ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿದವರನ್ನು ಹುಡುಕಿ, ಶಿಕ್ಷೆ ನೀಡುತ್ತೇವೆ; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭರವಸೆ
ತಂತ್ರಜ್ಞಾನದ ಈ ಯುಗದಲ್ಲಿ ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ದುರ್ಗಾ ಪೂಜೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಆರೋಪಿಗಳನ್ನು ಆದಷ್ಟು ಬೇಗ ಸೆರೆ ಹಿಡಿದು, ಶಿಕ್ಷೆ ವಿಧಿಸಲಾಗುವುದು ಎಂದು ಶೇಖ್ ಹಸೀನಾ ಹೇಳಿದ್ದಾರೆ.
ಢಾಕಾ: ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ಹಿಂದೂ ದೇವಸ್ಥಾನದ ಮೇಲೆ ಗೂಂಡಾಗಳು ದಾಳಿ ನಡೆಸಿ ಗುರುವಾರ ನಾಲ್ಕು ಜನರನ್ನು ಹತ್ಯೆ ಮಾಡಿದ್ದರು. ಬಾಂಗ್ಲಾದೇಶದ ಅನೇಕ ಭಾಗಗಳಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗಿತ್ತು. ಇದಕ್ಕೆ ಹಿಂದೂ ಪ್ರಧಾನ ದೇಶವಾದ ಭಾರತದ ಹಿಂದೂಗಳಿಂದಲೂ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ದುರ್ಗಾ ಪೂಜೆ ನಡೆಯುವ ಸ್ಥಳ ಮತ್ತು ಹಿಂದೂ ದೇವಸ್ಥಾನಗಳ ಮೇಲೆ ದಾಳಿ ಮಾಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಕೋಮು ಗಲಭೆಗೆ ಕಾರಣರಾದ ಆರೋಪಿಗಳನ್ನು ಹುಡುಕಿ ಅವರಿಗೆ ತಕ್ಕ ಶಿಕ್ಷೆ ನೀಡಲಾಗುವುದು. ಈ ಹಿಂಸಾಚಾರವನ್ನು ನಮ್ಮ ಸರ್ಕಾರ ಎಂದಿಗೂ ಸಮರ್ಥಿಸಿಕೊಳ್ಳುವುದಿಲ್ಲ. ಆರೋಪಿಗಳಿಗೆ ಆದಷ್ಟು ಬೇಗ ಶಿಕ್ಷೆ ನೀಡಲಾಗುವುದು ಎಂಬ ಭರವಸೆಯನ್ನು ನಾನು ನೀಡುತ್ತೇನೆ. ತಪ್ಪು ಮಾಡಿದವರು ಯಾವುದೇ ಧರ್ಮದವರಾದರೂ ದೇಶದ ಶಾಂತಿ ಕದಡುವ ಪ್ರಯತ್ನ ಮಾಡಿದವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ತಂತ್ರಜ್ಞಾನದ ಈ ಯುಗದಲ್ಲಿ ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ದುರ್ಗಾ ಪೂಜೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಆರೋಪಿಗಳನ್ನು ಆದಷ್ಟು ಬೇಗ ಸೆರೆ ಹಿಡಿದು, ಶಿಕ್ಷೆ ವಿಧಿಸಲಾಗುವುದು ಎಂದು ಶೇಖ್ ಹಸೀನಾ ಹೇಳಿದ್ದಾರೆ.
ನಿನ್ನೆ ನವರಾತ್ರಿ ಹಿನ್ನೆಲೆಯಲ್ಲಿ ದುರ್ಗಾ ಪೂಜೆ ನಡೆಸುತ್ತಿದ್ದಾಗ ಅಪರಿಚಿತರ ಗುಂಪೊಂದು ದೇವಸ್ಥಾನದ ಮೇಲೆ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ 22 ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಸಾಕಷ್ಟು ಜನರು ಗಾಯಗೊಂಡಿದ್ದರು. ಇದೇ ವೇಳೆ ಬಾಂಗ್ಲಾದೇಶದ ಚಂದ್ಪುರದ ಹಜಿಗಂಜ್, ಚತ್ತೋಗ್ರಾಂನ ಬಾಂಶ್ಖಲಿ ಮತ್ತು ಕಾಕ್ಸ್ ಬಜಾರ್ನ ಪೆಕುವಾದಲ್ಲಿ ಕೂಡ ಹಿಂದೂ ದೇವಾಲಯಗಳಲ್ಲಿ ದಾಂಧಲೆ ಎಬ್ಬಿಸಿರುವ ಘಟನೆ ವರದಿಯಾಗಿತ್ತು.
ಹಲವೆಡೆ ಪೂಜಾ ಮಂಟಪಗಳನ್ನು ಧ್ವಂಸ ಮಾಡಲಾಗಿತ್ತು. ಬಾಂಗ್ಲಾ ಹಿಂದೂಗಳನ್ನು ರಕ್ಷಿಸುವ ಹೊಣೆ ಬಾಂಗ್ಲಾದೇಶ ಸರ್ಕಾರ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರತಿಕ್ರಿಯೆ ನೀಡಿತ್ತು. ದಾಳಿಕೋರರು ಹಿಂದೂ ದೇವರ ಮೂರ್ತಿಗಳನ್ನು ಧ್ವಂಸಗೊಳಿಸಿ, ಕುರಾನ್ ಪ್ರತಿ ಹಿಡಿದು ಕುಣಿದಿದ್ದಾರೆ. ಹಿಂದೂ ಸಮುದಾಯದ ಹಾಗೂ ನಂಬಿಕೆ ಮೇಲೆ ನಡೆದ ದಾಳಿಯಿಂದ ಹಿಂದೂ ಸಮಾಜ ತೀವ್ರವಾಗಿ ನೊಂದಿದೆ. ಬಾಂಗ್ಲಾದೇಶದಲ್ಲಿ ಹಿಂದೂಳ ಮೇಲೆ ನಡೆಯುತ್ತಿರುವ ದಾಳಿ ಮುಂದುವರಿದಿದೆ. ಪದೇ ಪದೆ ಈ ರೀತಿ ದಾಳಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ಹಿಂದೂ ದೇವಸ್ಥಾನದ ಮೇಲೆ ದಾಳಿ; ಮೂವರು ಸಾವು
Jamboo Savari 2021: ಮೈಸೂರು ಅರಮನೆಯಲ್ಲಿ ವಿಜಯದಶಮಿ ಸಂಭ್ರಮ; ಇಂದು ಸಂಜೆ ಐತಿಹಾಸಿಕ ದಸರಾ ಜಂಬೂಸವಾರಿ