Russia-Ukraine War: ಉಕ್ರೇನ್ ನ್ಯಾಟೋಗೆ ಸೇರ್ಪಡೆಯಾದರೆ 3ನೇ ಮಹಾಯುದ್ಧ ಖಚಿತ; ರಷ್ಯಾ ಎಚ್ಚರಿಕೆ
ಅಮೆರಿಕಾ ನೇತೃತ್ವದ ನ್ಯಾಟೊ ಮಿಲಿಟರಿ ಪಡೆಗೆ ಉಕ್ರೇನ್ ಸೇರಲು ಒಪ್ಪಿದರೆ ಮೂರನೇ ಮಹಾಯುದ್ಧ ನಡೆಯುವುದು ಖಚಿತ ಎಂದು ರಷ್ಯಾ ಹೇಳಿದೆ.
ಮಾಸ್ಕೋ: ಉಕ್ರೇನ್ (Ukraine) ರಾಷ್ಟ್ರವನ್ನು ನ್ಯಾಟೋಗೆ (NATO) ಸೇರಿಸಿದರೆ 3ನೇ ಮಹಾಯುದ್ಧ (3rd World War) ನಡೆಯಬಹುದು ಎಂದು ರಷ್ಯಾದ ಒಕ್ಕೂಟದ ಭದ್ರತಾ ಮಂಡಳಿಯ ಉಪ ಕಾರ್ಯದರ್ಶಿ ಅಲೆಕ್ಸಾಂಡರ್ ವೆನೆಡಿಕ್ಟೋವ್ ಗುರುವಾರ ಎಚ್ಚರಿಕೆ ನೀಡಿದ್ದಾರೆ. ಅಮೆರಿಕಾ ನೇತೃತ್ವದ ನ್ಯಾಟೊ ಮಿಲಿಟರಿ ಪಡೆಗೆ ಉಕ್ರೇನ್ ಸೇರಲು ಒಪ್ಪಿದರೆ ಮೂರನೇ ಮಹಾಯುದ್ಧ ನಡೆಯುವುದು ಖಚಿತ. ತಾನು ನ್ಯಾಟೋಗೆ ಸೇರಿದರೆ ಸಂಘರ್ಷ ಹೆಚ್ಚಾಗಿ ಮತ್ತೊಂದು ಮಹಾಯುದ್ಧ ನಡೆಯಲಿದೆ ಎಂಬುದು ಉಕ್ರೇನ್ಗೂ ಗೊತ್ತಿದೆ ಎಂದು ರಷ್ಯಾ ಹೇಳಿದೆ.
ನ್ಯಾಟೋದ ರಹಸ್ಯ ಪರಮಾಣು ಯೋಜನಾ ಸಮಿತಿ ಗುರುವಾರ ಮಹತ್ವದ ಸಭೆ ನಡೆಸಿದೆ. ಬ್ರುಸೆಲ್ಸ್ನಲ್ಲಿರುವ ನ್ಯಾಟೋ ಪ್ರಧಾನ ಕಚೇರಿಯಲ್ಲಿ ಈ ಸಭೆ ನಡೆದಿದ್ದು, ಪ್ರತಿ ವರ್ಷ 1 ಅಥವಾ 2 ಬಾರಿ ಈ ಸಭೆ ನಡೆಯುತ್ತದೆ. ಉಕ್ರೇನ್ ಮೇಲೆ ರಷ್ಯಾ ವೈಮಾನಿಕ ದಾಳಿ, ಬಾಂಬ್ ದಾಳಿ ನಡೆಸುತ್ತಿರುವುದರಿಂದ ಉಕ್ರೇನ್ನ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್ ಬರ್ಗ್ ಬುಧವಾರ ಹೇಳಿದ್ದರು.
ಇದನ್ನೂ ಓದಿ: Russia-Ukraine War: ಕ್ಷಿಪಣಿ ದಾಳಿ ನಡೆಸಿದ ರಷ್ಯಾ ಭಯೋತ್ಪಾದಕ ದೇಶ; ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಖಂಡನೆ
ಉಕ್ರೇನ್ನ 4 ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಳ್ಳುವುದನ್ನು ಖಂಡಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಿಂದ ಈ ಬಾರಿಯೂ ಭಾರತ ದೂರ ಉಳಿದಿದೆ. ಉಕ್ರೇನ್ ಮೇಲೆ ಮತ್ತೆ ರಷ್ಯಾ ದಾಳಿ ಆರಂಭಿವುದುದನ್ನು ವಿರೋಧಿಸುವ ಖಂಡನಾ ಗೊತ್ತವಳಿಯನ್ನು ವಿಶ್ವಸಂಸ್ಥೆ ಅಂಗೀಕರಿಸಿತ್ತು. ಉಕ್ರೇನ್ ಪ್ರದೇಶದಲ್ಲಿ ರಷ್ಯಾದ ಅತಿಕ್ರಮಣಗಳನ್ನು ತೆರವು ಮಾಡುವಂತೆ ಸೂಚಿಸಿತ್ತು. 193 ದೇಶಗಳ ವಿಶ್ವಸಂಸ್ಥೆಯಲ್ಲಿ ಈ ಬಗ್ಗೆ ಮತದಾನ ನಡೆದಾಗ 143 ದೇಶಗಳು ವಿಶ್ವಸಂಸ್ಥೆಯ ಗೊತ್ತುವಳಿ ಪರ ಹಾಗೂ 5 ದೇಶಗಳು ವಿರುದ್ಧ ಮತ ಹಾಕಿದ್ದವು. ಆದರೆ ಭಾರತ ಹಾಗೂ ಇನ್ನೂ 35 ದೇಶಗಳು ಮತದಾನದಿಂದ ದೂರ ಉಳಿದಿವೆ.
