ಕಾಬೂಲ್: ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನ್ ಉಗ್ರರು (Taliban Terrorists) ವಶಪಡಿಸಿಕೊಂಡ ನಂತರ ಅಲ್ಲಿನ ಪರಿಸ್ಥಿತಿಯೇ ಬದಲಾಗಿದೆ. ಅಫ್ಘಾನ್ನ ಮಹಿಳೆಯರು ಮತ್ತು ಮಕ್ಕಳು ತಾಲಿಬಾನ್ ಸರ್ಕಾರದ ಅಧೀನದಲ್ಲಿ ಬದುಕುವುದು ಕೂಡ ಕಷ್ಟವಾಗಿದೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಿತ್ತುಕೊಂಡಿರುವ ತಾಲಿಬಾನ್ ಉಗ್ರರು ಅವರ ಪಾಲಿಗೆ ದೇಶವನ್ನು ನರಕವಾಗಿಸಿದ್ದಾರೆ. ಇದೀಗ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ರಾಷ್ಟ್ರೀಯ ಮಹಿಳಾ ವಾಲಿಬಾಲ್ ತಂಡದ (Afghanistan Volleyball Team) ಆಟಗಾರ್ತಿಯ ತಲೆ ಕತ್ತರಿಸಿ ಹತ್ಯೆ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಾಲಿಬಾಲ್ ತಂಡದ ಕೋಚ್, ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯಾಗಿರುವ ಮಹಾಜಾಬಿನ್ ಹಕೀಮಿ ಎಂಬಾಕೆಯನ್ನು ಅಕ್ಟೋಬರ್ ತಿಂಗಳ ಆರಂಭದಲ್ಲಿ ಹತ್ಯೆ ಮಾಡಲಾಗಿದೆ. ಆದರೆ, ಉಗ್ರರು ಆಕೆಯ ಕುಟುಂಬದವರಿಗೆ ಈ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿದ್ದರಿಂದ ಯಾರಿಗೂ ಈ ಭೀಕರ ಹತ್ಯೆಯ ಬಗ್ಗೆ ತಿಳಿಯಲಿಲ್ಲ ಎಂದು ತಿಳಿಸಿದ್ದಾರೆ.
ಅಶ್ರಫ್ ಘನಿ ಸರ್ಕಾರದ ಪತನದ ಮೊದಲು ಕಾಜೂಬ್ ಮುನ್ಸಿಪಾಲಿಟಿ ವಾಲಿಬಾಲ್ ಕ್ಲಬ್ಗಾಗಿ ಮಹಜಾಬಿನ್ ಆಟವಾಡಿದ್ದರು. ಇವರು ಕ್ಲಬ್ನ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿದ್ದರು. ಆದರೆ, ಕೆಲವು ದಿನಗಳ ಹಿಂದೆ ಮಹಜಾಬಿನ್ ತಲೆ ಕತ್ತರಿಸಿದ ಮತ್ತು ರಕ್ತಸಿಕ್ತವಾದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಇದು ಬಹಳ ಚರ್ಚೆಗೆ ಕಾರಣವಾಗಿತ್ತು.
ಆಗಸ್ಟ್ನಲ್ಲಿ ತಾಲಿಬಾನ್ ಸಂಪೂರ್ಣ ನಿಯಂತ್ರಣ ಸಾಧಿಸುವ ಮುನ್ನ ತಂಡದ ಇಬ್ಬರು ಆಟಗಾರರು ಮಾತ್ರ ದೇಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಅಫ್ಘಾನ್ ಮಹಿಳಾ ರಾಷ್ಟ್ರೀಯ ವಾಲಿಬಾಲ್ ತಂಡದ ಕೋಚ್ ಹೇಳಿದ್ದಾರೆ. ಮಹಜಾಬಿನ್ ಹಕೀಮಿ ಅಫ್ಘಾನ್ನಲ್ಲಿ ಉಳಿದ ಅನೇಕ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದರು. ಅಫ್ಘಾನ್ ದೇಶವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಮಹಿಳಾ ಕ್ರೀಡಾಪಟುಗಳನ್ನು ಪತ್ತೆಹಚ್ಚಲು ಸಾಕಷ್ಟು ಪ್ರಯತ್ನಿಸಿದೆ. ಈಗಾಗಲೇ ಹಲವು ಕ್ರೀಡಾಪಟುಗಳು ದೇಶ ಬಿಟ್ಟು ಹೋಗಿರುವುದರಿಂದ ಉಗ್ರರ ಕೈಗೆ ಯಾರೂ ಸಿಕ್ಕಿರಲಿಲ್ಲ. ಮಹಜಾಬಿನ್ ಅವರ ಭೀಕರ ಕೊಲೆ ಅಫ್ಘಾನಿಸ್ತಾನದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳೆದ ವಾರ, ಫಿಫಾ ಮತ್ತು ಕತಾರ್ ಸರ್ಕಾರವು ಅಫ್ಘಾನಿಸ್ತಾನದಿಂದ ರಾಷ್ಟ್ರೀಯ ಫುಟ್ಬಾಲ್ ತಂಡದ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರನ್ನು ಒಳಗೊಂಡಂತೆ 100 ಮಹಿಳಾ ಫುಟ್ಬಾಲ್ ಆಟಗಾರರನ್ನು ಸ್ಥಳಾಂತರಿಸಿತ್ತು. ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಕ್ರೀಡೆ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳುವುದು ಸ್ಥಗಿತಗೊಂಡಿವೆ. ಬಹುಪಾಲು ಅಫ್ಘಾನ್ ಹುಡುಗಿಯರು ಮಾಧ್ಯಮಿಕ ಶಾಲೆಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ಕುಂಡುಜ್ ಮಸೀದಿ ಸ್ಫೋಟ: ಕನಿಷ್ಠ 100 ಮಂದಿ ಸಾವು, ಹಲವರಿಗೆ ಗಾಯ
Shocking News: ಇಟ್ಟಿಗೆ ಎಸೆದು ಮನುಷ್ಯನ ಪ್ರಾಣ ತೆಗೆದ ಕೋತಿ!; ದೆಹಲಿಯಲ್ಲೊಂದು ಶಾಕಿಂಗ್ ಘಟನೆ