ವಿಶ್ವ ಸಂಸ್ಥೆಯಲ್ಲಿ ಈ ಬಾರಿಯೂ ಪಾಕ್ ಪ್ರಧಾನಿಯಿಂದ ಭಾರತ, ಕಾಶ್ಮೀರದ ಜಪ
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಅಧಿವೇಶನದಲ್ಲಿ ಮಾತನಾಡಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಗಾಜಾ ಸಂಘರ್ಷ, ಕಾಶ್ಮೀರ ವಿವಾದ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ಬಾರಿಯೂ ಭಾರತದ ಬಗ್ಗೆಯೇ ಪಾಕ್ ಪಿಎಂ ಹೆಚ್ಚು ವಾಗ್ದಾಳಿ ನಡೆಸಿದ್ದಾರೆ. ಆ ಕುರಿತು ವಿವರವಾದ ಮಾಹಿತಿ ಇಲ್ಲಿದೆ.
ನ್ಯೂಯಾರ್ಕ್:ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಈ ಬಾರಿಯೂ ಪಾಕಿಸ್ತಾನದ ಪ್ರಧಾನಿ ಭಾರತ ಮತ್ತು ಕಾಶ್ಮೀರದ ಮೇಲೇ ತಮ್ಮ ಭಾಷಣವನ್ನು ಕೇಂದ್ರೀಕರಿಸಿದ್ದಾರೆ. ಭಾರತದ ಆಕ್ರಮಣಕಾರಿ ಮಹತ್ವಾಕಾಂಕ್ಷೆಗಳು ಪ್ರಾದೇಶಿಕ ಶಾಂತಿಗೆ ಅಪಾಯವನ್ನುಂಟುಮಾಡುತ್ತವೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಎಚ್ಚರಿಸಿದ್ದಾರೆ. ಪಾಕಿಸ್ತಾನದ ಸಕಾರಾತ್ಮಕ ಪ್ರಸ್ತಾಪಗಳಿಗೆ ಭಾರತವು ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಭಾರತದ ಯಾವುದೇ ಆಕ್ರಮಣಕ್ಕೆ ಪಾಕಿಸ್ತಾನವು ನಿರ್ಣಾಯಕ ಉತ್ತರವನ್ನು ನೀಡಲಿದೆ ಎಂದು ಅವರು ಘೋಷಿಸಿದ್ದಾರೆ.
ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಇಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ, “ಭಾರತ ಸರ್ಕಾರ ನಿಯಂತ್ರಣ ರೇಖೆಯನ್ನು ದಾಟಿ ಆಜಾದ್ ಕಾಶ್ಮೀರವನ್ನು ಸ್ವಾಧೀನಪಡಿಸಿಕೊಳ್ಳುವ ಬೆದರಿಕೆಯನ್ನು ಹಾಕುತ್ತಿದೆ. ಭಾರತದ ಯಾವುದೇ ಆಕ್ರಮಣದ ವಿರುದ್ಧ ಪಾಕಿಸ್ತಾನವು ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತದೆ ಎಂದು ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳುತ್ತೇನೆ. ಕಾಶ್ಮೀರದಲ್ಲಿ ಭಾರತವು ಆಗಸ್ಟ್ 5, 2019ರಲ್ಲಿ ತೆಗೆದುಕೊಂಡ ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕು. UN ಭದ್ರತಾ ಕೌನ್ಸಿಲ್ ನಿರ್ಣಯಗಳು ಮತ್ತು ಕಾಶ್ಮೀರಿ ಜನರ ಆಶಯಗಳಿಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ಶಾಂತಿಯುತ ಪರಿಹಾರಕ್ಕಾಗಿ ಸಂವಾದಕ್ಕೆ ಪ್ರವೇಶಿಸಬೇಕು ಎಂದು ಪಾಕ್ ಪ್ರಧಾನಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 2100ರ ವೇಳೆಗೆ ಭಾರತದ ಜನಸಂಖ್ಯೆ ಎಷ್ಟಾಗುತ್ತೆ, ವಿಶ್ವಸಂಸ್ಥೆಯ ವರದಿಯಲ್ಲೇನಿದೆ? ಇಲ್ಲಿದೆ ಮಾಹಿತಿ
“ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಮಂಡಳಿಯ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ತನ್ನ ಬದ್ಧತೆಗೆ ಭಾರತ ರಾಜೀನಾಮೆ ನೀಡಿದೆ. “2019ರ ಆಗಸ್ಟ್ 5ರಿಂದ ಕಾಶ್ಮೀರದಲ್ಲಿ ಭಾರತವು ಏಕಪಕ್ಷೀಯ ಕಾನೂನುಬಾಹಿರ ಕ್ರಮಗಳನ್ನು ಪ್ರಾರಂಭಿಸಿದೆ” ಎಂದು ಅವರು ಹೇಳಿದರು.
