Sri Lanka Tourism: ರಾಮಾಯಣ ಪ್ರವಾಸೋದ್ಯಮ; ಭಾರತೀಯ ಪ್ರವಾಸಿಗರ ಸೆಳೆಯಲು ಶ್ರೀ ಲಂಕಾ ಮಾಸ್ಟರ್ ಪ್ಲಾನ್!
ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ರಾಮಾಯಣಕ್ಕೆ ಸಂಬಂಧಿಸಿದ 50 ತಾಣಗಳನ್ನು ಆಯ್ಕೆ ಮಾಡಲಾಗಿದ್ದು, ಇವುಗಳ ಬಗ್ಗೆ ಭಾರತದಲ್ಲಿ ಪ್ರಚಾರ ಮಾಡಲಾಗುವುದು ಎಂದು ಶ್ರೀ ಲಂಕಾ ತಿಳಿಸಿರುವುದಾಗಿ ವರದಿಯಾಗಿದೆ. ಹಣಕಾಸು ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರುವುದಕ್ಕಾಗಿ ಶ್ರೀಲಂಕಾ ಸರ್ಕಾರ ಪ್ರವಾಸೋದ್ಯಮದ ಉತ್ತೇಜನಕ್ಕೆ ಕ್ರಮ ಕೈಗೊಳ್ಳುತ್ತಿದೆ.
ಕೊಲಂಬೊ: ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ರಾಮಾಯಣಕ್ಕೆ (Ramayana) ಸಂಬಂಧಿಸಿದ 50 ತಾಣಗಳನ್ನು ಆಯ್ಕೆ ಮಾಡಲಾಗಿದ್ದು, ಇವುಗಳ ಬಗ್ಗೆ ಭಾರತದಲ್ಲಿ ಪ್ರಚಾರ ಮಾಡಲಾಗುವುದು ಎಂದು ಶ್ರೀ ಲಂಕಾ (Sri Lanka) ತಿಳಿಸಿರುವುದಾಗಿ ವರದಿಯಾಗಿದೆ. ಹಣಕಾಸು ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರುವುದಕ್ಕಾಗಿ ಶ್ರೀಲಂಕಾ ಸರ್ಕಾರ ಪ್ರವಾಸೋದ್ಯಮದ ಉತ್ತೇಜನಕ್ಕೆ ಕ್ರಮ ಕೈಗೊಳ್ಳುತ್ತಿದೆ. ಮುಖ್ಯವಾಗಿ ಭಾರತೀಯ ಪ್ರವಾಸಿಗರು ಹಾಗು ಬೌದ್ಧ ಪ್ರವಾಸಿಗರನ್ನು ಸೆಳೆಯುವುದು ಶ್ರೀ ಲಂಕಾದ ಉದ್ದೇಶವಾಗಿದೆ. ‘ನಾವು ರಾಮಾಯಣಕ್ಕೆ ಸಂಬಂಧಿಸಿದ 50 ದ ಪ್ರವಾಸಿ ತಾಣಗಳಗನ್ನು ಗುರುತಿಸಿ ಭಾರತದಲ್ಲಿ ಪ್ರಚಾರ ಮಾಡಲು ಮುಂದಾಗಿದ್ದೇವೆ. ಶ್ರೀಲಂಕಾದ ವಿಶಿಷ್ಟ ಸಂಸ್ಕೃತಿ, ಪ್ರವಾಸಿ ತಾಣಗಳು ಭಾರತೀಯರನ್ನು ಮಾತ್ರವಲ್ಲದೆ ಬೌದ್ಧ ಧರ್ಮದವರನ್ನೂ ಆಕರ್ಷಿಸುತ್ತದೆ. ಭಾರತ ಮಾತ್ರವಲ್ಲದೆ ಇಂಗ್ಲೆಂಡ್, ಫ್ರಾನ್ಸ್, ಕೆನಡಾ ಮತ್ತು ಸೌತ್ ಆಫ್ರಿಕಾ ಪ್ರವಾಸಿಗರನ್ನು ಸೆಳೆಯುವುದು ನಮ್ಮ ಉದ್ದೇಶ’ ಎಂದು ಶ್ರೀಲಂಕಾ ಪ್ರವಾಸೋದ್ಯಮ (Tourism) ಪ್ರಚಾರದ ಸಹಾಯಕ ನಿರ್ದೇಶಕ ಜೀವನ ಫೆರ್ನಾಂಡೋ ತಿಳಿಸಿದ್ದಾರೆ.
