Russia Ukraine War Highlights: ಎರಡು ದೇಶದ ಮಧ್ಯೆ ಇಂದು ನಾಲ್ಕನೇ ಸುತ್ತಿನ‌ ಶಾಂತಿ ಮಾತುಕತೆ; ಉಕ್ರೇನ್ ಮುಂದೆ ಕೆಲ ಬೇಡಿಕೆಯಿಟ್ಟ ರಷ್ಯಾ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 15, 2022 | 6:45 AM

Russia Ukraine Conflict Highlights: ಉಕ್ರೇನ್, ರಷ್ಯಾ ನಡುವೆ ಇಂದು ಮತ್ತೊಂದು ಶಾಂತಿ ಸಭೆ ನಡೆಯಲಿದೆ. ಇಂದು ಸ್ಥಳೀಯ ಕಾಲಮಾನ 10.30ಕ್ಕೆ ನಡೆಯುವ ಸಭೆ ನಡೆಯಲಿದ್ದು, ವರ್ಚುವಲ್ ಮೂಲಕ ನಾಯಕರು ಮಾತುಕತೆ ನಡೆಸಲಿದ್ದಾರೆ.

Russia Ukraine War Highlights: ಎರಡು ದೇಶದ ಮಧ್ಯೆ ಇಂದು ನಾಲ್ಕನೇ ಸುತ್ತಿನ‌ ಶಾಂತಿ ಮಾತುಕತೆ; ಉಕ್ರೇನ್ ಮುಂದೆ ಕೆಲ ಬೇಡಿಕೆಯಿಟ್ಟ ರಷ್ಯಾ
ಉಕ್ರೇನ್​ನಲ್ಲಿ ಯುದ್ಧ

ಉಕ್ರೇನ್ ಮೇಲೆ ರಷ್ಯಾ (Russia Ukraine War)  ಸೇನೆ ಯುದ್ಧ ಮುಂದುವರಿಸಿದೆ. ಉಕ್ರೇನ್, ರಷ್ಯಾ ನಡುವೆ ಇಂದು ಮತ್ತೊಂದು ಶಾಂತಿ ಸಭೆ ನಡೆಯಲಿದೆ. ಇಂದು ಸ್ಥಳೀಯ ಕಾಲಮಾನ 10.30ಕ್ಕೆ ನಡೆಯುವ ಸಭೆ ನಡೆಯಲಿದ್ದು, ವರ್ಚುವಲ್ ಮೂಲಕ ನಾಯಕರು ಮಾತುಕತೆ ನಡೆಸಲಿದ್ದಾರೆ. ಉಕ್ರೇನ್ ನೆಲದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದೆ. ಉಕ್ರೇನ್ ವಾಯುಪ್ರದೇಶದಲ್ಲಿ ರಷ್ಯಾಗೆ ನಿರ್ಬಂಧ ಹೇರದಿದ್ದರೆ, ಮುಂದೊಂದು ದಿನ ನ್ಯಾಟೋ ನೆಲೆಗಳ ಮೇಲೂ ದಾಳಿ ಆಗುತ್ತೆ ಎಂದು ನ್ಯಾಟೋಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿಯಿಂದ ಎಚ್ಚರಿಕೆ ನೀಡಲಾಗಿದೆ. ನ್ಯಾಟೋ ನೆಲದ ಮೇಲೂ ಕ್ಷಿಪಣಿ ದಾಳಿ ನಡೆಯುವ ಎಚ್ಚರಿಕೆ ನೀಡಲಾಗಿದ್ದು, ಇದಕ್ಕೇನು ಹೆಚ್ಚು ಸಮಯ ಕೂಡ ಬೇಕಾಗಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ, ಇಂದು ಅಮೆರಿಕ-ಚೀನಾ ಉನ್ನತ ಮಟ್ಟದ ಸಭೆ ನಡೆಸಲಿದೆ. ಯುದ್ಧದ ವಿಚಾರವಾಗಿ ರಷ್ಯಾ ನಡೆಸುತ್ತಿರುವ ಪ್ರಚಾರ, ವಿವಿಧ ದೇಶಗಳು ವಿಧಿಸಿರುವ ಬ್ಯಾನ್ ಬಗ್ಗೆಯೂ ಚರ್ಚೆ ನಡೆಯಲಿದ್ದು, ರೋಮ್‌ನಲ್ಲಿ ಅಮೆರಿಕ, ಚೀನಾ ಪ್ರತಿನಿಧಿಗಳ ಸಭೆ ನಡೆಯಲಿದೆ.

LIVE NEWS & UPDATES

The liveblog has ended.
  • 14 Mar 2022 04:52 PM (IST)

    ರಷ್ಯಾ ಸೇನೆ ದಾಳಿ: ಕೀವ್‌ನಲ್ಲಿ ಓರ್ವ, ಸುಮಿಯಲ್ಲಿ ಮೂವರ ಸಾವು

    ರಷ್ಯಾ ಸೇನೆ ದಾಳಿಯಲ್ಲಿ ಕೀವ್​ನಲ್ಲಿ ಓರ್ವ ಸಾವನ್ನಪ್ಪಿದರೆ, ಸುಮಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ದೊರೆತಿದೆ.

