
ವಾಷಿಂಗ್ಟನ್, ಜೂನ್ 11: ಒಮಾನ್ (Oman) ಕರಾವಳಿಯಲ್ಲಿ ಭಾರತೀಯ ನಾವಿಕರಿದ್ದ ವಾಣಿಜ್ಯ ಹಡಗೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯ ಬೆನ್ನಲ್ಲೇ, ಆ ಹಡಗಿನ ಇಂಜಿನ್ ಕೋಣೆಯನ್ನು ಗುರಿಯಾಗಿಸಿ 2 ‘ಹೆಲ್‌ಫೈರ್ ಕ್ಷಿಪಣಿ’ಗಳನ್ನು ಉಡಾಯಿಸಿದ್ದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಒಪ್ಪಿಕೊಂಡಿದೆ. ಗಲ್ಫ್ ವಲಯದಲ್ಲಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡ ಹಡಗಿನ ಮೇಲೆ ಈ ವಾರ ನಡೆದ ಮೂರನೇ ದಾಳಿ ಇದಾಗಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸಾಮಾಜಿಕ ಮಾಧ್ಯಮವಾದ ಎಕ್ಸ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಗಿನಿ-ಬಿಸೌ ದೇಶದ ಧ್ವಜವನ್ನು ಹೊಂದಿದ್ದ ‘ಎಂ/ಟಿ ಜಲವೀರ್’ (M/T Jalveer) ಎಂಬ ತೈಲ ಟ್ಯಾಂಕರ್ ಒಮಾನ್ ಕೊಲ್ಲಿಯ ಮೂಲಕ ಇರಾನ್‌ನ ತೈಲವನ್ನು ಸಾಗಿಸಲು ಪ್ರಯತ್ನಿಸುತ್ತಿತ್ತು ಎಂದು ಹೇಳಿಕೊಂಡಿದೆ. ಅಮೆರಿಕ ಪಡೆಗಳು ನೀಡಿದ ಸರಣಿ ಸೂಚನೆಗಳನ್ನು ಹಡಗಿನ ಸಿಬ್ಬಂದಿ ಪಾಲಿಸಲು ವಿಫಲರಾದ ಹಿನ್ನೆಲೆಯಲ್ಲಿ ಅಮೆರಿಕದ ಯುದ್ಧ ವಿಮಾನವು ಹಡಗಿನ ಇಂಜಿನ್ ಕೋಣೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದೆ ಎಂದು ಅದು ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ: ದಾಳಿ ಕೊನೆಗೊಳ್ಳಬೇಕು; 3 ಭಾರತೀಯರು ಸಾವನ್ನಪ್ಪಿದ ಒಮಾನ್ ಹಡಗಿನ ಮೇಲಿನ ಅಮೆರಿಕದ ದಾಳಿಗೆ ಭಾರತ ಖಂಡನೆ
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ವಾಣಿಜ್ಯ ನೌಕೆಗಳ ಮೇಲಿನ ಸರಣಿ ದಾಳಿಗಳ ಮಧ್ಯೆ ಈ ಆಘಾತಕಾರಿ ಬೆಳವಣಿಗೆ ನಡೆದಿದೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಭಾರತೀಯ ನಾವಿಕರಿದ್ದ ತೈಲ ಟ್ಯಾಂಕರ್‌ಗಳ ಮೇಲಿನ ದಾಳಿಯನ್ನು ಕಠಿಣ ಪದಗಳಲ್ಲಿ ಖಂಡಿಸಿದ್ದು, ಇವು ಅತ್ಯಂತ ಆತಂಕಕಾರಿ ಎಂದು ಟೀಕಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದೆ. ಗಲ್ಫ್ ಪ್ರದೇಶದಲ್ಲಿ ಸಂಚರಿಸುವ ಕಡಲ ಸಾರಿಗೆ ಮತ್ತು ನಾಗರಿಕ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಶಸ್ತ್ರ ಪಡೆಗಳು ಸಂಯಮವನ್ನು ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದೆ.
— U.S. Central Command (@CENTCOM) June 11, 2026
ಇದನ್ನೂ ಓದಿ: ಒಮಾನ್ನ ಶಿನಾಸ್ ಬಂದರು ಬಳಿ 20 ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಅಮೆರಿಕದ ಮತ್ತೊಂದು ದಾಳಿ
ಕಳೆದ ಕೆಲವು ದಿನಗಳಲ್ಲಿ ಪಶ್ಚಿಮ ಏಷ್ಯಾದಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳಿಗೆ ಸಂಬಂಧಿಸಿದಂತೆ ಹಲವಾರು ಘಟನೆಗಳು ನಡೆದಿವೆ. ನಮ್ಮ ನಾವಿಕರ ಸಮುದಾಯದ ಕಲ್ಯಾಣ ಮತ್ತು ಸುರಕ್ಷತೆಗೆ ನಾವು ಅತ್ಯುನ್ನತ ಪ್ರಾಮುಖ್ಯತೆಯನ್ನು ನೀಡುತ್ತೇವೆ. ಈ ಅಂಶವನ್ನು ನಾವು ಪದೇ ಪದೇ ಒತ್ತಿಹೇಳುವ ಅಗತ್ಯವಿಲ್ಲ,” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