Nithyananda: ನನ್ನ ಜೀವ ಅಪಾಯದಲ್ಲಿದೆ; ಶ್ರೀಲಂಕಾದ ಬಳಿ ವೈದ್ಯಕೀಯ ಸಹಾಯ ಕೋರಿದ ಅತ್ಯಾಚಾರ ಆರೋಪಿ ನಿತ್ಯಾನಂದ ಸ್ವಾಮಿ
ಅತ್ಯಾಚಾರ ಆರೋಪಿ ಸ್ವಾಮಿ ನಿತ್ಯಾನಂದ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ತಾನೇ ಸ್ಥಾಪಿಸಿದ ಕೈಲಾಸ ರಾಜ್ಯದಲ್ಲಿ ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯಿದೆ ಎಂದು ನಿತ್ಯಾನಂದ ಸ್ವಾಮಿ ಶ್ರೀಲಂಕಾದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಶ್ರೀಲಂಕಾ: ಸ್ವಯಂ ಘೋಷಿತ ದೇವಮಾನವ ಮತ್ತು ಅತ್ಯಾಚಾರದ ಆರೋಪ ಹೊತ್ತಿರುವ ಸ್ವಾಮಿ ನಿತ್ಯಾನಂದ (Swamy Nithyananda) ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿರುವುದರಿಂದ ಶ್ರೀಲಂಕಾದಲ್ಲಿ (Sri Lanka) ವೈದ್ಯಕೀಯ ಆಶ್ರಯವನ್ನು ಕೋರಿದ್ದಾರೆ ಎನ್ನಲಾಗಿದೆ. ತನ್ನ ಆರೋಗ್ಯದಲ್ಲಿ ಕ್ಷೀಣಿಸುತ್ತಿರುವುದರಿಂದ ತನ್ನ ಜೀವ ಅಪಾಯದಲ್ಲಿದೆ ಎಂದು ನಿತ್ಯಾನಂದ ಸ್ವಾಮಿ ಶ್ರೀಲಂಕಾದ ಮೊರೆ ಹೋಗಿದ್ದಾರೆ. ಭಾರತದಿಂದ ಪರಾರಿಯಾಗಿಯಾಗಿರುವ ನಿತ್ಯಾನಂದ ಸ್ವಾಮಿ ತನ್ನದೇ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದರು. ಆಗಸ್ಟ್ 7ರಂದು ದ್ವೀಪ ರಾಷ್ಟ್ರ ಶ್ರೀಲಂಕಾದ ಅಧ್ಯಕ್ಷರಿಗೆ ಪತ್ರ ಬರೆದಿರುವ ನಿತ್ಯಾನಂದ ಸ್ವಾಮಿ ತನಗೆ ವೈದ್ಯಕೀಯ ಆರೈಕೆಯ ‘ತುರ್ತು’ ಅಗತ್ಯವಿದೆ ಎಂದಿದ್ದಾರೆ.
ತಾನೇ ಸ್ಥಾಪಿಸಿದ ಕೈಲಾಸ ರಾಜ್ಯದಲ್ಲಿ ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯಿದೆ ಎಂದು ನಿತ್ಯಾನಂದ ಸ್ವಾಮಿ ಶ್ರೀಲಂಕಾದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಅತ್ಯಾಚಾರ ಆರೋಪಿ ಸ್ವಾಮಿ ನಿತ್ಯಾನಂದ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅವರಿಗೆ ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನಿತ್ಯಾನಂದ ಸ್ವಾಮಿಯ ಪರವಾಗಿ ಕೈಲಾಸದ ವಿದೇಶಾಂಗ ವ್ಯವಹಾರಗಳ ಮಂತ್ರಿ ಎಂದು ಹೇಳಿಕೊಳ್ಳುವ ನಿತ್ಯ ಪ್ರೇಮಾತ್ಮ ಆನಂದ ಸ್ವಾಮಿಯವರು ಶ್ರೀಲಂಕಾದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ವಿನಂತಿ ಮಾಡಲಾಗಿದೆ.
ಹಿಂದೂ ಧರ್ಮದ ಪರಮ ಪೀಠಾಧಿಪತಿ ಪೂಜ್ಯ ನಿತ್ಯಾನಂದ ಪರಮಶಿವಂ ಅವರಿಗೆ ಗಂಭೀರ ವೈದ್ಯಕೀಯ ಸ್ಥಿತಿಗೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಪ್ರಸ್ತುತ ಕೈಲಾಸದಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳು ಅವರಿಗೆ ಸಾಕಾಗುತ್ತಿಲ್ಲ. ಈ ಸಮಯದಲ್ಲಿ ಅತ್ಯಂತ ತುರ್ತಾಗಿ ಅಗತ್ಯವಿರುವ ವೈದ್ಯಕೀಯ ಮೂಲಸೌಕರ್ಯವನ್ನು ನಮ್ಮ ಕೈಲಾಸ ಹೊಂದಿಲ್ಲ. ಹೀಗಾಗಿ, ನಿಮ್ಮ ಸಹಾಯ ಕೋರುತ್ತಿದ್ದೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.
2018ರ ನವೆಂಬರ್‌ನಲ್ಲಿ ನಿತ್ಯಾನಂದ ಸ್ವಾಮಿಯ ಇಬ್ಬರು ಶಿಷ್ಯರನ್ನು ಅಪಹರಣ ಮಾಡಿದ ಹಿನ್ನೆಲೆಯಲ್ಲಿ ಗುಜರಾತ್ ಪೊಲೀಸರು ಅವರನ್ನು ಬಂಧಿಸಿದ್ದರು. ಅದಾದ ಬಳಿಕ ನಿತ್ಯಾನಂದ ಭಾರತದಿಂದ ಪರಾರಿಯಾಗಿದ್ದರು. ಕರ್ನಾಟಕದಲ್ಲಿ ನಿತ್ಯಾನಂದನ ವಿರುದ್ಧ ಅತ್ಯಾಚಾರ ಆರೋಪ ಕೂಡ ದಾಖಲಾಗಿತ್ತು. 2010ರಲ್ಲಿ ನಿತ್ಯಾನಂದನ ಮಾಜಿ ಚಾಲಕ ಲೆನಿನ್ ನೀಡಿದ ದೂರಿನ ಆಧಾರದ ಮೇಲೆ ನಿತ್ಯಾನಂದನ ವಿರುದ್ಧ ಅತ್ಯಾಚಾರ ಆರೋಪಗಳನ್ನು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ನಿತ್ಯಾನಂದನನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:26 pm, Sat, 3 September 22