Big News: ಪಲಾಯನ ಮಾಡಿ 7 ವಾರಗಳ ಬಳಿಕ ಶ್ರೀಲಂಕಾಕ್ಕೆ ಮರಳಿದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ
Gotabaya Rajapaksa: ಜುಲೈನಲ್ಲಿ ಶ್ರೀಲಂಕಾದಿಂದ ಪಲಾಯನ ಮಾಡಿದ್ದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ 7 ವಾರಗಳ ನಂತರ ಶ್ರೀಲಂಕಾ ದೇಶಕ್ಕೆ ಮರಳಿದ್ದಾರೆ.
ಕೊಲಂಬೊ: ಎರಡು ತಿಂಗಳ ಹಿಂದೆ ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದರಿಂದ ಆಕ್ರೋಶಗೊಂಡ ಜನ ಶ್ರೀಲಂಕಾದ ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸ (Gotabaya Rajapaksa) ಅವರ ಮನೆ, ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಅದಾದ ಬಳಿಕ ಗೊಟಬಯ ರಾಜಪಕ್ಸ ಶ್ರೀಲಂಕಾದಿಂದ ಪಲಾಯನ ಮಾಡಿದ್ದರು. ನಂತರ ರಾಜೀನಾಮೆಯನ್ನೂ ನೀಡಿದ್ದರು. ಜುಲೈನಲ್ಲಿ ಶ್ರೀಲಂಕಾದಿಂದ ಪಲಾಯನ ಮಾಡಿದ್ದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ 7 ವಾರಗಳ ನಂತರ ಶ್ರೀಲಂಕಾ ದೇಶಕ್ಕೆ ಮರಳಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಬ್ಯಾಂಕಾಕ್‌ನಿಂದ ಸಿಂಗಾಪುರದ ಮೂಲಕ ಕೊಲಂಬೊದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗೊಟಬಯ ರಾಜಪಕ್ಸ ಬಂದಿಳಿದಿದ್ದಾರೆ.
ಅವರನ್ನು ಅವರ ಪಕ್ಷದ ಶಾಸಕರು ಸ್ವಾಗತಿಸಿದ್ದಾರೆ. ಸಶಸ್ತ್ರ ಸೈನಿಕರ ಬಂದೋಬಸ್ತ್ನಲ್ಲಿ ಕಾರಿನಲ್ಲಿ ವಿಮಾನ ನಿಲ್ದಾಣದಿಂದ ಗೊಟಬಯ ರಾಜಪಕ್ಸ ಹೊರಟಿದ್ದಾರೆ. ಶ್ರೀಲಂಕಾದ ರಾಜಧಾನಿ ಕೊಲಂಬೊದ ಮಧ್ಯಭಾಗದಲ್ಲಿರುವ ಸರ್ಕಾರಿ ಸ್ವಾಮ್ಯದ ತಮ್ಮ ಮನೆಗೆ ಅವರು ತೆರಳಿದ್ದಾರೆ.
ಇದನ್ನೂ ಓದಿ: Gotabaya Rajapaksa Resigns: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ
ಜುಲೈ 13ರಂದು ಉಚ್ಚಾಟಿತ ನಾಯಕ ಗೊಟಬಯ ರಾಜಪಕ್ಸ, ಅವರ ಪತ್ನಿ ಮತ್ತು ಇಬ್ಬರು ಅಂಗರಕ್ಷಕರು ಮಾಲ್ಡೀವ್ಸ್‌ಗೆ ವಾಯುಪಡೆಯ ವಿಮಾನದಲ್ಲಿ ಹೊರಟಿದ್ದರು. ಅಲ್ಲಿಂದ ಸಿಂಗಾಪುರಕ್ಕೆ ಪ್ರಯಾಣಿಸುವ ಮೊದಲು ಅವರು ಅಧಿಕೃತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲಿಂದ ಅವರು ಎರಡು ವಾರಗಳ ನಂತರ ಥೈಲ್ಯಾಂಡ್‌ಗೆ ಹಾರಿದರು. ಗೊಟಬಯ ರಾಜಪಕ್ಸ ವಿರುದ್ಧ ಯಾವುದೇ ನ್ಯಾಯಾಲಯದ ಪ್ರಕರಣ ಅಥವಾ ಬಂಧನ ವಾರಂಟ್ ಬಾಕಿ ಉಳಿದಿಲ್ಲ.
