
ನ್ಯೂಯಾರ್ಕ್, ಸೆಪ್ಟೆಂಬರ್ 05: ಉತ್ತರ ಅಮೆರಿಕ ಮತ್ತು ಯುರೋಪ್ ಭಾಗಗಳನ್ನು ಸಂಕುಚಿತಗೊಳಿಸಿ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಖಂಡಗಳ ನೈಜ ವಿಸ್ತೀರ್ಣವನ್ನು ನಿಖರವಾಗಿ ಬಿಂಬಿಸುವ ನೂತನ ‘ಈಕ್ವಲ್ ಅರ್ಥ್’ ವಿಶ್ವ ಭೂಪಟವನ್ನು ಅಳವಡಿಸಿಕೊಳ್ಳಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಐತಿಹಾಸಿಕ ನಿರ್ಣಯ ಅಂಗೀಕರಿಸಿದೆ. 16ನೇ ಶತಮಾನದ ಸಾಂಪ್ರದಾಯಿಕ ಮರ್ಕೇಟರ್ ನಕ್ಷೆಯನ್ನು ಬದಲಿಸುವ ಈ ನಿರ್ಣಯಕ್ಕೆ ಬರೋಬ್ಬರಿ 164 ರಾಷ್ಟ್ರಗಳು ಬೆಂಬಲ ಸೂಚಿಸಿದ್ದರೆ, ವಿಶ್ವಸಂಸ್ಥೆಯು ಇಂತಹ ವಿಷಯಗಳ ಮೇಲೆ ಗಮನಹರಿಸಿ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ ಎಂದು ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿ ವಿರೋಧಿಸಿದೆ.
ಪಶ್ಚಿಮ ಆಫ್ರಿಕಾದ ಟೋಗೋ ದೇಶವು ಮಂಡಿಸಿ, ಫ್ರಾನ್ಸ್ ಸಹ-ಪ್ರಾಯೋಜಿಸಿದ ಈ ನಿರ್ಣಯಕ್ಕೆ 164 ದೇಶಗಳು ಬೆಂಬಲ ನೀಡಿದವು. ಅಮೆರಿಕ ವಿರೋಧಿಸಿ ಮತ ಚಲಾಯಿಸಿದರೆ, ಇತರ 6 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು.
ವಿಶ್ವಸಂಸ್ಥೆ ವಿರುದ್ಧ ಅಮೆರಿಕ ಚಾಟಿ: ಅಮೆರಿಕದ ಪ್ರತಿನಿಧಿ ಯಾರಿನಾ ಫೆರೆನ್ಸ್ವಿಚ್ ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದು, ವಿಶ್ವವು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿರುವಾಗ, ವಿಶ್ವಸಂಸ್ಥೆಯು 16ನೇ ಶತಮಾನದ ನಕ್ಷೆಯ ಯೋಜನೆಗಳ ಬಗ್ಗೆ ಚರ್ಚಿಸುತ್ತಾ ತನ್ನ ನೈಜ ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮರ್ಕೇಟರ್‌ನ ದೋಷವೇನಿತ್ತು?: 1569 ರಲ್ಲಿ ನಾವಿಕ ಗೆರಾರ್ಡಸ್ ಮರ್ಕೇಟರ್ ಸಮುದ್ರಯಾನಕ್ಕಾಗಿ ರೂಪಿಸಿದ್ದ ನಕ್ಷೆಯಲ್ಲಿ, ಗೋಳಾಕಾರದ ಭೂಮಿಯನ್ನು ಸಮತಟ್ಟಾಗಿ ತೋರಿಸುವಾಗ ಸಮಭಾಜಕ ವೃತ್ತದ ಭಾಗಗಳು (ಆಫ್ರಿಕಾ, ದಕ್ಷಿಣ ಅಮೆರಿಕ) ಕುಗ್ಗಿ, ಉತ್ತರ ಗೋಳಾರ್ಧದ ಯುರೋಪ್, ಅಮೆರಿಕ, ರಷ್ಯಾ ಮತ್ತು ಗ್ರೀನ್‌ಲ್ಯಾಂಡ್ ಅತಿ ದೊಡ್ಡದಾಗಿ ಕಾಣುತ್ತಿದ್ದವು. ಉದಾಹರಣೆಗೆ, ವಾಸ್ತವದಲ್ಲಿ ಆಫ್ರಿಕಾಕ್ಕಿಂತ 14 ಪಟ್ಟು ಚಿಕ್ಕದಾಗಿರುವ ಗ್ರೀನ್‌ಲ್ಯಾಂಡ್, ನಕ್ಷೆಯಲ್ಲಿ ಆಫ್ರಿಕಾದಷ್ಟೇ ವಿಸ್ತಾರವಾಗಿ ಗೋಚರಿಸುತ್ತಿತ್ತು.
