ಮೊದಲ ಬಾರಿಗೆ ಭಾರತದ ಸಹಾಯ ಕೋರಿದ ರಷ್ಯಾ; ಕಾರು, ವಿಮಾನ, ರೈಲುಗಳ ಬಿಡಿ ಭಾಗ ಒದಗಿಸಲು ಬೇಡಿಕೆ

TV9kannada Web Team

TV9kannada Web Team | Edited By: Sushma Chakre

Updated on: Nov 30, 2022 | 8:40 AM

ಉಕ್ರೇನ್‌ ಮೇಲೆ ಯುದ್ಧಕ್ಕಾಗಿ ಕಾರು, ರೈಲು ಮತ್ತು ವಿಮಾನದ ಭಾಗಗಳು ಸೇರಿದಂತೆ ಕೆಲವು ವಸ್ತುಗಳನ್ನು ಕಳುಹಿಸಿಕೊಡಲು ರಷ್ಯಾ ಭಾರತಕ್ಕೆ ಪಟ್ಟಿಯನ್ನು ಕಳುಹಿಸಿದೆ.

ಮೊದಲ ಬಾರಿಗೆ ಭಾರತದ ಸಹಾಯ ಕೋರಿದ ರಷ್ಯಾ; ಕಾರು, ವಿಮಾನ, ರೈಲುಗಳ ಬಿಡಿ ಭಾಗ ಒದಗಿಸಲು ಬೇಡಿಕೆ
ವ್ಲಾದಿಮಿರ್ ಪುಟಿನ್

ನವದೆಹಲಿ: ರಷ್ಯಾ ಮತ್ತು ಉಕ್ರೇನ್ (Russia- Ukraine War) ದೇಶಗಳ ನಡುವಿನ ಯುದ್ಧ ಇನ್ನೂ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚೆಗೆ ನಡೆದ ಜಿ20 ಶೃಂಗಸಭೆಯಲ್ಲಿ (G20 Summit) ಕೂಡ ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳು ಪರಸ್ಪರ ಶಾಂತಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೇ ವಿನಃ ಯುದ್ಧವೊಂದೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಸಾರಿದ್ದವು. ಇದು ಯುದ್ಧದ ಸಮಯವಲ್ಲ ಎಂದು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ರಷ್ಯಾಗೆ ಸಂದೇಶ ರವಾನಿಸಿದ್ದರೂ ಪುಟಿನ್ ಮಾತ್ರ ಉಕ್ರೇನ್​ನಿಂದ ತಮ್ಮ ಸೇನೆಯನ್ನು ಹಿಂಪಡೆಯಲು ಮುಂದಾಗಿಲ್ಲ. ಇದೆಲ್ಲದರ ನಡುವೆ ಇದೀಗ ರಷ್ಯಾ ಮೊಟ್ಟ ಮೊದಲ ಬಾರಿಗೆ ಭಾರತದ ಬಳಿ ಸಹಾಯ ಕೋರಿದೆ.

ಈ ಕುರಿತು ರಾಯಿಟರ್ಸ್ ವರದಿ ಮಾಡಿದ್ದು, ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ್ದಕ್ಕೆ ವಿಶ್ವಾದ್ಯಂತ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ತನ್ನ ಯುದ್ಧಕ್ಕಾಗಿ ಕಾರು, ರೈಲು ಮತ್ತು ವಿಮಾನದ ಭಾಗಗಳು ಸೇರಿದಂತೆ ಕೆಲವು ವಸ್ತುಗಳನ್ನು ಕಳುಹಿಸಿಕೊಡಲು ರಷ್ಯಾ ಭಾರತಕ್ಕೆ ಪಟ್ಟಿಯನ್ನು ಕಳುಹಿಸಿದೆ ಎಂದು ಹೇಳಿದೆ. ರಷ್ಯಾ ಭಾರತದಿಂದ ಬೇಡಿಕೆಯಿಟ್ಟಿರುವ ವಸ್ತುಗಳ ಪಟ್ಟಿಯು 14 ಪುಟಗಳಷ್ಟಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಭಾರತ ಮತ್ತು ರಷ್ಯಾ ಸರ್ಕಾರಗಳು ಇನ್ನೂ ಪ್ರತಿಕ್ರಿಯಿಸಿಲ್ಲ.

ಕಾರುಗಳು, ವಿಮಾನಗಳು ಮತ್ತು ರೈಲುಗಳ ಭಾಗಗಳನ್ನು ಒಳಗೊಂಡಂತೆ 500ಕ್ಕೂ ಹೆಚ್ಚು ಉತ್ಪನ್ನಗಳ ಪಟ್ಟಿಯನ್ನು ರಷ್ಯಾ ಭಾರತಕ್ಕೆ ಕಳುಹಿಸಿದೆ. ಈ ಪಟ್ಟಿಯು ತಾತ್ಕಾಲಿಕವಾಗಿದ್ದು, ಅಂತಿಮವಾಗಿ ಎಷ್ಟು ವಸ್ತುಗಳನ್ನು ಭಾರತದಿಂದ ರಫ್ತು ಮಾಡಲಾಗುತ್ತದೆ ಮತ್ತು ಯಾವ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದುವರೆಗೂ ರಷ್ಯಾದಿಂದ ಯುದ್ಧೋಪಕರಣಗಳು, ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತದ ಮುಂದೆ ಇದೇ ಮೊದಲ ಬಾರಿಗೆ ರಷ್ಯಾ ತನ್ನ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟಿದೆ.

