ಓಮನ್ ಕರಾವಳಿಯಲ್ಲಿ 24 ಭಾರತೀಯ ನಾವಿಕರಿದ್ದ ಹಡಗಿನಲ್ಲಿ ಬೆಂಕಿ ಅವಘಡ

ಓಮನ್ ಕರಾವಳಿಯ ಬಳಿ ಭೀಕರ ದಾಳಿಗೆ ಒಳಗಾಗಿ ಅಗ್ನಿ ಅವಘಡಕ್ಕೀಡಾದ ಸರಕು ಸಾಗಣೆ ಹಡಗು ಮತ್ತು ಅದರಲ್ಲಿರುವ 24 ಭಾರತೀಯ ನಾವಿಕರ ರಕ್ಷಣೆಗೆ ಭಾರತ ಕ್ರಮಗಳನ್ನು ಕೈಗೊಂಡಿದೆ. ಒಮಾನ್ ಕರಾವಳಿಯ ಅಂತಾರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಚಲಿಸುತ್ತಿದ್ದ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಲಾಗಿದೆ. ಈ ದಾಳಿಯ ಬೆನ್ನಲ್ಲೇ ಹಡಗಿನಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಹಡಗು ಹೊತ್ತಿ ಉರಿದಿದೆ. ಈ ಹಡಗಿನಲ್ಲಿ 24 ಭಾರತೀಯ ನಾವಿಕರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಓಮನ್ ಕರಾವಳಿಯಲ್ಲಿ 24 ಭಾರತೀಯ ನಾವಿಕರಿದ್ದ ಹಡಗಿನಲ್ಲಿ ಬೆಂಕಿ ಅವಘಡ
Cargo Vessel With 24 Indians Catches Fire
Image Credit source: x

Updated on: Jun 08, 2026 | 6:56 PM

ನವದೆಹಲಿ, ಜೂನ್ 8: ಓಮನ್ ಕರಾವಳಿಯ ಹಾರ್ಮುಜ್ ಜಲಸಂಧಿಯ ಬಳಿ ವಾಣಿಜ್ಯ ಸರಕು ಹಡಗಿನ ಮೇಲೆ ಶಂಕಿತ ಡ್ರೋನ್ ಅಥವಾ ಕ್ಷಿಪಣಿ ದಾಳಿ ನಡೆದಿದೆ. 24 ಭಾರತೀಯ ನಾವಿಕರು ಈ ಹಡಗಿನಲ್ಲಿದ್ದರು. ಈ ದಾಳಿಯು ಹಡಗಿನ ಎಂಜಿನ್ ಕೋಣೆಯಲ್ಲಿ ಭಾರಿ ಸ್ಫೋಟಕ್ಕೆ ಕಾರಣವಾಯಿತು. ಇದರಿಂದ ಹಡಿಗಿನಲ್ಲಿ ಬೆಂಕಿ ಹೊತ್ತಿಕೊಂಡಿತು, ಇದು ಸಿಬ್ಬಂದಿಗಳಲ್ಲಿ ಭೀತಿಯನ್ನುಂಟುಮಾಡಿತು. ಇರಾನ್ (Iran) ಮತ್ತು ಇಸ್ರೇಲ್ ನಡುವಿನ ಯುದ್ಧವು ಪುನರಾರಂಭಗೊಂಡಿರುವ ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭದ್ರತಾ ಆತಂಕದ ಮಧ್ಯೆ ಈ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಪಲಾವ್ ಧ್ವಜ ಹೊತ್ತ ಸರಕು ಹಡಗು ಓಮನ್ ಕರಾವಳಿಯಿಂದ ಸುಮಾರು 15 ನಾಟಿಕಲ್ ಮೈಲು ದೂರದಲ್ಲಿದ್ದಾಗ ಅಪಘಾತಕ್ಕೀಡಾಯಿತು. ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ ಹಡಗಿನ ಎಂಜಿನ್ ಕೋಣೆಯಲ್ಲಿ ದೊಡ್ಡ ರಂಧ್ರ ಉಂಟಾಗಿ, ಅದು ನೀರಿನಿಂದ ಬೇಗನೆ ತುಂಬಿ ಸಮತೋಲನ ಕಳೆದುಕೊಂಡಿತು. ಸ್ಫೋಟದ ನಂತರ, ಎಂಜಿನ್ ಕೋಣೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮಾರ್ಗ ತೆರೆಯುವ ಸುಳಿವು ನೀಡಿದ ಟ್ರಂಪ್