  • 14 Mar 2022 04:06 PM (IST)

    ಉಕ್ರೇನ್‌ನ ‘POINT-U’ ಕ್ಷಿಪಣಿ ದಾಳಿಯಿಂದ ನಾಗರಿಕರ ಸಾವು

    ಉಕ್ರೇನ್ ಕ್ಷಿಪಣಿ ದಾಳಿಯಿಂದಲೇ ನಾಗರಿಕರು ಸಾವನ್ನಪ್ಪಿದ್ದಾರೆ. ಡೊನೆಟ್ಸ್ಕ್‌ನಲ್ಲಿ ಉಕ್ರೇನ್‌ನ ‘POINT-U’ ಕ್ಷಿಪಣಿ ದಾಳಿಯಿಂದ ನಾಗರಿಕರು ಮೃತಪಟ್ಟಿದ್ದಾರೆ ಎಂದು ಕ್ಷಿಪಣಿ ದಾಳಿ ಬಗ್ಗೆ ರಷ್ಯಾ ಹೇಳಿಕೆ ನೀಡಿದೆ.

  • 14 Mar 2022 03:59 PM (IST)

    ರಷ್ಯಾ-ಉಕ್ರೇನ್ ಮಧ್ಯೆ ಮಧ್ಯಸ್ಥಿಕೆ ವಹಿಸಲಿರುವ ಇಸ್ರೇನ್

    ರಷ್ಯಾ-ಉಕ್ರೇನ್ ಮಧ್ಯೆ ಇಸ್ರೇನ್ ಮಧ್ಯಸ್ಥಿಕೆ ವಹಿಸಲಿದೆ ಎಂದು ಉಕ್ರೇನ್‌ನ ರಾಷ್ಟ್ರಪತಿ ಕಾರ್ಯಾಲಯ ಹೇಳಿಕೆ ನೀಡಿದೆ.

  • 14 Mar 2022 03:16 PM (IST)

    Russia Ukraine War Live: ಕೀವ್ ನಗರದ ರೈಲ್ವೆ ನಿಲ್ದಾಣದ ಮೇಲೆ ಸರಣಿ ಬಾಂಬ್‌ ದಾಳಿ

    ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಕೀವ್ ನಗರದ ರೈಲ್ವೆ ನಿಲ್ದಾಣದ ಮೇಲೆ ಸರಣಿ ಬಾಂಬ್‌ ದಾಳಿ ಮಾಡಲಾಗುತ್ತಿದೆ.

  • 14 Mar 2022 02:44 PM (IST)

    Russia Ukraine War Live: ರಷ್ಯಾ-ಉಕ್ರೇನ್ ನಡುವಿನ 4ನೇ ಸುತ್ತಿನ ಮಾತುಕತೆ ಆರಂಭ

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ರಷ್ಯಾ-ಉಕ್ರೇನ್ ನಡುವೆ 4ನೇ ಸುತ್ತಿನ ಮಾತುಕತೆ ಆರಂಭವಾಗಿದ್ದು, ವರ್ಚುವಲ್ ಆಗಿ 4ನೇ ಸುತ್ತಿನ ಮಾತುಕತೆ ನಡೆಯುತ್ತಿದೆ.

  • 14 Mar 2022 02:42 PM (IST)

    Russia Ukraine War Live: ಯುದ್ದ ಆರಂಭವಾದಾಗಿನಿಂದ ಇಲ್ಲಿಯವರೆಗೆ ಉಕ್ರೇನ್ 90 ಮಕ್ಕಳ ಸಾವು

    ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ, ಯುದ್ಧ ಆರಂಭವಾದಾಗಿನಿಂದ ಈವರೆಗೆ 90 ಮಕ್ಕಳು ಸಾವನ್ನಪ್ಪಿದ್ದಾರೆ. ಉಕ್ರೇನ್‌ನಲ್ಲಿ 90 ಮಕ್ಕಳು ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಲಾಗಿದ್ದು, ಯುದ್ಧದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.

  • 14 Mar 2022 02:36 PM (IST)

    Russia Ukraine War Live: ಕೈವ್​ನ ವಸತಿ ಕಟ್ಟಡ ಮೇಲೆ ರಷ್ಯಾ ಮೈಮಾನಿಕ ದಾಳಿ

    ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ರಷ್ಯಾ ನಡೆಸಿದ ವೈಮಾನಿಕ ದಾಳಿ ಮಾಡಿದೆ. ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ. ದಾಳಿಯ ನಂತರ ಅಗ್ನಿಶಾಮಕ ದಳದವರು ಓಬೋಲೋನ್ ಜಿಲ್ಲೆಯಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

  • 14 Mar 2022 02:31 PM (IST)

    Russia Ukraine War Live: ನಾಗರಿಕರನ್ನು ಸ್ಥಳಾಂತರಿಸಲು ಉಕ್ರೇನ್ ಪ್ರಯತ್ನ

    ಉಕ್ರೇನ್ ರಾಜಧಾನಿ ಕೈವ್ ಬಳಿಯ ಪಟ್ಟಣಗಳು ​​ಮತ್ತು ಲುಹಾನ್ಸ್ಕ್‌ನ ಪೂರ್ವ ಪ್ರದೇಶವನ್ನು ಒಳಗೊಂಡಂತೆ 10 ಮಾನವೀಯ ಕಾರಿಡಾರ್​ಗಳ ಮೂಲಕ ಸಿಕ್ಕಿಬಿದ್ದ ನಾಗರಿಕರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತದೆ ಎಂದು ಉಪ ಪ್ರಧಾನ ಮಂತ್ರಿ ಐರಿನಾ ವೆರೆಸ್ಚುಕ್ ಹೇಳಿದ್ದಾರೆ.

