IS suicide bomber ಭಾರತದಲ್ಲಿ ಉಗ್ರ ದಾಳಿಗೆ ಸಂಚು ರೂಪಿಸಿದ್ದ ಐಎಸ್ ಆತ್ಮಾಹುತಿ ಬಾಂಬರ್ನ್ನು ಬಂಧಿಸಿದ ರಷ್ಯಾ
ಈತ ಭಾರತದ ಆಡಳಿತದ ನಾಯಕರ ಮೇಲೆ ದಾಳಿಗೆ ಸಂಚು ರೂಪಿಸುತ್ತಿದ್ದ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ.
ಮಾಸ್ಕೊ: ಇಸ್ಲಾಮಿಕ್ ಸ್ಟೇಟ್ (Islamic State) ಉಗ್ರ ಸಂಘಟನೆಗೆ ಸೇರಿದ ಆತ್ಮಾಹುತಿ ಬಾಂಬರ್ (suicide bomber) ಅನ್ನು ತಮ್ಮ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ರಷ್ಯಾದ ಕೇಂದ್ರೀಯ ಭದ್ರತಾ ಸಂಸ್ಥೆ (Russian Federal Service FSB) ಸೋಮವಾರ ಹೇಳಿದೆ. ಈತ ಭಾರತದ ಆಡಳಿತದ ನಾಯಕರ ಮೇಲೆ ದಾಳಿಗೆ ಸಂಚು ರೂಪಿಸುತ್ತಿದ್ದ ಎಂದು ರಷ್ಯಾದ ಸುದ್ದಿಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ. ಎಫ್‌ಎಸ್‌ಬಿ ರಷ್ಯಾದಲ್ಲಿ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಸದಸ್ಯನನ್ನು ಗುರುತಿಸಿ ಬಂಧಿಸಿದೆ. ಈತ ಭಾರತದ ಸ್ಥಳೀಯರು, ಆಡಳಿತ ವಲಯದ ಪ್ರತಿನಿಧಿಗಳನ್ನು ಗುರಿಯಾಗಿರಿಸಿ ಆತ್ಮಾಹುತಿ ದಾಳಿ ಮೂಲಕ ಭಯೋತ್ಪಾದಕ ಕೃತ್ಯವನ್ನು ಎಸಗಲು ಯೋಜಿಸಿದ್ದ ಎಂದು ಎಫ್‌ಎಸ್‌ಬಿ ಹೇಳಿಕೆಯಲ್ಲಿ ತಿಳಿಸಿದೆ. ಬಂಧಿತ ವ್ಯಕ್ತಿಯನ್ನು ಐಎಸ್ ನಾಯಕರೊಬ್ಬರು ಟರ್ಕಿಯಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ನೇಮಿಸಿಕೊಂಡಿದ್ದರು ಎಂದು ಹೇಳಿಕೆ ತಿಳಿಸಿದೆ.
ಇಸ್ಲಾಮಿಕ್ ಸ್ಟೇಟ್ ಮತ್ತು ಅದರ ಎಲ್ಲ ಸಂಘಟನೆಗಳನ್ನು ಉಗ್ರ ಸಂಘಟನೆಗಳು ಎಂದು ಗುರುತಿಸಿದ್ದು, ಕೇಂದ್ರ ಸರ್ಕಾರವು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967ರ ಪಟ್ಟಿಯಲ್ಲಿ ಸೇರಿಸಲಾಗಿದೆಐಎಸ್ ತನ್ನ ಸಿದ್ಧಾಂತವನ್ನು ಪ್ರಚಾರ ಮಾಡಲು ವಿವಿಧ ಇಂಟರ್ನೆಟ್ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿದೆ. ಈ ನಿಟ್ಟಿನಲ್ಲಿ ಸೈಬರ್‌ಸ್ಪೇಸ್ ಅನ್ನು ಸಂಬಂಧಪಟ್ಟ ಏಜೆನ್ಸಿಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ ಮತ್ತು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗೃಹ ಸಚಿವಾಲಯ ಹೇಳಿದೆ.
