
ರಿಯಾದ್, ಅಕ್ಟೋಬರ್ 14: ಯೆಮೆನ್ನ ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ನಡೆಯುತ್ತಿರುವ ಸಶಸ್ತ್ರ ಸಂಘರ್ಷದಲ್ಲಿ ಸೌದಿ ಅರೇಬಿಯಾದೊಂದಿಗೆ ಕೈಜೋಡಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂದಿಟ್ಟಿದ್ದ ಜಂಟಿ ಮಿಲಿಟರಿ ಕಾರ್ಯಾಚರಣೆಯ ಪ್ರಸ್ತಾಪವನ್ನು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಹಾಗೂ ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ (MBS) ತಿರಸ್ಕರಿಸಿದ್ದಾರೆ. ಅಮೆರಿಕದ ಮಧ್ಯಸ್ಥಿಕೆಯ ಮೂಲಕ ನೆತನ್ಯಾಹು ಕಳುಹಿಸಿದ್ದ ಈ ಪ್ರಸ್ತಾಪವನ್ನು, ಸೌದಿ ಅರೇಬಿಯಾ ಮತ್ತು ಅರಬ್ ಜಗತ್ತಿನಲ್ಲಿ ಭುಗಿಲೇಳಬಹುದಾದ ಸಾರ್ವಜನಿಕ ಆಕ್ರೋಶದ ಭೀತಿಯಿಂದಾಗಿ ರಿಯಾದ್ ನಿರಾಕರಿಸಿದೆ ಎಂದು ಇಸ್ರೇಲ್ನ ಪ್ರಮುಖ ದಿನಪತ್ರಿಕೆ ‘ಹಾರೆಟ್ಜ್’ ವರದಿ ಮಾಡಿದೆ.
ಅಮೆರಿಕದ ಮಧ್ಯಂತರ ಚುನಾವಣೆ ಸಮೀಪಿಸುತ್ತಿದ್ದಂತೆ, ಇರಾನ್ ಮೇಲಿನ ಬಾಂಬ್ ದಾಳಿಗಳು ತಗ್ಗಿದ ಬೆನ್ನಲ್ಲೇ ಇಸ್ರೇಲ್ ಹೊಸ ಮಿಲಿಟರಿ ರಂಗವನ್ನು ತೆರೆಯಲು ಯತ್ನಿಸುತ್ತಿತ್ತು. ಈ ಮಿಲಿಟರಿ ಸಹಕಾರದ ಮೂಲಕ ಸೌದಿ ಜೊತೆಗಿನ ಸಂಬಂಧವನ್ನು ಸಹಜ ಸ್ಥಿತಿಗೆ ತರಬಹುದು ಎಂಬ ನೆತನ್ಯಾಹು ಅವರ ಯೋಜನೆಗೆ ಈ ಮೂಲಕ ಹಿನ್ನಡೆಯಾಗಿದೆ.
ಗಾಜಾ ಯುದ್ಧದ ನಂತರ ಅರಬ್ ರಾಷ್ಟ್ರಗಳಲ್ಲಿ ಇಸ್ರೇಲ್ ವಿರುದ್ಧ ತೀವ್ರ ಸಾರ್ವಜನಿಕ ಅಸಮಾಧಾನವಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಇಸ್ರೇಲ್ ಸೈನ್ಯದೊಂದಿಗೆ ಮುಕ್ತವಾಗಿ ಕೈಜೋಡಿಸಿದರೆ ಸಾಮ್ರಾಜ್ಯದೊಳಗೆ ಹಾಗೂ ಇಸ್ಲಾಮಿಕ್ ಜಗತ್ತಿನಲ್ಲಿ ಸೌದಿ ಆಡಳಿತದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಭುಗಿಲೇಳಬಹುದು ಎಂದು ಪ್ರಿನ್ಸ್ ಎಂಬಿಎಸ್ ಅಂದಾಜಿಸಿದ್ದಾರೆ.
ಸ್ವತಂತ್ರ ಪ್ಯಾಲೆಸ್ಟೀನ್ ರಾಷ್ಟ್ರದ ಪಟ್ಟು: ಅಬ್ರಹಾಂ ಒಪ್ಪಂದದಡಿ ಇಸ್ರೇಲ್ ಜೊತೆ ರಾಜತಾಂತ್ರಿಕ ಒಪ್ಪಂದಕ್ಕೆ ಸಹಿ ಹಾಕಲು ಡೊನಾಲ್ಡ್ ಟ್ರಂಪ್ ಸೌದಿಯ ಮೇಲೆ ಒತ್ತಡ ಹೇರುತ್ತಿದ್ದರೂ, ಸ್ವತಂತ್ರ ಪ್ಯಾಲೆಸ್ಟೀನ್ ರಾಷ್ಟ್ರ ರಚನೆಯಾಗದೆ ಯಾವುದೇ ಸಾಮಾನ್ಯೀಕರಣ ಸಾಧ್ಯವಿಲ್ಲ ಎಂದು ಸೌದಿ ಸ್ಪಷ್ಟಪಡಿಸಿದೆ. ಆದರೆ ಇಸ್ರೇಲ್ ಪ್ರಧಾನಿ ನೆತನ್ಯಾಹು ತಮ್ಮ ಇತ್ತೀಚಿನ ಭಾಷಣಗಳಲ್ಲಿ ಪ್ಯಾಲೆಸ್ಟೀನ್ ರಾಷ್ಟ್ರ ರಚನೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪುನರುಚ್ಚರಿಸುತ್ತಿದ್ದಾರೆ.
