ಟ್ವಿಟರ್ ನೂತನ ಒಂದು-ಪದದ ಟ್ರೆಂಡ್ ಗೆ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಸಹ ಮಾರುಹೋಗಿದ್ದಾರೆ, ಅವರ ಟ್ವೀಟ್​ಗೆ ಮೆಚ್ಚುಗೆಯ ಮಹಾಪೂರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 04, 2022 | 8:07 AM

ಹೊಸ ಟ್ರೆಂಡ್ ಮೂಲಕ ಮೆಸೇಜ್ ಪೋಸ್ಟ್ ಮಾಡುತ್ತಿರುವ ಸೆಲಿಬ್ರಿಟಿಗಳು ತಮ್ಮ ಐಡೆಂಟಿಟಿಯನ್ನು ಅಭಿವ್ಯಕ್ತಗೊಳಿಸುತ್ತಿದ್ದಾರೆ. ಉಕ್ರೇನ್ ಅಧ್ಯಕ್ಷರ ಸಾಮಾಜಿಕ ಮಾಧ್ಯಮ ಪೋಸ್ಟ್ ಇತ್ತೀಚಿನ ಟ್ವಿಟರ್ ಟ್ರೆಂಡ್‌ನ ಒಂದು ಭಾಗವಾಗಿದೆ.

ಟ್ವಿಟರ್ ನೂತನ ಒಂದು-ಪದದ ಟ್ರೆಂಡ್ ಗೆ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಸಹ ಮಾರುಹೋಗಿದ್ದಾರೆ, ಅವರ ಟ್ವೀಟ್​ಗೆ ಮೆಚ್ಚುಗೆಯ ಮಹಾಪೂರ
ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ
Follow us on

ನವದೆಹಲಿ: ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಸಹ ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಶಬ್ದದ ಪೋಸ್ಟ್ ಮಾಡುವ ಹೊಸ ಟ್ರೆಂಡ್ ಗೆ ತಾವೂ ಸೇರಿಕೊಂಡಿದ್ದಾರೆ. ಶುಕ್ರವಾರದಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ‘ಫ್ರೀಡಂ’ ಅಂತ ಏಕೈಕ ಶಬ್ದದ ಪೋಸ್ಟ್ ಮಾಡಿ ಈ ಹೊಸ ವಿಧಾನಕ್ಕೆ ತಮ್ಮ ಆಗಮನವನ್ನು ಸಾರಿದ್ದಾರೆ. ಹಲವಾರು ಗಣ್ಯರು, ಸೆಲಿಬ್ರಿಟಿಗಳು ಹೀಗೆ ಒಂದು ಪದದ ಸಂದೇಶಗಳನ್ನು ಪೋಸ್ಟ್ ಮಾಡಲಾರಂಭಿಸಿದ್ದಾರೆ.

ಹೊಸ ಟ್ರೆಂಡ್ ಮೂಲಕ ಮೆಸೇಜ್ ಪೋಸ್ಟ್ ಮಾಡುತ್ತಿರುವ ಸೆಲಿಬ್ರಿಟಿಗಳು ತಮ್ಮ ಐಡೆಂಟಿಟಿಯನ್ನು ಅಭಿವ್ಯಕ್ತಗೊಳಿಸುತ್ತಿದ್ದಾರೆ. ಉಕ್ರೇನ್ ಅಧ್ಯಕ್ಷರ ಸಾಮಾಜಿಕ ಮಾಧ್ಯಮ ಪೋಸ್ಟ್ ಇತ್ತೀಚಿನ ಟ್ವಿಟರ್ ಟ್ರೆಂಡ್‌ನ ಒಂದು ಭಾಗವಾಗಿದೆ. ಇದು ವ್ಯಕ್ತಿ ಅಥವಾ ಬ್ರ್ಯಾಂಡ್‌ನ ವೈಶಿಷ್ಟ್ಯತೆ ಮತ್ತು ಗುಣಮಟ್ಟದ ಬಗ್ಗೆ ಒಂದು ರೀತಿಯ ಸಂಕ್ಷಿಪ್ತ ಸೂಚಕವಾಗಿದೆ.

ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಜೆಲೆನ್ಸ್ಕಿ ಮತ್ತು ಅವರ ದೇಶದ ನಾಗರಿಕರಿಗೆ ಫ್ರೀಡಂ ಅನ್ನೋದು ಎಷ್ಟು ಮಹತ್ವದ ಪದವಾಗಿದೆ ಅನ್ನೋದು ವೇದ್ಯವಾಗುತ್ತದೆ. ಉಕ್ರೇನಿಯನ್ನರು ಕಳೆದ 6 ತಿಂಗಳುಗಳಿಂದ ಇದಕ್ಕಾಗಿಯೇ ಹೋರಾಡುತ್ತಿದ್ದಾರೆ.

ಸಾವಿರಾರು ಪದಗಳಲ್ಲಿ ಹೇಳಿಕೊಳ್ಳಬೇಕಾದ ಭಾವನೆಗಳನ್ನು ಇಂಟರ್ನೆಟ್ ಸೌಲಭ್ಯದಿಂದಾಗಿ ವೊಲೊದಿಮಿರ್ ಜೆಲೆನ್ಸ್ಕಿ ಕೇವಲ ಒಂದೇ ಶಬ್ದದಲ್ಲಿ ಹೇಳಿದ್ದಾರೆ.

ಜೆಲೆನ್ಸ್ಕಿ ಅವರ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ನೆಟ್ಟಿಗರು ಇದನ್ನು 16,80,000 ಸಲ ಲೈಕ್ ಮಾಡಿದ್ದಾರೆ ಮತ್ತು ಸುಮಾರು 17,000 ಸಲ ರೀಟ್ವೀಟ್ ಮಾಡಿದ್ದಾರೆ.

ನೆಟ್ಟಿಗರು ಜೆಲೆನ್ಸ್ಕಿಯವರ ಟ್ವೀಟ್ ಗೆ ಉತ್ತರವಾಗಿ ಮೀಮ್ ಮತ್ತು ಕಾಮೆಂಟ್ ಗಳನ್ನು ಶೇರ್ ಮಾಡಿದ್ದಾರೆ.

ಒಂದು-ಪದದ ಟ್ರೆಂಡ್ ಟ್ವಿಟರ್ ನಲ್ಲಿ ಬೆಂಗಳೂರು ಭಾಷೆಯಲ್ಲಿ ಹೇಳುವುದಾದರೆ ಧೂಳೆಬ್ಬಿಸುತ್ತಿದೆ. ಇದಕ್ಕೆ ಎಷ್ಟು ಜನಪ್ರಿಯತೆ ಲಭ್ಯವಾಗುತ್ತಿದೆಯೆಂದರೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರ ಕಚೇರಿಯೂ ಇದಕ್ಕೆ ಮಾರುಹೋಗಿ ಟ್ರೆಂಡ್ ಗೆ ಸೇರ್ಪಡೆಯಾಗಿದೆ.

ಈ ಒಂದು-ಪದದ ಟ್ರೆಂಡ್ ಅಮೆರಿಕದಲ್ಲಿ ರೇಲ್ವೇ ಸೇವೆ ಒದಗಿಸುವ ಅಮ್ಟ್ರ್ಯಾಕ್ ನ ಸೋಶಿಯಲ್ ಮೀಡಿಯಾ ಟೀಮ್ ಹುಟ್ಟುಹಾಕಿದೆ ಎನ್ನಲಾಗಿದೆ. ಗುರುವಾರದಂದು ಅಮ್ಟ್ರ್ಯಾಕ್ ಟ್ವಿಟರ್ ಹ್ಯಾಂಡಲ್ ಬರೀ ‘ಟ್ರೇನ್ಸ್’ ಪದವನ್ನು ಪೋಸ್ಟ್ ಮಾಡಿತು. ಅಲ್ಲಿಂದೀಚಿಗೆ ಇದು ತನ್ನದೇ ಆದ ಹುಟ್ಟು ಪಡೆದುಕೊಂಡು ದಿನೇದಿನೆ ಜನಪ್ರಿಯಗೊಳ್ಳುತ್ತಿದೆ.