
ಇರಾನ್, ಜೂನ್ 25: ಅಮೆರಿಕ(America)ವು ಜೂನ್ 22ರಂದು ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ದೇಶದ ಪರಮಾಣು ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸಲು ಸಾಧ್ಯವಾಗಿಲ್ಲ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಪೆಂಟಗನ್‌ನ ಗುಪ್ತಚರ ವಿಭಾಗವಾದ ರಕ್ಷಣಾ ಗುಪ್ತಚರ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯು, ಇರಾನ್‌ನ ಪರಮಾಣು ಘಟಕಗಳ ಸ್ಥಿತಿಯ ಬಗ್ಗೆ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾಡಿದ ಹೇಳಿಕೆಗಳಿಗೆ ವಿರುದ್ಧವಾಗಿದೆ.
ಜೂನ್ 22ರಂದು ಅಮೆರಿಕವು ಇರಾನ್‌ನ ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಮೂರು ಪರಮಾಣು ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಅಮೆರಿಕ ಮತ್ತು ಇಸ್ರೇಲ್ ಎರಡೂ ಪ್ರಕಾರ, ಈ ಕೇಂದ್ರಗಳನ್ನು ರಹಸ್ಯವಾಗಿ ಪರಮಾಣು ಬಾಂಬ್ ಅಭಿವೃದ್ಧಿಪಡಿಸಲು ಬಳಸಲಾಗುತ್ತಿದೆ ಎಂದು ಆರೋಪಿಸಿತ್ತು.
ಗುಪ್ತಚರ ವರದಿ ಏನು ಹೇಳುತ್ತೆ?
ಫೋರ್ಡೊ, ನಂಟಾಜ್ ಮತ್ತು ಇಸ್ಪಹಾನ್ ಪರಮಾಣು ಕೇಂದ್ರಗಳ ಮೇಲಿನ ದಾಳಿಗಳು ಗಮನಾರ್ಹ ಹಾನಿಯುಂಟು ಮಾಡಿದ್ದರೂ ಕೂಡ ಅವು ಸಂಪೂರ್ಣವಾಗಿ ನಾಶವಾಗಿಲ್ಲ ಎಂಬುದನ್ನು ವರದಿ ತಿಳಿಸಿದೆ. ಯುರೇನಿಯಂ ದಾಸ್ತಾನು ನಾಶವಾಗಿಲ್ಲ ಎಂದು ಇರಾನ್ ಹೇಳಿದೆ ಏಕೆಂದರೆ ಮೊದಲೇ ಅದನ್ನು ಆ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.
ಅಮೆರಿಕದ ಈ ರಹಸ್ಯ ಕಾರ್ಯಾಚರಣೆಯನ್ನು ಹೇಗೆ ಯೋಜಿಸಲಾಗಿತ್ತು? ಇಷ್ಟು ದೂರದವರೆಗೆ ಆ ಬಾಂಬರ್ ವಿಮಾನಗಳು ಹಾರಾಟ ನಡೆಸಿದ್ದು ಹೇಗೆ? ಯಾವೆಲ್ಲಾ ಅತ್ಯಾಧುನಿಕ ತಂತ್ರಜ್ಞಾನಗಳು ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದವು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮತ್ತಷ್ಟು ಓದಿ: ಅವ್ರು ದಾಳಿ ನಿಲ್ಲಿಸಿದ್ರೆ ನಾವು ನಿಲ್ಲಿಸ್ತೀವಷ್ಟೆ, ಕದನ ವಿರಾಮ ಒಪ್ಪಂದವಾಗಿಲ್ಲ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್
ಅಮೆರಿಕದ ವಾಯುಸೇನೆಯಲ್ಲಿರುವ ಅತ್ಯಂತ ರಹಸ್ಯವಾದ ಬಿ-2 ಸ್ಪಿರಿಟ್ ಸ್ಟೆಲ್ತ್ ಬಾಂಬರ್ ವಿಮಾನಗಳನ್ನು ಈ ದಾಳಿಗೆ ಬಳಸಲಾಗಿತ್ತು. ಈ ವಿಮಾನಗಳು ಶತ್ರುಗಳ ರಾಡಾರ್ ಕಣ್ಣಿಗೆ ಕಾಣಿಸದಂತೆ ವಿನ್ಯಾಸಗೊಳಿಸಲ್ಪಟ್ಟಿವೆ.