ಜುಲೈ 13ರಂದು ಜನರ ಪ್ರತಿಭಟನೆಗೆ ಹೆದರಿದ್ದ ಗೊಟಬಯ ರಾಜಪಕ್ಸ ಶ್ರೀಲಂಕಾದಿಂದ ಮಾಲ್ಡೀವ್ಸ್‌ಗೆ ಹಾರಿ, ಮಾಲ್ಡೀವ್ಸ್ನಿಂದ ಸಿಂಗಾಪುರಕ್ಕೆ ತೆರಳಿದ್ದರು. ಸಾವಿರಾರು ಜನರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಕಚೇರಿಗೆ ನುಗ್ಗಿ, ಅವರ ನಿವಾಸವನ್ನು ವಶಪಡಿಸಿಕೊಂಡಿದ್ದರು. ಶ್ರೀಲಂಕಾ ಸಂಸತ್ತಿನ ಗೇಟ್‌ಗಳನ್ನು ತಳ್ಳಿ, ಒಳ ನುಗ್ಗಲು ಪ್ರಯತ್ನಿಸಿದ್ದರು. ಹೀಗಾಗಿ, ಅವರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಲಾಗಿತ್ತು. ಶ್ರೀಲಂಕಾದ ಸರ್ಕಾರಿ ಟಿವಿ ನೆಟ್‌ವರ್ಕ್ ಆಗಿರುವ ರೂಪವಾಹಿನಿ ಕಾರ್ಪೊರೇಷನ್ ಪ್ರತಿಭಟನಾಕಾರರು ಟಿವಿ ಸ್ಟೇಷನ್‌ಗೆ ಪ್ರವೇಶಿಸಿದ ನಂತರ ಅದರ ಪ್ರಸಾರವನ್ನು ಸ್ಥಗಿತಗೊಳಿಸಿತ್ತು. ಚಾನೆಲ್ ನಂತರ ಪ್ರಸಾರವನ್ನು ಪುನರಾರಂಭಿಸಿತ್ತು.
ಇದನ್ನೂ ಓದಿ: ಶ್ರೀಲಂಕಾಕ್ಕೆ ಮರಳಿ ಬರಲಿದ್ದಾರೆ ಪದಚ್ಯುತ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ
ಗೊಟಬಯ ರಾಜಪಕ್ಸ ಅವರಿಗೆ 28 ದಿನಗಳ ವೀಸಾವನ್ನು ವಿಸ್ತರಿಸಲು ಸಿಂಗಾಪುರ ಸರ್ಕಾರ ನಿರಾಕರಿಸಿದ ನಂತರ ಅವರು ಥೈಲ್ಯಾಂಡ್‌ಗೆ ಪ್ರಯಾಣ ಬೆಳೆಸಿದ್ದರು. ಆದರೆ ಬ್ಯಾಂಕಾಕ್‌ನಲ್ಲಿರುವ ಭದ್ರತಾ ಅಧಿಕಾರಿಗಳು ಅವರ ಸುರಕ್ಷತೆಗಾಗಿ ತಮ್ಮ ಹೋಟೆಲ್‌ನಿಂದ ಹೊರಬರದಂತೆ ಹೇಳಿದ್ದರು. ಗೊಟಬಯ ರಾಜಪಕ್ಸ ಥೈಲ್ಯಾಂಡ್‌ನಲ್ಲಿ ಉಳಿಯಲು 90 ದಿನಗಳ ವೀಸಾವನ್ನು ಹೊಂದಿದ್ದರು. ಆದರೆ ಕೊನೆಗೆ ಅವರ ಪತ್ನಿ, ಅಂಗರಕ್ಷಕ ಮತ್ತು ಇನ್ನೊಬ್ಬ ಸಹಾಯಕರೊಂದಿಗೆ ನಿನ್ನೆ ರಾತ್ರಿ ಶ್ರೀಲಂಕಾಕ್ಕೆ ಮರಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:25 am, Sat, 3 September 22