ಪಾಕಿಸ್ತಾನದಲ್ಲಿ ಉಗ್ರರ ದಾಳಿಗೆ ಸ್ಫೋಟಗೊಂಡ ಬಸ್; ಚೀನಾದ ನಾಲ್ವರು ಇಂಜಿನಿಯರ್ಗಳು ಸೇರಿ 8 ಮಂದಿ ಸಾವು
ಪಾಕಿಸ್ತಾನ ಸೇನೆಯ ಮೇಲೆ ಮಂಗಳವಾರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಯೋತ್ಪಾದಕರು ದಾಳಿ ನಡೆಸಿ, ಓರ್ವ ಕ್ಯಾಪ್ಟನ್ ಸೇರಿ 11 ಯೋಧರನ್ನು ಕೊಂದಿದ್ದರು. ದಾಳಿ ನಡೆದ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಕೆಲ ನಾಗರಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ.
ಪಾಕಿಸ್ತಾನದ ಉತ್ತರ ಪ್ರಾಂತ್ಯದಲ್ಲಿ ಭೀಕರ ಉಗ್ರದಾಳಿ ನಡೆದಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಚೀನಾದ ಇಂಜಿನಿಯರ್ಗಳನ್ನು ಮತ್ತು ಪಾಕಿಸ್ತಾನದ ಸೈನಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಐಇಡಿ (IED) ದಾಳಿಯಾಗಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಬಸ್ ಅಲ್ಲಿಯೇ ಇದ್ದ ಆಳವಾದ ಕಂದಕಕ್ಕೆ ಬಿದ್ದಿದೆ. ಇದರಲ್ಲಿದ್ದ ಒಟ್ಟು ಎಂಟು ಮಂದಿ ಮೃತಪಟ್ಟಿದ್ದು, ಅದರಲ್ಲಿ ನಾಲ್ಕು ಜನರು ಚೀನಾದ ಇಂಜಿನಿಯರ್ಗಳೇ ಆಗಿದ್ದು, ನಾಲ್ವರು ಪಾಕಿಸ್ತಾನದ ಸೈನಿಕರು ಎನ್ನಲಾಗಿದೆ. ಇನ್ನು ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಬಹುದೆಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಕೊಹಿಸ್ತಾನ ಜಿಲ್ಲೆಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸಿಂಧೂ ನದಿಗೆ ನಿರ್ಮಾಣವಾಗುತ್ತಿರುವ ದಾಸು ಅಣೆಕಟ್ಟು ನಿರ್ಮಾಣಕಾರ್ಯ ನಡೆಸುತ್ತಿರುವ ಚೀನಾದ ಸುಮಾರು 30 ಇಂಜಿನಿಯರ್ಗಳು, ಪಾಕ್ನ ಕೆಲವು ಸೈನಿಕರು ಮತ್ತು ಹಲವು ಕಾರ್ಮಿಕರು ಈ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಸ್ಫೋಟ ಹೇಗಾಯಿತು ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಉಗ್ರು ಬಸ್ನೊಳಗೆ ಐಇಡಿ ಇರಿಸಿದ್ದರೋ? ಅಥವಾ ಮಾರ್ಗಮಧ್ಯೆ ಎಸೆಯಲ್ಪಟಿತೋ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಸ್ಫೋಟದ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆಗಳು ಚುರುಕಾಗಿ ನಡೆದಿವೆ. ಅನೇಕರನ್ನು ಕಂದಕದಿಂದ ಎತ್ತಿ ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಎಂದೂ ಅಲ್ಲಿನ ಮಾಧ್ಯಮಗಳು ಹೇಳಿವೆ.
ಇನ್ನು ಪಾಕಿಸ್ತಾನ ಸೇನೆಯ ಮೇಲೆ ಮಂಗಳವಾರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಯೋತ್ಪಾದಕರು ದಾಳಿ ನಡೆಸಿ, ಓರ್ವ ಕ್ಯಾಪ್ಟನ್ ಸೇರಿ 11 ಯೋಧರನ್ನು ಕೊಂದಿದ್ದರು. ದಾಳಿ ನಡೆದ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಕೆಲ ನಾಗರಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಮೃತ ಸೇನಾಧಿಕಾರಿಯನ್ನು ಕ್ಯಾಪ್ಟನ್ ಅಬ್ದುಲ್ ಬಾಸಿತ್ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಕನಿಷ್ಠ 15 ಯೋಧರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: AAP: ಗೋವಾದಲ್ಲಿ ಅಧಿಕಾರ ಸ್ಥಾಪಿಸಲು ಸಜ್ಜಾದ ಅರವಿಂದ್ ಕೇಜ್ರಿವಾಲ್; ಜನರಿಗೆ ದಿನದ 24 ಗಂಟೆಯೂ ಉಚಿತ ವಿದ್ಯುತ್ ಭರವಸೆ