ಟೆಕ್ಸಾಸ್: ಉವಲ್ಡೆ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬೆದರಿಕೆಯೊಡ್ಡಿದ 17-ವರ್ಷ-ವಯಸ್ಸಿನ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ
ಆ ಹುಡುಗ ಸ್ನ್ಯಾಪ್ಶಾಟ್ನಲ್ಲಿ ಪೋಸ್ಟ್ ಮಾಡಿದ ಮೆಸೇಜು; ‘ನನಗೆ ಘಾಸಿಗೊಳಿಸಿದವರನ್ನು ನಾನು ಮುಗಿಸದೆ ಬಿಡುವುದಿಲ್ಲ,’ ಅಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Texas: ವಿಶ್ವಕ್ಕೆ ನೀತಿ ಶಿಕ್ಷಣದ ಬೋಧನೆ ಮಾಡುವ ಯುಎಸ್ ನಲ್ಲಿ ಹದಿಹರೆಯದ ಬಾಲಕರು ಎಸಗುತ್ತಿರುವ ಅಪರಾಧಗಳಿಗೆ ಎಣೆಯೇ ಇಲ್ಲಂದಾಗಿದೆ ಮಾರಾಯ್ರೇ. ಕಳೆದ ಬುಧವಾರ ಅಲ್ಲಿ ಏನಾಗಿದೆ ಗೊತ್ತಾ? ಟೆಕ್ಸಾಸ್ನಲ್ಲಿರುವ ಉವಲ್ಡೆ ಹೈ ಸ್ಕೂಲ್ನಲ್ಲಿ ಹಿಂದೆ ಓದಿದ ಮತ್ತು ಈಗ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ನ್ಯಾಪ್ ಶಾಟ್ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಬೆದರಿಕೆಯೊಡ್ಡಿದ 17-ವರ್ಷ-ವಯಸ್ಸಿನ ಬಾಲಕನನ್ನು ಬಂಧಿಸಲಾಗಿದೆ. ಅವನ ಬೆದರಿಕೆಯ ಪೋಸ್ಟ್ ಗಳಲ್ಲಿ ಆಟಿಕೆ ಗನ್ನಿನ ಇಮೇಜ್ ಸಹ ಇತ್ತು ಎಂಬ ಪೊಲೀಸ್ ಮಾಹಿತಿ ಆಧರಿಸಿ ನ್ಯೂಸ್ ವೀಕ್ ಪತ್ರಿಕೆ ವರದಿ ಮಾಡಿದೆ. ಬಾಲಕ ಹಾಲಿ ಮತ್ತು ಮಾಜಿ ವಿದ್ಯಾರ್ಥಿಗಳು ಸೇರಿದಂತೆ 5 ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿದ್ದನೆಂದು ಪೊಲೀಸರು ಹೇಳಿದ್ದಾರೆ.
ಸಿ ಎನ್ ಬಿ ಸಿಯ ಸಹಯೋಗಿಯಾಗಿರುವ ನ್ಯೂಸ್4ಸ್ಯಾನಟೊನಿಯೊ ಮಾಡಿರುವ ವರದಿಯ ಪ್ರಕಾರ ಹುಡುಗ ಸುಳ್ಳು ತುರ್ತು ಸ್ಥಿತಿಯನ್ನು ಸೃಷ್ಟಿಸಿದ ಚಾರ್ಜ್ನಡಿ 6 ತಿಂಗಳಿಂದ 2 ವರ್ಷದ ಸೆರೆವಾಸಕ್ಕೆ ಗುರಿಯಾಗಬಹುದು. ಅವನ ಮೇಲೆ ಸುಮಾರು 8 ಲಕ್ಷ ರೂ. ಗಳ ಜುಲ್ಮಾನೆಯನ್ನೂ ವಿಧಿಸುವ ಸಾಧ್ಯತೆಯಿದೆ.
ಬಾಲಕನ ತಂದೆತಾಯಿಗಳು ಉವಲ್ಡೆ ಕನ್ಸಾಲಿಡೇಟೆಡ್ ಇಂಡಿಪೆಂಡಂಟ್ ಸ್ಕೂಲ್ ಡಿಸ್ಟ್ರಿಕ್ಟ್ ಮುಖ್ಯಸ್ಥ ಪೀಟ್ ಅರೆಡೊಂಡು ಅವರಿಗೆ ವಿಷಯವನ್ನು ತಿಳಿಸಿದ ಬಳಿಕಆ ಅಧಿಕಾರಿಯು ತಮ್ಮ ಪೋಲಿಸರಿಗೆ ಮಾಹಿತಿ ನೀಡಿದ್ದರು.
