Booker Prize 2022: ಶ್ರೀಲಂಕಾ ಸಾಹಿತಿ ಶೆಹನ್ ಕರುಣತಿಲಕಗೆ ಬೂಕರ್ ಪ್ರಶಸ್ತಿ; ಅಂತರ್ಯುದ್ಧದ ಕ್ರೌರ್ಯಕ್ಕೆ ಅಕ್ಷರದ ಕನ್ನಡಿ ಹಿಡಿದ ಲೇಖಕ
Shehan Karunatilaka: ಯುದ್ಧದ ಛಾಯಾಗ್ರಾಹಕ (ವಾರ್ ಫೋಟೊಗ್ರಾಫರ್) ಮತ್ತು ಜೂಜುಕೋರ ಎನ್ನುವ ಎರಡು ಬಿರುದುಗಳಿರುವ ಅವನು ಒಂದು ದಿನ ಸತ್ತು ಮೇಲೇಳುತ್ತಾನೆ ಎಂಬಲ್ಲಿಂದ ಈ ಕಾದಂಬರಿ ಆರಂಭವಾಗುತ್ತದೆ.
ಶ್ರೀಲಂಕಾದ ಲೇಖಕ ಶೆಹನ್ ಕರುಣತಿಲಕಗೆ (Sri Lankan writer Shehan Karunatilaka) ಪ್ರಸಕ್ತ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ (Booker Prize 2022) ಸಂದಿದೆ. ಅವರ 2ನೇ ಕಾದಂಬರಿ ‘ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೀಡಾ’ಗೆ (The Seven Moons of Maali Almeida) ಈ ಗೌರವ ಸಂದಿದೆ. ಯುದ್ಧದ ಛಾಯಾಚಿತ್ರಗಳನ್ನು ತೆಗೆಯುವ ಫೋಟೊಗ್ರಾಫರ್ ಒಬ್ಬನ ಸಾವಿನ ನಂತರದ ಪಯಣದ ಕಥೆಯನ್ನು ಈ ಕಾದಂಬರಿಯು ನಿರೂಪಿಸುತ್ತಾ ಹೋಗುತ್ತದೆ.
ಇಂಗ್ಲೆಂಡ್ನ ರಾಣಿ ಕಾನ್ಸರ್ಟ್ ಕೆಮಿಲ ಅವರಿಂದ ಇಂಗ್ಲಿಷ್ ಸಾಹಿತ್ಯ ನೀಡುವ ಮಹತ್ತರ ಕರುಣತಿಲಕ ಪಡೆದುಕೊಳ್ಳಲಿದ್ದಾರೆ. 2019ರ ನಂತರ ಇದೇ ಮೊದಲ ಬಾರಿಗೆ ನೇರವಾಗಿ (ಭೌತಿಕ) ಪುರಸ್ಕಾರವನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯು 50,000 ಪೌಂಡ್ (ಸುಮಾರು 46 ಕೋಟಿ ಭಾರತೀಯ ರೂಪಾಯಿ) ಮೊತ್ತವನ್ನು ಒಳಗೊಂಡಿದೆ.
1990ರ ದಶಕದ ಕಥಾಹಂದರವನ್ನು ಈ ಕಾದಂಬರಿ ಒಳಗೊಂಡಿದೆ. ಈ ಕಥನದ ನಾಯಕ ಮಾಲಿ ಅಲ್ಮೀಡಾ ಸಲಿಂಗಕಾಮಿ. ಯುದ್ಧದ ಛಾಯಾಗ್ರಾಹಕ (ವಾರ್ ಫೋಟೊಗ್ರಾಫರ್) ಮತ್ತು ಜೂಜುಕೋರ ಎನ್ನುವ ಎರಡು ಬಿರುದುಗಳಿರುವ ಅವನು ಒಂದು ದಿನ ಸತ್ತು ಮೇಲೇಳುತ್ತಾನೆ (wakes up dead) ಎಂಬಲ್ಲಿಂದ ಕಥೆ ಆರಂಭವಾಗುತ್ತದೆ.
