Russia Ukraine War: ಉಕ್ರೇನ್ ಸೇನೆಯ ಹಠಾತ್ ದಾಳಿಗೆ ಬೆಚ್ಚಿ ಹಿಮ್ಮೆಟ್ಟಿದ ರಷ್ಯಾ; ಜಾಗತಿಕ ಮಟ್ಟದಲ್ಲಿ ಮುಖಭಂಗ
ಅಪ್ಪಿತಪ್ಪಿ ಈ ಯುದ್ಧದಲ್ಲಿ ರಷ್ಯಾ ಸಂಪೂರ್ಣವಾಗಿ ಸೋತರೆ ಮುಂದಿನ ದಿನಗಳಲ್ಲಿ ಜಾಗತಿಕ ಬಲಾಬಲಗಳ ಲೆಕ್ಕಾಚಾರವೂ ಏರುಪೇರಾಗಲಿದೆ.
ಕೀವ್: ಫ್ರಾನ್ಸ್ನ ನೆಪೋಲಿಯನ್ ಬೊನಪಾರ್ಟಿ, ಜರ್ಮನಿಯ ಅಡಾಲ್ಫ್ ಹಿಟ್ಲರ್ ಸೇರಿದಂತೆ ಹಲವು ಬಲಾಢ್ಯ ದೇಶಗಳ ಘಟಾನುಘಟಿ ಸೇನಾನಿಗಳನ್ನು ಮಣಿಸಿದ್ದ ರಷ್ಯಾ ಸೇನೆ (Red Army) ಇದೀಗ ತನ್ನದೇ ದೇಶದ ಅಂಗವಾಗಿದ್ದ ಉಕ್ರೇನ್ ವಿರುದ್ಧ (Russia Ukriane War) ಸಲ್ಲದ ಕಾರ್ಯಾಚರಣೆಗೆ ಮುಂದಾಗಿ ಮುಖಭಂಗ ಅನುಭವಿಸಿದೆ. ಇಂದಿಗೆ ಯುದ್ಧವು ಆರಂಭವಾಗಿ 202 ದಿನಗಳಾಗಿವೆ. ರಷ್ಯಾ ಅಥವಾ ಉಕ್ರೇನ್ಗೆ ಸಂಪೂರ್ಣ ಗೆಲುವು ಲಭ್ಯವಾಗಿಲ್ಲ. ಆದರೆ ಆರಂಭದಲ್ಲಿ ಉಕ್ರೇನ್ ರಾಜಧಾನಿ ಕೀವ್ವರೆಗೆ ಕ್ಷಿಪ್ರಗತಿಯಲ್ಲಿ ಧಾವಿಸಿದ್ದ ಬಲಾಢ್ಯ ರಷ್ಯಾ ಸೇನೆಯು ಬಹುತೇಕ ನೆಲೆಗಳನ್ನು ಬಿಟ್ಟುಕೊಟ್ಟು ಹಿಮ್ಮೆಟ್ಟಿದೆ. ಉಕ್ರೇನ್ ಸೇನೆಯು ದೇಶದ ಪೂರ್ವ ಭಾಗದಲ್ಲಿ ರಷ್ಯಾದ ಗಡಿಯವರೆಗೂ ತಲುಪಿದ್ದು, ಗೆದ್ದ ಸ್ಥಳಗಳನ್ನು ರಕ್ಷಿಸಿಕೊಳ್ಳಲು ಹೊಸ ಕಾರ್ಯತಂತ್ರ ರೂಪಿಸಿಕೊಳ್ಳುತ್ತಿದೆ.
