Danish Siddiqui: ಭಾರತದ ಪತ್ರಕರ್ತ ಡ್ಯಾನಿಶ್ ಸಿದ್ಧಿಕಿ ಹತ್ಯೆಗೆ ಹೊಸ ಟ್ವಿಸ್ಟ್​; ಈ ಸಾವಿಗೆ ನಾವು ಕಾರಣವಲ್ಲ ಎಂದ ತಾಲಿಬಾನ್

Danish Siddiqui Body: ಡ್ಯಾನಿಶ್ ಸಿದ್ಧಿಕಿ ಸಾವಿನ ಹಿಂದೆ ತಾಲಿಬಾನ್​ ಪಾತ್ರವೇನೂ ಇಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸ್ಪಷ್ಟಪಡಿಸಿದ್ದಾರೆ.

Danish Siddiqui: ಭಾರತದ ಪತ್ರಕರ್ತ ಡ್ಯಾನಿಶ್ ಸಿದ್ಧಿಕಿ ಹತ್ಯೆಗೆ ಹೊಸ ಟ್ವಿಸ್ಟ್​; ಈ ಸಾವಿಗೆ ನಾವು ಕಾರಣವಲ್ಲ ಎಂದ ತಾಲಿಬಾನ್
ಡ್ಯಾನಿಶ್​ ಸಿದ್ಧಿಕಿ
TV9kannada Web Team

| Edited By: Sushma Chakre

Jul 17, 2021 | 12:06 PM

ನವದೆಹಲಿ: ಅಫ್ಘಾನಿಸ್ತಾನದ ಕಂದಹಾರ್​ನಲ್ಲಿ ನಡೆದ ಅಫ್ಘಾನ್​ ಸೇನಾ ಪಡೆ ಮತ್ತು ತಾಲಿಬಾನ್ ಉಗ್ರರ ನಡುವಿನ ಸಂಘರ್ಷದಲ್ಲಿ ಭಾರತದ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್​ ಡ್ಯಾನಿಶ್ ಸಿದ್ಧಿಕಿ (Danish Siddiqui) ಅವರನ್ನು ಹತ್ಯೆ ಮಾಡಲಾಗಿತ್ತು. ದೇಶದ ವಾಸ್ತವ ಸ್ಥಿತಿಯನ್ನು ತೆರೆದಿಡುವ ಫೋಟೋಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಡ್ಯಾನಿಶ್​ ಸಾವಿಗೆ ಇಡೀ ದೇಶವೇ ಸಂತಾಪ ಸೂಚಿಸಿತ್ತು. ಅಫ್ಘಾನಿಸ್ತಾನ, ಅಮೆರಿಕ ದೇಶಗಳು ಕೂಡ ಈ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದವು. ಅದರೆ, ತಾಲಿಬಾನ್​ ಉಗ್ರರ ಗುಂಡೇಟಿಗೆ ಡ್ಯಾನಿಶ್​ ಸಿದ್ಧಿಕಿ (Danish Siddhiqui) ಬಲಿಯಾಗಿದ್ದಾರೆ ಎಂಬ ಸುದ್ದಿಯನ್ನು ತಾಲಿಬಾನ್ (Taliban) ತಳ್ಳಿಹಾಕಿದೆ. ಈ ಸಾವಿಗೆ ನಾವು ಕಾರಣರಲ್ಲ. ಡ್ಯಾನಿಶ್​ ಸಾವಿನ ವಿಷಯ ಕೇಳಿ ನಮಗೂ ಬೇಸರವಾಯಿತು ಎಂದು ತಿಳಿಸಿದೆ.

ಡ್ಯಾನಿಶ್​ ಸಿದ್ಧಿಕಿಯ ಮೃತದೇಹವನ್ನು ನಿನ್ನೆ ಸಂಜೆ 5 ಗಂಟೆಯ ವೇಳೆಗೆ ಇಂಟರ್​ನ್ಯಾಷನಲ್ ಕಮಿಟಿ ಆಫ್​ ದಿ ರೆಡ್ ಕ್ರಾಸ್ (ICRC)ಗೆ ತಾಲಿಬಾನ್ ಹಸ್ತಾಂತರಿಸಿದೆ. ಸಿದ್ಧಿಕಿ ಸಾವಿನ ಹಿಂದೆ ತಾಲಿಬಾನ್​ ಪಾತ್ರವೇನೂ ಇಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸ್ಪಷ್ಟಪಡಿಸಿದ್ದಾರೆ. ಡ್ಯಾನಿಶ್​ ಹೇಗೆ ಸತ್ತರು ಎಂಬುದು ನಮಗೆ ತಿಳಿದಿಲ್ಲ. ಗುಂಡಿನ ದಾಳಿಯ ವೇಳೆ ಯಾರು ಹಾರಿಸಿದ ಗುಂಡು ತಾಗಿ ಡ್ಯಾನಿಶ್​ ಸಾವನ್ನಪ್ಪಿದರೋ ಗೊತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಒಬ್ಬ ಪರ್ತಕರ್ತ ಯುದ್ಧ ನಡೆಯುತ್ತಿರುವ ವಲಯಕ್ಕೆ ಬರುತ್ತಿದ್ದಾರೆ ಎಂದರೆ ನಮಗೆ ಮೊದಲೇ ತಿಳಿಸಿರಬೇಕು. ಆಗ ನಾವು ಆ ವ್ಯಕ್ತಿಗೆ ಏನೂ ಹಾನಿಯಾಗದಂತೆ ಎಚ್ಚರ ವಹಿಸುತ್ತೇವೆ. ಆದರೆ, ಡ್ಯಾನಿಶ್​ ಸಿದ್ಧಿಕಿ ಎಂಬ ಪತ್ರಕರ್ತ ಆ ಜಾಗದಲ್ಲಿದ್ದ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ. ಪತ್ರಕರ್ತ ಸಿದ್ಧಿಕಿ ಸಾವಿನ ವಿಷಯ ಕೇಳಿ ನಮಗೂ ಬೇಸರವಾಗಿದೆ. ಅವರ ಮನೆಯವರಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಜಬೀವುಲ್ಲಾ ಮುಜಾಹಿದ್ ತಿಳಿಸಿದ್ದಾರೆ.

