ಇರಾನ್ ವಿರುದ್ಧ ಕದನವಿರಾಮ ಉಲ್ಲಂಘನೆಯ ಆರೋಪ; ಪ್ರತೀಕಾರದ ಪ್ರತಿಜ್ಞೆ ಮಾಡಿದ ಇಸ್ರೇಲ್ ರಕ್ಷಣಾ ಸಚಿವ
12 ದಿನಗಳ ಯುದ್ಧವನ್ನು ಕೊನೆಗೊಳಿಸಲು ಉದ್ದೇಶಿಸಲಾದ ಇಸ್ರೇಲ್ ಮತ್ತು ಇರಾನ್ ನಡುವಿನ ಯುಎಸ್-ಮಧ್ಯಸ್ಥಿಕೆಯ ಕದನ ವಿರಾಮದ ಬಳಿಕವೂ ಇರಾನ್ ಕ್ಷಿಪಣಿ ದಾಳಿಯನ್ನು ಮಾಡಿತು. ಈ ಮೂಲಕ ಇರಾನ್ ಕದನವಿರಾಮ ಉಲ್ಲಂಘಿಸಿದೆ ಎಂದು ಇಸ್ರೇಲ್ ಆರೋಪಿಸಿದೆ. ಹಾಗೇ, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ.

ನವದೆಹಲಿ, ಜೂನ್ 24: ಇಸ್ರೇಲ್ (Israel) ಮತ್ತು ಇರಾನ್ ನಡುವೆ 12 ದಿನಗಳ ಕಾಲ ನಡೆದ ಯುದ್ಧಕ್ಕೆ ಕದನ ವಿರಾಮ ಘೋಷಿಸಲಾಗಿತ್ತು. ಆದರೆ, ಇಸ್ರೇಲ್ ಹೇಳಿಕೊಂಡಂತೆ ಆ ಒಪ್ಪಂದವನ್ನು ಉಲ್ಲಂಘಿಸಿ ಇರಾನ್ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದೆ. ಇದರಿಂದ ಕದನವಿರಾಮ ಉಲ್ಲಂಘಟನೆಯಾಗಿದ್ದು, ಇದಕ್ಕೆ ಇಸ್ರೇಲ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಕ್ಷಣವೇ ಐಡಿಎಫ್‌ಗೆ ಟೆಹ್ರಾನ್‌ನಲ್ಲಿ ಇರಾನಿನ ಆಸ್ತಿಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ತೀವ್ರತೆಯ ಕಾರ್ಯಾಚರಣೆಗಳನ್ನು ಪುನರಾರಂಭಿಸುವಂತೆ ಆದೇಶಿಸಿದ್ದಾರೆ. ಇರಾನ್‌ನ ಕ್ಷಿಪಣಿ ಉಡಾವಣೆಯು ಯುಎಸ್ ಮಧ್ಯಸ್ಥಿಕೆಯ ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಟೀಕಿಸಿದ್ದು, ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದಾರೆ.
ಇರಾನ್ ಕದನವಿರಾಮ ಉಲ್ಲಂಘಿಸಿದ್ದರಿಂದ ಇಸ್ರೇಲ್ ಟೆಹ್ರಾನ್ ವಿರುದ್ಧ ಭಾರೀ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಇಸ್ರೇಲ್ ಆದೇಶಿಸಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಇಂದು ಇರಾನ್ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ಎರಡೂ ದೇಶಗಳು ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಮಧ್ಯಸ್ಥಿಕೆಯ ಕದನ ವಿರಾಮಕ್ಕೆ ಒಪ್ಪಿಕೊಂಡ ಕೆಲವೇ ಗಂಟೆಗಳ ನಂತರ ಇರಾನ್ ಮತ್ತೆ ದಾಳಿ ನಡೆಸಿತ್ತು. ಈ ಹಿಂದೆ ಭಾರತ-ಪಾಕಿಸ್ತಾನದ ನಡುವೆ ಕೂಡ ಇದೇ ರೀತಿ ಆಗಿದ್ದನ್ನು ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ: US Strikes on Iran: ಇರಾನ್ ಮೇಲೆ ದಾಳಿ ಮಾಡಿ ಮೈಕ್ ಎದುರು ಶಾಂತಿ ಮಂತ್ರ ಜಪಿಸಿದ ಟ್ರಂಪ್
