
ಬ್ಯಾಂಕಾಕ್, ಜುಲೈ 03: ಈಶಾನ್ಯ ಥೈಲ್ಯಾಂಡ್‌ನ ಮುಕ್ದಹಾನ್ ಪ್ರಾಂತ್ಯದಲ್ಲಿ ಅತ್ಯಂತ ಭೀಕರ ಹಾಗೂ ಮನಕಲಕುವ ಅಪಘಾತ(Accident)ವೊಂದು ಸಂಭವಿಸಿದೆ. ಹೆತ್ತವರ ಅನುಮತಿಯಿಲ್ಲದೆ 11 ವರ್ಷದ ಬಾಲಕನೊಬ್ಬ ವಾಹನ ಚಲಾಯಿಸಿಕೊಂಡು , ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬೌದ್ಧ ಸನ್ಯಾಸಿಗಳಿಗೆ ಡಿಕ್ಕಿ ಹೊಡೆದಿದೆ. ಈ ಘೋರ ಅಪಘಾತದಲ್ಲಿ ಒಂಬತ್ತು ಬೌದ್ಧ ಸನ್ಯಾಸಿಗಳು ಸಾವನ್ನಪ್ಪಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.
‘ಬುದ್ಧೋ ಬುದ್ಧೋ’ ಎನ್ನುತ್ತಿದ್ದಾಗಲೇ ಅಪ್ಪಳಿಸಿತು ಸಾವು
ಸುಮಾರು 35 ಸನ್ಯಾಸಿಗಳು ಮತ್ತು ಐದು ಜನ ಸಾಮಾನ್ಯ ಅನುಯಾಯಿಗಳ ಗುಂಪು ಮುಕ್ದಹಾನ್ ಪ್ರಾಂತ್ಯದ ರಸ್ತೆಯ ಮೂಲಕ ತೀರ್ಥಯಾತ್ರೆಗಾಗಿ ನಡೆದುಕೊಂಡು ಹೋಗುತ್ತಿತ್ತು. ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಬದುಕುಳಿದ ಫ್ರಾ ಸೋಂಪಾಂಗ್ ಎಂಬ ಸನ್ಯಾಸಿ ಘಟನೆ ಬಗ್ಗೆ ಮಾತನಾಡಿ, ನಾವೆಲ್ಲರೂ ‘ಬುದ್ಧೋ, ಬುದ್ಧೋ’ ಎಂದು ಧ್ಯಾನ ಮಂತ್ರ ಜಪಿಸುತ್ತಾ ಸಾಗುತ್ತಿದ್ದೆವು. ಈ ವೇಳೆ ಬಾಲಕನೊಬ್ಬ ಓಡಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಇದ್ದಕ್ಕಿದ್ದಂತೆ ವೇಗದಲ್ಲಿ ನಮ್ಮ ಸಾಲಿಗೆ ಡಿಕ್ಕಿ ಹೊಡೆಯಿತು. ಮೊದಲ ಒಂಬತ್ತು ಸನ್ಯಾಸಿಗಳು ಬದುಕುಳಿದರು, ಆದರೆ ಉಳಿದವರು ಕಾರು ಡಿಕ್ಕಿಯ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದರು ಎಂದು ಕಣ್ಣೀರಿಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಐವರು ಸನ್ಯಾಸಿಗಳು ಸ್ಥಳದಲ್ಲೇ ಮೃತಪಟ್ಟರೆ, ಇನ್ನು ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೂವರು ಸನ್ಯಾಸಿಗಳ ಸ್ಥಿತಿ ಗಂಭೀರವಾಗಿದೆ.
