ರಷ್ಯಾದ ಕುಡುಕ ಸೈನಿಕನಿಂದ ಗರ್ಭಿಣಿಯ ಮೇಲೆ ಅತ್ಯಾಚಾರ; ಇನ್ನೂ 20 ಜನರನ್ನು ಕರೆದುಕೊಂಡು ಬರುವುದಾಗಿ ಬೆದರಿಕೆ

ರಷ್ಯಾದ ಕುಡುಕ ಸೈನಿಕನಿಂದ ಗರ್ಭಿಣಿಯ ಮೇಲೆ ಅತ್ಯಾಚಾರ; ಇನ್ನೂ 20 ಜನರನ್ನು ಕರೆದುಕೊಂಡು ಬರುವುದಾಗಿ ಬೆದರಿಕೆ
ಸಾಂದರ್ಭಿಕ ಚಿತ್ರ

ಅಷ್ಟರಲ್ಲಿ ಅಲ್ಲಿಗೆ ಬಂದ ಇನ್ನೊಬ್ಬ ರಷ್ಯಾ ಸೈನಿಕ ಇವನನ್ನು ತಡೆಯಲು ಯತ್ನಿಸಿದ. ಆದರೆ ಇವನು ಕೇಳಲೇ ಇಲ್ಲ. ನನ್ನ ಕುತ್ತಿಗೆಯನ್ನು ಗಟ್ಟಿಯಾಗಿ ಹಿಸುಕುತ್ತಿದ್ದ. ತಪ್ಪಿಸಿಕೊಳ್ಳಲು ಯತ್ನಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಯುವತಿ ಹೇಳಿದ್ದಾಳೆ.

TV9kannada Web Team

| Edited By: Lakshmi Hegde

Apr 28, 2022 | 3:07 PM

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಶುರು ಮಾಡಿ ಒಂದು ತಿಂಗಳು ಕಳೆದು ಹೋಗಿದೆ. ಈಗೀಗಂತೂ ಯುದ್ಧಾಪರಾಧಗಳು ಹೆಚ್ಚುತ್ತಿರುವ ಬಗ್ಗೆ ಪದೇಪದೆ ವರದಿಯಾಗುತ್ತಿದೆ. ಅದರಲ್ಲೂ ಕೂಡ ರಷ್ಯಾ ಸೈನಿಕರು ಉಕ್ರೇನ್ ಯುವತಿಯರ ಮೇಲೆ ಅತ್ಯಾಚಾರ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.  ಉಕ್ರೇನ್​ನ ಕೆಲವು ಭಾಗದ ಯುವತಿಯರು ತಾವು ಸುಂದರವಾಗಿ ಕಾಣಿಸಿಕೊಳ್ಳಬಾರದು, ಚೆಂದ ಕಾಣಿಸಿದರೆ  ರಷ್ಯಾ ಯೋಧರ ಕಾಮಕ್ಕೆ ಬಲಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ತಮ್ಮ ತಲೆಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳುತ್ತಿದ್ದಾರೆ ಎಂಬ ವಿಚಾರ ಹಲವು ದಿನಗಳ ಹಿಂದೆಯೇ ವರದಿಯಾಗಿತ್ತು. ಈಗ ಇನ್ನೊಂದು ಮನಕಲಕುವ ಘಟನೆ ವರದಿಯಾಗಿದೆ. ರಷ್ಯಾದ ಸೈನಿಕನೊಬ್ಬ ಮದ್ಯ ಪಾನ ಮಾಡಿಕೊಂಡು, 16ವರ್ಷದ ಗರ್ಭಿಣಿಯ ಬಳಿ ಹೋಗಿ, ನೀನು ನನ್ನೊಂದಿಗೆ ಮಲಗು..ಇಲ್ಲದಿದ್ದರೆ ಇನ್ನೂ 20 ಜನರೊಂದಿಗೆ ಬಂದು ಅತ್ಯಾಚಾರ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ, ಅದಾಗಲೇ ಗರ್ಭಿಣಿಯಾಗಿದ್ದ ಯುವತಿಯ ಮೇಲೆ ಅತ್ಯಾಚಾರವನ್ನೂ ಮಾಡಿದ್ದಾನೆ. ಅಂದಹಾಗೇ ಘಟನೆ ನಡೆದದ್ದು ಉಕ್ರೇನ್​ನ ಖೆರ್ಸನ್​ ಎಂಬ ಹಳ್ಳಿಯಲ್ಲಿ ಎಂದು ಸಿಎನ್​ಎನ್​ ವರದಿ ಮಾಡಿದೆ.

