ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದು ಮಾಡಿಕೊಳ್ಳುವ ಯೋಜನೆಗೆ ತಡೆ ನೀಡಿದ ಪಾಕಿಸ್ತಾನ
ಭಾರತ ತನ್ನ ಈ ಕ್ರಮವನ್ನು ರದ್ದುಗೊಳಿಸುವವರೆಗೂ ಭಾರತದ ಜತೆಗಿನ ವ್ಯಾಪಾರ ಮತ್ತು ವಹಿವಾಟು ನಡೆಸುವುದು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಇಸ್ಲಾಮಾಬಾದ್: ಎರಡೂ ದೇಶಗಳ ನಡುವಿನ ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಜತೆ ಯಾವುದೇ ವ್ಯಾಪಾರ-ವಹಿವಾಟು ನಡೆಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಭಾರತದಿಂದ ಹತ್ತಿ ಮತ್ತು ಸಕ್ಕರೆಯನ್ನು ಆಮದು ಮಾಡಿಕೊಳ್ಳುವ ಕುರಿತು ತಮ್ಮ ಸಚಿವ ಸಂಪುಟದ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ದೇಶದ ವಿವಿಧ ವಲಯಗಳನ್ನು ಆರ್ಥಿಕ ಪುನರುತ್ಥಾನ ಕೈಗೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ದೀರ್ಘ ಸಮಾಲೋಚನೆ ನಡೆಸಿದ ಇಮ್ರಾನ್ ಖಾನ್,ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳುವ ಚಿಂತನೆ ನಡೆಸಿದ್ದಾರೆ ಎಂದು ದಿ ಡಾನ್ ಪತ್ರಿಕೆ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯೆ ನಿಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಶಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಭಾರತ ರದ್ದುಗೊಳಿಸಿದೆ. ಭಾರತ ತನ್ನ ಈ ಕ್ರಮವನ್ನು ರದ್ದುಗೊಳಿಸುವವರೆಗೂ ಭಾರತದ ಜತೆಗಿನ ವ್ಯಾಪಾರ ಮತ್ತು ವಹಿವಾಟು ನಡೆಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಮೊದಲು ಭಾರತದಿಂದ ಹತ್ತಿ ಮತ್ತು ಸಕ್ಕರೆಯನ್ನು ಆಮದು ಮಾಡಿಕೊಳ್ಳುವುದಾಗಿ ಇತ್ತೀಚಿಗಷ್ಟೇ ಹಣಕಾಸು ಸಚಿವರಾಗಿ ನೇಮಕವಾಗಿದ್ದ ಹಮ್ಮದ್ ಅಝರ್ ಹೇಳಿದ್ದರು.
ಇಮ್ರಾನ್ ಖಾನ್ ಸರ್ಕಾರದಲ್ಲಿ ಏನಾಗುತ್ತಿದೆ?
ಕೌನ್ಸಿಲ್ ಆಫ್ ಕಾಮನ್ ಇಂಟರೆಸ್ಟ್ (CCI) ಸಭೆಯನ್ನು ಕಳೆದ ಎರಡು ತಿಂಗಳಿನಿಂದ ನಡೆಸಲು ವಿಫಲವಾಗಿರುವುದಕ್ಕೆ ಪಾಕ್ ಸುಪ್ರೀಂ ಕೋರ್ಟ್ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ಇತ್ತೀಚಿಗಷ್ಟೇ ಕಟುವಾಗಿ ಟೀಕಿಸಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ವಿಚಾರಣೆಯಲ್ಲಿ ಸರ್ಕಾರ ಭಾಗವಹಿಸಿರುವ ವಿಧಾನದ ಬಗ್ಗೆ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಕಾಜಿ ಫಯೆಜ್ ಇಸಾ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತ್ತು.
ಗಣತಿಯನ್ನು ಅರ್ಥ ಮಾಡಿಕೊಳ್ಳುವುದು ದೇಶವನ್ನು ನಡೆಸಲು ಬೇಕಾಗಿರುವ ಮೂಲ ಅಗತ್ಯ. ಗಣತಿಯ ಫಲಿತಾಂಶವನ್ನು ಬಿಡುಗಡೆಗೊಳಿಸುವುದು ಸರ್ಕಾರದ ಆದ್ಯತೆ ಆಗಿರಬೇಕಲ್ಲವೇ ಎಂದು ನ್ಯಾಯಮೂರ್ತಿ ಇಸಾ ಪ್ರಶ್ನಿಸಿದ್ದಾರೆ. ಈ ಬಗ್ಗೆ ಕೌನ್ಸಿಲ್ನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದಿರುವುದಕ್ಕೆ ಸರ್ಕಾರವನ್ನು ಟೀಕಿಸಿದ್ದರು.
ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ: ಇಷ್ಟರಲ್ಲೇ ಇಂಡಿಯಾ- ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯುವ ಸಾಧ್ಯತೆ!
ಬ್ರೇಕ್ಫಾಸ್ಟ್ ವಿಚಾರಕ್ಕೆ ಸಿಕ್ಕಾಪಟೆ ಟ್ರೋಲ್ ಆದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್