ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಭಾರತ ಪ್ರತಿನಿಧಿ
ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ಪ್ರಸ್ತಾಪಿಸಿ ಭಾರತಕ್ಕೆ ಮುಜುಗರ ಉಂಟುಮಾಡಲು ಯತ್ನಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ಗೆ ವಿಶ್ವಸಂಸ್ಥೆಯಲ್ಲಿ ಭಾರತದ ಪರ್ಮನೆಂಟ್ ಮಿಷನ್ನ ಮೊದಲ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೆ, ಪಾಕ್ನ ದುಷ್ಕೃತ್ಯಗಳ ಉದಾಹರಣೆ ನೀಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗದುಕೊಂಡಿದ್ದಾರೆ. ಆ ಕುರಿತ ವಿಡಿಯೋ ಸಹಿತ ವರದಿ ಇಲ್ಲಿದೆ.
ನವದೆಹಲಿ, ಸೆಪ್ಟೆಂಬರ್ 28: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದ ಪಾಕಿಸ್ತಾನಕ್ಕೆ ಭಾರತ ತೀಕ್ಷ್ಣವಾಗಿ ತಿರುಗೇಟು ನೀಡಿದೆ. ಭಾರತದ ಆಕ್ರಮಣಕಾರಿ ಮಹತ್ವಾಕಾಂಕ್ಷೆಗಳು ಪ್ರಾದೇಶಿಕ ಶಾಂತಿಗೆ ಅಪಾಯವನ್ನು ಉಂಟುಮಾಡುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಶುಕ್ರವಾರ ಹೇಳಿದ್ದರು. ಇದಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತದ ಪರ್ಮನೆಂಟ್ ಮಿಷನ್ನ ಮೊದಲ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಶನಿವಾರ ತಿರುಗೇಟು ನೀಡಿದರು.
‘ಭಯೋತ್ಪಾದನೆ, ಮಾದಕ ದ್ರವ್ಯಗಳ ಕಳ್ಳಸಾಗಣೆ ಮತ್ತು ಅಂತರರಾಷ್ಟ್ರೀಯ ಅಪರಾಧಗಳಿಗೆ ಜಾಗತಿಕ ಕುಖ್ಯಾತಿಯನ್ನು ಹೊಂದಿರುವ ಮತ್ತು ಸೇನೆಯಿಂದ ಆಡಳಿತ ನಡೆಸಲ್ಪಡುವ ದೇಶವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುವ ಧೈರ್ಯವನ್ನು ಪ್ರದರ್ಶಿಸಿದೆ. ಪಾಕಿಸ್ತಾನದ ಪ್ರಧಾನಿ ಮಾಡಿದ ಭಾಷಣಕ್ಕೆ ಪ್ರತಿಯಾಗಿ ಈ ಹೇಳಿಕೆ ನೀಡುತ್ತಿದ್ದೇನೆ, ಜಮ್ಮು ಮತ್ತು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ’ ಎಂದು ಭಾವಿಕಾ ಮಂಗಳಾನಂದನ್ ಹೇಳಿದರು.
ಮಂಗಳಾನಂದನ್ ಭಾಷಣದ ವಿಡಿಯೋ
Watch: Bhavika Mangalanandan, First Secretary, Permanent Mission of India to the United Nations, slams Pakistan Prime Minister Shehbaz Sharif during the Right of Reply at the UNGA
She says, “A country run by the military, with a global reputation for terrorism, narcotics trade,… pic.twitter.com/oLsHTg1uPL
— IANS (@ians_india) September 28, 2024
ಸುದೀರ್ಘ ಕಾಲದಿಂದ ನೆರೆ ದೇಶಗಳ ವಿರುದ್ಧ ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ಜಗತ್ತಿಗೇ ತಿಳಿದಿರುವ ವಿಚಾರ. ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಸಂಸತ್ನ ಮೇಲೆ, ವಾಣಿಜ್ಯ ನಗರಿ ಮುಂಬೈಯ ಮೇಲೆ, ಧಾರ್ಮಿಕ ಸ್ಥಳಗಳು ಹಾಗೂ ಮಾರುಕಟ್ಟೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಂಥ ದೇಶ ಹಿಂಸಾಚಾರದ ವಿರುದ್ಧ ಮಾತನಾಡುವುದೇ ಒಂದು ವಿರೋಧಾಭಾಸ. ಸರಿಯಾಗಿ ಚುನಾವಣೆ ನಡೆಸಿದ ಇತಿಹಾಸವನ್ನೇ ಹೊಂದಿರದ, ಸೇನಾ ಆಡಳಿತ ಹೊಂದಿರುವ ದೇಶ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿ ಆಡಳಿತ ನಡೆಸುತ್ತಿರುವ ನೆರೆ ದೇಶದ ರಾಜಕೀಯ ನಿರ್ಧಾರಗಳನ್ನು ಪ್ರಶ್ನಿಸುವುದು ಹಾಸ್ಯಾಸ್ಪದ ಎಂದು ಅವರು ತಿರುಗೇಟು ನೀಡಿದರು.
