
ವಾಷಿಂಗ್ಟನ್, ಜುಲೈ 07: ಇರಾನ್(Iran) ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇರಾನ್ ನಮ್ಮೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ನಾವು ಅದರ ಕಥೆ ಮುಗಿಸುತ್ತೇವೆ” ಎಂದು ನೇರವಾಗಿಯೇ ಬೆದರಿಕೆ ಹಾಕಿದ್ದಾರೆ. ಇರಾನ್‌ನ ಪ್ರಮುಖ ತೈಲ ಮತ್ತು ವಿದ್ಯುತ್ ಮೂಲಸೌಕರ್ಯಗಳನ್ನು ಕೆಲವೇ ಗಂಟೆಗಳಲ್ಲಿ ಧೂಳೀಪಟ ಮಾಡುವ ಶಕ್ತಿ ಅಮೆರಿಕಕ್ಕಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಸೋಮವಾರ ಪ್ರಮುಖ ಜಂಟಿ ಸಭೆಯೊಂದರಲ್ಲಿ ಮಾತನಾಡಿದ ಟ್ರಂಪ್, ತಮಗೆ ಯುದ್ಧಕ್ಕಿಂತ ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳುವ ಇಚ್ಛೆಯಿದೆ ಎಂದು ಹೇಳಿದರು. ನಾನು ಶಾಂತಿಯುತ ಇತ್ಯರ್ಥವನ್ನು ಬಯಸುತ್ತೇನೆ. ಇರಾನ್‌ನ 9.1 ಕೋಟಿ ಜನರ ಮೇಲೆ ದಾಳಿ ನಡೆಸಲು ನನಗೆ ಇಷ್ಟವಿಲ್ಲ. ಆದರೆ ಅವರು ಒಪ್ಪದಿದ್ದರೆ, ಕೇವಲ ಒಂದು ಗಂಟೆಯಲ್ಲಿ ಇರಾನ್‌ನ ಎಲ್ಲಾ ಪ್ರಮುಖ ಸೇತುವೆಗಳನ್ನು ನಾವು ಧ್ವಂಸ ಮಾಡಬಲ್ಲೆವು. ಅವರ ಇಂಧನ ಪೂರೈಕೆ, ಆಧುನಿಕ ತೈಲ ಸ್ಥಾವರಗಳು ಮತ್ತು ಇಡೀ ವಿದ್ಯುತ್ ವ್ಯವಸ್ಥೆಯನ್ನು ಮಧ್ಯಾಹ್ನದೊಳಗಾಗಿ ನಾವು ಉಡೀಸ್ ಮಾಡಬಹುದು. ಈ ಶಕ್ತಿ ನಮಗಿದೆ ಎಂಬುದು ಇರಾನ್‌ಗೂ ಚೆನ್ನಾಗಿ ಗೊತ್ತು ಎಂದಿದ್ದಾರೆ.
ಒಂದೇ ದಾಳಿಗೆ ಇರಾನ್ ನಾಯಕರು ಖಲಾಸ್ ಆಗುತ್ತಿದ್ದರು
ಇತ್ತೀಚೆಗೆ ಆಕ್ಸಿಯಾಸ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಮತ್ತೊಂದು ಆಘಾತಕಾರಿ ವಿಷಯ ಹಂಚಿಕೊಂಡಿದ್ದರು. ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಅವರ ಅಂತ್ಯಕ್ರಿಯೆಗಾಗಿ ಇರಾನ್‌ನ ಉಳಿದ ಎಲ್ಲಾ ಉನ್ನತ ನಾಯಕರು ಒಂದೆಡೆ ಸೇರಿದ್ದರು.
