ತಮಿಳುನಾಡು-ಜಾಫ್ನಾ ಸಂಪರ್ಕ ಯೋಜನೆಗೆ ಶ್ರೀಲಂಕಾ ಅಸ್ತು: ಶ್ರೀಘ್ರ ವಿಮಾನ, ಹಡಗು ಸಂಚಾರ ಆರಂಭ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 14, 2022 | 10:34 AM

ಶ್ರೀಲಂಕಾದಿಂದ ತಮಿಳುನಾಡು ಮತ್ತು ಪುದುಚೇರಿ ಸಂಪರ್ಕಿಸುವ ವಿವಿಧ ಯೋಜನೆಗಳಿಗೆ ಅಲ್ಲಿನ ಸರ್ಕಾರ ಅನುಮೋದನೆ ನೀಡಿದೆ

ತಮಿಳುನಾಡು-ಜಾಫ್ನಾ ಸಂಪರ್ಕ ಯೋಜನೆಗೆ ಶ್ರೀಲಂಕಾ ಅಸ್ತು: ಶ್ರೀಘ್ರ ವಿಮಾನ, ಹಡಗು ಸಂಚಾರ ಆರಂಭ
ಶ್ರೀಲಂಕಾದ ಜಾಫ್ನಾ ನಗರದ ಪ್ರವೇಶ ದ್ವಾರ
Follow us on

ಕೊಲೊಂಬೊ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ (Sri Lanka Economic Crisis) ಇದೀಗ ಪ್ರವಾಸೋದ್ಯಮದ ಮಹತ್ವವನ್ನು (Importace of Tourism) ಹಿಂದೆಂದಿಗಿಂತಲೂ ಚೆನ್ನಾಗಿ ಮನಗಂಡಿದೆ. ಶ್ರೀಲಂಕಾದಿಂದ ತಮಿಳುನಾಡು ಮತ್ತು ಪುದುಚೇರಿ ಸಂಪರ್ಕಿಸುವ ವಿವಿಧ ಯೋಜನೆಗಳಿಗೆ ಅಲ್ಲಿನ ಸರ್ಕಾರ ಅನುಮೋದನೆ ನೀಡಿದೆ. ಶ್ರೀಲಂಕಾದ ಉತ್ತರದಲ್ಲಿರುವ ಜಾಫ್ನಾದಿಂದ ತಮಿಳುನಾಡಿನ ತಿರುಚಿರಾಪಳ್ಳಿ ಹಾಗೂ ಜಾಫ್ನಾದ ಕಂಕೆಸಂತುರೈನಿಂದ ಪುದುಚೆರಿಯ ಕಾರೈಕಲ್​ಗೆ ಪ್ರಯಾಣಿಕರ ಹಡಗು ಸಂಚಾರ ಶೀಘ್ರ ಆರಂಭವಾಗಲಿದೆ. ಈ ಮೂಲಕ ಉತ್ತರ ತಮಿಳುನಾಡಿನಲ್ಲಿರುವ ದೇವಾಲಯಗಳಿಗೆ ಶ್ರೀಲಂಕಾದ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವುದು ಅಲ್ಲಿನ ಸರ್ಕಾರದ ಉದ್ದೇಶವಾಗಿದೆ.

ಎರಡೂ ದೇಶಗಳ ಜನರ ನಡುವೆ ಉತ್ತಮ ಸಂಬಂಧ ಇರಬೇಕು ಎಂದು ಭಾರತ ಸರ್ಕಾರವು ಹಲವು ವರ್ಷಗಳಿಂದ ಪ್ರತಿಪಾದಿಸುತ್ತಿದೆ. ತಮಿಳರು ಹೆಚ್ಚಾಗಿರುವ ಉತ್ತರ ಭಾಗದಲ್ಲಿ ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಬಲ್ಲದು ಎನ್ನುವುದು ಶ್ರೀಲಂಕಾ ಸರ್ಕಾರದ ಆಶಯವಾಗಿದೆ. ಎಲ್​ಟಿಟಿಇ ಉಗ್ರರು ಮತ್ತು ಶ್ರೀಲಂಕಾ ಸರ್ಕಾರಿ ಪಡೆಗಳ ನಡುವಣ ಸುದೀರ್ಘ ಸಂಘರ್ಷದ ಕಾರಣದಿಂದಾಗಿ ಶ್ರೀಲಂಕಾದ ಉತ್ತರ ಭಾಗ ಬಹುಕಾಲದಿಂದ ಅಭಿವೃದ್ಧಿ ಕಂಡಿಲ್ಲ. ವಿದೇಶಿ ವಿನಿಮಯ ಕೊರತೆಯಿಂದ ಕಂಗಾಲಾಗಿರುವ ಶ್ರೀಲಂಕಾಕ್ಕೆ ಭಾರತದ ಪ್ರವಾಸಿಗರ ಹರಿವು ಹೆಚ್ಚಾದರೆ ಅಲ್ಲಿನ ದೊಡ್ಡ ಸಮಸ್ಯೆ ಎನಿಸಿರುವ ವಿದೇಶಿ ಮೀಸಲು ಸಂಗ್ರಹದ ಸಮಸ್ಯೆಯು ಪರಿಹಾರವಾಗುತ್ತದೆ.