ಇದನ್ನೂ ಓದಿ: G-20 Summit: ರಷ್ಯಾ – ಉಕ್ರೇನ್ ಕದನ ವಿರಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ

ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ಬಗ್ಗೆ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಬಹಿರಂಗವಾಗಿಯೇ ವಾಗ್ದಾಳಿ ನಡೆಸಿವೆ. ಆದರೆ, ಭಾರತ ಎಲ್ಲಿಯೂ ಉಕ್ರೇನ್ ಪರವಾಗಿ ರಷ್ಯಾದ ವಿರುದ್ಧ ಕಟುವಾದ ಧ್ವನಿಯನ್ನು ಎತ್ತಿಲ್ಲ ಎಂಬುದು ಗಮನಾರ್ಹ. ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್​ಗೆ ಬೆಂಬಲ ಸೂಚಿಸಿದರೂ ಭಾರತ ನೇರವಾಗಿ ರಷ್ಯಾವನ್ನು ಟೀಕಿಸಿಲ್ಲ. ಯುದ್ಧವನ್ನು ಕೈಬಿಟ್ಟು ಶಾಂತಿಯುತ ಮಾತುಕತೆಯನ್ನು ನಡೆಸಬೇಕೆಂದು ಭಾರತ ರಷ್ಯಾಗೆ ಸಲಹೆಯನ್ನಷ್ಟೇ ನೀಡಿತ್ತು.

ರಷ್ಯಾದಲ್ಲಿರುವ ಬಹುತೇಕ ಎಲ್ಲಾ ವಿಮಾನಗಳು ವಿದೇಶಿ ನಿರ್ಮಿತವಾಗಿರುವುದರಿಂದ ವಿಮಾನಯಾನ ಸಂಸ್ಥೆಗಳು ಬಿಡಿಭಾಗಗಳ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಜಾಗತಿಕ ವಾಹನ ತಯಾರಕರು ಮಾರುಕಟ್ಟೆಯನ್ನು ತೊರೆದಿರುವುದರಿಂದ ಕಾರಿನ ಬಿಡಿಭಾಗಗಳಿಗೂ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ರಷ್ಯಾ ಭಾರತದ ಸಹಾಯ ಕೋರಿದೆ.

ರಷ್ಯಾದ ಕಾರು ಮಾರಾಟ ಉದ್ಯಮದ ಮೂಲವೊಂದು ವ್ಯಾಪಾರ ಸಚಿವಾಲಯವು ಭಾರತ ಸೇರಿದಂತೆ ಇತರ ದೇಶಗಳ ಸಂಬಂಧಿತ ಸಚಿವಾಲಯಗಳು ಮತ್ತು ರಾಜ್ಯ ಏಜೆನ್ಸಿಗಳಿಗೆ ಅಗತ್ಯವಿರುವ ಕಾರ್ ಬಿಡಿಭಾಗಗಳ ಪಟ್ಟಿಯನ್ನು ಕಳುಹಿಸಿದೆ ಎಂದು ಹೇಳಿದೆ.

ಇದನ್ನೂ ಓದಿ: Russia- Ukraine War: ರಷ್ಯಾದ ಕ್ಷಿಪಣಿ ದಾಳಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ; ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ರಷ್ಯಾ ಬೇಡಿಕೆಯಿಟ್ಟಿರುವ ಪಟ್ಟಿಯು ಸುಮಾರು 14 ಪುಟಗಳಷ್ಟಿದ್ದು, ಪಿಸ್ಟನ್‌ಗಳು, ತೈಲ ಪಂಪ್‌ಗಳು ಮತ್ತು ಇಗ್ನಿಷನ್ ಕಾಯಿಲ್‌ಗಳಂತಹ ಕಾರ್ ಎಂಜಿನ್ ಭಾಗಗಳನ್ನು ಕಳುಹಿಸುವಂತೆ ಕೋರಲಾಗಿದೆ. ಹಾಗೇ, ಬಂಪರ್‌ಗಳು, ಸೀಟ್‌ಬೆಲ್ಟ್‌ಗಳು ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಳಿಗೂ ಬೇಡಿಕೆ ಇಡಲಾಗಿದೆ. ವಿಮಾನ ಮತ್ತು ಹೆಲಿಕಾಪ್ಟರ್‌ಗಳಿಗೆ ಸಂಬಂಧಿಸಿದಂತೆ ಲ್ಯಾಂಡಿಂಗ್ ಗೇರ್ ಘಟಕಗಳು, ಇಂಧನ ವ್ಯವಸ್ಥೆಗಳು, ಸಂವಹನ ವ್ಯವಸ್ಥೆಗಳು ಮತ್ತು ಅಗ್ನಿಶಾಮಕ ವ್ಯವಸ್ಥೆಗಳು, ಲೈಫ್ ಜಾಕೆಟ್‌ಗಳು ಮತ್ತು ವಾಯುಯಾನ ಟೈರ್‌ಗಳು ಸೇರಿದಂತೆ 41 ವಸ್ತುಗಳನ್ನು ಕಳುಹಿಸಲು ಭಾರತಕ್ಕೆ ರಷ್ಯಾ ಮನವಿ ಮಾಡಿದೆ ಎನ್ನಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada