Sher Bahadur Deuba: ನೇಪಾಳದ ಪ್ರಧಾನಿ ಪಟ್ಟದಿಂದ ಕೆಳಗಿಳಿದ ಕೆ.ಪಿ.ಶರ್ಮಾ ಒಲಿ; 5ನೇ ಬಾರಿ ಹುದ್ದೆಗೇರಿದ ಶೇರ್ ಬಹದ್ದೂರ್ ದೇವುಬಾ
ಹಿಂದಿನ ಪ್ರಧಾನಿಯಾಗಿದ್ದ ಕೆ.ಪಿ.ಶರ್ಮಾ ಒಲಿಯವರು ಮೇ 21ರಂದು ಸಂಸತ್ತನ್ನು ವಿಸರ್ಜಿಸುವ ನಿರ್ಧಾರ ಮಾಡಿದ್ದರು. ಅದನ್ನು ಸುಪ್ರೀಂಕೋರ್ಟ್ ಅನೂರ್ಜಿತಗೊಳಿಸಿದೆ ಹಾಗೂ ನೇಪಾಳದ ಸಂವಿಧಾನದ ಆರ್ಟಿಕಲ್ 76(5)ರ ಅನ್ವಯ ದೇವುಬಾರನ್ನು ಪ್ರಧಾನಿಯಾಗಿ ನೇಮಕ ಮಾಡಲು ಆದೇಶ ನೀಡಿದೆ.
ನೇಪಾಳದ ಪ್ರಧಾನಮಂತ್ರಿಯಾಗಿ ಕಾಂಗ್ರೆಸ್ನ ಹಿರಿಯ ನಾಯಕ ಶೇರ್ ಬಹದ್ದೂರ್ ದೇವುಬಾ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. 75ವರ್ಷದ ದೇವುಬಾ ಇದು ಐದನೇ ಬಾರಿಗೆ ನೇಪಾಳದ ಪ್ರಧಾನಿ ಪಟ್ಟಕ್ಕೆ ಏರುತ್ತಿದ್ದಾರೆ. ಈ ಹಿಂದೆ ಅವರು 1995-1997, 2001-2002, 2004-2005 ಮತ್ತು 2017ರಿಂದ 2018ರವರೆಗೂ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿ ಅಂದರೆ 2021ರ ಜುಲೈ 13ರಂದು 5ನೇ ಬಾರಿಗೆ ಸುಪ್ರೀಂಕೋರ್ಟ್ ಆದೇಶದ ಅನ್ವಯ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಶೇರ್ ಬಹದ್ದೂರ್ ದೇವುಬಾರನ್ನು ಪ್ರಧಾನಿಯನ್ನಾಗಿ ನೇಮಕ ಮಾಡುವ ಸಂಬಂಧ ಅಧ್ಯಕ್ಷರ ಕಚೇರಿ ಮತ್ತು ದೇವುಬಾ ನಡುವೆ ಸಣ್ಣಮಟ್ಟದ ವಿವಾದ ಉಂಟಾದ ಕಾರಣ ಅವರ ಪ್ರಮಾಣ ವಚನಸ್ವೀಕಾರ ಸಮಾರಂಭದ ಒಂದು ಗಂಟೆಗಳಷ್ಟು ವಿಳಂಬವಾಯಿತು. ಅದಾದ ಬಳಿಕ ನೇಪಾಳದ ಅಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ನೇಮಕಾತಿ ಪತ್ರವನ್ನು ದೇವುಬಾರಿಗೆ ಹಸ್ತಾಂತರಿಸಿದರು. ನಂತರ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.