ಆ ಹುಡುಗ ಸ್ನ್ಯಾಪ್ ಶಾಟ್ ನಲ್ಲಿ ಪೋಸ್ಟ್ ಮಾಡಿದ ಮೆಸೇಜು; ‘ನನಗೆ ಘಾಸಿಗೊಳಿಸಿದವರನ್ನು ನಾನು ಮುಗಿಸದೆ ಬಿಡುವುದಿಲ್ಲ,’ ಅಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ 17ರ ಬಾಲಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಮತ್ತು ಅವನನ್ನು ಬಿಡುಗಡೆ ಮಾಡುವ ಮೊದಲು ಅರೋಗ್ಯದ ತಪಾಸಣೆಗೆ ಕಳಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ ಎಂದು ನ್ಯೂಸ್ ವೀಕ್ ವರದಿ ಮಾಡಿದೆ. ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಇತ್ತೀಚಿಗೆ ನಡೆದ 19 ಶಾಲಾ ಮಕ್ಕಳ ಸಾಮೂಹಿಕ ಹತ್ಯೆ ಯುನೈಟೆಡ್ ಸ್ಟೇಟ್ಸ್ ಶಾಲೆಗಳಲ್ಲಿ ನಡೆದಿರುವ ಗುಂಡಿನ ದಾಳಿ ಘಟನೆಗಳ ಪೈಕಿ ಅತ್ಯಂತ ದಾರುಣ ಎನಿಸಿದ್ದು ಅದು ಸಂಭವಿಸಿದ ಕೇವಲ ಎರಡು ವಾರಗಳ ನಂತರ ಈ ಬಾಲಕನನ್ನು ಬಂಧಿಸಲಾಗಿದೆ.
ಅಂದು ಶಾಲೆಯ ನಾಲ್ಕನೇ ಗ್ರೇಡ್ ಓದುತ್ತಿದ್ದ ವಿದ್ಯರ್ಥಿಗಳ ಮೇಲೆ 18-ವರ್ಷ ವಯಸ್ಸಿನ ಅ ಸಲ್ವಾಡೋರ್ ರಾಮೋಸ್ ಹೆಸರಿನ ಹಂತಕ ಗುಂಡಿನ ಸುರಿಮಳೆಗೈದಿದ್ದ. ಆ ತರಗತಿಯಲ್ಲಿದ್ದ ಕೆಲ ಮಕ್ಕಳು ಸಲ್ವಾಡೋರ್ ರಾಮೋಸ್ ನ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ನೆಲಕ್ಕೆ ಒರಗಿ ಸತ್ತಂತೆ ನಟಿಸಿದರಂತೆ, ಅವರೇ ಅವತ್ತು ನಡೆದ ಘಟನೆಯನ್ನು ಸವಿಸ್ತಾರವಾಗಿ ಬಿಚ್ಚಿಟ್ಟಿದ್ದಾರೆ.
ರಾಮೋಸ್ ಮನಬಂದಂತೆ ಗುಂಡು ಹಾರಿಸಿ 19 ಮಕ್ಕಳನ್ನು ಕೊಂದ ಬಳಿಕ ಶಾಲೆಯನ್ನು ಪ್ರವೇಶಿಸಿದ ಪೊಲೀಸರು ಅವನನ್ನು ಅಲ್ಲೇ ಗುಂಡಿಟ್ಟು ಕೊಂದರು. ವಿಷಯ ಗೊತ್ತಾಗಿ ಶಾಲೆಯ ಮುಂದೆ ಭಯ ಮತ್ತು ಆತಂಕದಿಂದ ನೆರೆದಿದ್ದ ಪಾಲಕರು ಪೊಲೀಸರ ಕಾರ್ಯಚರಣೆ ವಿಳಂಬಗೊಂಡಿದನ್ನು ತೀವ್ರವಾಗಿ ಖಂಡಿಸಿದ್ದರು.
ಆದರೆ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಉವಲ್ಡೆ ಪೊಲೀಸ್ ಚೀಫ್ ಪೀಟ್ ಅರೆಡೊಂಡು ಅವರು ಶಾಲಾ ಕೊಠಡಿಗಳ ಕೀ ಹುಡಕಲು ತಡವಾಗಿದ್ದಕ್ಕೆ ಕಾರ್ಯಾಚರಣೆ ವಿಳಂಬಗೊಂಡಿದ್ದು ಅಂತ ಹೇಳಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.