2023ರಲ್ಲಿ 13,759 ಭಾರತೀಯ ಪ್ರವಾಸಿಗರು ಶ್ರೀ ಲಂಕಾಕ್ಕೆ ಭೇಟಿ ನೀಡಿದ್ದಾರೆ. ಶ್ರೀ ಲಂಕಾ ಪ್ರವಾಸೋದ್ಯಮದ ಇತಿಹಾಸದಲ್ಲೇ ವರ್ಷವೊಂದರಲ್ಲಿ ಇಷ್ಟೊಂದು ಸಂಖ್ಯೆಯ ಭಾರತದ ಪ್ರವಾಸಿಗರು ಭೇಟಿ ನೀಡಿದ್ದು ಇದೇ ಮೊದಲಾಗಿದೆ. ‘ಪ್ರವಾಸಕ್ಕೆಂದು ಬಂದ ಭಾರತೀಯರು ಕನಿಷ್ಠ 1 ರಾಮಾಯಣದ ಪ್ರವಾಸಿ ತಾಣಕ್ಕೆ ಭೇಟಿ ನೀಡುತ್ತಾರೆ. ಕಳೆದ ವರ್ಷವೂ ಭಾರತೀಯ ಪ್ರವಾಸಿಗರನ್ನು ಸೆಳೆಯಲು ರಾಮಾಯಣಕ್ಕೆ ಸಂಬಂಧಿಸಿದ ಹಲವಾರು ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ಮಾಡಿದ್ದೆವು. ಹಾಗೆಯೇ ಬೌದ್ಧ ಪ್ರವಾಸಿಗರಿಗಾಗಿ ‘ಕಂಡಿ ಇಸಾಲ ಪರಹೆರ’ (ಶ್ರೀ ಲಂಕಾದ ಬುದ್ಧ ಉತ್ಸವ) ವನ್ನು 7 ವಿವಿಧ ಭಾಷೆಗಳಲ್ಲಿ ಲೈವ್ ಸ್ಟ್ರೀಮ್ ಮಾಡಿದ್ದೆವು. ಈ ಬಾರಿ ಈ ಉತ್ಸವವನ್ನು 20 ಭಾಷೆಗಳಲ್ಲಿ ಪ್ರಚಾರ ಮಾಡಬೇಕೆಂದುಕೊಂಡಿದ್ದೇವೆ” ಎಂದು ಫೆರ್ನಾಂಡೋ ಹೇಳಿದ್ದಾರೆ.
2022 ರಲ್ಲಿ ಒಟ್ಟು 7,19,978 ಪ್ರವಾಸಿಗರು ಶ್ರೀ ಲಂಕಾಕ್ಕೆ ಭೇಟಿ ನೀಡಿದ್ದರು. ಅದರಲ್ಲಿ 1,23,004 ಪ್ರವಾಸಿಗರು ಭಾರತೀಯರೇ ಆಗಿದ್ದರು. ಪ್ರವಾಸ ಅಷ್ಟೇ ಅಲ್ಲದೆ ಭಾರತೀಯರು ಡೆಸ್ಟಿನೇಷನ್ ವೆಡ್ಡಿಂಗ್ ಹೆಸರಲ್ಲಿ ಮದುವೆ ಮಾಡಿಕೊಳ್ಳಲು ಶ್ರೀ ಲಂಕಾಕ್ಕೆ ಹೋಗುವುದೂ ಕಂಡು ಬಂದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Sat, 4 February 23