ಸುಪ್ರೀಂಕೋರ್ಟ್ನ ಆದೇಶದ ಅನ್ವಯ ನೇಪಾಳದ ಪ್ರಧಾನಮಂತ್ರಿಯನ್ನಾಗಿ ಶೇರ್ ಬಹದ್ದೂರ್ ದೇವುಬಾರನ್ನು ನೇಮಕ ಮಾಡುತ್ತಿದ್ದೇವೆ ಎಂದು ಮೊದಲು ಒಂದು ಪತ್ರವನ್ನು ಅಧ್ಯಕ್ಷೆ ವಿದ್ಯಾದೇವಿ ಹೊರಡಿಸಿದರು. ಆದರೆ ಅದರಲ್ಲಿ ಸಂವಿಧಾನದ ಯಾವ ವಿಧಿಯಡಿ ಪ್ರಧಾನಿ ನೇಮಕಾತಿ ಆಗಿದೆ ಎಂಬುದು ಉಲ್ಲೇಖ ಆಗದೆ ಇರುವ ಕಾರಣಕ್ಕೆ ಪತ್ರವನ್ನು ಸ್ವೀಕರಿಸಲು ದೇವುಬಾ ನಿರಾಕರಿಸಿದರು. ಇದೇ ಕಾರಣಕ್ಕೆ ಒಂದಷ್ಟು ಹೊತ್ತು ವಿವಾದ ನಡೆದು, ನಂತರ ವಿದ್ಯಾ ದೇವಿ ಭಂಡಾರಿ ಬೇರೆ ನೇಮಕಾತಿ ಪತ್ರವನ್ನು ನೀಡಿದರು.
ಸುಪ್ರೀಂಕೋರ್ಟ್ ಆದೇಶವೇನು? ಹಿಂದಿನ ಪ್ರಧಾನಿಯಾಗಿದ್ದ ಕೆ.ಪಿ.ಶರ್ಮಾ ಒಲಿಯವರು ಮೇ 21ರಂದು ಸಂಸತ್ತನ್ನು ವಿಸರ್ಜಿಸುವ ನಿರ್ಧಾರ ಮಾಡಿದ್ದರು. ಅದನ್ನು ಸುಪ್ರೀಂಕೋರ್ಟ್ ಅನೂರ್ಜಿತಗೊಳಿಸಿದೆ ಹಾಗೂ ನೇಪಾಳದ ಸಂವಿಧಾನದ ಆರ್ಟಿಕಲ್ 76(5)ರ ಅನ್ವಯ ದೇವುಬಾರನ್ನು ಪ್ರಧಾನಿಯಾಗಿ ನೇಮಕ ಮಾಡಲು ಆದೇಶ ನೀಡಿದೆ. ನೇಪಾಳ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಚೋಲೇಂದ್ರ ಸುಷ್ಮರ್ ರಾಣಾ ನೇತೃತ್ವದ ಸಾಂವಿಧಾನಿಕ ಪೀಠ ಈ ತೀರ್ಪನ್ನು ನೀಡಿದೆ. ಕೆ.ಪಿ.ಶರ್ಮಾ ತಾವೇ ಪ್ರಧಾನಿಯಾಗಿ ಮುಂದುವರಿಯಲು ಪ್ರಯತ್ನಿಸುವುದು ಅಸಾಂವಿಧಾನಿಕ ಎಂದು ಹೇಳಿದೆ. ಇದೀಗ ನೇಮಕವಾಗಿರುವ ಶೇರ್ ಬಹದ್ದೂರ್ ದೇವುಬಾ, 30 ದಿನಗಳ ಒಳಗೆ ಸಂಸತ್ತಿನಲ್ಲಿ ಬಹುಮತ ಸಾಬೀತು ಮಾಡಿಕೊಳ್ಳಬೇಕು.
ಇದನ್ನೂ ಓದಿ: Nepal Political Crisis: ಕೆಪಿ ಶರ್ಮಾ ಒಲಿಗೆ ಮತ್ತೆ ಒಲಿದ ನೇಪಾಳದ ಪ್ರಧಾನಿ ಪಟ್ಟ
Sher Bahadur Deuba Takes oath ad Nepal Prime Minister
Published On - 11:31 am, Wed, 14 July 21