ಇವರು ವಿದೇಶದ ಬಾದಲ್ ನಂಜುಡಸ್ವಾಮಿ! ಮೊಮ್ಮಕ್ಕಳ ಆಟಿಕೆ ಬಳಸಿ ರಸ್ತೆ ಗುಂಡಿ ಬಗ್ಗೆ ಗಮನ ಸೆಳೆದ ಇಂಗ್ಲೆಂಡ್ನ ವ್ಯಕ್ತಿ
ಇಂಗ್ಲೆಂಡ್ನ ಎಸೆಕ್ಸ್ನ ಕರಾವಳಿ ಪಟ್ಟಣ ಬ್ರೈಟ್ಲಿಂಗ್ಸೀ ರಸ್ತೆ ಗುಂಡಿಗಳ ಬಗ್ಗೆ 66 ವರ್ಷದ ಆ್ಯಂಡಿ ಕಾನ್ರಾಯ್, ಮೊಮ್ಮಕ್ಕಳ ಆಟಿಕೆ ಬಳಸಿ ವಿಭಿನ್ನವಾಗಿ ಗಮನ ಸೆಳೆಯುವಂತೆ ಮಾಡಿದ್ದಾರೆ.
ಲಂಡನ್: ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ರಸ್ತೆ ಗುಂಡಿಗಳ ಬಗ್ಗೆ ಗಮನ ಸೆಳೆಯಲು ಮಾಡಿದ್ದ ವಿಭಿನ್ನ ಪ್ರಯತ್ನಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆಡಳಿತ ವರ್ಗದ ಗಮನ ಸೆಳೆದದ್ದು ಹಳೆಯ ವಿಚಾರ. ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಗಮನ ಸೆಳೆಯಲು ಅವರು ಚಂದ್ರಯಾನ -2 ಯೋಜನೆಯ ಸಂದರ್ಭದಲ್ಲೇ ಗಗನಯಾನಿಯಂತೆ ಪೋಷಾಕು ಧರಿಸಿ ರಸ್ತೆಗಳಲ್ಲಿ ಸಂಚರಿಸಿದ್ದರು. ಇದರ ಚಿತ್ರಗಳು ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದ್ದವು. ಇದೀಗ ಇಂಗ್ಲೆಂಡ್ನಲ್ಲೊಬ್ಬರು (England) ವ್ಯಕ್ತಿ ಬಾದಲ್ ನಂಜುಂಡಸ್ವಾಮಿ ಅವರಂತೆಯೇ ವಿಭಿನ್ನವಾಗಿ ರಸ್ತೆ ಗುಂಡಿಗಳ ಬಗ್ಗೆ ಗಮನ ಸೆಳೆದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಇಂಗ್ಲೆಂಡ್ನ ಎಸೆಕ್ಸ್ನ ಕರಾವಳಿ ಪಟ್ಟಣ ಬ್ರೈಟ್ಲಿಂಗ್ಸೀ ರಸ್ತೆ ಗುಂಡಿಗಳ ಬಗ್ಗೆ 66 ವರ್ಷದ ಆ್ಯಂಡಿ ಕಾನ್ರಾಯ್, ಮೊಮ್ಮಕ್ಕಳ ಆಟಿಕೆ ಬಳಸಿ ವಿಭಿನ್ನವಾಗಿ ಗಮನ ಸೆಳೆಯುವಂತೆ ಮಾಡಿದ್ದಾರೆ. ರಸ್ತೆ ಗುಂಡಿಗಳ ಮಧ್ಯದಲ್ಲಿ, ಸಮೀಪದಲ್ಲಿ ಆಟಿಕೆಗಳನ್ನು ಇರಿಸಿ ಅವುಗಳ ಫೋಟೊ ಕ್ಲಿಕ್ಕಿಸಿದ್ದಾರೆ. ನಂತರ ಅವುಗಳನ್ನು ಬ್ರೈಟ್ಲಿಂಗ್ಸೀ ಎಂಬ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಹೀಗೆ ಮಾಡಿದ್ದರಿಂದ ರಸ್ತೆ ಗುಂಡಿಗಳು ಸರಿಯಾಗಬಹುದೇ ಎಂಬುದು ನನಗೆ ತಿಳಿದಿಲ್ಲ. ಆದರೆ ನಾವು ಚೆನ್ನಾಗಿ ನಗಬಹುದು. ಜನರು ಅವುಗಳನ್ನು ಆಸ್ವಾದಿಸಬಹುದು ಎಂದು ಕಾನ್ರಾಯ್ ತಿಳಿಸಿರುವುದಾಗಿ ‘ಬಿಬಿಸಿ’ ವರದಿ ಮಾಡಿದೆ.
ಇದನ್ನೂ ಓದಿ: Covid 19: ತಾಯಿಯ ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ತಗುಲಿದ ಕೊರೊನಾ ಸೋಂಕು, ಮೆದುಳಿಗೆ ಹಾನಿ ಕಾನ್ರಾಯ್ ಅವರ ಸೃಜನಶೀಲ ಪೋಸ್ಟ್‌ಗಳು ಎಸ್ಸೆಕ್ಸ್ ಕೌಂಟಿ ಕೌನ್ಸಿಲ್‌ನ ಗಮನ ಸೆಳೆದಿವ. ಪರಿಣಾಮವಾಗಿ ಆಡಳಿತವು ವಿಷಯದ ಗಂಭೀರತೆಯನ್ನು ಅರಿತು ಗುಂಡಿಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದೆ. ಎಸ್ಸೆಕ್ಸ್ ಕೌಂಟಿ ಕೌನ್ಸಿಲ್‌ನ ಎಂಜಿನಿಯರ್‌ಗಳ ತಂಡವು ಎಲ್ಲಾ ರಸ್ತೆಗಳನ್ನು ಸರಿಪಡಿಸಲು ರಾತ್ರಿಯಿಡೀ ಕೆಲಸ ಮಾಡಿದೆ ಎಂದು ಎಸ್ಸೆಕ್ಸ್ ಹೆದ್ದಾರಿ ನಿರ್ವಹಣಾ ವಿಭಾಗದ ಕಾರ್ಯಾಚರಣೆಯ ಉಸ್ತುವಾರಿ ಫಿಲ್ ಮೆಕ್ಯಾವಿಟಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಜತೆಗೆ ಆ್ಯಂಡಿ ಕಾನ್ರಾಯ್ ಪ್ರಯತ್ನವನ್ನು ಫಿಲ್ ಮೆಕ್ಯಾವಿಟಿ ಶ್ಲಾಘಿಸಿರುವುದಾಗಿಯೂ ತಿಳಿಸಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