“ಭಾರತವು ಕಾಶ್ಮೀರಿ ಭೂಮಿ ಮತ್ತು ಆಸ್ತಿಗಳನ್ನು ವಶಪಡಿಸಿಕೊಳ್ಳುತ್ತಿದೆ ಮತ್ತು ಮುಸ್ಲಿಂ ಬಹುಸಂಖ್ಯಾತರನ್ನು ಅಲ್ಪಸಂಖ್ಯಾತರನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಇದು ಖಂಡಿತವಾಗಿಯೂ ಫಲಪ್ರದವಾಗುವುದಿಲ್ಲ. ಕಾಶ್ಮೀರಿ ಜನರು ಸುಳ್ಳು ಭಾರತೀಯ ಗುರುತನ್ನು ತಿರಸ್ಕರಿಸುವಲ್ಲಿ ದೃಢಸಂಕಲ್ಪ ಹೊಂದಿದ್ದಾರೆ. ಭಾರತ ಸರ್ಕಾರ ಅವರ ಮೇಲೆ ಅತ್ಯಂತ ಕಠಿಣವಾದ ಷರತ್ತುಗಳನ್ನು ವಿಧಿಸಲು ಪ್ರಯತ್ನಿಸುತ್ತಿದೆ. ಪ್ರತಿ ಗಂಟೆಗೆ ಅಲ್ಲಿ ದೌರ್ಜನ್ಯಗಳು ನಡೆಯುತ್ತಿವೆ ಎಂದು ಪಾಕ್ ಪಿಎಂ ಶೆಹಬಾಜ್ ಟೀಕಿಸಿದ್ದಾರೆ.
ಇದನ್ನೂ ಓದಿ: PM Modi: ಮಾನವೀಯತೆಯ ಯಶಸ್ಸು ಒಗ್ಗಟ್ಟಿನಲ್ಲಿದೆಯೇ ವಿನಃ ಯುದ್ಧಭೂಮಿಯಲ್ಲಿಲ್ಲ; ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ
ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲಿ ಮಿಲಿಟರಿ ಆಕ್ರಮಣವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಒತ್ತಾಯಿಸಿದ ಅವರು, ಇದನ್ನು “ರಕ್ತಪಾತ” ಎಂದು ಕರೆದಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ 193 ಸದಸ್ಯರ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ (ಯುಎನ್‌ಜಿಎ) 79ನೇ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಮಾತನಾಡಿದ್ದಾರೆ. ಲೆಬನಾನ್ ದಾಳಿಯ ಬಗ್ಗೆಯೂ ಮಾತನಾಡಿದ ಪಾಕ್ ಪ್ರಧಾನಿ ಶೆಹಬಾ್ಜ ಬಳಿಕ ಪ್ಯಾಲೆಸ್ಟೈನ್‌ನಲ್ಲಿ ಇಸ್ರೇಲ್‌ನ ದೌರ್ಜನ್ಯವನ್ನು ಖಂಡಿಸಿದರು. ನಂತರ, ಕಾಶ್ಮೀರದಲ್ಲಿ ಭಾರತ ತೆಗೆದುಕೊಂಡ ಕ್ರಮಗಳನ್ನು ಖಂಡಿಸಿದರು. ಕಾಶ್ಮೀರದಲ್ಲಿ ಜನರು ತಮ್ಮ ಸ್ವಾತಂತ್ರ್ಯ ಮತ್ತು ಸ್ವ-ನಿರ್ಣಯದ ಹಕ್ಕಿಗಾಗಿ ಹೋರಾಡಿದ್ದಾರೆ ಎಂದು ಪಾಕ್ ಪ್ರಧಾನಿ ಹೇಳಿದರು.
“ಇದು ಕೇವಲ ಸಂಘರ್ಷವಲ್ಲ, ಇದು ಅಮಾಯಕ ಪ್ಯಾಲೆಸ್ಟೀನಿಯನ್ನರ ವ್ಯವಸ್ಥಿತ ಹತ್ಯೆಯಾಗಿದೆ. ಪ್ಯಾಲೆಸ್ಟೀನಿಯರ “ಅಂತ್ಯವಿಲ್ಲದ ಸಂಕಟ”ವನ್ನು ನಿರ್ಲಕ್ಷಿಸಿದರೆ ಮಾನವೀಯತೆಗೆ ಅರ್ಥವೇ ಇರುವುದಿಲ್ಲ ಎಂದು ಅವರು ಹೇಳಿದರು. ಈ ರಕ್ತಪಾತವನ್ನು ತಕ್ಷಣವೇ ಕೊನೆಗೊಳಿಸಬೇಕು. ಅಮಾಯಕ ಪ್ಯಾಲೆಸ್ಟೀನಿಯರ ರಕ್ತ ಮತ್ತು ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ನಾವು ಅವರ ಕಷ್ಟಗಳ ಬಗ್ಗೆ ಚಿಂತಿಸಬೇಕು ಮತ್ತು ಅವರ ಪರವಾಗಿ ನಿಲ್ಲಬೇಕು ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