This is the video of the #ISIS suicide bomber apprehended by the Russian security agency. He has confessed that he was tasked by Islamic State to target a top leader of ruling government in India. pic.twitter.com/gWet1oVcVo
— Aditya Raj Kaul (@AdityaRajKaul) August 22, 2022
ಇಸ್ಲಾಮಿಕ್ ಸ್ಟೇಟ್ನ ಮುಖಂಡನಿಗೆ ನಿಷ್ಠನಾಗಿರುವುದಾಗಿ ಈತ ಪ್ರತಿಜ್ಞೆ ತೆಗೆದುಕೊಂಡಿದ್ದ ಎಂದು ಎಫ್‌ಎಸ್‌ಬಿ ಪ್ರಕಟಣೆಯಲ್ಲಿ ತಿಳಿಸಿದೆ. ಆನಂತರ ಆತನನ್ನು ರಷ್ಯಾಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಅಗತ್ಯ ದಾಖಲೆ ಸಹಿತ ಭಾರತದಲ್ಲಿ ದೊಡ್ಡ ಮಟ್ಟದ ಉಗ್ರ ಕೃತ್ಯ ನಡೆಸುವುದಕ್ಕಾಗಿ ಭಾರತಕ್ಕೆ ಬರುವವನಿದ್ದ ಎಂದು ಎಫ್‌ಎಸ್‌ಬಿ ಹೇಳಿದೆ. ಈತ ಮಧ್ಯ ಏಷ್ಯಾ ಪ್ರದೇಶದವನಾಗಿದ್ದಾನೆ ಎಂದು ರಷ್ಯಾ ಹೇಳಿದೆ.
ಏಪ್ರಿಲ್ನಿಂದ ಜೂನ್ ತಿಂಗಳ ನಡುವಣ ಅವಧಿಯಲ್ಲಿ ಈತನನ್ನು ಐಸಿಸ್ ಭರ್ತಿ ಮಾಡಿಕೊಂಡಿತ್ತು. ಈ ಕುರಿತು ರಷ್ಯಾದ ಕೇಂದ್ರೀಯ ಭದ್ರತಾ ಸಂಸ್ಥೆ ಅಧಿಕೃತವಾಗಿ ಭಾರತಕ್ಕೆ ಮಾಹಿತಿ ರವಾನಿಸಿದೆ. ಆತ್ಮಾಹುತಿ ಬಾಂಬರ್ನನ್ನು ರಷ್ಯಾದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಆತ ತಪ್ಪೊಪ್ಪಿಕೊಂಡಿದ್ದಾನೆ. ‘ಇಂಡಿಯಾ ಟುಡೇ’ ವಾಹಿನಿ ಆಡಿಯೊ ಪ್ರಸಾರ ಮಾಡಿದೆ. ‘ಭಾರತದ ಮೇಲೆ ಸೇಡು ತೀರಿಸಿಕೊಳ್ಳಬೇಕಿದೆ’ ಎಂದು ವೇಳೆ ಅವನು ಹೇಳಿದ್ದಾನೆ. ‘ಭಾರತಕ್ಕೆ ಹೋಗಲೆಂದೇ ರಷ್ಯಾಗೆ ವಿಮಾನದಲ್ಲಿ ಬಂದೆ. ಭಾರತದಲ್ಲಿ ಒಬ್ಬರನ್ನು ಭೇಟಿಯಾಗಬೇಕಿದೆ. ಅವರು ನನಗೆ ಬೇಕಿರುವ ಎಲ್ಲವನ್ನೂ ಒದಗಿಸಲಿದ್ದರು. ಅವರ ನೆರವಿನಿಂದ ಪ್ರವಾದಿಗೆ ಇಷ್ಟವಾಗುವ ಕೆಲಸ ಮಾಡಬೇಕಿತ್ತು’ ಎಂದು ಬಂಧಿತ ಉಗ್ರ ಹೇಳಿದ್ದಾಗಿ ರಷ್ಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Published On - 2:04 pm, Mon, 22 August 22