ಅಫ್ಘಾನ್​ನ ಕಂದಹಾರ್​ದಲ್ಲಿ ನಡೆದ ಸಂಘರ್ಷವನ್ನು ವರದಿ ಮಾಡಲು ಫೋಟೋಜರ್ನಲಿಸ್ಟ್​ ಡ್ಯಾನಿಶ್ ಸಿದ್ಧಿಕಿ ತೆರಳಿದ್ದರು. ಅಫ್ಘಾನಿಸ್ತಾನ ಸೇನೆಯ ವಿಶೇಷ ದಳ ಮತ್ತು ತಾಲಿಬಾನ್ ಉಗ್ರರ ನಡುವೆ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಗುಂಡು ತಾಗಿ ಡ್ಯಾನಿಶ್​ ಸಿದ್ಧಿಕಿ ಪ್ರಾಣ ಕಳೆದುಕೊಂಡಿದ್ದರು. ರಾಯ್ಟರ್ಸ್​ (Reuter) ಸುದ್ದಿ ಮಾಧ್ಯಮದಲ್ಲಿ ಫೋಟೋ ಜರ್ನಲಿಸ್ಟ್ ಆಗಿದ್ದ ಡ್ಯಾನಿಶ್​ ಸಿದ್ಧಿಕಿ ಅಫ್ಘಾನಿಸ್ತಾನದ ಸೇನಾ ಪಡೆ ಮತ್ತು ತಾಲಿಬಾನ್ ನಡುವೆ ನಡೆಯುತ್ತಿದ್ದ ದಾಳಿಯ ವೇಳೆ ಅಲ್ಲಿದ್ದರು. 2018ರಲ್ಲಿ ಡ್ಯಾನಿಶ್​ ರೋಹಿಂಗ್ಯ ನಿರಾಶ್ರಿತರ ಬಿಕ್ಕಟ್ಟಿನ ಬಗ್ಗೆ ತೆಗೆದ ಫೋಟೋ ಮತ್ತು ಡಾಕ್ಯುಮೆಂಟರಿಗೆ ಪ್ರತಿಷ್ಠಿತ ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದಿದ್ದರು.

ಈ ಹಿಂದೆ ದೆಹಲಿಯಲ್ಲಿ ಪೌರತ್ವ ನಿಷೇಧ ಕಾಯ್ದೆಯ ವೇಳೆ ನಡೆದ ಗಲಭೆ ಸಂದರ್ಭದಲ್ಲೂ ಡ್ಯಾನಿಶ್ ಸಿದ್ಧಿಕಿ ಸೆರೆ ಹಿಡಿದಿದ್ದ ಫೋಟೋಗಳು ಮೆಚ್ಚುಗೆಗೆ ಪಾತ್ರವಾಗಿದ್ದವು. ಅಫ್ಘಾನ್ ಸೇನಾಪಡೆ ಮತ್ತು ತಾಲಿಬಾನ್ ಉಗ್ರರ ನಡುವಿನ ಸಂಘರ್ಷದ ಬಗ್ಗೆ ವಿಶೇಷ ವರದಿ ಮಾಡಲು ತೆರಳಿದ್ದಾಗ ಗುರುವಾರ ಸಂಜೆ ಡ್ಯಾನಿಶ್ ಸಿದ್ಧಿಕಿ ಹತ್ಯೆಗೀಡಾಗಿದ್ದರು.

ಅಪ್ಘಾನ್ ಸೇನೆ ಮತ್ತು ತಾಲಿಬಾನ್ ಉಗ್ರರ ನಡುವೆ ನಡೆದ ಈ ಸಂಘರ್ಷದಲ್ಲಿ ಸಾಕಷ್ಟು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡ್ಯಾನಿಶ್ ಸಿದ್ಧಿಕಿ ಅವರ ಮೃತದೇಹವನ್ನು ಇಂದು ಭಾರತಕ್ಕೆ ಹಸ್ತಾಂತರಿಸಲಾಗುವುದು. ಇದೆಲ್ಲದರ ನಡುವೆ ಫೋಟೋಜರ್ನಲಿಸ್ಟ್​ ಡ್ಯಾನಿಶ್​ ಸಿದ್ಧಿಕಿ ಸಾವನ್ನಪ್ಪಿದ್ದಾದರೂ ಹೇಗೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ: Danish Siddiqui: ಅಫ್ಘಾನ್ ಸೇನೆ- ತಾಲಿಬಾನ್ ಉಗ್ರರ ಸಂಘರ್ಷದಲ್ಲಿ ಭಾರತದ ಫೋಟೋ ಜರ್ನಲಿಸ್ಟ್​ ಡ್ಯಾನಿಶ್​ ಸಿದ್ಧಿಕಿ ಹತ್ಯೆ

(Taliban Denies Role in Indian Photojournalist Danish Siddiqui’s Death and Handed over the Body to Red Cross)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada