
ಇಂಗ್ಲೆಂಡ್ ದೇಶದ ಪ್ಲೈಮೌತ್ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಂದು ಮಗುವೂ ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ. ನೈರುತ್ಯ ಇಂಗ್ಲೆಂಡ್ ಪ್ರಾಂತ್ಯದ ಪ್ಲೈಮೌತ್ನಲ್ಲಿ ಗುರುವಾರ ಸಂಜೆ ದುರ್ಘಟನೆ ನಡೆದಿದ್ದು, ಇಬ್ಬರು ಮಹಿಳೆಯರು, ಮೂವರು ಪುರುಷರು ಸ್ಥಳದಲ್ಲೇ ಬಲಿಯಾಗಿದ್ದಾರೆ. ಈ ಪೈಕಿ ಸಾವಿಗೀಡಾದ ಓರ್ವನನ್ನು ಗುಂಡಿನ ದಾಳಿಗೈದ ಆಗಂತುಕನೇ ಇರಬೇಕು ಎಂದು ಶಂಕಿಸಲಾಗಿದೆ. ಮತ್ತೊಬ್ಬರು ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಈ ಘಟನೆ ಬಗ್ಗೆ ಮಾಹಿತಿ ನೀಡಿರುವ ಡೆವೋನ್ ಮತ್ತು ಕಾರ್ನ್ವಾಲ್ ಪೊಲೀಸರು 6 ಮಂದಿ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. 10 ವರ್ಷದೊಳಗಿನ ಒಂದು ಮಗುವನ್ನೂ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಅತ್ಯಂತ ಗಂಭೀರ ಹಾಗೂ ಚಿಂತನೀಯ ವಿಷಯ ಎಂದು ಕರೆದಿರುವ ಅವರು, ಇದು ಉಗ್ರಗಾಮಿಗಳ ಕೃತ್ಯವಲ್ಲ ಎಂದೂ ಹೇಳಿದ್ದಾರೆ.
ಸಾಧಾರಣವಾಗಿ ಆ ಭಾಗದಲ್ಲಿ ಇಂತಹ ಕೃತ್ಯಗಳು ಕಡಿಮೆಯಾಗಿದ್ದು, ಬರೋಬ್ಬರಿ 11 ವರ್ಷಗಳ ನಂತರ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಲ್ಲಿನ ಹೋಮ್ ಸೆಕ್ರೆಟರಿ ಪ್ರೀತಿ ಪಟೇಲ್, ಪ್ಲೈಮೌತ್ನಲ್ಲಿ ನಡೆದ ದುರ್ಘಟನೆ ಅತ್ಯಂತ ಆತಂಕಕಾರಿಯಾಗಿದ್ದು, ಅದಕ್ಕಾಗಿ ವಿಷಾದಿಸುತ್ತೇನೆ. ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಮನೆಯವರಿಗೆ ಸಾಂತ್ವಾನ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಈ ಘಟನೆಯನ್ನು ಕಣ್ಣಾರೆ ಕಂಡ ಶಾರೋನ್ ಟರ್ನರ್ (57 ವರ್ಷ) ಅಲ್ಲಿ ಏನೇನು ನಡೆಯಿತು ಎನ್ನುವುದನ್ನು ಹಂಚಿಕೊಂಡಿದ್ದಾರೆ. ಶಸ್ತ್ರ ಹಿಡಿದುಕೊಂಡು ಬಂದಿದ್ದ ವ್ಯಕ್ತಿ ಬಾಗಿಲನ್ನು ಒದ್ದು ಒಳಗೆ ಪ್ರವೇಶಿಸಿ ತಕ್ಷಣ ಗುಂಡಿನ ಮಳೆ ಸುರಿಸಿದ. ಮನೆಯೊಳಗಿದ್ದ ತಾಯಿ, ಮಗುವನ್ನು ಗುಂಡಿಕ್ಕಿ ಕೊಂದ. ಆತ ಕಪ್ಪು ಮತ್ತು ಬೂದು ಬಣ್ಣದ ಧಿರಿಸು ತೊಟ್ಟಿದ್ದ ಎಂದು ಹೇಳಿದ್ದಾರೆ. ಬಳಿಕ ಅಲ್ಲಿಂದ ಹೊರಬಂದ ಆತ ಮತ್ತಿಬ್ಬರಿಗೆ ಗುಂಡಿಕ್ಕಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಮುಂದುವರೆದಿದ್ದು, ದುರ್ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸುಮಾರು 11 ವರ್ಷಗಳ ನಂತರ ಈ ಬಗೆಯ ಘಟನೆ ನಡೆದಿರುವುದರಿಂದ ಸಹಜವಾಗಿಯೇ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ.
(Shocking Incident Six people killed in mass shooting in England Plymouth)
ಇದನ್ನೂ ಓದಿ:
ಬಿಗಿ ಉಡುಪು ಧರಿಸಿದ್ದಕ್ಕೆ ಯುವತಿಯ ಹತ್ಯೆ; ಕೊಲೆ ಮಾಡಿದ್ದು ನಾವಲ್ಲ ಎಂದ ತಾಲಿಬಾನ್ ಉಗ್ರರು
ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷ ಮತ್ತವರ ಪತ್ನಿಯ ಹತ್ಯೆ; ಉಗ್ರರ ಗುಂಡಿಗೆ ಇಬ್ಬರೂ ಬಲಿ