ದೆವ್ವ, ಭೂತಪ್ರೇತಗಳಿಗೆ ಸಂಬಂಧಿಸಿದ ಊಹಾಪೋಹ, ವದಂತಿಗಳನ್ನು ಆಗಾಗ ಕೇಳುತ್ತಿರುತ್ತೇವೆ. ಕೆಲವು ಜನರು ದೆವ್ವ ಮತ್ತು ಆತ್ಮ ನಿಜವೆಂದು ನಂಬುತ್ತಾರೆ. ಅದರಲ್ಲಿ ಕೆಲವು ದೆವ್ವಗಳು ಕೆಟ್ಟವು, ಜನರಿಗೆ ಹಾನಿ ಮಾಡುತ್ತವೆ, ಆದರೆ ಇನ್ನು ಕೆಲವು ದೆವ್ವಗಳು ಒಳಿತನ್ನು ಮಾಡುತ್ತವೆ ಎಂಬ ನಂಬಿಕೆಗಳೂ ಇವೆ. ದೆವ್ವಗಳು ಅಸ್ತಿತ್ವ ಇದೆ ಎಂದು ಹೇಳಲಾಗುವ ಅನೇಕ ಸ್ಥಳಗಳ ಬಗ್ಗೆ ನೀವು ಕೇಳಿರಬಹುದು. ಅಂತಹ ಒಂದು ಹೋಟೆಲ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಹೋಟೆಲ್ ಒಳಗೆ ದೆವ್ವಗಳು ತಿರುಗಾಡುವುದನ್ನು ನೋಡಿದ್ದೇವೆ ಎಂದು ಜನರು ಹೇಳುತ್ತಾರೆ.
ಈ ಭವ್ಯವಾದ ಭೂತ ಬಂಗಲೆ ಅಥವಾ ಹೋಟೆಲ್ ಅಮೆರಿಕದ ಟೆಕ್ಸಾಸ್‌ನಲ್ಲಿದೆ. ಇದು ಸುಮಾರು 100 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ‘ಮಿರರ್’ ವರದಿಯ ಪ್ರಕಾರ, 14 ಅಂತಸ್ತಿನ ಈ ಹೋಟೆಲ್ ಅನ್ನು 1926 ರಲ್ಲಿ ನಿರ್ಮಿಸಲಾಗಿತ್ತು. ಇದರಲ್ಲಿ 450 ಕೊಠಡಿಗಳಿವೆ. ಅಲ್ಲದೆ ಇಲ್ಲಿ ದೊಡ್ಡ ಈಜುಕೊಳ ಮತ್ತು ಸ್ಪಾ ಇವೆ. ಆದರೆ, ಈ ಹೋಟೆಲ್ ಈಗ ಪಾಳು ಬಿದ್ದಿದ್ದು, ಇಲ್ಲಿ ಕಾಣಸಿಗುವ ದೆವ್ವಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಎರಡನೆಯ ಮಹಾಯುದ್ಧದ ಸಮಯದಲ್ಲಿ, 1941 ರಿಂದ 1944 ರವರೆಗೆ ಈ ಹೋಟೆಲ್ ಸೈನ್ಯದ ಕ್ವಾರ್ಟರ್ಸ್ ಆಗಿದ್ದು, ನಂತರ ಅದು ಮತ್ತೆ ನಿರ್ಜನವಾಯಿತು ಎಂದು ಹೇಳಲಾಗುತ್ತದೆ. 1963ರಲ್ಲಿ ಮತ್ತೆ ಹೋಟೆಲ್ ಆಗಿ ತೆರೆದರೂ ಕೆಲವು ವರ್ಷಗಳ ನಂತರ ಮತ್ತೆ ಮುಚ್ಚಲಾಯಿತು. ಇಲ್ಲಿ ತಂಗುವ ಜನರು ಚಿತ್ರ-ವಿಚಿತ್ರ ಘಟನೆಗಳಿಗೆ ಗುರಿಯಾಗಿದ್ದರು ಎನ್ನಲಾಗಿದೆ.