ಪರಿಸ್ಥಿತಿ ಹದಗೆಡುತ್ತಿದ್ದಂತೆ, ಸಿಬ್ಬಂದಿ ತುರ್ತು ಕರೆಗಳನ್ನು ಮಾಡಿದರು. ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (FSUI) ದಾಳಿಯನ್ನು ದೃಢಪಡಿಸಿತು. ಹಡಗಿನಲ್ಲಿ ಭಾರತೀಯ ನಾವಿಕರು ಇದ್ದಾರೆ ಎಂದು ಒಕ್ಕೂಟ ತಿಳಿಸಿದೆ. ಮೂಲಗಳ ಪ್ರಕಾರ, ದಾಳಿಯಲ್ಲಿ ಹಡಗಿನ ಲೈಫ್ ಬೋಟ್ ಕೂಡ ಹಾನಿಗೊಳಗಾಗಿದ್ದು, ನಾವಿಕರನ್ನು ರಕ್ಷಿಸುವುದು ಕಷ್ಟಕರವಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಪ್ರಸ್ತುತ ನಡೆಯುತ್ತಿವೆ. ಸದ್ಯದ ಮಟ್ಟಿಗೆ ಎಲ್ಲ ಭಾರತೀಯರೂ ಸುರಕ್ಷಿತವಾಗಿದ್ದಾರೆ.

ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಭಾರತ ಸರ್ಕಾರ ಮತ್ತು ಭಾರತೀಯ ನೌಕಾಪಡೆ ತಕ್ಷಣವೇ ಕಾರ್ಯಪ್ರವೃತ್ತವಾಗಿವೆ. ಆ ಪ್ರದೇಶದಲ್ಲಿ ಕಡಲ್ಗಳ್ಳರ ನಿಗ್ರಹ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಈಗಾಗಲೇ ಗಸ್ತಿನಲ್ಲಿದ್ದ ಭಾರತೀಯ ನೌಕಾಪಡೆಯ ಅತ್ಯಾಧುನಿಕ ಯುದ್ಧನೌಕೆ ಮತ್ತು ಕಡಲ ಗಸ್ತು ವಿಮಾನವನ್ನು (P-8I) ತಕ್ಷಣವೇ ಆಪತ್ತಿನಲ್ಲಿರುವ ಹಡಗಿನ ರಕ್ಷಣೆಗೆ ಧಾವಿಸುವಂತೆ ಸೂಚಿಸಲಾಗಿದೆ. ಓಮನ್ ದೇಶದ ನೌಕಾಪಡೆ ಮತ್ತು ಪ್ರಾದೇಶಿಕ ಕಡಲ ರಕ್ಷಣಾ ಸಮನ್ವಯ ಕೇಂದ್ರಗಳ (MRCC) ಜೊತೆಗೆ ಭಾರತೀಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿವೆ; ಟ್ರಂಪ್ ಘೋಷಣೆ

ನಾವಿಕರ ಪ್ರಸ್ತುತ ಆರೋಗ್ಯ ಸ್ಥಿತಿಯ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ಹೊರಬರಬೇಕಾಗಿದೆ. ಆದರೆ ಭಾರತೀಯ ನೌಕಾಪಡೆಯು ಅವರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಇತ್ತೀಚಿನ ತಿಂಗಳುಗಳಲ್ಲಿ ಕೆಂಪು ಸಮುದ್ರ ಮತ್ತು ಅರೇಬಿಯನ್ ಸಮುದ್ರದ ಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಗಣನೀಯವಾಗಿ ಹೆಚ್ಚಾಗಿದ್ದು, ಜಾಗತಿಕ ವ್ಯಾಪಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us