ಮತ್ತಷ್ಟು ಓದಿ: ಒಂದೇ ವರ್ಷದಲ್ಲಿ 10 ಕೋಟಿ ರೂ ಟ್ರಾಫಿಕ್ ಫೈನ್: ವಸೂಲಾಗಿದ್ದು 1 ಕೋಟಿ ರೂ. ಮಾತ್ರ
ಮನೆಯಲ್ಲಿ ಯಾರೂ ಇಲ್ಲದಾಗ ಕಾರು ತಂದಿದ್ದ ಬಾಲಕ
ಪೊಲೀಸ್ ತನಿಖೆಯ ಪ್ರಕಾರ, ಅಪಘಾತದ ಸಮಯದಲ್ಲಿ ಬಾಲಕನ ಮನೆಯಲ್ಲಿ ಯಾರೂ ಇರಲಿಲ್ಲ. ಆತ ಅಸ್ವಸ್ಥನಾಗಿದ್ದ ಕಾರಣ ಶಾಲೆಗೆ ಹೋಗದೆ ಮನೆಯಲ್ಲೇ ಉಳಿದಿದ್ದ. ಈ ವೇಳೆ ಹೆತ್ತವರಿಗೆ ತಿಳಿಸದೆ ಕಾರಿನ ಕೀ ತಗೆದುಕೊಂಡು ರಸ್ತೆಗಿಳಿದಿದ್ದಾನೆ. ಕಾರು ಕಾಣೆಯಾಗಿರುವುದನ್ನು ಅರಿತ ಪೋಷಕರು ಪೊಲೀಸರಿಗೆ ದೂರು ನೀಡುವಷ್ಟರಲ್ಲೇ ಈ ಭೀಕರ ದುರಂತ ಸಂಭವಿಸಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ ಆತ ವಿಶೇಷ ಅಗತ್ಯವಿರುವ ಬಾಲಕ ಎಂದು ತಿಳಿದುಬಂದಿದ್ದು, ವೈದ್ಯರು ಮತ್ತು ಪೋಷಕರ ತಂಡ ಆತನನ್ನು ನೋಡಿಕೊಳ್ಳುತ್ತಿದೆ.
🚨 BREAKING #THAILAND
Tragic..🔴 THAILAND : MOMENT AN 11-year-old BOY CRASHED INTO A PROCESSION OF BUDDHIST MONKS IN MUKDAHAN
He took his parents’ pickup truck without permission.
At least 9 monks have died and more than a dozen are injured.#Accident #Accidente pic.twitter.com/XeHuHbgH1v— LW World News (@LW_WorldNews) July 2, 2026
ಥೈಲ್ಯಾಂಡ್‌ನಲ್ಲಿ ಬೌದ್ಧ ಸನ್ಯಾಸಿಗಳನ್ನು ಅತ್ಯಂತ ಪವಿತ್ರವಾಗಿ ಮತ್ತು ಗೌರವದಿಂದ ಕಾಣಲಾಗುತ್ತದೆ. ಹೀಗಾಗಿ ಈ ಘಟನೆ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಗಾಯಗೊಂಡ ಸನ್ಯಾಸಿಗಳ ಪ್ರಾಣ ಉಳಿಸಲು ಮುಕ್ದಹಾನ್ ಆಸ್ಪತ್ರೆಯು ಸಾರ್ವಜನಿಕರಲ್ಲಿ ತುರ್ತು ರಕ್ತದಾನ ಮಾಡುವಂತೆ ಮನವಿ ಮಾಡಿದೆ.
ಮುಕ್ದಹಾನ್ ಪ್ರಾಂತ್ಯದ ಗವರ್ನರ್ ವೊರಾಯನ್ ಬುನ್ನಾರತ್ ಈ ಕುರಿತು ಮಾತನಾಡಿ, ಈ ಘಟನೆ ಇಡೀ ದೇಶದ ರಸ್ತೆ ಸುರಕ್ಷತೆಗೆ ಒಂದು ದೊಡ್ಡ ಎಚ್ಚರಿಕೆಯಾಗಬೇಕು. ಅಪಘಾತಗಳನ್ನು ತಡೆಗಟ್ಟುವ ವಿಷಯದಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡುವುದು ಎಷ್ಟು ಮುಖ್ಯ ಎಂಬುದಕ್ಕೆ ಇದೊಂದು ಕಣ್ಣು ತೆರೆಸುವ ಪಾಠ ಎಂದು ಹೇಳಿದ್ದಾರೆ. ವಾಹನವನ್ನು ಸದ್ಯ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