ಆದರೆ, ಇರಾನ್ ಮತ್ತೆ ಕ್ಷಿಪಣಿ ಹಾರಿಸಿದೆ ಎಂಬ ಇಸ್ರೇಲ್ ದೇಶದ ಆರೋಪವನ್ನು ಇರಾನ್ ನಿರಾಕರಿಸಿದೆ. ವರದಿಗಳ ಪ್ರಕಾರ, ಇರಾನ್ ಇಸ್ರೇಲ್ ಕಡೆಗೆ ಎರಡು ಕ್ಷಿಪಣಿಗಳನ್ನು ಹಾರಿಸಿದೆ. ಈ ಎರಡೂ ಕ್ಷಿಪಣಿಗಳನ್ನು ಇಸ್ರೇಲ್ ತಡೆಹಿಡಿದಿದೆ ಎನ್ನಲಾಗಿದೆ. ಕದನ ವಿರಾಮ ಉಲ್ಲಂಘನೆಯ ವರದಿಗಳ ನಂತರ ಇಸ್ರೇಲ್‌ನ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಕೂಡ ಇರಾನ್‌ಗೆ ಬೆದರಿಕೆ ಹಾಕಿದ್ದಾರೆ. “ಇರಾನ್ ನಡುಗುತ್ತಿದೆ” ಎಂದು ಸ್ಮೋಟ್ರಿಚ್ ಎಕ್ಸ್ ನಲ್ಲಿ ಬರೆದಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿ ಇಸ್ರೇಲ್ ಇರಾನ್‌ನೊಂದಿಗಿನ ಕದನ ವಿರಾಮ ಪ್ರಸ್ತಾವನೆಯನ್ನು ಅಧಿಕೃತವಾಗಿ ಒಪ್ಪಿಕೊಂಡ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಇರಾನ್‌ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಬೆದರಿಕೆಯನ್ನು ನಾಶಮಾಡುವ ಗುರಿಯನ್ನು ಇಸ್ರೇಲ್ ಸಾಧಿಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದರು. ಇರಾನ್‌ನೊಂದಿಗಿನ 12 ದಿನಗಳ ಯುದ್ಧದಲ್ಲಿ ಇಸ್ರೇಲ್ ಅನ್ನು ಬೆಂಬಲಿಸಿದ್ದಕ್ಕಾಗಿ ನೆತನ್ಯಾಹು ಟ್ರಂಪ್‌ಗೆ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ಟ್ರಂಪ್ ವಿರುದ್ಧ ಇರಾನ್ ಪ್ರತೀಕಾರ; ಕತಾರ್, ಇರಾಕ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ
ಸೋಮವಾರ ತಡರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದವನ್ನು ಘೋಷಿಸಿದರು. ಇರಾನ್ ಸೋಮವಾರ ಕತಾರ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಸೀಮಿತ ಕ್ಷಿಪಣಿ ದಾಳಿ ನಡೆಸಿದ ನಂತರ ಇಸ್ರೇಲ್ ಮತ್ತು ಇರಾನ್ “ಸಂಪೂರ್ಣ ಮತ್ತು ಸಂಪೂರ್ಣ ಕದನ ವಿರಾಮ”ಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಹೇಳಿಕೊಂಡರು. ಅಮೆರಿಕ ತನ್ನ ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ಮಾಡಿದ್ದಕ್ಕಾಗಿ ಇರಾನ್ ಪ್ರತೀಕಾರ ತೀರಿಸಿಕೊಂಡಿತ್ತು.
ಆದರೆ, ಯಾವುದೇ ರೀತಿಯ ಕದನವಿರಾಮ ಉಲ್ಲಂಘನೆಯ ಸಂದರ್ಭದಲ್ಲಿ ಇರಾನ್ ವಿರುದ್ಧ ಸಂಪೂರ್ಣ ಬಲದಿಂದ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿತ್ತು. “ಕದನ ವಿರಾಮದ ಯಾವುದೇ ಉಲ್ಲಂಘನೆಗೆ ಇಸ್ರೇಲ್ ಬಲವಾಗಿ ಪ್ರತಿಕ್ರಿಯಿಸುತ್ತದೆ” ಎಂದು ಇಸ್ರೇಲ್ ಸರ್ಕಾರ ಹೇಳಿತ್ತು. ಜೂನ್ 13ರಂದು, ಇಸ್ರೇಲ್ ತನ್ನ ಪರಮಾಣು ಮತ್ತು ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಇರಾನ್ ವಿರುದ್ಧ ‘ಆಪರೇಷನ್ ರೈಸಿಂಗ್ ಲಯನ್’ ಅನ್ನು ಪ್ರಾರಂಭಿಸಿತು. ಇಸ್ರೇಲ್ ದಾಳಿಯಲ್ಲಿ ಹಲವಾರು ಇರಾನ್ ಮಿಲಿಟರಿಯ ಉನ್ನತ ಕಮಾಂಡರ್‌ಗಳು ಸಾವನ್ನಪ್ಪಿದರು. ಅದಕ್ಕೆ ಪ್ರತೀಕಾರವಾಗಿ, ಇರಾನ್ ಟೆಲ್ ಅವೀವ್ ಮತ್ತು ಹೈಫಾ ಸೇರಿದಂತೆ ಇಸ್ರೇಲ್‌ನ ಪ್ರಮುಖ ನಗರಗಳ ಮೇಲೆ ಕ್ಷಿಪಣಿಗಳ ಸುರಿಮಳೆಗರೆದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








