Russia Ukraine War: ಕೊರಿಯಾದಂತೆ ಉಕ್ರೇನ್​ ದೇಶವೂ ವಿಭಜನೆ ಸಾಧ್ಯತೆ: ಹೊಸ ಆತಂಕ

ಉಕ್ರೇನ್ ರಾಜಧಾನಿ ಕೀವ್ ನಗರ ವಶಪಡಿಸಿಕೊಂಡು ಆಡಳಿತ ಬದಲಿಸುವ ಉದ್ದೇಶ ವಿಫಲವಾದ ಹಿನ್ನೆಲೆಯಲ್ಲಿ ವ್ಲಾದಿಮಿರ್ ಪುಟಿನ್ ದೇಶ ವಿಭಜಿಸುವ ಹೊಸ ಚಿಂತನೆ ತೇಲಿ ಬಿಟ್ಟಿದ್ದಾರೆ

Russia Ukraine War: ಕೊರಿಯಾದಂತೆ ಉಕ್ರೇನ್​ ದೇಶವೂ ವಿಭಜನೆ ಸಾಧ್ಯತೆ: ಹೊಸ ಆತಂಕ
ಉಕ್ರೇನ್​ನಲ್ಲಿರುವ ರಷ್ಯಾ ಪಡೆಗಳು
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 28, 2022 | 8:17 AM

ಕೀವ್: ಕೊರಿಯಾ ಪ್ರಸ್ತಭೂಮಿಯನ್ನು ವಿಭಜಿಸಿ ಉತ್ತರ ಮತ್ತು ದಕ್ಷಿಣ ಕೊರಿಯಾ ಎಂಬ ಎರಡು ಪ್ರತ್ಯೇಕ ದೇಶಗಳನ್ನು ರೂಪಿಸಿದಂತೆ ಉಕ್ರೇನ್ ದೇಶವನ್ನೂ ವಿಭಜಿಸಿ ಎರಡು ಪ್ರತ್ಯೇಕ ದೇಶಗಳನ್ನು ರೂಪಿಸುವ ಚಿಂತನೆಯನ್ನು ರಷ್ಯಾ ಹೊಂದಿದೆ ಎಂದು ಉಕ್ರೇನ್ ಅತಂಕ ವ್ಯಕ್ತಪಡಿಸಿದೆ. ಉಕ್ರೇನ್ ರಾಜಧಾನಿ ಕೀವ್ ನಗರ ವಶಪಡಿಸಿಕೊಂಡು ಆಡಳಿತ ಬದಲಿಸುವ ಉದ್ದೇಶ ವಿಫಲವಾದ ಹಿನ್ನೆಲೆಯಲ್ಲಿ ವ್ಲಾದಿಮಿರ್ ಪುಟಿನ್ ದೇಶ ವಿಭಜಿಸುವ ಹೊಸ ಚಿಂತನೆ ತೇಲಿ ಬಿಟ್ಟಿದ್ದಾರೆ ಎಂದು ಉಕ್ರೇನ್​ನ ಮಿಲಿಟರಿ ಗುಪ್ತಚರ ವಿಭಾಗದ ಮಖ್ಯಸ್ಥ ಕಿರಿಲೊ ಬುಡನೊವ್ ಸಾಮಾಜಿಕ ಮಾಧ್ಯಮದ ಪೋಸ್ಟ್​ನಲ್ಲಿ ಹೇಳಿದ್ದಾರೆ. ಉಕ್ರೇನ್​ನಲ್ಲಿ ರಷ್ಯಾ ಆಕ್ರಮಿಸಿಕೊಂಡಿರುವ ಮತ್ತು ಅವರಿಗೆ ಆಕ್ರಮಿಸಿಕೊಳ್ಳಲು ಆಗದ ಭೂ ಪ್ರದೇಶಗಳನ್ನು ವಿಭಜಿಸಿ ಎರಡು ಪ್ರತ್ಯೇಕ ದೇಶಗಳನ್ನು ಅಸ್ತಿತ್ವಕ್ಕೆ ತರುವ ಹಂಚಿಕೆಯನ್ನು ನಂಬಲು ಸಾಕಷ್ಟು ಕಾರಣಗಳಿವೆ ಎಂದು ಅವರು ವಿವರಿಸಿದ್ದಾರೆ.