ಅವರೆಲ್ಲರೂ ಒಂದೇ ಜಾಗದಲ್ಲಿದ್ದರು, ನಾವು ಮನಸ್ಸು ಮಾಡಿದ್ದರೆ ಒಂದೇ ದಾಳಿಯಲ್ಲಿ ಇರಾನ್‌ನ ಇಡೀ ನಾಯಕತ್ವವನ್ನೇ ನಿರ್ಮೂಲನೆ ಮಾಡಬಹುದಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ, ಏಕೆಂದರೆ ಇರಾನ್‌ನ ಎಲ್ಲರನ್ನೂ ಮುಗಿಸಿದರೆ ಮುಂದೆ ನಮ್ಮ ಜೊತೆ ಮಾತುಕತೆ ನಡೆಸಲು ಯಾರೂ ಉಳಿಯುತ್ತಿರಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಮತ್ತಷ್ಟು ಓದಿ: ‘ಭಾರತವನ್ನು ಇರಾನ್ ಎಂದೂ ಮರೆಯುವುದಿಲ್ಲ’; ಅಯತೊಲ್ಲಾ ಖಮೇನಿ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕೆ ಟೆಹ್ರಾನ್ ಕೃತಜ್ಞತೆ
ಇರಾನ್ ನೀಡಿದ ಖಾರವಾದ ತಿರುಗೇಟು
ಟ್ರಂಪ್ ಅವರ ಈ ಬೆದರಿಕೆ ಹೇಳಿಕೆಗಳನ್ನು ಇರಾನ್ ತೀವ್ರವಾಗಿ ಖಂಡಿಸಿದೆ. ಅರ್ಮೇನಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ಎಕ್ಸ್ನಲ್ಲಿ ಖಾತೆಯಲ್ಲಿ ಅಮೆರಿಕಕ್ಕೆ ತಿರುಗೇಟು ನೀಡಿದೆ:
ಸಂಸ್ಕೃತಿ ಇಲ್ಲದ ಅಮೆರಿಕ: ಅಮೆರಿಕಕ್ಕೆ ನಾಗರಿಕತೆ ಎಂಬುದಿಲ್ಲ, ಖಮೇನಿಯವರ ನಿಧನದ ದುಃಖವನ್ನು ಅಮೆರಿಕ ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನೀವು ಮನುಷ್ಯರನ್ನು ಕೊಲ್ಲಬಹುದು, ಆದರೆ ಅವರ ಆದರ್ಶಗಳನ್ನಲ್ಲ. ನೀವು ಅಯತೊಲ್ಲಾ ಖಮೇನಿ ಅವರನ್ನು ಕೊಂದಿರಬಹುದು. ಆದರೆ ವಾಸ್ತವದಲ್ಲಿ ನೀವು ಸುಗಂಧ ದ್ರವ್ಯದ ಬಾಟಲಿಯನ್ನು ಒಡೆದಿದ್ದೀರಿ, ಈಗ ಅದರ ಪರಿಮಳ (ಅವರ ಆದರ್ಶಗಳು) ಇಡೀ ಜಗತ್ತಿಗೆ ಹರಡಿದೆ ಎಂದು ಇರಾನ್ ಭಾವುಕವಾಗಿ ಉತ್ತರಿಸಿದೆ.
ಮುಂದುವರೆದ ಖಮೇನಿ ಅಂತ್ಯಕ್ರಿಯೆ ಮೆರವಣಿಗೆ
ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಖಮೇನಿ ಅವರ ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್ ಮೂಲಕ ಇರಾನ್‌ನ ಪವಿತ್ರ ನಗರವಾದ ‘ಕೋಮ್’ಗೆ ತರಲಾಗಿದೆ. ಕೋಮ್‌ನ ಜಮ್ಕರನ್ ಮಸೀದಿಯ ಸುತ್ತ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಂಗಳವಾರ ಅಲ್ಲಿ ಬೃಹತ್ ಅಂತ್ಯಕ್ರಿಯೆಯ ಮೆರವಣಿಗೆ ನಡೆಯಲಿದೆ. ಇದರ ನಂತರ, ಮುಂದಿನ ಧಾರ್ಮಿಕ ವಿಧಿವಿಧಾನಗಳಿಗಾಗಿ ಪಾರ್ಥಿವ ಶರೀರವನ್ನು ಇರಾಕ್‌ನ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾಗೆ ಕೊಂಡೊಯ್ಯಲಾಗುವುದು ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