ಇರಾನ್ ಜೊತೆಗಿನ ರಾಜತಾಂತ್ರಿಕ ಸಮತೋಲನ: ಇತ್ತೀಚೆಗಷ್ಟೇ ಇರಾನ್ ವಿದೇಶಾಂಗ ಸಚಿವರು ಸೌದಿ ಜೊತೆ ಮಾತುಕತೆ ನಡೆಸಿ ಸಂಧಾನಕ್ಕೆ ನೆರವಾಗುವುದಾಗಿ ಭರವಸೆ ನೀಡಿದ್ದಾರೆ. ಈ ಹಂತದಲ್ಲಿ ಇಸ್ರೇಲ್ ಅನ್ನು ಯುದ್ಧಕ್ಕೆ ಎಳೆದುತಂದರೆ ಇಡೀ ಕೊಲ್ಲಿ ವಲಯದಲ್ಲಿ ನೇರ ಇರಾನ್-ಸೌದಿ ಯುದ್ಧ ಭುಗಿಲೇಳುವ ಅಪಾಯವಿದೆ.
ಮತ್ತಷ್ಟು ಓದಿ: ಹೌತಿ ಕ್ಷಿಪಣಿ ದಾಳಿಗಳ ಭೀತಿ: ಬಂಕರ್ಗಳಿರುವ ಅರಮನೆಯಿಂದ ಅರಮನೆಗೆ ಶಿಫ್ಟ್ ಆಗ್ತಿದ್ದಾರೆ ಸೌದಿ ಕ್ರೌನ್ ಪ್ರಿನ್ಸ್
ವಿಮಾನ ನಿಲ್ದಾಣ ಬಂದ್ ವಿಸ್ತರಣೆ: ರಿಯಾದ್ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಭೀಕರ ಕ್ಷಿಪಣಿ ದಾಳಿಯ ನಂತರ, ನಾಗರಿಕ ವಿಮಾನ ಸಂಚಾರದ ರದ್ದತಿಯನ್ನು ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರವು ಶನಿವಾರದವರೆಗೆ ವಿಸ್ತರಿಸಿದೆ.
ತೈಲ ಮಾರುಕಟ್ಟೆ ಮೇಲೆ ಕರಿನೆರಳು: ಸೌದಿಯ ವಾಯುಯಾನ ಮತ್ತು ತೈಲ ಸಂಸ್ಕರಣಾಗಾರಗಳ ಮೇಲೆ ಹೌತಿಗಳು ನಡೆಸುತ್ತಿರುವ ನಿರಂತರ ಡ್ರೋನ್ ದಾಳಿಗಳು ದೇಶದ ಆರ್ಥಿಕತೆಗೆ ಸವಾಲಾಗಿ ಪರಿಣಮಿಸಿವೆ.
2023ರ ಅಕ್ಟೋಬರ್ 7ರ ರಹಸ್ಯ ಬಹಿರಂಗ: 2023ರ ಶರತ್ಕಾಲದಲ್ಲಿ ಸೌದಿ-ಇಸ್ರೇಲ್ ನಡುವೆ ಐತಿಹಾಸಿಕ ಒಪ್ಪಂದ ಬಹುತೇಕ ಅಂತಿಮ ಹಂತಕ್ಕೆ ತಲುಪಿತ್ತು. ಆದರೆ ಇತ್ತೀಚೆಗೆ ‘ವಾಷಿಂಗ್ಟನ್ ಪೋಸ್ಟ್’ ಪ್ರಕಟಿಸಿದ ವರದಿಯ ಪ್ರಕಾರ, ಅಕ್ಟೋಬರ್ 7ರ ಹಮಾಸ್ ದಾಳಿಯ ಸಂಚಿನ ಬಗ್ಗೆ ನೆತನ್ಯಾಹು ಅವರಿಗೆ ಮೊದಲೇ ಎಚ್ಚರಿಕೆ ನೀಡಿದ್ದು ಸೌದಿ ಗುಪ್ತಚರ ಇಲಾಖೆ ಹಾಗೂ ಪ್ರಿನ್ಸ್ ಎಂಬಿಎಸ್. ಆದರೆ ಆ ಎಚ್ಚರಿಕೆಯನ್ನು ನೆತನ್ಯಾಹು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ್ದರು.
ಅಮೆರಿಕದ ನಿಲುವು: ಯೆಮೆನ್ನಲ್ಲಿ ಹೌತಿಗಳ ವಿರುದ್ಧದ ಕಾರ್ಯಾಚರಣೆಗೆ ಅಮೆರಿಕ ಸೇನೆ ನೇರವಾಗಿ ಇಳಿಯಲು ಸಿದ್ಧವಿದ್ದರೂ, ಇಸ್ರೇಲ್ ಸೇನೆಯ ಒಳಗೊಳ್ಳುವಿಕೆಯು ಮಧ್ಯಪ್ರಾಚ್ಯದ ಮುಸ್ಲಿಂ ಮಿತ್ರರಾಷ್ಟ್ರಗಳನ್ನು ಅಮೆರಿಕದಿಂದ ದೂರ ಮಾಡಬಹುದು ಎಂಬ ಲೆಕ್ಕಾಚಾರವೂ ಪೆಂಟಗನ್ನಲ್ಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