Sugar price in Pakistan: ಭಾರತದಿಂದ ಆಮದು ನಿಷೇಧಿಸಿದ ಪಾಕಿಸ್ತಾನದಲ್ಲಿ ಸಕ್ಕರೆ ಕೇಜಿಗೆ 100 PKR
Sugar price in Pakistan: ಪಾಕಿಸ್ತಾನದಲ್ಲಿ ಸಕ್ಕರೆ ಉತ್ಪಾದನೆ ಕೊರತೆ ಆಗಿದೆ. ಒಂದು ವೇಳೆ ಭಾರತದಿಂದ ಸಕ್ಕರೆ ಆಮದು ಮಾಡಿಕೊಂಡಿದ್ದರೆ ಕಡಿಮೆ ಬೆಲೆಗೆ ಸಿಗುತ್ತಿತ್ತು. ಆದರೆ ಅದು ಬೇಕಿಲ್ಲ. ಆ ಕಾರಣಕ್ಕೆ ಈಗ ಮೂರನೇ ಸಲಕ್ಕೆ ಜಾಗತಿಕ ಟೆಂಡರ್ ಕರೆದಿದೆ.
ಪಾಕಿಸ್ತಾನದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆ ಟಿಸಿಪಿಯಿಂದ ಸೋಮವಾರದಂದು 50,000 ಟನ್ ಬಿಳಿ ಸಕ್ಕರೆಗಾಗಿ ಜಾಗತಿಕ ಟೆಂಡರ್ ಕರೆಯಯಲಾಗಿದೆ. ಆದರೆ ಇದರಲ್ಲಿ “ನಿಷೇಧಿತ” ದೇಶಗಳಾದ ಭಾರತ ಮೊದಲಾದವು ಭಾಗವಹಿಸುವಂತಿಲ್ಲ. ಈ ನಡೆಯು ಪಾಕಿಸ್ತಾನದ ಪಾಲಿನ “ದುರದೃಷ್ಟ” ಎಂದು ಭಾರತದ ಸಕ್ಕರೆ ವಲಯದಲ್ಲಿ ಕರೆಯಲಾಗಿದೆ. ಇದು ಟ್ರೇಡಿಂಗ್ ಕಾರ್ಪೊರೇಷನ್ ಆಫ್ ಪಾಕಿಸ್ತಾನ್ (ಟಿಸಿಪಿ) ಕರೆಯುತ್ತಿರುವ ಮೂರನೇ ಟೆಂಡರ್. ಈ ಹಿಂದೆ ಎರಡು ಬಾರಿ ತಲಾ 50,000 ಟನ್ ಟೆಂಡರ್ಗಳನ್ನು ಹೆಚ್ಚಿನ ದರ ಎಂದು ರದ್ದು ಮಾಡಲಾಗಿತ್ತು. ಉತ್ಪಾದನೆಯಲ್ಲಿನ ಕೊರತೆ ಕಾರಣಕ್ಕೆ ಪಾಕಿಸ್ತಾನವು ಸಕ್ಕರೆ ಆಮದಿಗೆ ಮುಂದಾಗಿದೆ. ಸದ್ಯಕ್ಕೆ ಪಾಕಿಸ್ತಾನದಲ್ಲಿ ಚಿಲ್ಲರೆ (ರೀಟೇಲ್ ದರ) ಮಾರಾಟ ದರ ಕೇಜಿಗೆ ಅಲ್ಲಿನ ರೂಪಾಯಿ ಲೆಕ್ಕದಲ್ಲಿ 100 ತಲುಪಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ 48.31 ಆಗುತ್ತದೆ.
ಪಾಕಿಸ್ತಾನದ ಆರ್ಥಿಕ ಸಮನ್ವಯ ಸಮಿತಿಯು ಕಳೆದ ವಾರ ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದಿಗೆ ಅನುಮತಿ ನೀಡಿತ್ತು. ಆದರೆ ಪಾಕಿಸ್ತಾನದ ಕೇಂದ್ರ ಸಂಪುಟವು ಈ ನಿರ್ಧಾರವನ್ನು ಹಿಂಪಡೆಯಿತು. 50,000 ಟನ್ ಸಕ್ಕರೆ ಆಮದಿಗೆ ಹೊಸದಾಗಿ ಅಂತರರಾಷ್ಟ್ರೀಯ ಟೆಂಡರ್ ಕರೆಯಲಾಗಿದೆ. ಟಿಸಿಪಿ ಈಗಾಗಲೇ ಸ್ಪಷ್ಟಪಡಿಸಿರುವ ಪ್ರಕಾರ, ಸಕ್ಕರೆ ದಾಸ್ತಾನು ಇಸ್ರೇಲ್ ಅಥವಾ ಇನ್ಯಾವುದೇ ನಿಷೇಧಿತ ದೇಶಗಳಿಗೆ ಸೇರಿದ್ದಾಗಿರಬಾರದು. ಜಾಗತಿಕ ಪೂರೈಕೆದಾರರು ಏಪ್ರಿಲ್ 14ನೇ ತಾರೀಕಿನೊಳಗೆ ಬಿಡ್ ಸಲ್ಲಿಸಬೇಕು ಮತ್ತು ಕರಾಚಿಯಲ್ಲಿನ ಯಾವುದಾದರೂ ಬಂದರಿಗೆ ವಸ್ತುಗಳನ್ನು ತಲುಪಿಸಬೇಕು.
ಈ ಬೆಳವಣಿಗೆ ಬಗ್ಗೆ ಅಖಿಲ ಭಾರತ ಸಕ್ಕರೆ ವರ್ತಕರ ಒಕ್ಕೂಟದ (ಎಐಎಸ್ಟಿಎ) ಅಧ್ಯಕ್ಷ ಪ್ರಫುಲ್ ವಿಥಲಾನಿ ಮಾತನಾಡಿ, ಇದು ಪಾಕಿಸ್ತಾನದ ದುರದೃಷ್ಟ. ಬೆಲೆ, ಗುಣಮಟ್ಟ, ವೇಗ ಹಾಗೂ ಕಡಿಮೆ ಸಾಗಣೆ ವೆಚ್ಚ ಇವೆಲ್ಲಕ್ಕೂ ಹೋಲಿಸಿದಲ್ಲಿ ಭಾರತದ ಸಕ್ಕರೆಗಿಂತ ಕಡಿಮೆಗೆ ದೊರೆಯುವುದಕ್ಕೆ ಸಾಧ್ಯವಾ ಎಂದಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಸಕ್ಕರೆಯನ್ನು ಭೂ ಮಾರ್ಗವಾಗಿ ಆಮದು ಮಾಡಿಕೊಳ್ಳುವುದು ಪಾಕಿಸ್ತಾನಕ್ಕೆ ಬಹಳ ವೇಗ ಹಾಗೂ ಶೀಘ್ರ. “ಪಂಜಾಬ್ ಮೂಲಕ ಭೂ ಮಾರ್ಗದಲ್ಲಿ ಬಿಳಿ ಸಕ್ಕರೆಯನ್ನು ಆಮದು ಮಾಡಿಕೊಳ್ಳುವುದು ಟನ್ಗೆ 398 ಅಮೆರಿಕನ್ ಡಾಲರ್ ಆಗುತ್ತದೆ (ಇದರಲ್ಲಿ ಸಾಗಣೆ ಮತ್ತು ಡೆಲಿವರಿ ವೆಚ್ಚವೂ ಸೇರಿದೆ),” ಎಂದು ಅವರು ಹೇಳಿದ್ದಾರೆ.
ಎಐಎಸ್ಟಿಎ ಮಾಹಿತಿ ಪ್ರಕಾರ, ಈ ಹಿಂದೆ ಸಕ್ಕರೆ ಆಮದಿನ ಎರಡು ಟೆಂಡರ್ಗಳನ್ನು ಟಿಸಿಪಿ ರದ್ದು ಮಾಡಿದ್ದು ದರ ಹೆಚ್ಚು ಎಂಬ ಕಾರಣಕ್ಕೆ. ಇದಕ್ಕೂ ಮುಮಚೆ ಅತ್ಯಂತ ಕಡಿಮೆ ಬೆಲೆ ಎಂದು ಟೆಂಡರ್ ಹಾಕಿದ್ದು ದುಬೈನ ಅಲ್ ಖಲೀಜ್. ಅದು ಎಷ್ಟಕ್ಕೆ ಗೊತ್ತಾ? ಒಂದು ಟನ್ಗೆ 540 ಅಮೆರಿಕನ್ ಡಾಲರ್. ಪಾಕಿಸ್ತಾನವ2020- 21 ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್- ಸೆಪ್ಟೆಂಬರ್) 56 ಲಕ್ಷ ಟನ್ ಸಕ್ಕರೆ ಆಮದು ಮಾಡಿಕೊಳ್ಳುವ ನಿರೀಕ್ಷೆ ಇದೆ.
ಪಾಕಿಸ್ತಾನದ ವರ್ತಕರು ಹೇಳುವಂತೆ, ಆ ದೇಶದಲ್ಲಿ 5,00,000 ಟನ್ ಸಕ್ಕರೆ ಕೊರತೆ ಎದುರಾಗಿದೆ. ಅಂದ ಹಾಗೆ ಬ್ರೆಜಿಲ್ ನಂತರ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಭಾರತ. 2020- 21ರ ಮಾರುಕಟ್ಟೆ ವರ್ಷದಲ್ಲಿ 60 ಲಕ್ಷ ಟನ್ ಸಕ್ಕರೆ ರಫ್ತು ಮಾಡುವ ಗುರಿಯೊಂದಿಗೆ ಹೆಚ್ಚುವರಿ ಸರಕನ್ನು ಭಾರತ ಹೊಂದಿದೆ.
Government is fully focused to control inflation and action is being taken against elements involved in price hike of sugar and flour: @ImranKhanPTI #آپکا_وزیراعظم_آپکے_ساتھ https://t.co/QEFlYzckOP pic.twitter.com/qCAHszLKRR
— Radio Pakistan (@RadioPakistan) April 4, 2021
ಇದನ್ನೂ ಓದಿ: ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದು ಮಾಡಿಕೊಳ್ಳುವ ಯೋಜನೆಗೆ ತಡೆ ನೀಡಿದ ಪಾಕಿಸ್ತಾನ
(Sugar production shortage in Pakistan leads to price shot up to 100 PKR.)