  • 14 Mar 2022 01:46 PM (IST)

    Russia Ukraine War Live: ಕೀವ್​ನಲ್ಲಿ ರಷ್ಯಾ ಸೇನೆ ದಾಳಿ

    ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ರಷ್ಯಾ ಸೇನೆ ದಾಳಿ ಮಾಡಿದೆ. ರಷ್ಯಾ ಸೇನೆಯ ಶೆಲ್ ದಾಳಿಗೆ ಓರ್ವ ನಾಗರಿಕ ಬಲಿಯಾಗಿದ್ದಾರೆ.

  • 14 Mar 2022 01:45 PM (IST)

    Russia Ukraine War Live: ಅಮೆರಿಕ ತಪ್ಪು ಮಾಹಿತಿ ನೀಡಿದೆ ಚೀನಾ ಆಕ್ರೋಶ

    ಚೀನಾ ಬಳಿ ರಷ್ಯಾ ಸೇನಾ ನೆರವು ಕೋರಿದೆ ಎಂಬ ಹೇಳಿಕೆ ನೀಡಲಾಗಿದ್ದು, ಅಮೆರಿಕ ತಪ್ಪು ಮಾಹಿತಿ ನೀಡಿದೆ ಎಂದು ಚೀನಾ ಆಕ್ರೋಶ ವ್ಯಕ್ತಿಪಡಿಸಿದೆ.

  • 14 Mar 2022 01:42 PM (IST)

    Russia Ukraine War Live: ಉಕ್ರೇನ್‌ನಲ್ಲಿ 10 ಮಾನವೀಯ ಕಾರಿಡಾರ್ ಅನುಮತಿ

    ಮಾನವೀಯ ಕಾರಿಡಾರ್‌ಗೆ ಅನುಮತಿ ಸಿಕ್ಕಿದೆ. ಉಕ್ರೇನ್‌ನಲ್ಲಿ 10 ಮಾನವೀಯ ಕಾರಿಡಾರ್​ಗೆ ಅನುಮತಿ ಸಿಕ್ಕಿದೆ ಎಂದು ಉಕ್ರೇನ್ ಉಪ ಪ್ರಧಾನಮಂತ್ರಿ ಹೇಳಿಕೆ ನೀಡಿದ್ದಾರೆ.

  • 14 Mar 2022 01:22 PM (IST)

    Russia Ukraine War Live: ಉಕ್ರೇನ್​ನಿಂದ ವಾಪಸ್ಸಾದ ವಿದ್ಯಾರ್ಥಿಗಳು ವೈದ್ಯರಾಗುವಂತೆ ನೋಡಿಕೊಳ್ಳುತ್ತೇವೆ

    ಉಕ್ರೇನ್​ನಿಂದ ವಾಪಾಸ್ಸಾದ ವಿದ್ಯಾರ್ಥಿಗಳು ವೈದ್ಯರಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಸಂಸತ್​ನಲ್ಲಿ ಕೇಂದ್ರದ ಶಿಕ್ಷಣ ಖಾತೆ ಸಚಿವ ಧರ್ಮೇಂದ್ರ ಪ್ರದಾನ್ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಆಪರೇಷನ್ ಗಂಗಾ ನಡೆದಿದೆ. ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆ ತಂದ ಬಳಿಕ, ಸರಕಾರ ಅವರನ್ನು ವೈದ್ಯರನ್ನಾಗಿ ಮಾಡುವ ವ್ಯವಸ್ಥೆ ಮಾಡುತ್ತದೆ. ಈಗ ವಿದ್ಯಾರ್ಥಿಗಳು ಶಾಕ್​ನಿಂದ ಹೊರ ಬರುವ ಸಮಯ. ನಾವು ವಿದ್ಯಾರ್ಥಿಗಳ ಬಗ್ಗೆ ಬದ್ದತೆ ಹೊಂದಿದ್ದೇವೆ‌. ಸಂಸತ್​ನಲ್ಲಿ ಉಕ್ರೇನ್​ನಿಂದ ವಾಪಸ್ಸಾದ ವಿದ್ಯಾರ್ಥಿಗಳ ಭವಿ ಷ್ಯದ ಶಿಕ್ಷಣದ ಬಗ್ಗೆ ಕೇಂದ್ರದಲ್ಲಿ ಹೇಳಿಕೆ ನೀಡಲಾಗಿದೆ.

  • 14 Mar 2022 01:02 PM (IST)

    Russia Ukraine War Live: ಕೈವ್​ನ ವಸತಿ ಕಟ್ಟಡ ಮೇಲೆ ಶೆಲ್ ದಾಳಿ

    ರಾಜಧಾನಿ ಕೈವ್‌ನಲ್ಲಿ ವಸತಿ ಕಟ್ಟಡದ ಮೇಲೆ ಶೆಲ್ ದಾಳಿ ಮಾಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಉಕ್ರೇನ್‌ನ ರಾಜ್ಯ ತುರ್ತು ಸೇವೆ ಏತನ್ಮಧ್ಯೆ, ಇಂದು ಬೆಳಿಗ್ಗೆ ಸ್ಥಳೀಯ ಸಮಯ 07:40 ಕ್ಕೆ ಎರಡು ಮೃತದೇಹಗಳು ಪತ್ತೆಯಾಗಿವೆ. ಜೊತೆಗೆ ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

  • 14 Mar 2022 12:27 PM (IST)

    Russia Ukraine War Live: ಇಂದು ಮಧ್ಯಾಹ್ನ 2 ಗಂಟೆಗೆ ರಷ್ಯಾ- ಉಕ್ರೇನ್ ನಿಯೋಗದ ನಡುವೆ ಮಾತುಕತೆ

