Russia Ukraine War: ಕನ್ನಡಿಗ ವಿದ್ಯಾರ್ಥಿಯ ಜೀವ ತೆಗೆದಿದ್ದ ಖಾರ್ಕಿವ್ ನಗರದಲ್ಲಿ ಉಕ್ರೇನ್ ಮೇಲುಗೈ; ಸಮರಭೂಮಿಯಲ್ಲಿ ರಷ್ಯಾಕ್ಕೆ ತೀವ್ರ ಹಿನ್ನಡೆ
ಖಾರ್ಕಿವ್ ಪ್ರಾಂತ್ಯವು ಇದೀಗ ಉಕ್ರೇನ್ ಸುಪರ್ದಿಗೆ ಬಂದಿದ್ದು, ಖಾರ್ಕಿವ್ ನಗರವನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳಲು ಉಕ್ರೇನ್ ಮತ್ತು ರಷ್ಯಾ ಪಡೆಗಳ ನಡುವೆ ಕಾದಾಟ ಮುಂದುವರಿದಿದೆ
ಉಕ್ರೇನ್ ಖಾರ್ಕಿವ್ ನಗರವನ್ನು ಕನ್ನಡಿಗರು ಎಂದಿಗೂ ಮರೆಯುವುದಿಲ್ಲ. ವೈದ್ಯಕೀಯ ಶಿಕ್ಷಣದ ಕನಸು ಹೊತ್ತು ಖಾರ್ಕಿವ್ಗೆ (Kharkiv) ಹೋಗಿದ್ದ ಹಾವೇರಿಯ ಕನ್ನಡಿಗ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ರಷ್ಯಾ ಪಡೆಗಳ ಶೆಲ್ ದಾಳಿಯಿಂದ ಮೃತಪಟ್ಟಿದ್ದು ಅದೇ ನಗರದಲ್ಲಿ. ಈಗ ಮತ್ತೆ ಖಾರ್ಕಿವ್ ನಗರ ಸುದ್ದಿಯಲ್ಲಿದೆ. 200 ದಿನಗಳ ಹಿಂದೆ ವ್ಯಾಪಕ ಶೆಲ್ ದಾಳಿ ಮತ್ತು ಚುರುಕು ಕಾರ್ಯಾಚರಣೆಯಿಂದ ಖಾರ್ಕಿವ್ ನಗರವನ್ನು ವಶಪಡಿಸಿಕೊಂಡಿದ್ದ ರಷ್ಯನ್ ಪಡೆಗಳನ್ನು ಉಕ್ರೇನ್ ಸೇನೆ ಹಿಮ್ಮೆಟ್ಟಿಸಿದೆ. ಖಾರ್ಕಿವ್ ಪ್ರಾಂತ್ಯವು ಇದೀಗ ಉಕ್ರೇನ್ ಸುಪರ್ದಿಗೆ ಬಂದಿದ್ದು, ಖಾರ್ಕಿವ್ ನಗರವನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳಲು ಉಕ್ರೇನ್ ಮತ್ತು ರಷ್ಯಾ ಪಡೆಗಳ ನಡುವೆ ಕಾದಾಟ ಮುಂದುವರಿದಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಬುಧವಾರ (ಸೆ 14) ಪೂರ್ವ ಉಕ್ರೇನ್ನ ಇಝ್ಯುಮ್ ನಗರಕ್ಕೆ ಬೇಟಿ ನೀಡಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು, ‘ಖಾರ್ಕಿವ್ ಮತ್ತೆ ಉಕ್ರೇನ್ ವಶಕ್ಕೆ ಬಂದಿದೆ. ಇದು ಈ ಯುದ್ಧದಲ್ಲಿ ಈವರೆಗೆ ನಡೆದಿರುವ ಹಲವು ಮಹತ್ವದ ಬೆಳವಣಿಗೆಗಳ ಪೈಕಿ ಪ್ರಮುಖವಾದುದು’ ಎಂದು ಹೇಳಿದ್ದಾರೆ.
ಮರುವಶಕ್ಕೆ ಪಡೆದುಕೊಂಡ ಖಾರ್ಕಿವ್ ನಗರದಲ್ಲಿ ಉಕ್ರೇನ್ ಧ್ವಜವನ್ನು ಹಾರಿಸುವ ವಿಶೇಷ ಸಮಾರಂಭವೊಂದನ್ನು ಉಕ್ರೇನ್ ಸರ್ಕಾರ ಆಯೋಜಿಸಿತ್ತು. ಇದರಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿ ಸಹ ಪಾಲ್ಗೊಂಡಿದ್ದರು. ಉಕ್ರೇನ್ನ ಡೊನ್ಬಾಸ್ ಪ್ರಾಂತ್ಯವನ್ನು ಗೆಲ್ಲಬೇಕು ಎಂಬ ರಷ್ಯಾದ ಮಹತ್ವಾಕಾಂಕ್ಷೆಗೆ ಇಝ್ಯುಮ್ ಪಟ್ಟಣ ಮುಖ್ಯ ಆಧಾರವಾಗಿತ್ತು. ಅಲ್ಲಿಂದ ಹಿಮ್ಮೆಟ್ಟಿರುವುದು ರಷ್ಯಾಕ್ಕೆ ಹಿನ್ನಡೆ ಆದಂತೆ ಆಗಿದೆ.