ತನ್ನ ಆಪ್ತರನ್ನು ಭೇಟಿಯಾಗಿ ತಾನೆಲ್ಲಿ ಚಿತ್ರಗಳನ್ನು ಬಚ್ಚಿಟ್ಟಿದ್ದೇನೆ ಎಂದು ತೋರಿಸಿಕೊಡಲು ಅವನಿಗೆ 7 ತಿಂಗಳ ಕಾಲಾವಕಾಶ ಇರುತ್ತದೆ. ಈ ಚಿತ್ರಗಳು ದೇಶದ ಆಂತರಿಕ ಯುದ್ಧದ ಕ್ರೌರ್ಯಕ್ಕೆ ದಾಖಲೆಗಳಾಗಿರುತ್ತವೆ.
‘ಏಳು ತಿಂಗಳು ಎನ್ನುವುದು ಭವಿಷ್ಯದ ಬಗ್ಗೆ ನನಗಿರುವ ಭರವಸೆಯ ದ್ಯೋತಕ. ಭ್ರಷ್ಟಾಚಾರ, ಜನಾಂಗೀಯ ಹತ್ಯೆ ಮತ್ತು ಕುಟುಂಬ ರಾಜಕಾರಣಗಳು ಈವರೆಗೆ ಶ್ರೀಲಂಕಾಕ್ಕೆ ನೆರವಾಗಿಲ್ಲ. ಮುಂದೆಯೂ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ’ ಎಂದು ಕರುಣತಿಲಕ ಬಹುಮಾನ ಸ್ವೀಕರಿಸಿದ ನಂತರ ಮಾಡಿದ ಭಾಷಣದಲ್ಲಿ ಹೇಳಿದರು. ‘ನನ್ನ ಕಾದಂಬರಿಯನ್ನು ಶ್ರೀಲಂಕಾದ ಪುಸ್ತಕ ಅಂಗಡಿಗಳಲ್ಲಿ ರಮ್ಯ ಅಥವಾ ಭ್ರಾಮಕ (ಫ್ಯಾಂಟಸಿ) ವಿಭಾಗದಲ್ಲಿ ಮಾರಲಾಗುತ್ತದೆ. ಇದನ್ನು ವಾಸ್ತವ (ರಿಯಲಿಸಂ) ಅಥವಾ ರಾಜಕೀಯ ವಿಡಂಬನೆ ವಿಭಾಗದಲ್ಲಿ ಪರಿಗಣಿಸುವುದಿಲ್ಲ ಎಂದು ನಂಬಿದ್ದೇನೆ’ ಎಂದು ಅವರು ನುಡಿದರು.
ಬೂಕರ್ ಪ್ರಶಸ್ತಿಗೆ ಈ ವರ್ಷ ಬ್ರಿಟಿಷ್ ಲೇಖಕ ಅಲನ್ ಗಾರ್ನರ್ ಅವರ ಟ್ರೀಕಲ್ ವಾಕರ್, ಜಿಂಬಾಗ್ವೆಯ ಲೇಖಕ ನೊವಯಲೆಟ್ ಬುಲಾವಾಯೊ ಅವರ ಗ್ಲೋರಿ, ಐರಿಷ್ ಲೇಖಕಿ ಕ್ಲೇರ್ ಕೀಗನ್ ಅವರ ಸ್ಮಾಲ್ ಥಿಂಗ್ಸ್ ಲೈಕ್ ದೀಸ್, ಅಮೆರಿಕ ಲೇಖಕ ಪರ್ಸಿವಲ್ ಎವರ್ಗ್ರೆಟ್ ಅವರ ದಿ ಟ್ರೀಸ್ ಮತ್ತು ಅಮೆರಿಕ ಲೇಖಕಿ ಎಲಿಜಬೆತ್ ಸ್ಟ್ರೌಟ್ ಅವರ ಓಹ್ ವಿಲಿಯಮ್ಸ್ ಪುಸ್ತಕಗಳಲ್ಲಿ ಸ್ಪರ್ಧೆಯಲ್ಲಿದ್ದವು.
