ಒಂದು. ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇರಿ ಒಟ್ಟು 248 ಪ್ರದೇಶಗಳಿಗೆ ಇದರ ವಿಮಾನಸೇವೆ ಇದೆ.
Final seconds of #MU5735 pic.twitter.com/gCoMX1iMDL
— ChinaAviationReview (@ChinaAvReview) March 21, 2022
ಇದನ್ನೂ ಓದಿ: Video: ಚೀನಾದಲ್ಲಿ 133 ಪ್ರಯಾಣಿಕರಿದ್ದ ವಿಮಾನ ಪತನ; ಪರ್ವತಗಳ ಮಧ್ಯೆ ಅಪಘಾತಕ್ಕೀಡಾದ ಫ್ಲೈಟ್
Published On - 5:10 pm, Mon, 21 March 22