1950-53ರ ಅವಧಿಯಲ್ಲಿ ಕೊರಿಯಾ ವಿಭಜನೆಯಾದ ನಂತರ ಎರಡೂ ದೇಶಗಳು ಸತತ ಸಂಘರ್ಷದಲ್ಲಿವೆ. ಎರಡೂ ದೇಶಗಳ ನಡುವೆ ಈವರೆಗೆ ಶಾಂತಿ ಒಪ್ಪಂದ ಆಗಿಲ್ಲ. ಬದಲಿಗೆ ಹಲವು ಬಾರಿ ತಾತ್ಕಾಲಿಕವಾಗಿ ಕದನ ವಿರಾಮಗಳು ಘೋಷಣೆಯಾಗಿವೆ. ಎರಡೂ ದೇಶಗಳ ನಡುವೆ 4 ಕಿಮೀ ಅಗಲ ಮತ್ತು 248 ಕಿಮೀ ಉದ್ದದ ಮಿಲಿಟರಿ ಮುಕ್ತ ವಲಯ (Demilitarised Zone – DMZ) ಘೋಷಿಸಲಾಗಿದೆ.

ಕೀವ್ ನಗರ ವಶಪಡಿಸಿಕೊಳ್ಳುವುದು ಕಷ್ಟ ಎಂದು ಅರಿವಾದ ನಂತರ ರಷ್ಯಾ ತನ್ನ ಕಾರ್ಯಾಚರಣೆಯ ಉದ್ದೇಶವನ್ನೇ ಬದಲಿಸಲು ಮುಂದಾಗಿದೆ. ಉಕ್ರೇನ್ ಅನ್ನು ಇಡಿಯಾಗಿ ಗೆದ್ದು, ತನ್ನ ಕೈಗೊಂಬೆ ಸರ್ಕಾರ ಸ್ಥಾಪಿಸುವ ಉದ್ದೇಶದಿಂದ ಹಿಂದೆ ಸರಿದು, ಇದೀಗ ಪೂರ್ವ ಉಕ್ರೇನ್​ ಕಡೆಗೆ ಮಾತ್ರ ತನ್ನ ಗಮನ ಕೇಂದ್ರೀಕರಿಸಲು ಮುಂದಾಗಿದೆ. ಸತತ ಒಂದು ತಿಂಗಳ ಹೋರಾಟದ ನಂತರವೂ ರಷ್ಯಾಕ್ಕೆ ಉಕ್ರೇನ್​ನ ಮಿಲಿಟರಿ ಬಲ ಮುರಿಯಲು ಸಾಧ್ಯವಾಗಿರಲಿಲ್ಲ.

ಉಕ್ರೇನ್​ ದೇಶ ಒಡೆದರೆ ಹೀಗಾಗುತ್ತೆ (Pic Courtesy: www.geocurrents.info)

‘ದಾಳಿಕೋರರು ಸ್ವತಂತ್ರ್ಯ ಉಕ್ರೇನ್​ನ ಬಲ ಕಡಿಮೆ ಮಾಡಲು ಆಕ್ರಮಿತ ಪ್ರದೇಶಗಳಲ್ಲಿ ಅರೆ ಸ್ವಾಯುತ್ತ ಸರ್ಕಾರಗಳನ್ನು ಸ್ಥಾಪಿಸಬಹುದು. ಈ ಪ್ರದೇಶಗಳಲ್ಲಿ ಉಕ್ರೇನ್​ನ ಕರೆನ್ಸಿ ಚಲಾವಣೆಗೆ ಕಡಿವಾಣ ಹಾಕುವ ಮೂಲಕ ಆರ್ಥಿಕವಾಗಿ ಅಸ್ಥಿರತೆ ಮೂಡಿಸಲು ಯತ್ನಿಸಬಹುದು. ಮುಂದಿನ ದಿನಗಳಲ್ಲಿ ಮಾತುಕತೆ ನಡೆಯುವಾಗ ಈ ಪ್ರದೇಶಗಳನ್ನು ರಷ್ಯಾ ತನ್ನ ಪರವಾಗಿರುವ ದಾಳಗಳಾಗಿ ಬಳಸಿಕೊಳ್ಳಬಹುದು’ ಎಂದು ಉಕ್ರೇನ್​ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಎಎಫ್​ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: Russia Ukraine War: ಮಕ್ಕಳ ಮೇಲೆ ಘೋರ ಪರಿಣಾಮ: ನೆಲೆ ಕಳೆದುಕೊಂಡು ನಿರಾಶ್ರಿರಾದ ಉಕ್ರೇನ್ ಮಕ್ಕಳು

ಇದನ್ನೂ ಓದಿ: ಭ್ರಮನಿರಸನಗೊಂಡ ಸೈನಿಕರಿಂದ ರಷ್ಯಾದ ಕರ್ನಲ್ ಹತ್ಯೆ: ಉಕ್ರೇನ್​ನಲ್ಲಿ ಸತ್ತ ರಷ್ಯಾ ಸೇನಾಧಿಕಾರಿಗಳ ಸಂಖ್ಯೆ 7ಕ್ಕೆ

Published On - 8:17 am, Mon, 28 March 22