ಉಕ್ರೇನ್ ಬೆಂಬಲಕ್ಕೆ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಒದಗಿಸುವುದಾಗಿ ನ್ಯಾಟೋ ರಾಷ್ಟ್ರಗಳು ಘೋಷಿಸುತ್ತಿದ್ದಂತೆ ಉಕ್ರೇನ್ ಮೇಲೆ ರಷ್ಯಾ ಗುರುವಾರ ತನ್ನ ದಾಳಿಯನ್ನು ತೀವ್ರಗೊಳಿಸಿತ್ತು. 24 ಗಂಟೆಗಳಲ್ಲಿ ಉಕ್ರೇನ್ನ 40ಕ್ಕೂ ಹೆಚ್ಚು ನಗರಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು. ಇದೇ ವೇಳೆ ಉಕ್ರೇನ್ ವಾಯುಪಡೆ ಕೂಡಾ ರಷ್ಯಾದ 25 ಕ್ಷಿಪಣಿಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿವೆ ಎಂದು ಉಕ್ರೇನ್ ಸೇನಾಧಿಕಾರಿ ಹೇಳಿದ್ದಾರೆ. ಕೈವ್ ವಸತಿ ಪ್ರದೇಶದ ಮೇಲೆ ರಷ್ಯಾ ಇರಾನ್ ನಿರ್ಮಿತ ಡ್ರೋನ್ ಬಳಸಿ ದಾಳಿ ನಡೆಸಿದೆ. ಕ್ರಿಮಿಯಾ ಸೇತುವೆಯನ್ನು ಧ್ವಂಸಗೊಂಡಿದ್ದಕ್ಕೆ ಪ್ರತೀಕಾರವಾಗಿ ರಷ್ಯಾ ಕಳೆದ 4 ದಿನಗಳಿಂದ ಉಕ್ರೇನಿನ ನಗರಗಳ ಮೇಲೆ ಸತತ ಕ್ಷಿಪಣಿ ದಾಳಿಯನ್ನು ಮುಂದುವರೆಸಿದೆ. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನು ನಿಖರವಾಗಿ ತಿಳಿದುಬಂದಿಲ್ಲ.
ಇದನ್ನೂ ಓದಿ: ತಟಸ್ಥ ನಿಲುವು: ಉಕ್ರೇನ್ ಪ್ರದೇಶಗಳ ಮೇಲೆ ರಷ್ಯಾದ ಹಿಡಿತ ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ಮತ್ತೆ ದೂರ ದೂರ
ಉಕ್ರೇನಿನ ಮೈಕೋಲೈವ್ ಮೇಲೆ ನಡೆಸಿದ ಶೆಲ್ ಬಾಂಬ್ ದಾಳಿಯಲ್ಲಿ 5 ಅಂತಸ್ತಿನ ಬೃಹತ್ ಕಟ್ಟಡ ಧರೆಗುರುಳಿದೆ. ಕಪ್ಪುಸಮುದ್ರದ ತೀರದಲ್ಲಿರುವ ಸದರ್ನ್ ಬಗ್ ರಿವರ್ ಬಂದರು ಹಾಗೂ ಹಡಗು ನಿರ್ಮಾಣ ಕೇಂದ್ರಕ್ಕೆ ರಷ್ಯಾದ ಕ್ಷಿಪಣಿ ಬಾಂಬ್‌ಗಳ ದಾಳಿಯಿಂದ ತೀವ್ರ ಹಾನಿಯಾಗಿದೆ. ಸೋಮವಾರ ರಷ್ಯಾ ನಡೆಸಿದ ದಾಳಿಯಲ್ಲಿ ಒಟ್ಟು 19 ಉಕ್ರೇನಿಯನ್‌ರು ಮೃತಪಟ್ಟಿದ್ದರು. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಹಾಗೇ, ಗುರುವಾರದ ಸಭೆಯ ಸಂದರ್ಭದಲ್ಲಿ, ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ “ನಾವು ನ್ಯಾಟೋ ಪ್ರದೇಶದ ಪ್ರತಿ ಇಂಚಿನನ್ನೂ ರಕ್ಷಿಸಲು ಬದ್ಧರಾಗಿದ್ದೇವೆ” ಎಂದು ಪುನರುಚ್ಛರಿಸಿದ್ದರು.