ಬಾಂಗ್ಲಾದೇಶ: ಫೇಸ್ಬುಕ್ ಪೋಸ್ಟ್ನಲ್ಲಿ ಇಸ್ಲಾಂ ಧರ್ಮದ ಅವಹೇಳನ ಆರೋಪ, ಹಿಂದೂಗಳ ಮನೆ, ದೇವಾಲಯ ಮೇಲೆ ದಾಳಿ
ಆಕಾಶ್ ಸಾಹಾ ಎಂಬ ಯುವಕ ಫೇಸ್ಬುಕ್ನಲ್ಲಿ ಪೋಸ್ಟೊಂದು ಹಾಕಿದ್ದು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಮರು ದಾಳಿ ನಡೆಸಿದ್ದಾರೆ.
ಫೇಸ್ಬುಕ್ (Facebook) ಪೋಸ್ಟ್ನಲ್ಲಿ ಇಸ್ಲಾಂ ಧರ್ಮವನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪದ ಮೇಲೆ ಬಾಂಗ್ಲಾದೇಶದಲ್ಲಿ (Bangladesh) ಹಿಂದೂಗಳ ಮೇಲೆ ದಾಳಿ ನಡೆದಿದೆ. ಹಲವಾರು ಮನೆ , ಅಂಗಡಿ ಮತ್ತು ಹಿಂದೂ (Hindu) ದೇಗುಲಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವರದಿಗಳ ಪ್ರಕಾರ ಶುಕ್ರವಾರ ಸಂಜೆ ದಿಗೋಲಿಯಾ ಗ್ರಾಮದಲ್ಲಿ ಮನೆಯೊಂದಕ್ಕೆ ಬೆಂಕಿ ಹಚ್ಚಿದ್ದು ಜನರ ಗುಂಪನ್ನು ಚದುರಿಸಲು ಪೊಲೀಸರು ಎಚ್ಚರಿಕೆ ಗುಂಡು ಹಾರಿಸಿದ್ದಾರೆ. ಇಲ್ಲಿ ಹೆಚ್ಚುವರಿ ಕಾನೂನು ಪಾಲಕರನ್ನು ನಿಯೋಜಿಸಲಾಗಿದ್ದು , ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. ಆಕಾಶ್ ಸಾಹಾ ಎಂಬ ಯುವಕ ಫೇಸ್ಬುಕ್ನಲ್ಲಿ ಪೋಸ್ಟೊಂದು ಹಾಕಿದ್ದು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಮರು ದಾಳಿ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕಾಶ್ ಸಾಹಾ ಮತ್ತು ಅವರ ಅಪ್ಪ ಅಶೋಕ್ ಸಾಹಾ ಅವರನ್ನು ಬಂಧಿಸಿದ್ದಾರೆ. ಆಕಾಶ್ ಸಾಹಾ ಅವರು ಹಜರತ್ ಮುಹಮ್ಮದ್ ಅವರನ್ನು ಅವಹೇಳನ ಮಾಡಿ ಜುಲೈ 14ರಂದು ಫೇಸ್ಬುಕ್ ಪೋಸ್ಟೊಂದನ್ನು ಹಾಕಿದ್ದರು. ಇದರಿಂದ ಕುಪಿತಗೊಂಡ ಜನರ ಗುಂಪೊಂದು ಅಂದು ಮಧ್ಯಾಹ್ನ ಸಾಹಾ ಮನೆ ಮುಂದೆ ಪ್ರತಿಭಟನೆ ನಡೆಸಿ ಅವರ ಮನೆಯ ಕೋಣೆಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಜೂನ್ 18ರಂದು ನಾರೈಲಿಯಲ್ಲಿ ನೂಪುರ್ ಶರ್ಮಾ ಅವರ ಫೋಟೊ ಹಾಕಿ ಬೆಂಬಲಿಸಿದ ವಿದ್ಯಾರ್ಥಿಯೊಬ್ಬರಿಗೆ ಕಾಲೇಜು ಪ್ರಾಂಶುಪಾಲರು ಬೆಂಬಲ ನೀಡಿದ್ದಾರೆ ಎಂಬ ಆರೋಪದಲ್ಲಿ ಅಲ್ಲಿನ ಸ್ಥಳೀಯರು ಪ್ರಾಂಶುಪಾಲರಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ್ದ ಘಟನೆ ವರದಿಯಾಗಿದೆ. ಸುದ್ದಿವಾಹಿನಿಯೊಂದರ ಚರ್ಚೆ ವೇಳೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿದ ಆಕ್ಷೇಪಾರ್ಹ ಹೇಳಿಕೆಗೆ ಜಗತ್ತಿನಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಮುಸ್ಲಿಂ ಪ್ರಾಬಲ್ಯವಿರುವ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ದಾಳಿ ಹೆಚ್ಚುತ್ತಿದ್ದು ಹೆಚ್ಚಿನವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಫೇಕ್ ಪೋಸ್ಟ್ ಅಥವಾ ವದಂತಿಗಳಿಗೆ ಸಂಬಂಧಪಟ್ಟದ್ದಾಗಿದೆ.