ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ ಖತಂ!: ಹೆಣ್ಣುಮಕ್ಕಳ ಕೊಲೆಗೆ ಸೇನೆ ಮೂಲಕ ಭೀಕರ ಪ್ರತಿಕಾರ ತೀರಿಸಿಕೊಂಡ ಅಮೆರಿಕ ಅಧ್ಯಕ್ಷ ಟ್ರಂಪ್

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ, ಯುಎಸ್ ಮಿಲಿಟರಿ 'ಟ್ರೆನ್ ಡಿ ಅರಾಗುವಾ' ಗ್ಯಾಂಗ್ ನಾಯಕ ನಿನೋ ಗೆರೆರೊನನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿದೆ. ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಯಶಸ್ವಿ ಕಾರ್ಯಾಚರಣೆ ಘೋಷಿಸಿ, ಬೈಡನ್ ಸರ್ಕಾರದ ಗಡಿ ನೀತಿಗಳನ್ನು ತೀವ್ರವಾಗಿ ಟೀಕಿಸಿದರು. ಅಕ್ರಮ ಪ್ರವೇಶದಿಂದಾದ ಅಪರಾಧಗಳಿಗೆ ನ್ಯಾಯ ದೊರಕಿದೆ ಎಂದ ಅವರು, ವೆನೆಜುವೆಲಾ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆದಿದೆ ಎಂದು ತಿಳಿಸಿದ್ದಾರೆ.

ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ ಖತಂ!: ಹೆಣ್ಣುಮಕ್ಕಳ ಕೊಲೆಗೆ ಸೇನೆ ಮೂಲಕ ಭೀಕರ ಪ್ರತಿಕಾರ ತೀರಿಸಿಕೊಂಡ ಅಮೆರಿಕ ಅಧ್ಯಕ್ಷ ಟ್ರಂಪ್
ಸಾಂದರ್ಭಿಕ ಚಿತ್ರ
Image Credit source: Tv9 kannada

Updated on: Jun 13, 2026 | 9:04 AM

ವಾಷಿಂಗ್ಟನ್, ಜೂ.13: ಜಗತ್ತಿನ ಅತ್ಯಂತ ಕ್ರೂರ ಮತ್ತು ರಕ್ತಪಿಪಾಸು ಭಯೋತ್ಪಾದಕ ಸಂಘಟನೆಗಳಲ್ಲಿ ಒಂದಾದ ‘ಟ್ರೆನ್ ಡಿ ಅರಾಗುವಾ’ (Tren De Aragua) ಗ್ಯಾಂಗ್‌ನ ಮುಖ್ಯಸ್ಥ ‘ನಿನೋ ಗೆರೆರೊ’ (Niño Guerrero) ಅಮೆರಿಕ ಮಿಲಿಟರಿಯ ಭೀಕರ ದಾಳಿಗೆ ಹತನಾಗಿದ್ದಾನೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ಆದೇಶದ ಮೇರೆಗೆ ಯುಎಸ್ ಸೌದರ್ನ್ ಕಮಾಂಡ್ (United States Southern Command) ನಡೆಸಿದ ಅತ್ಯಂತ ವೇಗದ ವೈಮಾನಿಕ ದಾಳಿಯಲ್ಲಿ (Kinetic Strike) ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ ಎಂದು ಟ್ರಂಪ್ ತಮ್ಮ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸುದೀರ್ಘ ಪೋಸ್ಟ್ ಬರೆದಿರುವ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ನೀತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನಾನು ಎರಡನೇ ಬಾರಿಗೆ ಅಧಿಕಾರಕ್ಕೆ ಬರುವ ಮುನ್ನ, ಜೋ ಬೈಡನ್ ಅವರು ಅಮೆರಿಕದ ದಕ್ಷಿಣ ಗಡಿಯನ್ನು ಮುಕ್ತವಾಗಿ ಬಿಟ್ಟು ಲಕ್ಷಾಂತರ ಅಕ್ರಮ ಕ್ರಿಮಿನಲ್‌ಗಳು ದೇಶದೊಳಗೆ ನುಗ್ಗಲು ಅವಕಾಶ ಮಾಡಿಕೊಟ್ಟಿದ್ದರು. ಈ ವಿದೇಶಿ ಕ್ರಿಮಿನಲ್ ಸೈನ್ಯವು ಅಮೆರಿಕದ ನಾಗರಿಕರ ಮೇಲೆ ಅತ್ಯಾಚಾರ, ದೌರ್ಜನ್ಯ ಮತ್ತು ಕೊಲೆಗಳನ್ನು ಮಾಡಲು ಬೈಡನ್ ಸರ್ಕಾರವೇ ಪರೋಕ್ಷವಾಗಿ ಕಾರಣವಾಗಿತ್ತು” ಎಂದು ಟ್ರಂಪ್ ಕಿಡಿಕಾರಿದ್ದಾರೆ.