ಅಮೆರಿಕದ ಮಿಸ್ಸೌರಿ ರಾಜ್ಯದ ವೈಟ್ಮ್ಯಾನ್ ವಾಯುನೆಲೆಯಿಂದ ಈ ಏಳು ಬಿ-2 ಬಾಂಬರ್ಗಳು ರಾತ್ರಿಯ ಕತ್ತಲೆಯಲ್ಲಿ ತಮ್ಮ ಸುದೀರ್ಘ ಪ್ರಯಾಣವನ್ನು ಪ್ರಾರಂಭಿಸಿದವು. ಇರಾನ್ ತಲುಪಲು ಈ ಬಾಂಬರ್ಗಳು ಸುಮಾರು 18 ಗಂಟೆಗಳ ಕಾಲ ನಿರಂತರವಾಗಿ ಹಾರಾಟ ನಡೆಸಬೇಕಿತ್ತು.
ದೊಡ್ಡ ಟ್ಯಾಂಕರ್ ವಿಮಾನಗಳು ಹಾರಾಟದಲ್ಲಿರುವಾಗಲೇ ಈ ಬಾಂಬರ್ಗಳಿಗೆ ಇಂಧನವನ್ನು ಪೂರೈಸಿದವು. ಇದು ಅತ್ಯಂತ ಕಷ್ಟಕರ ಮತ್ತು ಅಪಾಯಕಾರಿ ಪ್ರಕ್ರಿಯೆಯಾಗಿದ್ದು, ಅಮೆರಿಕದ ವಾಯುಸೇನೆಗೆ ಮಾತ್ರ ಸಾಧ್ಯವಿರುವ ತಂತ್ರಜ್ಞಾನವಾಗಿದೆ ಎಂದು ಹೇಳಲಾಗಿದೆ.
ಫೋರ್ಡೊದಲ್ಲಿರುವ ಇರಾನ್ ನ ಮುಖ್ಯ ಪರಮಾಣು ಸ್ಥಾವರವು ಪರ್ವತದ ಆಳದಲ್ಲಿ, ಸುಮಾರು 80-90 ಮೀಟರ್ಗಳಷ್ಟು ಕೆಳಗಡೆ ನಿರ್ಮಿಸಲಾಗಿತ್ತು. ಇಂತಹ ಭದ್ರವಾದ ಸ್ಥಾವರವನ್ನು ನಾಶಮಾಡಲು ಅಮೆರಿಕ ಬಂಕರ್ ಭೇದಕ ಬಾಂಬ್ ಗಳಾದ ಜಿಬಿಯು-57 ಎಂಒಪಿ ಗಳನ್ನು ಬಳಸಿತು. ಪ್ರತಿಯೊಂದು ಬಾಂಬ್ 13,000 ಕೆಜಿಗೂ ಹೆಚ್ಚು ತೂಕವಿದ್ದು, 60 ಅಡಿಗಳಷ್ಟು ಕಾಂಕ್ರೀಟ್ ಅಥವಾ 200 ಅಡಿಗಳಷ್ಟು ಭೂಮಿಯನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ.
ಏಳು ಬಿ-2 ಬಾಂಬರ್ಗಳು ಫೋರ್ಡೊವೊಂದರ ಮೇಲೆಯೇ 14 ಬಾಂಬ್ ಗಳನ್ನು ಹಾಕಿದ್ದು, ಸ್ಥಾವರವನ್ನು ಸಂಪೂರ್ಣವಾಗಿ ನಾಶಪಡಿಸಿವೆ ಎಂದು ಅಮೆರಿಕ ಹೇಳಿಕೊಂಡಿದೆ. ಗುರಿಯನ್ನು ತಲುಪಿದ ಬಳಿಕ, ಎಲ್ಲಾ ಬಿ-2 ಬಾಂಬರ್ಗಳು ಯಾವುದೇ ಅಡೆತಡೆಯಿಲ್ಲದೆ ಮತ್ತೆ ಅಮೆರಿಕಕ್ಕೆ ಮರಳಿದವು. ಅವು ಸುಮಾರು 18 ಗಂಟೆಗಳ ಹಾರಾಟದ ನಂತರ ತಮ್ಮ ನೆಲೆಯನ್ನು ತಲುಪಿದವು. ಇರಾನ್ ಕತಾರ್ನಲ್ಲಿರುವ ಅಮೆರಿಕದ ವಾಯುನೆಲೆ ಮೇಲೆ ದಾಳಿ ನಡೆಸಿತ್ತು. ಈ ದಾಳಿ ಬಳಿಕ ಕದನ ವಿರಾಮ ವಿಚಾರ ಟ್ರಂಪ್ ಬಾಯಲ್ಲಿ ಬಂದಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:52 am, Wed, 25 June 25