ಕೊಲೆಯ ಭೀತಿಯಿದೆ, ತಾಯ್ನಾಡಲ್ಲೇ ಸಾಯುತ್ತೇನೆ; ಬಾಂಗ್ಲಾದೇಶಕ್ಕೆ ಹೋಗುತ್ತೇನೆಂದ ಶೇಖ್ ಹಸೀನಾ

ಬಾಂಗ್ಲಾದೇಶದಲ್ಲಿ ಭಾರೀ ಪ್ರತಿಭಟನೆ ನಡೆದು ಸರ್ಕಾರವೇ ಪತನವಾಗಿತ್ತು. ಜೀವಭೀತಿಯ ನಡುವೆಯೂ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳಲು ಶೇಖ್ ಹಸೀನಾ ಪ್ಲಾನ್ ಮಾಡುತ್ತಿದ್ದಾರೆ. ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿಯಿಂದ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ, ತಾವು ಹಾಗೂ ತಮ್ಮ ನಿಷೇಧಿತ 'ಅವಾಮಿ ಲೀಗ್' ಪಕ್ಷದ ಹಿರಿಯ ನಾಯಕರು ಮುಂಬರುವ ಡಿಸೆಂಬರ್ ಆಸುಪಾಸಿನಲ್ಲಿ ತಾಯ್ನಾಡಿಗೆ ಮರಳಿ, ನ್ಯಾಯಾಲಯದ ಮುಂದೆ ಶರಣಾಗಗುವ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿದ್ದಾರೆ. ನನಗೆ ಜೀವ ಬೆದರಿಕೆ ಇದೆ. ಹೀಗಾಗಿ, ನಾನು ಬಾಂಗ್ಲಾದೇಶಕ್ಕೆ ಮರಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಕೊಲೆಯ ಭೀತಿಯಿದೆ, ತಾಯ್ನಾಡಲ್ಲೇ ಸಾಯುತ್ತೇನೆ; ಬಾಂಗ್ಲಾದೇಶಕ್ಕೆ ಹೋಗುತ್ತೇನೆಂದ ಶೇಖ್ ಹಸೀನಾ
Sheikh Hasina
Image Credit source: Getty Image

Updated on: Jul 10, 2026 | 4:23 PM

ನವದೆಹಲಿ, ಜುಲೈ 10: ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿಯಿಂದ ಮರಣದಂಡನೆ ಶಿಕ್ಷೆಗೆ ಒಳಗಾಗಿ ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಮುಂಬರುವ ಡಿಸೆಂಬರ್‌ನಲ್ಲಿ ತಾಯ್ನಾಡಿಗೆ ಮರಳಿ ನ್ಯಾಯಾಲಯದ ಮುಂದೆ ಶರಣಾಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿ ಸಂಸ್ಥೆ ‘ರಾಯಿಟರ್ಸ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ 78 ವರ್ಷದ ಶೇಖ್ ಹಸೀನಾ, “ನಾನು ಬಾಂಗ್ಲಾದೇಶಕ್ಕೆ ಮರಳಿದ ತಕ್ಷಣ ಅವರು ನನ್ನನ್ನು ಬಂಧಿಸಬಹುದು, ಅಥವಾ ಕೊಲ್ಲಲೂಬಹುದು. ಆದರೂ ನಾನು ಹೋಗಲೇಬೇಕು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: “ನಾನು ಈ ವರ್ಷವೇ ನನ್ನ ದೇಶಕ್ಕೆ ಮರಳುತ್ತೇನೆ”; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ

ಕಾರ್ಯಕರ್ತರ ಮೇಲಿನ ದೌರ್ಜನ್ಯ:

ನಮ್ಮ ‘ಅವಾಮಿ ಲೀಗ್’ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತಾಯ್ನಾಡಿನಲ್ಲಿ ತೀವ್ರ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಅವರ ಪರವಾಗಿ ನಿಲ್ಲಲು ನಾನೂ ಶರಣಾಗುತ್ತೇನೆ ಎಂದು ಅವರು ಹೇಳಿದ್ದಾರೆ. “ಸಾವು ಬರುವುದಾದರೆ ಅದು ನನ್ನ ಸ್ವಂತ ಮಣ್ಣಿನಲ್ಲೇ ಬರಲಿ. ಎಲ್ಲಿ ನನ್ನ ಪೋಷಕರಾದ ಬಾಂಗ್ಲಾದೇಶದ ಸಂಸ್ಥಾಪಕ ನಾಯಕ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ದಫನ ಮಾಡಲಾಗಿದೆಯೋ, ಎಲ್ಲಿ ಅವರ ರಕ್ತ ಹರಿದಿದೆಯೋ ಅಲ್ಲೇ ನನಗೂ ಸಾವು ಬರಲಿ” ಎಂದು ಅವರು ಭಾವುಕರಾಗಿದ್ದಾರೆ.