    ಇಂದು ಮಧ್ಯಾಹ್ನ 2 ಗಂಟೆಗೆ ರಷ್ಯಾ- ಉಕ್ರೇನ್ ನಿಯೋಗದ ನಡುವೆ ಮಾತುಕತೆ ನಡೆಯಲಿದೆ. ಎರಡು ದೇಶದ ಮಧ್ಯೆ ನಾಲ್ಕನೇ ಸುತ್ತಿನ‌ ಶಾಂತಿ ಮಾತುಕತೆ ನಡೆಯಲಿದ್ದು, ಯುದ್ಧ ನಿಲ್ಲಿಸಲು ಉಕ್ರೇನ್ ಮುಂದೆ ರಷ್ಯಾ ಕೆಲ ಬೇಡಿಕೆ ಇಟ್ಟಿದೆ. ಉಕ್ರೇನ್ ಈಗಾಗಲೇ ನ್ಯಾಟೋ ಸದಸ್ಯತ್ವ ಪಡೆಯುವ ಆಸೆ ಕೈ ಬಿಟ್ಟಿದೆ. ಜೊತೆಗೆ ಉಕ್ರೇನ್​ನ‌ ಕೆಲ ಪ್ರಾಂತ್ಯಗಳಿಗೆ ಸ್ವಾಯತ್ತತೆ ನೀಡಲು ಉಕ್ರೇನ್ ಕೂಡ ಒಪ್ಪಿಗೆ ನೀಡಿದೆ. ಆದರೆ ಯುದ್ಧ ನಿಲ್ಲಿಸಲು ಎರಡು ದೇಶಗಳ ನಡುವೆ ಸಹಮತ ಮೂಡಿಲ್ಲ. ಈಗಾಗಲೇ ಉಕ್ರೇನ್ ರಾಜಧಾನಿ ಕೀವ್ ಹತ್ತಿರ ರಷ್ಯಾ ಸೇನೆ ಬಂದಿದೆ.

  • 14 Mar 2022 12:21 PM (IST)

    Russia Ukraine War Live: ಉಕ್ರೇನ್‌ನಲ್ಲಿ ಕನ್ನಡಿಗ ನವೀನ್ ಸಾವು ದುರದೃಷ್ಟಕರ; ಡಾ.ಕೆ.ಸುಧಾಕರ್

    ಉಕ್ರೇನ್‌ನಲ್ಲಿ ಕನ್ನಡಿಗ ನವೀನ್ ಸಾವು ದುರದೃಷ್ಟಕರವಾಗಿ ಎಂದು ವಿಧಾನಪರಿಷತ್‌ನಲ್ಲಿ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. ಉಕ್ರೇನ್‌ನಲ್ಲಿ 22 ಸಾವಿರ ವಿದ್ಯಾರ್ಥಿಗಳು ಸಿಲುಕಿದ್ದರು. ಎಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಇದಕ್ಕಾಗಿ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಬೇಕು. ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನ. ಪ್ರಧಾನಿ ನರೇಂದ್ರ ಮೋದಿ ನಿರಂತರ ಸಂಪರ್ಕದಲ್ಲಿದ್ದರು. ಅನೇಕ ದೇಶಗಳು ಇಂತಹ ಪ್ರಯತ್ನ ಮಾಡಿಯೇ ಇಲ್ಲ. ನೆರೆಯ ದೇಶದವರು ಭಾರತದ ಬಾವುಟ ಹಿಡಿದಿದ್ದರು. ಭಾರತದ ಬಾವುಟ ಹಿಡಿದು ಉಕ್ರೇನ್‌ನಿಂದ ಹೊರಬಂದರು. ಉಕ್ರೇನ್‌ನಿಂದ ಭಾರತಕ್ಕೆ ಮೆಡಿಕಲ್ ವಿದ್ಯಾರ್ಥಿಗಳು ವಾಪಸ್ಸಾದರು. ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗುವುದು. ಮೆಡಿಕಲ್ ಶುಲ್ಕ ಕಡಿಮೆ ಮಾಡುವ ಬಗ್ಗೆ ಚರ್ಚೆಯಾಗ್ತಿದೆ ಎಂದು ಹೇಳಿದರು.

  • 14 Mar 2022 12:16 PM (IST)

