ಅಮೆರಿಕ: ಭೀಕರ ರಸ್ತೆ ಅಪಘಾತ; ಮೂವರು ಭಾರತೀಯರು ಸಾವು
ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ ಕೌಂಟಿಯಲ್ಲಿನ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಭಾರತೀಯ ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅತಿಯಾದ ವೇಗದಿಂದ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕೆರೊಲಿನಾ, ಏಪ್ರಿಲ್ 28: ಅಮೆರಿಕದ ಸೌತ್ ಕೆರೊಲಿನಾದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಮೂವರು ಗುಜರಾತಿ ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಗುಜರಾತ್‌ನ ಆನಂದ್ ಜಿಲ್ಲೆಯವರು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಎಂದು ಗುರುತಿಸಲಾಗಿದೆ. ಮೃತರು ಪ್ರಯಾಣಿಸುತ್ತಿದ್ದ ಎಸ್‌ಯುವಿ ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ ಕೌಂಟಿಯಲ್ಲಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅತಿಯಾದ ವೇಗದಿಂದ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಸಾಗುತ್ತಿದ್ದ ಎಸ್ ಯುವಿ ಹಲವು ಬಾರಿ ರಸ್ತೆಯಲ್ಲಿ ಪಲ್ಟಿಯಾಗಿ ಮರದ ಮೇಲೆ ಸಿಲುಕಿಕೊಂಡಿತ್ತು. ಆ ವೇಳೆ ಕಾರು ಸುಮಾರು 20 ಅಡಿ ಎತ್ತರಕ್ಕೆ ಏರಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ವೇಗದ ಮಿತಿಯನ್ನು ಮೀರಿದೆ ಎಂದು ಮುಖ್ಯ ಉಪ ಕರೋನರ್ ಮೈಕ್ ಎಲ್ಲಿಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಘಟನೆಯಲ್ಲಿ ಬೇರೆ ಯಾವುದೇ ವಾಹನಗಳು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಮತ್ತಷ್ಟು ಓದಿ: ಗಾಜಾದ ಆಸ್ಪತ್ರೆಯಲ್ಲಿ ಸಾಮೂಹಿಕ ಸಮಾಧಿ, 200ಕ್ಕೂ ಅಧಿಕ ಶವಗಳು ಪತ್ತೆ
ಸೌತ್ ಕೆರೊಲಿನಾ ಹೈವೇ ಪೆಟ್ರೋಲ್, ಗ್ಯಾಂಟ್ ಫೈರ್, ರೆಸ್ಕ್ಯೂ, ಮತ್ತು ಗ್ರೀನ್‌ವಿಲ್ಲೆ ಕೌಂಟಿ ಇಎಂಎಸ್ ಘಟಕಗಳು ಸೇರಿದಂತೆ ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿ ನೆರವು ನೀಡಿವೆ. ಈ ವೇಳೆ ಕಾರಿನಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬದುಕುಳಿದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