ಕರುಣತಿಲಕೆ ಪುಸ್ತಕ ಕುರಿತು ಮಾತನಾಡಿದ ಆಯ್ಕೆ ಸಮಿತಿಯ ಅಧ್ಯಕ್ಷ ನೀಲ್ ಮೆಕ್ ಗ್ರೆಗೊರ್, ‘ಈ ಕಾದಂಬರಿ ಓದುವುದು ಉತ್ತಮ ಅನುಭವ ಕೊಡುತ್ತದೆ. ವಾಸ್ತವ ಜಗತ್ತಿನಿಂದ ಆಚೆಗಿರುವ, ಕಲ್ಪನಾ ಲೋಕದ ವಿಹಾರಕ್ಕೆ ಇದು ಇಂಬುಕೊಡುತ್ತದೆ. ಬದುಕು-ಸಾವು, ದೇಹ-ಆತ್ಮ, ಪೂರ್ವ-ಪಶ್ಚಿಮ ಸೇರಿದಂತೆ ಹತ್ತಾರು ಬಗೆಯ ಚಿಂತನೆಗಳು ಈ ಕೃತಿಯಲ್ಲಿ ಹರಳುಗಟ್ಟಿವೆ’ ಎಂದು ಹೇಳಿದರು.
‘ಕರಾಳ ಹೃದಯಗಳ ಕೇಂದ್ರ ಸ್ಥಾನಕ್ಕೆ ಕೊಂಡೊಯ್ಯುವ ಗಂಭೀರ ತಾತ್ವಿಕ ಪ್ರಯತ್ನ ಈ ಕೃತಿಯಲ್ಲಿದೆ. ಶ್ರೀಲಂಕಾ ಅಂತರ್ಯುದ್ಧದ ಭೀಕರತೆಯನ್ನು ಸಾಹಿತ್ಯಾತ್ಮಕವಾಗಿ ಕಟ್ಟಿಕೊಡುವ ಮಹತ್ವದ ಪ್ರಯತ್ನ ಇದು. ಒಮ್ಮೆ ಈ ಕಾದಂಬರಿಯನ್ನು ಓದಲು ಆರಂಭಿಸಿದ ನಂತರ ಓದುಗನಿಗೆ ಬದುಕಿನ ಸೂಕ್ಷ್ಮಗಳು, ಸೌಂದರ್ಯ, ಪ್ರೀತಿ, ಬದ್ಧತೆಯ ಅರಿವೂ ಮೂಡುತ್ತದೆ. ಎಲ್ಲರಿಗೂ ಬದುಕಲು ತಮ್ಮದೇ ಆದ ಹಕ್ಕು ಮತ್ತು ಸಮರ್ಥನೆ ಇರುವುದನ್ನು ಕಾದಂಬರಿಯು ಮನಗಾಣಿಸುತ್ತದೆ’ ಎಂದು ಅವರು ವಿವರಿಸಿದರು.
ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ ಬೂಕರ್ ಪುರಸ್ಕಾರವನ್ನು 1969ರಿಂದಲೂ ನೀಡಲಾಗುತ್ತಿದೆ. ಖ್ಯಾತ ಲೇಖಕರಾದ ಮಾರ್ಗರೇಟ್ ಅಟ್ವುಡ್, ಸಲ್ಮಾನ್ ರಶ್ದಿ ಮತ್ತು ಯನ್ ಮಾರ್ಟೆಲ್ ಅವರಿಗೆ ಈ ಹಿಂದೆ ಬೂಕರ್ ಪುರಸ್ಕಾರ ಸಂದಿತ್ತು.
Published On - 10:23 am, Tue, 18 October 22