    Russia Ukraine War Live: ಸದನಲ್ಲಿ ನವೀನ್ ಶವ ತರುವ ವಿಚಾರಕ್ಕೆ ಕೇಳಿ ಬಂದ ಆಗ್ರಹ

    ನವೀನ್ ತಂದೆ ತಾಯಿ ಬಹಳ ನೋವಿನಲ್ಲಿದ್ದಾರೆ. ಇಂದಿಗೆ ೧೪ ದಿನಗಳಾಯ್ತು ನವೀನ್ ಸಾವನ್ನಪ್ಪಿ. ಅವರ ಕಾರ್ಯ ಮಾಡುವುದಕ್ಕೂ ಆಗಿಲ್ಲ, ಹೀಗಾಗಿ ಇಡೀ ದೇಶದಲ್ಲಿ ನವೀನ್ ಒಬ್ಬನೇ ಸಾವನ್ನಪ್ಪಿದ್ದು, ಅವರ ಶವವನ್ನು ಭಾರತಕ್ಕೆ ಆದಷ್ಟು ಬೇಗ ತರುವ ಕೆಲಸ ಮಾಡಿ ಎಂದು ಉಕ್ರೇನ್​​ನಲ್ಲಿ ಸಾವನ್ನಪ್ಪಿದ ನವೀನ್ ಶವ ವಾಪಸ್ ತರುವ ವಿಚಾರ ಪ್ರಸ್ತಾಪಿಸಿದ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಸಲೀಂ ಅಹಮದ್​ರಿಂದಲೂ ಆಗ್ರಹಿಸಿದ್ದು, ಭಾರತದವರು ಯಾರೂ ಉಕ್ರೇನ್ ಒಳಗೆ ಹೋಗೋಕೆ ಆಗ್ತಿಲ್ಲ. ಉಕ್ರೇನ್​ನಿಂದ ಹೊರಗೆ ಬಂದ ಮೇಲೆ ವಿದ್ಯಾರ್ಥಿಗಳನ್ನು ಕರೆ ತರಲಾಗಿದೆ. ಹೀಗಾಗಿ ಸ್ಥಳೀಯ ಯಾರಿದ್ದಾರೆ ಅವರೊಂದಿಗೆ ಮಾತನಾಡಿ ಶವ ವಾಪಸ್ ತರುವ ಕೆಲಸ ಮಾಡಬೇಕು. ಸದನಲ್ಲಿ ನವೀನ್ ಶವ ತರುವ ವಿಚಾರಕ್ಕೆ ಆಗ್ರಹ ಕೇಳಿ ಬಂದಿದೆ.

  • 14 Mar 2022 12:11 PM (IST)

    Russia Ukraine War Live: ಉಕ್ರೇನ್ ಸಂಬಂಧ ನಾಳೆ ಲೋಕಸಭೆ, ರಾಜ್ಯಸಭೆಗೆ ಮಾಹಿತಿ

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆ, ವಿದೇಶಾಂಗ ಸಚಿವ ಜೈಶಂಕರ್‌ರಿಂದ ನಾಳೆ ಮಾಹಿತಿ ನೀಡಲಿದ್ದಾರೆ. ಉಭಯ ಸದನಗಳಿಗೆ ಉಕ್ರೇನ್ ಸಂಬಂಧ ನಾಳೆ ಲೋಕಸಭೆ, ರಾಜ್ಯಸಭೆಗೆ ಮಾಹಿತಿ ನೀಡಲಿದ್ದಾರೆ.

  • 14 Mar 2022 12:09 PM (IST)

    Russia Ukraine War Live: ಕೀವ್‌ನಲ್ಲಿರುವ 2 ಮಿಲಿಯನ್ ಜನರಿಗೆ ಆಹಾರ ಸಂಗ್ರಹಣೆ

    19ನೇ ದಿನವೂ ಉಕ್ರೇನ್-ರಷ್ಯಾ ಯುದ್ಧ ಮುಂದುವರೆದಿದೆ. ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ 2 ಮಿಲಿಯನ್ ಜನರಿಗೆ ಅಗತ್ಯ ಆಹಾರ ಸಂಗ್ರಹಿಸಿಟ್ಟಿದ್ದೇವೆ. 2 ವಾರಗಳಿಗೆ ಆಗುವಷ್ಟು ಆಹಾರವನ್ನು ಸಂಗ್ರಹಿಸಿಟ್ಟಿದ್ದೇವೆ ಎಂದು ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

  • 14 Mar 2022 11:39 AM (IST)

    Russia Ukraine War Live: ಟಿವಿ ಟವರ್​ ಬಳಿ ಕ್ಷಿಪಣಿ ದಾಳಿ

    ರಷ್ಯಾದ ಕ್ಷಿಪಣಿ ದಾಳಿಯ ಪರಿಣಾಮವಾಗಿ ಕೈವ್‌ನ ಪಶ್ಚಿಮದಲ್ಲಿರುವ ರಿವ್ನೆ ಬಳಿಯ ಟಿವಿ ಟವರ್‌ಗೆ ಹಾನಿಯಾಗಿದೆ ಎಂದು ಉಕ್ರೇನಿಯನ್ ಸುದ್ದಿವಾಹಿನಿಗಳು ವರದಿ ಮಾಡಿದೆ. ಔಟ್‌ಲೆಟ್‌ಗಳ ಪ್ರಕಾರ, ರಷ್ಯಾದ ವೈಮಾನಿಕ ದಾಳಿಗೆ ಗೋಪುರವು ಹಾನಿಗೊಳಗಾಗಿದೆ ಎಂದು ರಿವ್ನೆ ಪ್ರಾದೇಶಿಕ ಆಡಳಿತದ ಮುಖ್ಯಸ್ಥ ವಿಟಾಲಿ ಕೋವಲ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಟಿವಿ ಗೋಪುರವು ರಿವ್ನೆಯಿಂದ 15 ಕಿಮೀ (9 ಮೈಲುಗಳು) ದೂರದಲ್ಲಿದೆ. ಸಂತ್ರಸ್ತರು ಮತ್ತು ಗಾಯಾಳುಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

  • 14 Mar 2022 11:10 AM (IST)