ಮತ್ತಷ್ಟು ಓದಿ: 2027 ರವರೆಗೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಪಡೆಗಳ ಬೀಡು: ಇರಾನ್ ವಿರುದ್ಧ ಕಠಿಣ ಯುದ್ಧ ವಿಸ್ತರಣೆಗೆ ಮುಂದಾದ ಟ್ರಂಪ್ ಆಡಳಿತ
ಈಕ್ವಲ್ ಅರ್ಥ್ ನಕ್ಷೆಯ ಹಿರಿಮೆ: 2018 ರಲ್ಲಿ ನಕ್ಷೆಶಾಸ್ತ್ರಜ್ಞ ಬೋಜನ್ ಸಾವ್ರಿಕ್ ಮತ್ತು ತಂಡವು ವಿನ್ಯಾಸಗೊಳಿಸಿದ ‘ಈಕ್ವಲ್ ಅರ್ಥ್ ಪ್ರೊಜೆಕ್ಷನ್’, ಪ್ರತಿಯೊಂದು ಖಂಡದ ನೈಜ ವಿಸ್ತೀರ್ಣವನ್ನು ಯಾವುದೇ ಅತಿಶಯೋಕ್ತಿಯಿಲ್ಲದೆ ನಿಖರವಾಗಿ ತೋರಿಸುತ್ತದೆ. ಇದರಲ್ಲಿ ಆಫ್ರಿಕಾ, ಭಾರತ ಸೇರಿದಂತೆ ದಕ್ಷಿಣ ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕ ತಮ್ಮ ನೈಜ ವಿಸ್ತಾರವನ್ನು ಮರಳಿ ಪಡೆದಿವೆ.
ವಿಡಿಯೋ
The UN General Assembly has adopted a resolution, backed by 164 countries, to introduce a world map that better reflects Africa’s true size and addresses long-standing cartographic distortions. pic.twitter.com/9erVIDrhPg
— 𝐀𝐒𝐊 (@askghmedia) September 4, 2026
ಫ್ರಾನ್ಸ್‌ನ ನಯವಾದ ತಂತ್ರ: ಈ ನಿರ್ಣಯಕ್ಕೆ ಪ್ರಮುಖ ಬೆಂಬಲ ನೀಡಿದ ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೋಯೆಲ್ ಬ್ಯಾರಟ್, ಮರ್ಕೇಟರ್ ನಕ್ಷೆಯನ್ನು ಸಂಪೂರ್ಣವಾಗಿ ಕೈಬಿಡುವುದಾಗಿ ಘೋಷಿಸಿದ್ದಾರೆ. ಆಫ್ರಿಕಾದ ತನ್ನ ಹಿಂದಿನ ವಸಾಹತುಶಾಹಿ ರಾಷ್ಟ್ರಗಳೊಂದಿಗೆ ಮುರಿದುಬಿದ್ದ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸಲು ಮತ್ತು ಆಫ್ರಿಕನ್ ಒಕ್ಕೂಟದ ವಿಶ್ವಾಸ ಗಳಿಸಲು ಫ್ರಾನ್ಸ್ ಈ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.
ಶೈಕ್ಷಣಿಕ ಪಠ್ಯಗಳಲ್ಲಿ ಬದಲಾವಣೆ: ವಿಶ್ವಸಂಸ್ಥೆಯ ಅಂಗಸಂಸ್ಥೆಗಳು, ಯುನೈಟೆಡ್ ನೇಷನ್ಸ್ ಕಚೇರಿಗಳು ಹಾಗೂ ಜಾಗತಿಕ ಶೈಕ್ಷಣಿಕ ಪಠ್ಯಪುಸ್ತಕಗಳಲ್ಲಿ ಇನ್ನುಮುಂದೆ ಈ ನೂತನ ‘ಈಕ್ವಲ್ ಅರ್ಥ್’ ನಕ್ಷೆಯನ್ನು ಪ್ರಮಾಣಿತ ಭೂಪಟವನ್ನಾಗಿ ಬಳಸುವಂತೆ ಜಾಗತಿಕ ಸಮುದಾಯಕ್ಕೆ ಕರೆ ನೀಡಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