ಈ ಮೂಲಕ ‘ರಷ್ಯಾ ಕೂಡ ಸೋಲಬಹುದು’ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿದ್ದು, ಇಷ್ಟು ದಿನ ರಷ್ಯಾಕ್ಕೆ ಹೆದರಿ ಮೌನವಾಗಿದ್ದ ಹಲವು ದೇಶಗಳು ಮುಂದಿನ ದಿನಗಳಲ್ಲಿ ಉಕ್ರೇನ್ ಪರ ನಿಲ್ಲುವ ಸಾಧ್ಯತೆಯನ್ನು ತೆರೆದಿಟ್ಟಿದೆ. ಇದು ಸಾಧ್ಯವಾದರೆ ಉಕ್ರೇನ್ಗೆ ಭಾರೀ ಪ್ರಮಾಣದ ಯುದ್ಧೋಪಕರಣಗಳು ಸರಬರಾಜಾಗಲಿದ್ದು ರಷ್ಯಾದ ಸೋಲು ನಿಚ್ಚಳವಾಗುತ್ತದೆ. ಆದರೆ ನೆನಪಿರಲಿ, ಸೋಲು ಕೂಡ ರಷ್ಯಾದ ಒಂದು ಯುದ್ಧತಂತ್ರ. ಹಿಂದೆ ನೆಪೋಲಿಯನ್ ನಾಯಕತ್ವದಲ್ಲಿ ಫ್ರಾನ್ಸ್ ಸೇನೆ ದಂಡೆತ್ತಿ ಬಂದಾಗಲೂ ರಷ್ಯಾ ಹಿಮ್ಮೆಟ್ಟಿತ್ತು, ಹಿಟ್ಲರ್ ನಾಯಕತ್ವದ ಜರ್ಮನ್ ಸೇನೆಗೂ ಆರಂಭದಲ್ಲಿ ಗೆಲುವಿನ ಸವಿ ಉಣಿಸಿ, ಅಂತಿಮವಾಗಿ ಸೋಲಿನ ಕಹಿಯ ರುಚಿ ಇದು ಎಂದು ಮನದಟ್ಟು ಮಾಡಿತ್ತು. ಉಕ್ರೇನ್ನ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ರಷ್ಯಾದ ವ್ಲಾದಿಮಿರ್ ಪುಟಿನ್ಗೆ ತಮ್ಮ ದೇಶಗಳಲ್ಲಿ ವ್ಯಾಪಕ ಜನಬೆಂಬಲ ಇರುವುದು ಹಾಗೂ ಇಬ್ಬರೂ ನಾಯಕರು ಜಿಗುಟು ಸ್ವಭಾವದವರಾಗಿರುವುದರಿಂದ ಯುದ್ಧದ ಫಲಿತಾಂಶ ಹೀಗೆಯೇ ಇರುತ್ತದೆ ಎಂದು ಈಗಲೇ ನಿರ್ಣಯಿಸಲು ಆಗುವುದಿಲ್ಲ. ಆದರೆ ಸದ್ಯದ ಮಟ್ಟಿಗೆ ರಷ್ಯಾಕ್ಕೆ ಹಿನ್ನಡೆಯಾಗಿರುವುದಂತೂ ನಿಜ.
ಉಕ್ರೇನ್ನ ಖಾರ್ಕಿವ್ ಪ್ರಾಂತ್ಯದಲ್ಲಿ ರಷ್ಯಾ ಸೇನೆಯು ತಾನು ಆಕ್ರಮಿಸಿಕೊಂಡಿದ್ದ ಸುಮಾರು 3,000 ಚದರ ಕಿಮೀಗಳಷ್ಟು ಪ್ರದೇಶದಿಂದ ಒಂದೇ ದಿನ ಹಿಂದೆ ಸರಿದಿದೆ. 20ಕ್ಕೂ ಹೆಚ್ಚು ಪಟ್ಟಣ ಮತ್ತು ಹಳ್ಳಿಗಳನ್ನು ನಮ್ಮ ಯೋಧರು ವಿಮೋಚನೆಗೊಳಿಸಿದ್ದಾರೆ ಎಂದು ಉಕ್ರೇನ್ನ ಸೇನಾ ಮುಖ್ಯಸ್ಥರು ಹೇಳಿದ್ದಾರೆ. ತಾನು ಹಿಮ್ಮೆಟ್ಟಿರುವುದನ್ನು ಒಪ್ಪಿಕೊಂಡಿರುವ ರಷ್ಯಾ, ಅದನ್ನು ಸೇನಾ ಕಾರ್ಯತಂತ್ರದ ಭಾಗ ಎಂದು ಬಣ್ಣಿಸಿಕೊಂಡಿದೆ. ಆದರೆ ಈ ಮಟ್ಟದಲ್ಲಿ ಒಂದೇ ದಿನ ಹಿಮ್ಮೆಟ್ಟುವುದನ್ನು ಜಗತ್ತು ಸೋಲು ಎಂದೇ ಕರೆಯುತ್ತಿದೆ.
ಈ ಬೆಳವಣಿಗೆಯು ಉಕ್ರೇನ್ ಯುದ್ಧ ಶೀಘ್ರ ಕೊನೆಗೊಳ್ಳಲು ಕಾರಣವಾಗಬಹುದು ಎಂದು ಕೆಲ ಮಾಧ್ಯಮಗಳು ವಿಶ್ಲೇಷಿಸುತ್ತಿವೆ. ಸ್ವದೇಶದಲ್ಲಿಯೂ ಪ್ರತಿದಾಳಿಗೆ ಒತ್ತಾಯ ಹೆಚ್ಚಾಗಿ ಇರುವುದರಿಂದ ರಷ್ಯಾ ಶೀಘ್ರದಲ್ಲಿಯೇ ಮತ್ತೊಮ್ಮೆ ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ಚುರುಕುಗೊಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಯುದ್ಧದ ಅವಧಿಯನ್ನು ಈ ಬೆಳವಣಿಗೆ ಮತ್ತಷ್ಟು ಹೆಚ್ಚಿಸುವುದಂತೂ ನಿಜ.