    Russia Ukraine War Live: ರಷ್ಯಾ ಸೇನೆಗೆ ಸೇರಿದ ವಿಮಾನಗಳನ್ನು ಹೊಡೆದುರುಳಿಸಿದ ಉಕ್ರೇನ್​

    ಕಳೆದ 24 ಗಂಟೆಗಳಲ್ಲಿ ರಷ್ಯಾದ ಪಡೆಗಳಿಗೆ ಸೇರಿದ ನಾಲ್ಕು ವಿಮಾನಗಳು, ಮೂರು ಹೆಲಿಕಾಪ್ಟರ್‌ಗಳು ಮತ್ತು ಹಲವಾರು ಮಾನವರಹಿತ ವಿಮಾನಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಸಶಸ್ತ್ರ ಪಡೆಗಳ ಉಕ್ರೇನ್ ಸಿಬ್ಬಂದಿ ಹೇಳಿದ್ದಾರೆ. ಉಕ್ರೇನಿಯನ್ ಭೂಪ್ರದೇಶದಲ್ಲಿ ಅದರ ಲಾಜಿಸ್ಟಿಕಲ್ ಪೂರೈಕೆ ವ್ಯವಸ್ಥೆಯನ್ನು ಅಡ್ಡಿಪಡಿಸಲು ರಷ್ಯಾದ ಕ್ಷೇತ್ರ ನೆಲೆಗಳು ಮತ್ತು ಗೋದಾಮುಗಳ ಮೇಲೆ ಸ್ಟ್ರೈಕ್‌ಗಳನ್ನು ಪ್ರಾರಂಭಿಸಿದೆ ಎಂದು ಹೇಳಲಾಗಿದೆ.

  • 14 Mar 2022 10:48 AM (IST)

    Russia Ukraine War Live: ಮಿಲಿಟರಿ ನೆರವು ನೀಡುವುದನ್ನು ಮೊದಲು ನಿಲ್ಲಿಸಬೇಕು

    ಉಕ್ರೇನ್ ಮತ್ತು ಚೀನಾ ಎರಡಕ್ಕೂ ಮಿಲಿಟರಿ ನೆರವು ನೀಡುವುದನ್ನು ಮೊದಲು ನಿಲ್ಲಿಸುವಂತೆ ಚೀನಾ ಮತ್ತು ಯುಎಸ್ ಎಲ್ಲಾ ದೇಶಗಳಿಗೆ ಕರೆ ನೀಡಿ, ಒಂದು ಒಪ್ಪಂದಕ್ಕೆ ಬರಬೇಕು ಎಂದು ಚೀನಾದ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಸಂಪಾದಕ ಹು ಕ್ಸಿಜಿನ್ ಹೇಳಿದ್ದಾರೆ.

  • 14 Mar 2022 10:25 AM (IST)

    Russia Ukraine War Live: ಚೀನಾಗೆ ದೊಡ್ಡಣ್ಣ ಅಮೆರಿಕ ಎಚ್ಚರಿಕೆ ನೀಡಿದೆ

    ಯುಎಸ್ ಮಾಧ್ಯಮ ವರದಿಗಳ ಪ್ರಕಾರ, ಉಕ್ರೇನ್ ಮೇಲಿನ ಆಕ್ರಮಣದಲ್ಲಿ ರಷ್ಯಾಕ್ಕೆ ಸಹಾಯ ಮಾಡಿದರೆ ಚೀನಾ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಯುಎಸ್ ಎಚ್ಚರಿಕೆ ನೀಡಿದೆ. ಯುದ್ಧ ಪ್ರಾರಂಭವಾದ ನಂತರ ಮಿಲಿಟರಿ ನೆರವು ನೀಡುವಂತೆ ರಷ್ಯಾ ಚೀನಾವನ್ನು ಕೇಳಿಕೊಂಡಿದೆ ಎಂದು ಅಧಿಕಾರಿಗಳು ಅನೇಕ ಯುಎಸ್ ಸುದ್ದಿವಾಹಿನಿಗಳಿಗೆ ತಿಳಿಸಿದ್ದಾರೆ.

  • 14 Mar 2022 10:14 AM (IST)

    Russia Ukraine War Live: ಉಕ್ರೇನ್​ಗೆ 500ಜನರೇಟರ್​ಗಳನ್ನು ನೀಡಿದ ಯುಕೆ

    ಉಕ್ರೇನ್‌ಗೆ 500ಕ್ಕೂ ಹೆಚ್ಚು ಜನರೇಟರ್‌ಗಳನ್ನು ಯುಕೆ ಪೂರೈಸಲಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಜನರೇಟರ್‌ಗಳು ಆಶ್ರಯ ಮತ್ತು ಆಸ್ಪತ್ರೆಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಶಕ್ತಿಯನ್ನು ಒದಗಿಸುತ್ತವೆ. ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಜನರೇಟರ್‌ಗಳಿಗಾಗಿ ಯುಕೆಗೆ ನೇರ ವಿನಂತಿಯನ್ನು ಮಾಡಿಕೊಂಡಿದ್ದಾರೆ. ಉಕ್ರೇನ್‌ನಾದ್ಯಂತ ವಿದ್ಯುತ್ ಕಡಿತವನ್ನು ಅನುಭವಿಸಲಾಗುತ್ತಿದೆ.

  • 14 Mar 2022 10:05 AM (IST)

    Russia Ukraine War Live: ಉಕ್ರೇನ್​ ತೊರೆಯುವಂತೆ ಯುಎಸ್​ ರಾಯಭಾರ ಕಚೇರಿ ಹೇಳಿಕೆ

    ರಷ್ಯಾ ಉಕ್ರೇನ್​ ಮೇಲೆ ದಾಳಿ ಮುಂದುವರೆಸಿರುವ ಹಿನ್ನೆಲೆ, ಯುದ್ಧದ ಭೀಕರತೆಯನ್ನು ಕಂಡು, ಕೈವ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯು ಯುಎಸ್ ನಾಗರಿಕರನ್ನು ತಕ್ಷಣವೇ ಉಕ್ರೇನ್ ತೊರೆಯುವಂತೆ ಒತ್ತಾಯಿಸಿದೆ.