ಈ ಯುವತಿ ತನ್ನ ಕುಟುಂಬದೊಂದಿಗೆ ಮನೆಯ ಬೇಸ್​​ಮೆಂಟ್​​ನಲ್ಲಿ ಇದ್ದಳು. ಬಾಂಬ್​ ದಾಳಿಯಿಂದ ಪಾರಾಗಲು ಇವರೆಲ್ಲರೂ ಬೇಸ್​​ಮೆಂಟ್ ಮೊರೆ ಹೋಗಿದ್ದರು. ಆದರೆ ತಿಂಡಿಯೆಲ್ಲ ಖಾಲಿಯಾಗಿದ್ದ ಕಾರಣ ಇವಳು, ಇನ್ನಿಬ್ಬರು ಮಕ್ಕಳು ಮತ್ತು ತಾಯಿಯೊಂದಿಗೆ ಮನೆಯಿಂದ ಹೊರಗೆ ಬಂದಿದ್ದಳು. ಅದೇ ವೇಳೆ ಈ ಕುಡುಕ ಸೈನಿಕನ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ.  ‘ನಾವು ಮೂರು ಮಂದಿ ಹೆಣ್ಣುಮಕ್ಕಳು ಮನೆಯಿಂದ ಹೊರಬಂದಿದ್ದೆವು. ಆಗ ರಷ್ಯಾದ ಯೋಧ ಸಿಕ್ಕ. ನಿಮಗೆಲ್ಲ ವಯಸ್ಸೆಷ್ಟು ಎಂದು ಕೇಳಿದ. ನನ್ನ ಜತೆಗಿದ್ದ ಇಬ್ಬರಲ್ಲಿ ಒಬ್ಬಳಿಗೆ 12 ವರ್ಷ ಮತ್ತು ಇನ್ನೊಬ್ಬಳಿಗೆ 14ವರ್ಷ. ನನಗೆ 16ವರ್ಷ ಎಂದು ಹೇಳಿದೆ. ಆತ ಮೊದಲು ನನ್ನ ಅಮ್ಮನನ್ನು ಬಳಿ ಕರೆದ. ಆದರೆ ಅದೇನು ಆಯಿತೋ, ಆಕೆಗೆ ಹೋಗುವಂತೆ ಹೇಳಿದ. ಬಳಿಕ ನನ್ನನ್ನು ಕರೆದ. ಅಷ್ಟೇ ಅಲ್ಲ, ದೊಡ್ಡದಾಗಿ ಕೂಗಲು ಶುರು ಮಾಡಿದ. ಪೂರ್ತಿ ಬಟ್ಟೆ ಬಿಚ್ಚುವಂತೆ ಹೇಳಿದ. ನಾನು ಆಗೋದಿಲ್ಲವೆಂದಾಗ, ನೀನೀಗ ನನ್ನ ಜತೆ ಲೈಂಗಿಕ ಕ್ರಿಯೆ ನಡೆಸಲು ಒಪ್ಪದೆ, ಇದ್ದರೆ ಇನ್ನೂ 20 ಮಂದಿಯನ್ನು ಕರೆದು ಎಲ್ಲರೂ ಅತ್ಯಾಚಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ ಎಂದು ಅತ್ಯಾಚಾರಕ್ಕೀಡಾದ ಯುವತಿ ಹೇಳಿದ್ದಾಳೆ.

ಅಷ್ಟರಲ್ಲಿ ಅಲ್ಲಿಗೆ ಬಂದ ಇನ್ನೊಬ್ಬ ರಷ್ಯಾ ಸೈನಿಕ ಇವನನ್ನು ತಡೆಯಲು ಯತ್ನಿಸಿದ. ಆದರೆ ಇವನು ಕೇಳಲೇ ಇಲ್ಲ. ನನ್ನ ಕುತ್ತಿಗೆಯನ್ನು ಗಟ್ಟಿಯಾಗಿ ಹಿಸುಕುತ್ತಿದ್ದ. ತಪ್ಪಿಸಿಕೊಳ್ಳಲು ಯತ್ನಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ನಾನು ಆಹಾರಕ್ಕಾಗಿ ಹೊರಗೆ ಬಾರದೆ ಇದ್ದರೆ ಈ ರೇಪ್​​ಗೆ ಒಳಗಾಗುತ್ತಿರಲಿಲ್ಲ ಎಂದು 16ವರ್ಷ ಯುವತಿ ಅಳುತ್ತಲೇ ಹೇಳಿಕೆ ನೀಡಿದ್ದಾಗಿ ಸಿಎನ್​ಎನ್​ ತಿಳಿಸಿದೆ.  ಅಷ್ಟೇ ಅಲ್ಲ, ರಷ್ಯಾದ ಸೈನಿಕರು ಈ ವ್ಯಕ್ತಿಯನ್ನು ಬ್ಲ್ಯೂ ಎಂದು ಕರೆಯುವುದನ್ನು ನಾನು ಕೇಳಿದ್ದೇನೆ. ಅವನಿಗೆ ಕ್ರಿಮಿನಲ್​ ಹಿನ್ನೆಲೆಯಿದೆ. ಯಾರ ಮಾತನ್ನೂ ಕೇಳುವುದಿಲ್ಲ. ಉಕ್ರೇನ್​​ನಲ್ಲಿ ಹುಡುಗಿಯರಿಗಾಗಿ ಹಳ್ಳಿಹಳ್ಳಿ ತಿರುಗುತ್ತಿದ್ದಾನೆ ಎಂದು ಕೇಳಲ್ಪಟ್ಟೆ ಎಂದೂ ಈಕೆ ತಿಳಿಸಿದ್ದಾಳೆ. ಈ ಅತ್ಯಾಚಾರ ನಡೆದಿದ್ದಾಗಿ ಉಕ್ರೇನ್​ನ ಪ್ರಾಸಿಕ್ಯೂಟರ್​​ವೊಬ್ಬರು ದೃಢಪಡಿಸಿದ್ದಾರೆ ಮತ್ತು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ ಎಂದೂ ಸಿಎನ್​ಎನ್​ ಹೇಳಿದೆ.

ಇದನ್ನೂ ಓದಿ: ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಹೋರಾಟ ವಿಚಾರ; ಮಹಿಳೆಯರ ತಲೆ ಮೇಲೆ ಕೈ ಇಟ್ಟು ನ್ಯಾಯ ಕೊಡಿಸುತ್ತೇನೆಂದ ಸಿಎಂ ಬೊಮ್ಮಾಯಿ

Follow us on

Related Stories

Most Read Stories

Click on your DTH Provider to Add TV9 Kannada