ಜಮ್ಮು ಕಾಶ್ಮೀರದಲ್ಲಿ ಚುನಾವಣೆಗೆ ಪಾಕ್ನಿಂದ ಅಡ್ಡಿ
ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಪ್ರಕ್ರಿಯೆಯ ಮೇಲೆ ಪಾಕಿಸ್ತಾನವು ನಿರಂತರವಾಗಿ ಗಡಿಯಾಚೆಗಿನ ಭಯೋತ್ಪಾದನೆ ಮೂಲಕ ತೊಂದರೆ ಕೊಟ್ಟಿದೆ. ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದಕ್ಕೆ ಸೂಕ್ತ ತಿರುಗೇಟು ಎದುರಿಸಬೇಕಾಗಲಿದೆ ಎಂಬುದನ್ನು ಪಾಕಿಸ್ತಾನ ಅರಿತಿರಲಿ ಎಂದು ಮಂಗಳಾನಂದನ್ ಎಚ್ಚರಿಕೆ ನೀಡಿದರು.
ಜಗತ್ತಿನಾದ್ಯಂತ ಭಯೋತ್ಪಾದಕ ಕೃತ್ಯಗಳನ್ನು ಎಸಗಿದ ಉಗ್ರ ಒಸಾಮಾ ಬಿನ್ ಲಾಡೆನ್ನನ್ನು ಸಲಹಿದ, ವಿಶ್ವದಾದ್ಯಂತ ಡ್ರಜ್ಸ್ ಜಾಲ ಹರಡಲು ಕುತಂತ್ರ ಹೂಡುತ್ತಿರುವ ಪಾಕಿಸ್ತಾನದ ಹೇಳಿಕೆಗಳನ್ನು ನಾವು ಒಪ್ಪುವುದಿಲ್ಲ. ಪಾಕ್ ಪ್ರಧಾನಿ ಹೇಳಿಕೆಗಳನ್ನು ಖಂಡಿತಾ ಒಪ್ಪಲಾಗದು. ಅವರು ವಾಸ್ತವದ ಹೇಳಿಕೆಗಳೊಂದಿಗೆ ನಮ್ಮ ಮುಂದೆ ಬರಲಿ. ನಮ್ಮ ನಿಲುವಿಗೆ ನಾವು ಬದ್ಧ ಎಂದು ಮಂಗಳಾನಂದನ್ ಹೇಳಿದರು.
ಇದನ್ನೂ ಓದಿ: ವಿಶ್ವ ಸಂಸ್ಥೆಯಲ್ಲಿ ಈ ಬಾರಿಯೂ ಪಾಕ್ ಪ್ರಧಾನಿಯಿಂದ ಭಾರತ, ಕಾಶ್ಮೀರದ ಜಪ
ಏನು ಹೇಳಿದ್ದರು ಪಾಕ್ ಪ್ರಧಾನಿ?
ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತ ಸರ್ಕಾರ ಆಜಾದ್ ಕಾಶ್ಮೀರವನ್ನು ಸ್ವಾಧೀನಪಡಿಸಿಕೊಳ್ಳುವ ಬೆದರಿಕೆಯನ್ನು ಹಾಕುತ್ತಿದೆ. ಭಾರತದ ಆಕ್ರಮಣದ ವಿರುದ್ಧ ಪಾಕಿಸ್ತಾನವು ನಿರ್ಣಾಯಕವಾಗಿ ಪ್ರತಿಕ್ರಿಯಿಸಲಿದೆ ಎಂದು ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳುತ್ತೇನೆ. ಕಾಶ್ಮೀರದಲ್ಲಿ ಭಾರತವು 2019ರ ಆಗಸ್ಟ್ 5ರಲ್ಲಿ ತೆಗೆದುಕೊಂಡ ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಆಗ್ರಹಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