ಎರಡೂ ದೇಶಗಳಿಂದ ಕದನವಿರಾಮ ಉಲ್ಲಂಘನೆ; ಇರಾನ್ ಮೇಲೆ ಬಾಂಬ್ ದಾಳಿ ನಡೆಸದಂತೆ ಇಸ್ರೇಲ್‌ಗೆ ಟ್ರಂಪ್ ಎಚ್ಚರಿಕೆ
ಇಸ್ರೇಲ್ ಮತ್ತು ಇರಾನ್ ಎರಡೂ ರಾಷ್ಟ್ರಗಳು ಕದನ ವಿರಾಮ ಉಲ್ಲಂಘಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಎರಡೂ ದೇಶಗಳ ನಡುವೆ ಟ್ರಂಪ್ ಅವರೇ ಮಧ್ಯಸ್ಥಿಕೆ ವಹಿಸಿ ಕದನವಿರಾಮದ ಘೋಷಣೆ ಮಾಡಿದ್ದರು. ಕತಾರ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಇರಾನ್ ಪ್ರತೀಕಾರದ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದ ನಂತರ ಮಧ್ಯಪ್ರಾಚ್ಯವನ್ನು ಬೆಚ್ಚಿಬೀಳಿಸಿದ ತಮ್ಮ 12 ದಿನಗಳ ಯುದ್ಧವನ್ನು ಕೊನೆಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಮತ್ತು ಇರಾನ್ ನಿನ್ನೆ ತಡರಾತ್ರಿ ಒಪ್ಪಿಕೊಂಡಿತ್ತು.

ವಾಷಿಂಗ್ಟನ್, ಜೂನ್ 24: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ದಿಟ್ಟ ಮತ್ತು ನೇರ ಸಂದೇಶ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ TRUTH ಮೂಲಕ ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್ ಮೇಲೆ ಯಾವುದೇ ವೈಮಾನಿಕ ದಾಳಿ ನಡೆಸದಂತೆ ಅವರು ಇಸ್ರೇಲ್ ಸರ್ಕಾರವನ್ನು ಎಚ್ಚರಿಸಿದ್ದಾರೆ. ಅಂತಹ ಕೃತ್ಯವನ್ನು ಕದನವಿರಾಮದ “ಪ್ರಮುಖ ಉಲ್ಲಂಘನೆ” ಎಂದು ಕರೆದಿದ್ದಾರೆ. “ನೀವು ಹಾಗೆ ಮಾಡಿದರೆ, ಅದು ಪ್ರಮುಖ ಉಲ್ಲಂಘನೆಯಾಗಲಿದೆ. ನಿಮ್ಮ ಪೈಲಟ್‌ಗಳನ್ನು ಈಗಲೇ ವಾಪಾಸ್ ಕರೆತನ್ನಿ” ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಕದನವಿರಾಮ ಉಲ್ಲಂಘಿಸಿ ದಾಳಿ ನಡೆಸಿದ ಬೆನ್ನಲ್ಲೇ ಇಸ್ರೇಲ್ ಪ್ರತೀಕಾರದ ಪ್ರತಿಜ್ಞೆ ಮಾಡಿತ್ತು. ಆದರೆ, ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷರು ಭರವಸೆ ನೀಡಿದ್ದಾರೆ.
ನಿನ್ನೆ ತಡರಾತ್ರಿ ಎರಡೂ ದೇಶಗಳಿಗೆ ಯುದ್ಧವನ್ನು ನಿಲ್ಲಿಸಲು ಗಡುವು ನೀಡಿದ ನಂತರ ಇಸ್ರೇಲ್ ಮತ್ತು ಇರಾನ್ ಎರಡೂ ದಾಳಿಗಳೊಂದಿಗೆ ಕದನ ವಿರಾಮ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಹೇಗ್‌ನಲ್ಲಿ ನ್ಯಾಟೋ ಶೃಂಗಸಭೆಗೆ ಹೊರಡುವ ಮೊದಲು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇಸ್ರೇಲ್ ಮತ್ತು ಇರಾನ್ ನಡುವೆ ಮುಂದುವರಿದ ದಾಳಿಗಳ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. “ಇರಾನ್ ಕದನವಿರಾಮ ಉಲ್ಲಂಘಿಸಿದರು, ಆದರೆ ಇಸ್ರೇಲ್ ಕೂಡ ನಿಯಮವನ್ನು ಉಲ್ಲಂಘಿಸಿದೆ. ನಾನು ಇಸ್ರೇಲ್ ಬಗ್ಗೆ ಸಂತೋಷವಾಗಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಇರಾನ್ ವಿರುದ್ಧ ಕದನವಿರಾಮ ಉಲ್ಲಂಘನೆಯ ಆರೋಪ; ಪ್ರತೀಕಾರದ ಪ್ರತಿಜ್ಞೆ ಮಾಡಿದ ಇಸ್ರೇಲ್ ರಕ್ಷಣಾ ಸಚಿವ
ಇದರ ನಡುವೆ, ಯಾವುದೇ ರೀತಿಯ ಕದನವಿರಾಮ ಉಲ್ಲಂಘನೆಯ ಸಂದರ್ಭದಲ್ಲಿ ಇರಾನ್ ವಿರುದ್ಧ ಸಂಪೂರ್ಣ ಬಲದಿಂದ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿತ್ತು. “ಕದನ ವಿರಾಮದ ಯಾವುದೇ ಉಲ್ಲಂಘನೆಗೆ ಇಸ್ರೇಲ್ ಬಲವಾಗಿ ಪ್ರತಿಕ್ರಿಯಿಸುತ್ತದೆ” ಎಂದು ಇಸ್ರೇಲ್ ಸರ್ಕಾರ ಹೇಳಿತ್ತು. ಜೂನ್ 13ರಂದು, ಇಸ್ರೇಲ್ ತನ್ನ ಪರಮಾಣು ಮತ್ತು ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಇರಾನ್ ವಿರುದ್ಧ ‘ಆಪರೇಷನ್ ರೈಸಿಂಗ್ ಲಯನ್’ ಅನ್ನು ಪ್ರಾರಂಭಿಸಿತು. ಇಸ್ರೇಲ್ ದಾಳಿಯಲ್ಲಿ ಹಲವಾರು ಇರಾನ್ ಮಿಲಿಟರಿಯ ಉನ್ನತ ಕಮಾಂಡರ್‌ಗಳು ಸಾವನ್ನಪ್ಪಿದರು. ಅದಕ್ಕೆ ಪ್ರತೀಕಾರವಾಗಿ, ಇರಾನ್ ಟೆಲ್ ಅವೀವ್ ಮತ್ತು ಹೈಫಾ ಸೇರಿದಂತೆ ಇಸ್ರೇಲ್‌ನ ಪ್ರಮುಖ ನಗರಗಳ ಮೇಲೆ ಕ್ಷಿಪಣಿಗಳ ಸುರಿಮಳೆಗರೆದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








