ಬ್ರಿಟನ್ ರಾಣಿ ಎಲಿಜಬೆತ್ II ಪರ ಉಮ್ರಾ ನಡೆಸಲು ಮೆಕ್ಕಾಗೆ ಬಂದಿರುವೆನೆಂದ ಯೆಮೆನ್ ಪ್ರಜೆಯನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ!
ಕ್ಲಿಪ್ ನಲ್ಲಿ ಅವನು ಒಂದು ಬ್ಯಾನರ್ ಕೈಯಲ್ಲಿ ಹಿಡಿದಿದ್ದು ಅದರಲ್ಲಿ ಹೀಗೆ ಬರೆಯಲಾಗಿದೆ: ಅಗಲಿದ ರಾಣಿ ಎಲಿಜಬೆತ್ II ಅವರ ಆತ್ಮಕ್ಕಾಗಿ ಉಮ್ರಾ, ದೇವರು ಬೇರೆ ನೀತಿವಂತರರಿಗೆ ಸ್ವರ್ಗದಲ್ಲಿ ಸ್ಥಳ ನೀಡಿರುವಂತೆ ಅವರಿಗೂ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ.’
ರಿಯಾದ್: ಕಳೆದ ವಾರ ನಿಧನಹೊಂದಿದ ಬ್ರಿಟನ್ ರಾಣಿ ಎಲಿಜಬೆತ್ II (Queen Elizabeth II) ಅವರ ಪರವಾಗಿ ಉಮ್ರಾ (Umrah) ನಡೆಸಲು ಮುಸ್ಲಿಂ ಪವಿತ್ರ ನಗರಕ್ಕೆ ಬಂದಿರುವುದಾಗಿ ಹೇಳಿಕೊಂಡಿರುವ ವ್ಯಕ್ತಿಯೊಬ್ಬನನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ. ಯೆಮೆನ್ (Yemen) ದೇಶದ ಪ್ರಜೆಯಾಗಿರುವ ಈ ವ್ಯಕ್ತಿ ಇಸ್ಲಾಂನ ಅತ್ಯಂತ ಪವಿತ್ರ ಸ್ಥಳವೆನಿಸಿಕೊಂಡಿರುವ ಮೆಕ್ಕಾದ ಭವ್ಯ ಮಸೀದಿಯ (Grand Mosque) ಬಳಿ ತಾನು ನಿಂತಿರುವ ವಿಡಿಯೋ ಕ್ಲಿಪ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಸ್ಥಳದಲ್ಲಿ ಮುಸ್ಲಿಮೇತರಿಗೆ ಪ್ರವೇಶ ನಿಷಿದ್ಧವಾಗಿದೆ.
ಕ್ಲಿಪ್ ನಲ್ಲಿ ಅವನು ಒಂದು ಬ್ಯಾನರ್ ಕೈಯಲ್ಲಿ ಹಿಡಿದಿದ್ದು ಅದರಲ್ಲಿ ಹೀಗೆ ಬರೆಯಲಾಗಿದೆ: ಅಗಲಿದ ರಾಣಿ ಎಲಿಜಬೆತ್ II ಅವರ ಆತ್ಮಕ್ಕಾಗಿ ಉಮ್ರಾ, ದೇವರು ಬೇರೆ ನೀತಿವಂತರರಿಗೆ ಸ್ವರ್ಗದಲ್ಲಿ ಸ್ಥಳ ನೀಡಿರುವಂತೆ ಅವರಿಗೂ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ.’
ಸದರಿ ವಿಡಿಯೋ ಸೌದಿಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ಟ್ವಿಟರ್ ಬಳಕೆದಾರರು ಅವನ ಬಂಧನಕ್ಕೆ ಆಗ್ರಹಿಸಿದ್ದಾರೆ.
ಮೆಕ್ಕಾಗೆ ಬರುವ ಯಾತ್ರಾರ್ಥಿಗಳು ತಮ್ಮೊಂದಿಗೆ ಬ್ಯಾನರ್ ತರುವುದನ್ನು ಮತ್ತು ಘೋಷಣೆ ಕೂಗುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ.
