
ಮಾಸ್ಕೋ, ನವೆಂಬರ್ 17: ರಷ್ಯಾದ An-12 ಸೇನಾ ಸಾರಿಗೆ ವಿಮಾನವೊಂದು ಇಂದು ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 17 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮತ್ತು ರಷ್ಯಾದ ಸರ್ಕಾರಿ ನಿಯಂತ್ರಿತ ಮಾಧ್ಯಮ ‘ರೆನ್ ಟಿವಿ’ ದೃಢಪಡಿಸಿದೆ. ನೈಋತ್ಯ ಸೈಬೀರಿಯಾದ ಕೆಮೆರೊವೊ ಒಬ್ಲಾಸ್ಟ್‌ನ ಯಾಗುನೊವೊ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯ ಕಾಲಮಾನ ರಾತ್ರಿ 9.30ರ ಸುಮಾರಿಗೆ ವಿಮಾನ ಪತನಗೊಂಡಿದೆ.
ಈ ದುರ್ಘಟನೆ ನಡೆದ ಸ್ಥಳದಲ್ಲಿ ತುರ್ತು ಪ್ರತಿಕ್ರಿಯೆ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ತುರ್ತು ಸೇವಾ ತಂಡಗಳು ಮತ್ತು ನ್ಯಾಷನಲ್ ಗಾರ್ಡ್ ಪಡೆಗಳನ್ನು ನಿಯೋಜಿಸಲಾಗಿದೆ. ಈ ವಿಮಾನವು ಸೈಬೀರಿಯಾದ ನೊವೊಸಿಬಿರ್ಸ್ಕ್‌ನಿಂದ ಕ್ರಾಸ್ನೊಯಾರ್ಸ್ಕ್ ಕ್ರೈನ ಕಾನ್ಸ್ಕ್ ಕಡೆಗೆ ಪ್ರಯಾಣಿಸುತ್ತಿತ್ತು. ಮಾರ್ಗಮಧ್ಯೆ ಬೆಂಕಿ ಹೊತ್ತಿಕೊಂಡಿದ್ದ ವಿಮಾನವನ್ನು ಜನವಸತಿ ಕಟ್ಟಡಗಳಿಂದ ದೂರಕ್ಕೆ ತಿರುಗಿಸಲು ಸಿಬ್ಬಂದಿ ಕೊನೆಯ ಕ್ಷಣದವರೆಗೂ ಪ್ರಯತ್ನಿಸಿದರು ಎಂದು ‘ರೆನ್ ಟಿವಿ’ ವರದಿ ಮಾಡಿದೆ. ವಿಮಾನ ಪತನಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ಬಹಿರಂಗವಾಗಿಲ್ಲ.
ಇದನ್ನೂ ಓದಿ: ಬೆಂಗಳೂರಿನ ಐವರ ದುರಂತ ಅಂತ್ಯ; ಉತ್ತರಾಖಂಡದ ಹೆಲಿಕಾಪ್ಟರ್ ಪತನದ ವೇಳೆ ಏನೇನಾಯ್ತು?
ಆಂಟೊನೊವ್ An-12 ವಿಮಾನದ ಹಿನ್ನೆಲೆ:
ಪತನಗೊಂಡ ಆಂಟೊನೊವ್ An-12 (Antonov An-12) ವಿಮಾನವು 1950ರ ದಶಕದಲ್ಲಿ ಸೋವಿಯತ್ ಒಕ್ಕೂಟದಿಂದ ವಿನ್ಯಾಸಗೊಳಿಸಲಾದ 4 ಎಂಜಿನ್ ಟರ್ಬೊಪ್ರಾಪ್ ಸೇನಾ ಸಾರಿಗೆ ವಿಮಾನವಾಗಿದೆ. ಸೈನಿಕರು, ಮಿಲಿಟರಿ ಉಪಕರಣಗಳು ಮತ್ತು ಸರಕುಗಳನ್ನು ಸಾಗಿಸಲು ಇದನ್ನು ಬಳಸಲಾಗುತ್ತದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