“ನನ್ನ ಚುನಾವಣಾ ಪ್ರಚಾರದ ಸಮಯದಲ್ಲಿ, ಈ ರಾಕ್ಷಸರನ್ನು ನಮ್ಮ ದೇಶದಿಂದ ಓಡಿಸುವುದಾಗಿ ಮತ್ತು ಇವರಿಂದ ಕೊಲೆಯಾದ ಅಮಾಯಕ ಅಮೆರಿಕನ್ನರ ಕುಟುಂಬಗಳಿಗೆ ನ್ಯಾಯ ಒದಗಿಸುವುದಾಗಿ ನಾನು ವಾಗ್ದಾನ ಮಾಡಿದ್ದೆ. 12 ವರ್ಷದ ಬಾಲಕಿ ಜೊಸೆಲಿನ್ ನುಂಗರಾಯ್, 22 ವರ್ಷದ ಯುವತಿ ಲೇಕನ್ ರೈಲಿ ಸೇರಿದಂತೆ ಹತ್ಯೆಯಾದ ನೂರಾರು ಸುಂದರ ಆತ್ಮಗಳ ಪರವಾಗಿ ಅಮೆರಿಕ ಮಿಲಿಟರಿ ಇಂದು ಪ್ರತಿಕಾರ ತೀರಿಸಿಕೊಂಡಿದೆ. ಅವರ ಕುಟುಂಬಗಳಿಗೆ ಹಾಗೂ ಪ್ರೀತಿಪಾತ್ರರಿಗೆ ನ್ಯಾಯ ಸಿಕ್ಕಿದೆ” ಎಂದು ಟ್ರಂಪ್ ಹೇಳಿದ್ದಾರೆ.

ತಮ್ಮ ಆಡಳಿತದ ಆರಂಭದಲ್ಲೇ ‘ಟ್ರೆನ್ ಡಿ ಅರಾಗುವಾ’ ಗ್ಯಾಂಗ್ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದನ್ನು ನೆನಪಿಸಿಕೊಂಡ ಟ್ರಂಪ್, ಈ ಕಾರ್ಯಾಚರಣೆಯನ್ನು ವೆನೆಜುವೆಲಾ ಸರ್ಕಾರದೊಂದಿಗೆ ನಿಕಟವಾಗಿ ಸಂಯೋಜಿಸಿ ಯಶಸ್ವಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್‌ನಿಂದ ಹೊರಟ ಭಾರತೀಯ ಹಡಗುಗಳ ಮೇಲೆ ಇರಾನ್​ನಿಂದ ಡ್ರೋನ್ ದಾಳಿ; ಟ್ರಂಪ್ ಆರೋಪ

“ನಮ್ಮ ಮಿತ್ರರಾಷ್ಟ್ರವಾದ ವೆನೆಜುವೆಲಾ ಸರ್ಕಾರದೊಂದಿಗೆ ನಾವು ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ. ಇದರ ಪರಿಣಾಮವಾಗಿ, ಟ್ರೆನ್ ಡಿ ಅರಾಗುವಾ ಭಯೋತ್ಪಾದಕರಿಗೆ ಈಗ ವೆನೆಜುವೆಲಾದಲ್ಲಾಗಲಿ ಅಥವಾ ಜಗತ್ತಿನ ಬೇರೆಲ್ಲೂ ಸುರಕ್ಷಿತ ಆಶ್ರಯ ತಾಣಗಳಿಲ್ಲ. ಇಂತಹ ಕ್ರೂರ ಕೊಲೆಗಡುಕರು ಮತ್ತು ಡ್ರಗ್ ಮಾಫಿಯಾ ಕಿಂಗ್‌ಗಳನ್ನು ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಾದರೂ ಹುಡುಕಿ ನರಕದ ಆಳಕ್ಕೆ ತಳ್ಳಲು ಅಮೆರಿಕ ಸದಾ ಸಿದ್ಧವಿದೆ” ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us