ನಿಧನಹೊಂದಿದ ಮುಸಲ್ಮಾನರ ಪರವಾಗಿ ಉಮ್ರಾ ಮಾಡುವುದಕ್ಕೆ ಅವಕಾಶವಿದೆ, ಅದರೆ ಮುಸ್ಲಿಮೇತರ ಜನರ ಪರವಾಗಿ ಅದನ್ನು ಮಾಡುವಂತಿಲ್ಲ. ರಾಣಿ ಎಲಿಜಬೆತ್ ಅವರು ವಿಶ್ವದಾದ್ಯಂತ ಹಬ್ಬಿರುವ ಆಂಗ್ಲಿಕನ್ ಸಮುದಾಯದ ಮಾತೃ ಚರ್ಚ್ ಅನಿಸಿಕೊಂಡಿರುವ ಚರ್ಚ್ ಆಫ್ ಇಂಗ್ಲೆಂಡ್ ಪರಮೋಚ್ಛ ಗವರ್ನರ್ ಆಗಿದ್ದರು.
ಸೌದಿಯ ಅಧಿಕೃತ ಮಾಧ್ಯಮವೊಂದು ಸೋಮವಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಗ್ರ್ಯಾಂಡ್ ಮಾಸ್ಕ್ ಬಳಿಯ ಭದ್ರತಾ ದಳ ಸಿಬ್ಬಂದಿಯು, ‘ವಿಡಿಯೋ ಕ್ಲಿಪ್ ನಲ್ಲಿ ಕಂಡಿರುವ ಹಾಗೆ ಬ್ಯಾನರ್ ಗಳನ್ನು ನಿಷೇಧಿಸಿರುವ ಗ್ರ್ಯಾಂಡ್ ಮಾಸ್ಕ್ ಬಳಿ ಬ್ಯಾನರೊಂದನ್ನು ಹಿಡಿದು ತಿರುಗಾಡಿದ ಯೆಮೆನ್ ದೇಶದ ಪ್ರಜೆಯೊಬ್ಬರನ್ನು ಉಮ್ರಾಗೆ ಸಂಬಂಧಿಸಿದ ನಿಯಮಾವಳಿ ಮತ್ತು ಸೂಚನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಗಿದೆ,’ ಎಂದು ಹೇಳಿದೆ.
‘ಅವರನ್ನು ಬಂಧಿಸಿದ ಬಳಿಕ ಕಾನೂನಿನ ಕ್ರಮಗಳನ್ನು ಜರುಗಿಸಲಾಗಿದೆ ಮತ್ತು ಸಾರ್ವಜನಿಕ ವಿಚಾರಣೆಗೆ ಅವರನ್ನು ಒಳಪಡಿಸಲಾಗುವುದು,’ ಅಂತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಟೆಲಿವಿಶನ್ ನಲ್ಲಿ ಘಟನೆಗೆ ಸಂಬಂಧಿಸಿದ ಸೆಗ್ಮೆಂಟ್ಗಳನ್ನು ಬಿತ್ತರಿಸಲಾಗಿದ್ದು ಅವುಗಳಲ್ಲಿ ಯೆಮೆನ್ ಪ್ರಜೆಯ ವಿಡಿಯೋ ಕ್ಲಿಪ್ ಸೇರಿಸಲಾಗಿದೆಯಾದರೂ ಬ್ಯಾನರನ್ನು ಬ್ಲರ್ ಮಾಡಲಾಗಿದೆ.
ವರ್ಷದಲ್ಲಿ ಒಮ್ಮೆ ಮತ್ತು ನಿರ್ದಿಷ್ಟ ಸಮಯದಲ್ಲಿ ಮಾತ್ರ ಮಾಡಬಹುದಾದ ಹಜ್ ಯಾತ್ರೆಗಿಂತ ಭಿನ್ನವಾಗಿರುವ ಉಮ್ರಾ ವರ್ಷದ ಯಾವುದೇ ಸಮಯದಲ್ಲಿ ಮಾಡುವ ಸಂಸ್ಕಾರವಾಗಿದೆ. ಹಜ್ ಯಾತ್ರೆಗೆ ವಿಶ್ವದ ಮೂಲೆಮೂಲೆಗಳಿಂದ ಲಕ್ಷಾಂತರ ಜನ ಹೋಗುತ್ತಾರೆ.
ಕಳೆದ ಗುರುವಾರ ನಿಧನರಾದ ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 19ರಂದು ನಡೆಸಲು ನಿಶ್ಚಯಿಸಲಾಗಿದೆ.