  • 14 Mar 2022 09:18 AM (IST)

    Russia Ukraine War Live: ಉಕ್ರೇನ್‌ನ 19 ನಗರಗಳಲ್ಲಿ ಎಚ್ಚರಿಕೆಯ ಸೈರನ್

    19ನೇ ದಿನವೂ ಉಕ್ರೇನ್-ರಷ್ಯಾ ಯುದ್ಧ ಮುಂದುವರೆದಿದ್ದು, ಉಕ್ರೇನ್‌ನ 19 ನಗರಗಳಲ್ಲಿ ಎಚ್ಚರಿಕೆಯ ಸೈರನ್ ಮೊಳಗಿದೆ. ಹಲವು ನಗರಗಳಲ್ಲಿ ರಷ್ಯಾದಿಂದ ಏರ್‌ಸ್ಟ್ರೈಕ್‌ನ ಎಚ್ಚರಿಕೆ ನೀಡಲಾಗಿದ್ದು, ಖಾರ್ಕಿವ್‌ನಲ್ಲಿ ರಷ್ಯಾ ಮತ್ತೆ ಬಾಂಬ್ ಸ್ಫೋಟ ನಡೆಸುತ್ತಿದೆ.

  • 14 Mar 2022 09:14 AM (IST)

    Russia Ukraine War Live: ತನ್ನ ಸೇನೆಯ ವಿರುದ್ದ ಹತಾಶೆಗೊಂಡರಾ ಪುಟಿನ್..!

    ಉಕ್ರೇನ್ ಮೇಲೆ 18 ದಿನಗಳು ರಷ್ಯಾ ಅಟ್ಯಾಕ್ ಮಾಡಿದ್ರೂ, ಪುಟ್ಟ ರಾಷ್ಟ್ರವನ್ನು ಮಣಿಸೋಕೆ ಸಾಧ್ಯವಾಗುತ್ತಿಲ್ಲ. ಇತ್ತ ಜಾಗತೀಕವಾಗಿ ರಷ್ಯಾ ವಿರುದ್ಧ ನಿರ್ಬಂಧ ಹೆಚ್ಚಾಗಿದೆ. 18 ದಿನವಾದ್ರೂ ಉಕ್ರೇನ್ ಮಣಿಸೋಕೆ‌ ಸಾಧ್ಯವಾಗದ ತಮ್ಮ ಸೇನೆಯ ವಿರುದ್ದ ಪುಟಿನ್ ಅಸಮಾಧಾನಗೊಂಡಿದ್ದಾರೆ ಎಂದು ಅಮೇರಿಕಾ ಭದ್ರತಾ ಸಲಹೆಗಾರ ಹೇಳಿಕೆ ನೀಡಿದೆ. ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್‌ನಲ್ಲಿ ತಮ್ಮ ಸೇನೆಯ ಪ್ರಗತಿಯಿಂದ ನಿರಾಶೆಗೊಂಡಿದ್ದಾರೆ. ರಷ್ಯಾಪಡೆಗಳು ಪುಟಿನ್ ಊಹಿಸಿದಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಯುಎಸ್ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಜೇಕ್ ಸುಲ್ಲಿವನ್ ಹೇಳಿಕೆ ನೀಡಿದ್ದಾರೆ.

  • 14 Mar 2022 09:02 AM (IST)

    Russia Ukraine War Live: ಗಾಯಗೊಂಡ ಉಕ್ರೇನ್​ ಸೈನಿಕರನ್ನು ಭೇಟಿ ಮಾಡಿದ ವೊಲೊಡಿಮಿರ್ ಝೆಲೆನ್ಸ್ಕಿ

    ಉಕ್ರೇನ್ ಮತ್ತು ರಷ್ಯಾ ನಡುವೆ ಭೀಕರ ಯುದ್ಧ ಮುಂದುವರೆದಿದೆ. ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಉಕ್ರೇನ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಗಾಯಗೊಂಡ ಸೈನಿಕರನ್ನು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿ ಮಾಡಿದ್ದಾರೆ. ಗಾಯಗೊಂಡ ಸೈನಿಕರ ಜೊತೆ ಮಾತನಾಡಿದ್ದಾರೆ. ಜೊತೆಗೆ ಸೆಲ್ಪಿಗೆ ಪೋಸ್​ ಕೂಡ ನೀಡಿದ್ದಾರೆ.

     

  • 14 Mar 2022 08:54 AM (IST)

    Russia Ukraine War Live: ನೌಕಾ ದಿಗ್ಬಂಧನಗೊಳಿಸಿದ ರಷ್ಯಾ

    ಉಕ್ರೇನ್‌ನ ಕಪ್ಪು ಸಮುದ್ರದ ಕರಾವಳಿಯ ಮೇಲೆ ರಷ್ಯಾ ದಿಗ್ಬಂಧನವನ್ನು ಸ್ಥಾಪಿಸಿದೆ ಎಂದು ಯುಕೆಯ ರಕ್ಷಣಾ ಸಚಿವಾಲಯವು ಹೇಳಿದೆ. ಇದು ದೇಶವನ್ನು ಕಡಲ ವ್ಯಾಪಾರದಿಂದ ಪರಿಣಾಮಕಾರಿಯಾಗಿ ಕಡಿತಗೊಳಿಸುತ್ತದೆ.