ತಮಿಳುನಾಡು ಮತ್ತು ಉತ್ತರ ಶ್ರೀಲಂಕಾ ನಡುವೆ 1970ರವರೆಗೆ ವಿಮಾನ ಮತ್ತು ಹಡಗು ಸಂಚಾರ ಇತ್ತು. ಆದರೆ ನಂತರದ ದಿನಗಳಲ್ಲಿ ಅಂತರ್ಯುದ್ಧದಿಂದ ಪರಿಸ್ಥಿತಿ ಬಿಗಡಾಯಿಸಿತು. 2009ರಲ್ಲಿ ಶ್ರೀಲಂಕಾದ ಅಂತರ್ಯುದ್ಧ ಅಂತ್ಯಗೊಂಡಿತು. ಸಾರಿಗೆ ಸಂಪರ್ಕ ಮರುಸ್ಥಾಪನೆಗೆ ಭಾರತ ಸರ್ಕಾರ ಉತ್ಸಾಹ ತೋರಿದರೂ, ಶ್ರೀಲಂಕಾ ಸರ್ಕಾರದಿಂದ ಪೂರಕ ಸ್ಪಂದನೆ ಸಿಕ್ಕಿರಲಿಲ್ಲ. ನವೆಂಬರ್ 2019ರಲ್ಲಿ ಮೊದಲ ಬಾರಿಗೆ ಜಾಫ್ನಾದ ಪಲಲಿ ವಿಮಾನ ನಿಲ್ದಾಣವನ್ನು ನಾಗರಿಕ ವಿಮಾನಗಳ ಹಾರಾಟಕ್ಕೆ ಮುಕ್ತಗೊಳಿಸಲಾಯಿತು. ಇಲ್ಲಿಂದ ವಾರಕ್ಕೆ ಮೂರು ಬಾರಿ ಜಾಫ್ನಾ-ಚೆನ್ನೈ ವಿಮಾನ ಹಾರಾಡುತ್ತಿದೆ. ಆದರೆ ಕೊರೊನಾ ಪಿಡುಗು ವ್ಯಾಪಿಸಿದ ನಂತರ ವಿಮಾನ ಸಂಚಾರ ಸ್ಥಗಿತಗೊಂಡಿತ್ತು.

ವಿಮಾನ ನಿಲ್ದಾಣದಲ್ಲಿ ಅಗತ್ಯ ನಿರ್ವಹಣೆ ಕೆಲಸಗಳು ಪೂರ್ಣಗೊಳ್ಳಬೇಕಿದೆ. ಇಮಿಗ್ರೇಷನ್ ಮತ್ತು ಕಸ್ಟಮ್ಸ್​ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ. ಇವು ಪೂರ್ಣಗೊಂಡ ನಂತರ ವಿಮಾನ ಸಂಚಾರ ಪುನರಾರಂಭಗೊಳ್ಳಲಿದೆ. ಮನ್ನಾರ್-ರಾಮೇಶ್ವರಂ ನಡುವೆ ಹಡಗುಗಳ ಸಂಚಾರಕ್ಕೆ ಶ್ರೀಲಂಕಾ ಸಚಿವ ಸಂಪುಟ ಇನ್ನೂ ಅನುಮೋದನೆ ನೀಡಿಲ್ಲ. ಆದರೆ ಕಂಕೆಸಂತುರೈ-ಕಾರೈಕಾಲ್ ಹಡಗು ಸಂಚಾರಕ್ಕೆ ಶ್ರೀಲಂಕಾ ಸಂಪುಟ ಒಪ್ಪಿಗೆ ಸೂಚಿಸಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:33 am, Tue, 14 June 22