ತಮ್ಮ ಮೇಲಿನ ಪ್ರಕರಣಗಳು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿವೆ ಎಂದು ಶೇಖ್ ಹಸೀನಾ ಹೇಳಿದ್ದಾರೆ. ಒಮ್ಮೆ ಕಾನೂನು ಪ್ರಕ್ರಿಯೆ ಆರಂಭವಾದರೆ, ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ನ್ಯಾಯಾಲಯಗಳು ಎಷ್ಟು ಏಕಪಕ್ಷೀಯವಾಗಿ ಕೆಲಸ ಮಾಡುತ್ತಿವೆ ಎಂಬುದು ಜಗತ್ತಿಗೆ ತಿಳಿಯಲಿದೆ. ಅದನ್ನು ಸಾಬೀತುಪಡಿಸುವುದಕ್ಕಾಗಿಯೇ ನಾನು ಸ್ವಯಂಪ್ರೇರಿತರಾಗಿ ನ್ಯಾಯಾಲಯದ ಮುಂದೆ ಹಾಜರಾಗುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದ ಚುನಾವಣೆಯನ್ನು ರದ್ದುಗೊಳಿಸಿ; ಮಾಜಿ ಪ್ರಧಾನಿ ಶೇಖ್ ಹಸೀನಾ ಒತ್ತಾಯ

ಇದೇ ವೇಳೆ ತಮ್ಮ 20 ವರ್ಷಗಳ ಸುದೀರ್ಘ ಆಡಳಿತಾವಧಿಯನ್ನು ಸ್ಮರಿಸಿದ ಶೇಖ್ ಹಸೀನಾ, “ದೀರ್ಘಕಾಲದಿಂದ ಸರ್ಕಾರ ನಡೆಸಿದಾಗ ತಪ್ಪುಗಳು ಆಗುವುದು ಸಹಜ. ಯಾವುದೇ ಸರ್ಕಾರವೂ ತಪ್ಪಿನಿಂದ ಹೊರತಾಗಿಲ್ಲ. ಆದರೆ, ಸರ್ಕಾರದ ಒಳ್ಳೆಯದು ಮತ್ತು ಕೆಟ್ಟದ್ದನ್ನು ನಿರ್ಣಯಿಸುವ ಹಕ್ಕು ಜನರಿಗಿದೆ. ಆ ತೀರ್ಪನ್ನು ನಾನು ಬಾಂಗ್ಲಾದೇಶದ ಜನರಿಗೇ ಬಿಡುತ್ತೇನೆ” ಎಂದಿದ್ದಾರೆ.

ಭಾರತಕ್ಕೆ ಪಲಾಯನ ಮಾಡಿದ್ದ ಶೇಖ್ ಹಸೀನಾ:

2024ರಲ್ಲಿ ನಡೆದ ಭೀಕರ ವಿದ್ಯಾರ್ಥಿ ದಂಗೆಯ ಬಳಿಕ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದರು. ಅಂದಿನಿಂದ ಅವರಿಗೆ ಭಾರತ ಸರ್ಕಾರ ಆಶ್ರಯ ನೀಡಿದೆ. ಬಾಂಗ್ಲಾದೇಶದ ಪ್ರಸ್ತುತ ಸರ್ಕಾರವು ಶೇಖ್ ಹಸೀನಾ ಅವರನ್ನು ತಮಗೆ ಹಸ್ತಾಂತರಿಸುವಂತೆ ಭಾರತಕ್ಕೆ ಪದೇ ಪದೇ ಪತ್ರ ಬರೆಯುತ್ತಿದೆ. ನವೆಂಬರ್ 2025ರಲ್ಲಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು (ICT) ಶೇಖ್ ಹಸೀನಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಮೊದಲು ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಮತ್ತು ಈಗ ತಾರಿಕ್ ರೆಹಮಾನ್ ನೇತೃತ್ವದ ಬಿಎನ್‌ಪಿ (BNP) ಸರ್ಕಾರವು ಹಸೀನಾ ಅವರನ್ನು ತಮಗೆ ಹಸ್ತಾಂತರಿಸುವಂತೆ ಭಾರತಕ್ಕೆ ನಿರಂತರವಾಗಿ ಪತ್ರಗಳನ್ನು ಬರೆಯುತ್ತಿವೆ. “ಅವರು ಪತ್ರ ಬರೆಯುತ್ತಿರಲಿ, ನಾನೇ ಸ್ವತಃ ಅಲ್ಲಿಗೆ ಹೋಗುತ್ತೇನೆ, ನನ್ನನ್ನು ಯಾರೂ ಕಳುಹಿಸಬೇಕಾಗಿಲ್ಲ” ಎಂದು ಶೇಖ್ ಹಸೀನಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us