  • 14 Mar 2022 08:35 AM (IST)

    Russia Ukraine War Live: ಕ್ಯಾನ್ಸ್​ರ ಪೀಡಿತ ಉಕ್ರೇನ್​ ಮಕ್ಕಳಿಗೆ ಯುಕೆ ನೆರವು

    ಕ್ಯಾನ್ಸರ್ ಹೊಂದಿರುವ 21 ಉಕ್ರೇನಿಯನ್ ಮಕ್ಕಳನ್ನು ತಮ್ಮ ಚಿಕಿತ್ಸೆಯನ್ನು ಮುಂದುವರಿಸಲು ಯುಕೆಗೆ ಕರೆತರಲಾಗಿದೆ ಎಂದು ಬ್ರಿಟನ್‌ನ ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ರಾಜ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಅವರು ತಿಳಿಸಿದ್ದಾರೆ.

  • 14 Mar 2022 08:30 AM (IST)

    Russia Ukraine War Live: ಮೇಯರ್​​ಗಳ ಅಪಹರಣವನ್ನು ಖಂಡಿಸಿದ ಈಯೂ

    ರಷ್ಯಾ ಸೇನೆ ಉಕ್ರೇನ್‌ನ ಎರಡು ನಗರಗಳ ಮೇಯರ್‌ಗಳನ್ನು ಅಪಹರಿಸಿರುವುದನ್ನು ಈಯೂ ಖಂಡಿಸಿದೆ. ಆಗ್ನೇಯ ನಗರದ ಡ್ನಿಪ್ರೊರುಡ್ನೆ ಮೇಯರ್ ಯೆವ್ಹೆನ್ ಮ್ಯಾಟ್ವೀವ್ ಅವರನ್ನು ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ಭಾನುವಾರ ಹೇಳಿದ್ದರು. ರಷ್ಯಾದ ಸಶಸ್ತ್ರ ಪಡೆಗಳಿಂದ ಮೆಲಿಟೊಪೋಲ್ ಮತ್ತು ಡ್ನಿಪ್ರೊರುಡ್ನೆ ಮೇಯರ್‌ಗಳನ್ನು ಅಪಹರಿಸಿರುವುದನ್ನು ಈಯೂ ಬಲವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳು ಮತ್ತು ಭದ್ರತಾ ನೀತಿಯ ಉನ್ನತ ಪ್ರತಿನಿಧಿ ಜೋಸೆಪ್ ಬೊರೆಲ್ ಫಾಂಟೆಲ್ಲೆಸ್ ಹೇಳಿದ್ದಾರೆ.

  • 14 Mar 2022 08:19 AM (IST)

    Russia Ukraine War Live: ರಷ್ಯಾ ದೇಶದಲ್ಲಿ ಇನ್​ಸ್ಟಾಗ್ರಮ್ ಕಾರ್ಯನಿರ್ವಹಣೆ ನಿಷೇಧ

    ರಷ್ಯಾ ದೇಶದಲ್ಲಿ ಇನ್‌ಸ್ಟಾಗ್ರಾಮ್ ಕಾರ್ಯನಿರ್ವಹಿಸುವುದನ್ನು ನಿಷೇಧಿಸಲಾಗಿದೆ. ಫೇಸ್‌ಬುಕ್​ನ್ನು ಮೊದಲೇ ನಿರ್ಬಂಧಿಸಲಾಗಿತ್ತು, ಆದರೆ ಇನ್‌ಸ್ಟಾಗ್ರಾಮ್ ದೇಶದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಶುಕ್ರವಾರ, ರಷ್ಯಾ ಸರ್ಕಾರವು ಮಾರ್ಚ್ 14ರಿಂದ ಪ್ಲಾಟ್‌ಫಾರ್ಮ್‌ಗೆ ಪ್ರವೇಶಕ್ಕೆ ನಿರ್ಬಂಧಗಳನ್ನು ವಿಧಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

  • 14 Mar 2022 08:09 AM (IST)

    Russia Ukraine War Live: ಉಕ್ರೇನ್‌ನಲ್ಲಿ ಸಿಲುಕಿದ್ದ 5,500 ನಾಗರಿಕರ ಸ್ಥಳಾಂತರ

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆ, ಉಕ್ರೇನ್‌ನ ವಿವಿಧ ನಗರಗಳಲ್ಲಿ ಸಿಲುಕಿದ 5,500 ನಾಗರಿಕರನ್ನು ನಿನ್ನೆ ಸ್ಥಳಾಂತರ ಮಾಡಲಾಗಿದೆ.

  • 14 Mar 2022 08:06 AM (IST)

    Russia Ukraine War Live: ಉಕ್ರೇನ್ ತೊರೆದಿರುವ 2.6 ಮಿಲಿಯನ್‌ಗೂ ಹೆಚ್ಚು ಜನ

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ, 2.6 ಮಿಲಿಯನ್‌ಗೂ ಹೆಚ್ಚು ಜನ ಉಕ್ರೇನ್ ತೊರೆದಿದ್ದಾರೆ. 2ನೇ ಮಹಾಯುದ್ಧಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪೋಲೆಂಡ್‌ಗೆ 1.6 ಮಿಲಿಯನ್‌ನಷ್ಟು ಜನರು ಪಲಾಯನ ಮಾಡಿದ್ದಾರೆ. ಉಕ್ರೇನ್‌ನಿಂದ ಹಂಗೇರಿಗೆ 2.46 ಲಕ್ಷ ಜನ ಪಲಾಯನವಾಗಿದ್ದು, ರಷ್ಯಾಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಪಲಾಯನ ಮಾಡಿದ್ದಾರೆ.

Published On - 7:59 am, Mon, 14 March 22

Follow us on