‘ಮಿರರ್’ ವರದಿಯ ಪ್ರಕಾರ, ಈ ಹೋಟೆಲ್‌ನಲ್ಲಿ ತಂಗಿರುವ ಜನರು ಇಲ್ಲಿ ದೆವ್ವಗಳು ಸುತ್ತಾಡುತ್ತವೆ ಮತ್ತು ಕೆಲವೊಮ್ಮೆ ತಮ್ಮ ದೇಹವನ್ನು ಪರಚಿವೆ ಎಂದು ಹೇಳಿರುವ ಉಲ್ಲೇಖವಿದೆ. ಅಷ್ಟೇ ಅಲ್ಲ, ಅವುಗಳನ್ನು ನಮ್ಮನ್ನು ಕಚ್ಚಲು ಯತ್ನಿಸಿವೆ ಎಂದೂ ಹೇಳಿದ್ದಾರೆ ಎಂಬುದಾಗಿ ಉಲ್ಲೇಖಿಸಿದೆ. ಇದಲ್ಲದೇ ಹೋಟೆಲ್ ಗೋಡೆಗಳಿಂದಲೂ ವಿಚಿತ್ರ ವಾಸನೆ ಬರುತ್ತಿದೆ. ಒಮ್ಮೊನ್ನೆ ಯಾರೋ ಸಿಗರೇಟ್ ಸೇದುತ್ತಿರುವಂತೆ ಭಾಸವಾಗುತ್ತಿದೆ. ದೆವ್ವ ಹೊಟೇಲ್ ಮಾಲೀಕನದ್ದಾಗಿರಬಹುದು, ಏಕೆಂದರೆ ಅವರು ಸಿಗಾರ್ ಅನ್ನು ಇಷ್ಟಪಡುತ್ತಿದ್ದರು ಎಂದು ಜನರು ಭಾವಿಸುತ್ತಾರೆ ಎಂಬುದಾಗಿಯೂ ವರದಿ ಉಲ್ಲೇಖಿಸಿದೆ.
ಈ ಹೋಟೆಲ್‌ನಲ್ಲಿ ದೆವ್ವ ಇದೆಯೇ ಎಂದು ತನಿಖೆ ಮಾಡಲು ಕೆಲವು ತಜ್ಞರು ಕೂಡ ಕೆಲ ಸಮಯ ಹಿಂದೆ ಅಲ್ಲಿಗೆ ಭೇಟಿ ನೀಡಿದ್ದರು. ಹೋಟೆಲ್‌ನಲ್ಲಿ ಅಸಾಮಾನ್ಯ ಚಟುವಟಿಕೆಗಳು ನಡೆಯುತ್ತಿರುವುದು ಅವರ ಗಮನಕ್ಕೂ ಬಂದಿತ್ತು. ಕೆಲವೊಮ್ಮೆ ಕೆಂಪು ಕೂದಲುಳ್ಳ ಮಹಿಳೆ ಮತ್ತು ಕೆಲವೊಮ್ಮೆ ಹಸಿರು ಕಣ್ಣು ಹೊಂದಿರುವ ಮಹಿಳೆ ಇಲ್ಲಿನ ಕಾರಿಡಾರ್‌ಗಳಲ್ಲಿ ತಿರುಗಾಡುತ್ತಿರುವುದು ಕಂಡುಬಂದಿತ್ತು. ಆದಾಗ್ಯೂ, ಈ ವಿಚಿತ್ರ ಘಟನೆಗಳ ಕುರಿತಾದ ಹೆದರಿಕೆಯನ್ನೆಲ್ಲ ಮೀರಿ ಈಗ ಮತ್ತೊಮ್ಮೆ ಈ ಹೋಟೆಲ್ ತೆರೆಯಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
Published On - 9:08 am, Tue, 11 April 23