ಕಡು ಹಸಿರು ಬಣ್ಣದ ಬಟ್ಟೆ ತೊಟ್ಟು ಅಂಗರಕ್ಷಕರೊಂದಿಗೆ ನಗರದಲ್ಲಿ ಕಾಣಿಸಿಕೊಂಡಿದ್ದ ಝೆಲೆನ್ಸ್ಕಿ ಸೈನಿಕರೊಂದಿಗೆ ಸೆಲ್ಫಿ ತೆಗೆಸಿಕೊಂಡರು. ವಿವಿಧೆಡೆ ಸೈನಿಕರನ್ನು ಭೇಟಿಯಾಗಿ ಮಾತನಾಡಿದರು. ‘ನಾವು ಗೆಲುವಿನತ್ತ ಮುಂದುವರಿದಿದ್ದೇವೆ. ಉಕ್ರೇನ್ನ ಎಲ್ಲ ನಗರ ಮತ್ತು ಹಳ್ಳಿಗಳನ್ನು ರಷ್ಯಾದಿಂದ ವಿಮೋಚನೆ ಮಾಡುತ್ತೇವೆ’ ಎಂದು ಝೆಲೆನ್ಸ್ಕಿ ಹೇಳಿದರು.
ಕಳೆದ ಫೆಬ್ರುವರಿ 24ರಂದು ರಷ್ಯಾ ಪಡೆಗಳು ಉಕ್ರೇನ್ ಪ್ರವೇಶಿಸಿದ್ದವು. ಆರಂಭದಲ್ಲಿ ರಷ್ಯಾ ಮುನ್ನಡೆ ಸಾಧಿಸಿತಾದರೂ ರಾಜಧಾನಿ ಕೀವ್ ವಶಕ್ಕೆ ತೆಗೆದುಕೊಳ್ಳಲು ರಷ್ಯಾಕ್ಕೆ ಆಗಿರಲಿಲ್ಲ. ಇದೀಗ ಉಕ್ರೇನ್ ಪಡೆಗಳು ಮೇಲುಗೈ ಸಾಧಿಸಿದ್ದು, ರಷ್ಯಾವನ್ನು ಹಿಮ್ಮೆಟ್ಟಿಸಿವೆ. ಅಮೆರಿಕ ಮತ್ತು ಯೂರೋಪ್ ದೇಶಗಳ ನೆರವಿನಿಂದ ಚುರುಕಿನ ಮರುದಾಳಿ ಆರಂಭಿಸಿರುವ ಉಕ್ರೇನ್ ಸೆಪ್ಟೆಂಬರ್ 6ರಿಂದ ಈವರೆಗೆ ಸುಮಾರು 8,500 ಕಿಮೀ ಪ್ರದೇಶವನ್ನು ಮರುವಶಪಡಿಸಿಕೊಂಡಿದೆ.
‘ಕ್ರಿಮಿಯಾ ಪ್ರಸ್ಥಭೂಮಿಯನ್ನು 2014ರಲ್ಲಿ ರಷ್ಯಾಕ್ಕೆ ಬಿಟ್ಟುಕೊಟ್ಟಿದ್ದು ಸಹ ದೊಡ್ಡ ತಪ್ಪು. ಈಗ ಅದನ್ನು ಮತ್ತೆ ಉಕ್ರೇನ್ಗೆ ಸೇರಿಸಿಕೊಳ್ಳುತ್ತೇವೆ’ ಎಂದು ಝೆಲೆನ್ಸ್ಕಿ ಘೋಷಿಸಿದ್ದಾರೆ. ರಷ್ಯಾ ಸೇನೆಯು ಪುನರ್ ಸಂಘಟನೆಗೊಂಡು ದಾಳಿಗೆ ಮುಂದಾಗುವ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ವರದಿಗಳು ಪ್ರಕಟವಾಗುತ್ತಿವೆ. ಮುಂದಿನ ದಿನಗಳಲ್ಲಿ ಯುದ್ಧವು ಮತ್ತಷ್ಟು ಭೀಕರವಾಗಬಹುದು ಎಂಬ ಆತಂಕಕ್ಕೂ ಈ ಬೆಳವಣಿಗೆ ಕಾರಣವಾಗಿದೆ.
Published On - 8:15 am, Thu, 15 September 22