ಉಕ್ರೇನ್ನ ಜನರು ಸೇನೆಯ ಪರ ದೃಢವಾಗಿ ನಿಂತಿದ್ದರ ಜೊತೆಗೆ ಅಮೆರಿಕ ಮತ್ತು ಯೂರೋಪ್ನಿಂದ ಯುದ್ಧೋಪಕರಣಗಳ ಬೆಂಬಲ ಸಿಕ್ಕಿದ್ದು ಉಕ್ರೇನ್ ಯಶಸ್ಸಿಗೆ ಮುಖ್ಯ ಕಾರಣ. ಇಂಧನ ಮತ್ತು ನೈಸರ್ಗಿಕ ಅನಿಲಕ್ಕಾಗಿ ತನ್ನನ್ನು ಆಶ್ರಯಿಸಿರುವ ಯೂರೋಪ್ ದೇಶಗಳನ್ನು ಸುಲಭವಾಗಿ ತನ್ನ ಹಿತಾಸಕ್ತಿಗೆ ಅನುಗುಣವಾಗಿ ಬಳಸಿಕೊಳ್ಳಬಹುದು ಎನ್ನುವ ರಷ್ಯಾದ ಲೆಕ್ಕಾಚಾರವೂ ಈಡೇರಲಿಲ್ಲ. ಐರೋಪ್ಯ ರಾಷ್ಟ್ರಗಳು ಸಂಕಷ್ಟದಲ್ಲಿದ್ದರೂ ರಷ್ಯಾದ ಹಿಡಿತ ಮತ್ತು ಅವಲಂಬನೆಯಿಂದ ಬಿಡಿಸಿಕೊಳ್ಳಲು ಈ ಯುದ್ಧವನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಲು ಮುಂದಾಗಿವೆ. ಒಂದು ವೇಳೆ ರಷ್ಯಾದ ನೆರವಿಲ್ಲದೆ ಈ ಚಳಿಗಾಲವನ್ನು ಯೂರೋಪ್ ದೇಶಗಳು ಯಶಸ್ವಿಯಾಗಿ ಕಳೆದಿದ್ದೇ ಆದರೆ ಮುಂದಿನ ದಿನಗಳಲ್ಲಿ ಅದು ಜಾಗತಿಕ ಮಟ್ಟದಲ್ಲಿ ರಷ್ಯಾದ ಪ್ರಭಾವವನ್ನು ಮತ್ತಷ್ಟು ತಗ್ಗಿಸುತ್ತದೆ.
ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ, ದಾಳಿ ಮಾಡಿದ ರಷ್ಯಾ ಸೇನೆ ಉಕ್ರೇನ್ ರಾಜಧಾನಿ ಕೀವ್ ಸಮೀಪಕ್ಕೆ ಬಂದ ಸಂದರ್ಭದಲ್ಲಿ ಇದು ‘ಒನ್ ಸೈಡ್ ಮ್ಯಾಚ್’ ಇದ್ದಂತೆ ಎಂದು ಹೇಳಲಾಗುತ್ತಿತ್ತು. ಆದರೆ ಕೀವ್ನಿಂದ ರಷ್ಯಾ ಸೇನೆಯನ್ನು ಉಕ್ರೇನ್ ಯೋಧರು ಹಿಮ್ಮೆಟ್ಟಿಸಿದ ನಂತರ ಯುದ್ಧದ ವ್ಯಾಖ್ಯಾನ ಬದಲಾಯಿತು. ಇದೀಗ ರಷ್ಯಾ ಗಡಿಯವರೆಗೂ ತಲುಪಿರುವ ಉಕ್ರೇನ್ ಸೇನೆ ತನ್ನನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂದು ಸಾರಿ ಹೇಳಿದೆ. ಅಪ್ಪಿತಪ್ಪಿ ಈ ಯುದ್ಧದಲ್ಲಿ ರಷ್ಯಾ ಸಂಪೂರ್ಣವಾಗಿ ಸೋತರೆ ಮುಂದಿನ ದಿನಗಳಲ್ಲಿ ಜಾಗತಿಕ ಬಲಾಬಲಗಳ ಲೆಕ್ಕಾಚಾರವೂ ಏರುಪೇರಾಗಲಿದೆ.
Published On - 2:56 pm, Tue, 13 September 22